Site icon Vistara News

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

Mental Health Awareness Month

ಮತ್ತೆ ಮಗುವಿನಂತಾಗಲು (Mental Health Awareness Month) ಸಾಧ್ಯವೇ? ಪ್ರಶ್ನೆಯೇ ಬಾಲಿಶ ಎನಿಸಬಹುದು. ಆದರೆ ನಮ್ಮ ಒಳಗಿನ ಮಗುವಿನೊಂದಿಗೆ ಮತ್ತೆ ನಂಟು ಬೆಸೆಯಲು ಸಾಧ್ಯವಾದರೆ ಮಾನಸಿಕ ಸ್ವಾಸ್ಥ್ಯ ಸಾಧಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದಂತಾಗುತ್ತದೆ ಎನ್ನುವುದು ಸ್ವಾಸ್ಥ್ಯ ತಜ್ಞರ ಮಾತು. ನಮ್ಮೊಳಗಿನ ಮಗು ಅಥವಾ ಇನ್ನರ್‌ ಚೈಲ್ಡ್‌ ಎಂದರೇನು? ಅದರೊಂದಿಗೆ ನಂಟು ಬೆಸೆಯಲು ಸಾಧ್ಯವೇ? ಎಂದೋ ಕಳೆದ ಬಾಲ್ಯ ಈಗ ಯಾಕೆ ಬರಬೇಕು… ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಮೇ ತಿಂಗಳನ್ನು ಮಾನಸಿಕ ಆರೋಗ್ಯ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ.

ಬಾಲ್ಯದ ನಂಟೇಕೆ?

ನಮ್ಮೆಲ್ಲರ ಬಾಲ್ಯದ ಅನುಭವಗಳೇ ನಮ್ಮನ್ನು ಭವಿಷ್ಯದಲ್ಲಿ ರೂಪಿಸುವಂಥವು. ಬಾಲ್ಯ ಸಿಹಿಯಾಗಿದ್ದರೆ ಮುಂದಿನ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಿರುವಂತೆಯೇ, ಕಹಿ ಬಾಲ್ಯಗಳು ಭವಿಷ್ಯವನ್ನು ದಿಕ್ಕೆಡಿಸಬಹುದು ಎಂಬುದೂ ನಿಜ. ಹಾಗಾಗಿ ಎಳೆತನದ ದಿನಗಳೊಂದಿಗೆ ಮತ್ತೆ ನಂಟು ಬೆಸೆಯುವ ಅಗತ್ಯವನ್ನು ಮಾನಸಿಕ ಸ್ವಾಸ್ಥ್ಯದ ತಜ್ಞರು ಪುನರುಚ್ಚರಿಸುತ್ತಾರೆ. ಒಳ್ಳೆಯ ಅನುಭವಗಳು ಮರುಕಳಿಸಿದರೆ ಬದುಕಿನ ಸೊಗಸು ಮತ್ತೆ ಬಂದಂತೆ. ಒಂದೊಮ್ಮೆ ಅನುಭವಗಳು ಕಹಿಯಾಗಿದ್ದರೆ, ಆ ನೆನಪುಗಳನ್ನು ತೊಡೆಯುವುದು ಸಹ ʻಹೀಲಿಂಗ್‌ʼ ಎನ್ನುವ ಪ್ರಕ್ರಿಯೆಯ ಭಾಗ. ಅದಲ್ಲದೆ ಇನ್ನೇನು ಪ್ರಯೋಜನ?

ಒತ್ತಡ ನಿವಾರಣೆ

ಇಂದಿನ ಪ್ರೆಷರ್‌ ಕುಕ್ಕರ್‌ನಂಥ ಬದುಕಿನಲ್ಲಿ ಬೇಡದ್ದನ್ನೇ ತಲೆಯಲ್ಲಿ ತುಂಬಿಸಿಕೊಳ್ಳುವುದು, ಬದುಕಿನ ಹೊರೆಯನ್ನು ಹೆಚ್ಚಿಸುತ್ತದೆ. ಇದರಿಂದ ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್‌ಗಳ ಸ್ರವಿಸುವಿಕೆ ಹೆಚ್ಚುತ್ತದೆ. ಈ ಕಾರ್ಟಿಸೋಲ್‌ ಪ್ರಮಾಣವನ್ನು ಕಡಿಮೆ ಮಾಡದಿದ್ದರೆ, ಅದರ ಅಡ್ಡ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತದೆ. ಬದಲಿಗೆ, ಮನಸ್ಸನ್ನು ಉಲ್ಲಸಿತವಾಗಿ ಇರಿಸಲು ಯತ್ನಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿದೆ.,ಕೆಲವೊಮ್ಮೆ ಉದ್ಯೋಗದ ಒತ್ತಡಗಳು ಮುಂದೆ ಯೋಚಿಸಲೇ ಆಗದಷ್ಟು ತಲೆಯನ್ನು ಖಾಲಿ ಮಾಡಿಬಿಡುತ್ತವೆ. ಇಂಥ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುವ ವಿಷಯಗಳ ಬಗ್ಗೆ ಯೋಚಿಸುವುದು ಮತ್ತು ಎಳೆತನದ ಹುಡುಗಾಟಿಕೆಗಳೊಂದಿಗೆ ಬೆಸೆಯುವುದು, ಹೊಸ ಆಲೋಚನೆಗಳಿಗೆ ದಾರಿ ಮಾಡುತ್ತವೆ. ಮಕ್ಕಳು ಎಂದಿಗೂ ಬದುಕುವುದು ವರ್ತಮಾನದಲ್ಲಿ. ನಿನ್ನೆಯದ್ದು ಅವುಗಳಿಗೆ ನೆನಪಿರುವುದಿಲ್ಲ, ನಾಳೆಯದ್ದು ಗೊತ್ತಿರುವುದಿಲ್ಲ. ಹಾಗಾಗಿ ತಾವಿದ್ದಂತೆಯೇ ತಮ್ಮನ್ನು ಖುಷಿಯಿಂದ ಒಪ್ಪಿಕೊಂಡೂ ಬಿಡುತ್ತವೆ ಆ ಮಕ್ಕಳು. ತಾನು ಅವರಂತೆ ಇಲ್ಲ, ಇವರಲ್ಲಿ ಇರುವಂಥದ್ದು ತನಗಿಲ್ಲ ಎಂದೆಲ್ಲ ಕೊರಗುವುದಿಲ್ಲ. ಇದನ್ನೇ ಮರಳಿ ಕಲಿಯಬೇಕು ನಾವು.

ಇದಕ್ಕಾಗಿ ಏನು ಮಾಡಬೇಕು?

ಹ್ಯಾಪಿ ಹಾರ್ಮೋನುಗಳು ಬಿಡುಗಡೆಯಾಗುವ ದಾರಿಗಳನ್ನು ಹುಡುಕಿ. ಎಳೆತನದ ಆಟಗಳನ್ನು ನೆನಪಿಸಿಕೊಳ್ಳಿ. ಚನ್ನೆಮಣೆ, ಚೌಕಾಬಾರ ಆಡಿ ಗೊತ್ತಿದ್ದರೆ ಸರಿ. ಅದಿಲ್ಲದಿದ್ದರೆ ಮನೆಯ ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ, ಅದಲುಬದಲು ಮುಂತಾದ ಹುಡುಗಾಟದ ಆಟಗಳು ಮನಸ್ಸಿನ ಉಲ್ಲಾಸ ಹೆಚ್ಚಿಸಬಲ್ಲವು. ಸಾಧ್ಯವಾದಷ್ಟು ಹೊತ್ತು ಹಿಂದಿನ-ಮುಂದಿನ ಕ್ಷಣಗಳನ್ನು ಮರೆತು ಬದುಕಲು ಪ್ರಯತ್ನಿಸಿ. ಇದರಿಂದ ಒತ್ತಡ ಕಡಿಮೆ ಮಾಡಲು ನಿಶ್ಚಿತವಾಗಿ ಸಾಧ್ಯವಿದೆ.

ಕಲಿಯಿರಿ

ಎಂದೋ ಏನೋ ಕಲಿಯುವ ಆಸೆ ಮನದಲ್ಲಿ ಇನ್ನೂ ಸುಪ್ತವಾಗಿ ಕುಳಿತಿದೆಯೇ? ಗಿಟಾರ್‌, ಡ್ರಮ್‌, ಪೇಟಿಂಗ್‌ ಅಥವಾ ಏನಾದರೂ ಸರಿ, ಕಲಿಯಬೇಕೆಂಬ ಬಯಕೆ ಇದ್ದರೆ ಅದಕ್ಕೆ ವಯಸ್ಸಿನ ಹಂಗನ್ನು ಅಂಟಿಸಬೇಡಿ. ಆವತ್ತು ಆಗದಿದ್ದರೇನು, ಇವತ್ತಾದರೂ ಸಾಧ್ಯವಾಗುತ್ತಿದೆ ಎಂಬ ಬಗ್ಗೆ ಖುಷಿ, ಹೆಮ್ಮೆ- ಎರಡೂ ಇರಲಿ.

ನಿಸರ್ಗದ ಸಾಂಗತ್ಯ

ಅದಕ್ಕಾಗಿ ಹಿಮಾಲಯಕ್ಕೇ ಚಾರಣ ಹೋಗಬೇಕೆಂದಿಲ್ಲ. ಯಾವುದಾದರೂ ಬೀಚಿನ ಮರಳಿನಲ್ಲಿ ಮನೆ ಕಟ್ಟುವುದು, ಬೀಚ್‌ನಲ್ಲಿ ಚೆಂಡು ಆಡುವುದು, ರಾತ್ರಿ ಮಹಡಿ ಮೇಲೆ ಮಲಗಿ ನಕ್ಷತ್ರ ಎಣಿಸುವುದು, ಪಾಟಿನಲ್ಲಿ ಒಂದಿಷ್ಟು ಬೀಜ ಬಿತ್ತಿ ದಿನಾ ಅದು ಮೊಳೆಯುವುದನ್ನು ಗಮನಿಸುವುದು- ಇಂಥ ಸರಳ ಚಟುವಟಿಕೆಗಳು ಮನಸ್ಸನ್ನು ಆರೋಗ್ಯಪೂರ್ಣವಾಗಿ ಇರಿಸುತ್ತವೆ.
ನೆನಪಿಡಿ, ಈ ಯಾವುವೂ ನಮ್ಮ ಗುರಿಯಲ್ಲ, ಗುರಿ ತಲುಪುವ ದಾರಿ. ನಮ್ಮ ಗುರಿ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದು, ಈ ಮೂಲಕ ಬದುಕಿನ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳುವುದು. ಇದು ಜಾಗೃತಿ ಮಾಸದಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ನಡೆಸಿಕೊಂಡು ಬರಬೇಕಾದ ಪ್ರಕ್ರಿಯೆ.

Exit mobile version