ನಡು ಮಧ್ಯಾಹ್ನದಲ್ಲಿ ನಿದ್ದೆ ಮಾಡುವ ಅಭ್ಯಾಸವಿದೆಯೇ? ಬಹಳಷ್ಟು ಜನರಿಗೆ ಇದ್ದೀತು, ಕೋಳಿಯಂತೆ ಕೂತಲ್ಲೇ ಅಥವಾ ಹಾಸಿಗೆ-ದಿಂಬಿಗೆ ಒರಗಿಕೊಂಡು ಸಣ್ಣದೊಂದು (Midday Sleep) ನಿದ್ದೆ ತೆಗೆಯುವ ಚಟ. ಹಸಿದವನಿಗೆ ಹುಸಿ ನಿದ್ದೆ ಎಂಬಂತೆ ಮಧ್ಯಾಹ್ನ ಊಟದೊಳಗೇ ನಿದ್ದೆ ತೆಗೆಯುವವರು ಒಂದಿಷ್ಟು ಜನರಾದರೆ, ಊಟ ಮಾಡಿ, ತುಂಬಿದ ಹೊಟ್ಟೆಯಲ್ಲಿ ಗೊರಕೆ ಹೊಡೆಯುವವರು ಇನ್ನಷ್ಟು ಮಂದಿ. ಹೇಗೇ ಮಲಗಿದರೂ, ಹಗಲಿನಲ್ಲಿ ಎಷ್ಟು ಹೊತ್ತು ನಿದ್ರಿಸುತ್ತೀರಿ ಎಂಬುದು ಪ್ರಶ್ನೆ. ಕೆಲವೇ ನಿಮಿಷಗಳು, ಹೆಚ್ಚೆಂದರೆ ಹತ್ತಿಪ್ಪತ್ತು ನಿಮಿಷಗಳಲ್ಲಿ ಮುಗಿಸುವವರೋ ಅಥವಾ ತಾಸುಗಟ್ಟಲೆ ನಿದ್ದೆ ಮಾಡುವವರೋ?
ಆರೋಗ್ಯಕ್ಕೆ ಕ್ಷೇಮವೇ
ಈ ಪ್ರಶ್ನೆ ಕೇಳುವುದಕ್ಕೂ ಕಾರಣವಿದೆ. ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರಿಸುವುದು (Midday nap) ಸುಖಕರ ಎನಿಸಿದರೂ ಆರೋಗ್ಯಕ್ಕೆ ಕ್ಷೇಮವಲ್ಲ ಎನ್ನುತ್ತಾರೆ ಪರಿಣಿತರು. ಚುಟುಕಾದ ಕೋಳಿ ನಿದ್ದೆಯು ಹಗಲಿನ ಆಯಾಸವನ್ನು ಕಳೆಯಬಲ್ಲದು. ರಾತ್ರಿಯ ನಿದ್ದೆಯಲ್ಲಿ ಕೊರತೆಯಾಗಿದ್ದರೆ ಅದನ್ನೂ ನಿವಾರಿಸಿ, ಬೆಳಗಿನಿಂದ ಆದ ದಣಿವನ್ನು ತಣಿಸಬಲ್ಲದು. ಹಾಗೆಂದು ಅರ್ಧ ತಾಸಿಗೂ ಹೆಚ್ಚು ಕಾಲ ಗೊರಕೆ ಹೊಡೆದಿರೋ, ಸಮಸ್ಯೆ ಕಟ್ಟಿಟ್ಟಿದ್ದು ಎನ್ನುತ್ತಾರೆ ವಿಜ್ಞಾನಿಗಳು. ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡಿದಷ್ಟೂ ದಿನವಿಡೀ ಸೋಮಾರಿತನ, ನಿದ್ದೆಬಡುಕತನ ಕಾಡುತ್ತದೆ.
ಕಾಯಿಲೆಗಳಿಗೇನು ಸಂಬಂಧ?
ಇದಿಷ್ಟನ್ನು ಹೇಳುವುದಕ್ಕೆ ತಜ್ಞರು ಬೇಕೇ ಎಂದು ಕೇಳಬಹುದು. ವಿಷಯ ಇದಿಷ್ಟೇ ಅಲ್ಲ. ಹಗಲಿನ ದೀರ್ಘ ನಿದ್ದೆಗೂ ದೀರ್ಘಾವಧಿಯಲ್ಲಿ ಕಾಡುವ ರೋಗಗಳಿಗೆ ನಂಟು ಹಚ್ಚಿದ್ದಾರೆ ವಿಜ್ಞಾನಿಗಳು. ಅಂದರೆ, ಬೊಜ್ಜು, ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳು ಗಂಟು ಬೀಳುವುದಕ್ಕೂ ಹಗಲಿನ ನಿದ್ದೆ ಮತ್ತು ಜಡತೆಗೂ ನೇರ ಸಂಬಂಧವಿದೆ. “ಹಗಲಿನಲ್ಲಿ 30 ನಿಮಿಷಕ್ಕಿಂತ ಹೆಚ್ಚು ಕಾಲ ನಿದ್ದೆ ಮಾಡುವುದಕ್ಕೂ ಅತಿತೂಕ, ಹೆಚ್ಚಿನ ರಕ್ತದೊತ್ತಡ, ಮಧುಮೇಹದಂಥ ರೋಗಗಳಿಗೂ ಸ್ಪಷ್ಟ ಸಂಬಂಧವಿದೆ. ಆದರೆ `ಪವರ್ ನ್ಯಾಪ್’ ಅಥವಾ ಕೋಳಿ ನಿದ್ದೆ ಮಾಡುವವರಲ್ಲಿ ಈ ನಂಟು ಕಂಡುಬಂದಿಲ್ಲ” ಎಂಬುದು ಅವರ ನುಡಿ.
ಅಧ್ಯಯನ ಹೇಳಿದ್ದೇನು?
ಇದಕ್ಕಾಗಿ ಮೆಡಿಟರೇನಿಯನ್ ಪ್ರದೇಶದ ಸುಮಾರು 3000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಯಾರೆಲ್ಲಾ 30 ನಿಮಿಷಕ್ಕೂ ಹೆಚ್ಚಿನ ಸಮಯ ನಿದ್ದೆ ಮಾಡುವವರೋ ಅವರ ಬಿಎಂಐ ಹೆಚ್ಚಿದ್ದು, ರಕ್ತದೊತ್ತಡವೂ ಹೆಚ್ಚಿಗೆ ದಾಖಲಾಗಿತ್ತು. ಮಾತ್ರವಲ್ಲ, ಹೃದ್ರೋಗಗಳು, ಮಧುಮೇಹ ಮುಂತಾದ ಹಲವು ಸಮಸ್ಯೆಗಳು ಕಾಡುತ್ತಿದ್ದವು. ಕಡಿಮೆ ನಿದ್ದೆ ಮಾಡುವವರಲ್ಲಿ ಇಂಥ ಸಮಸ್ಯೆಗಳು ಕಡಿಮೆಯೇ ದಾಖಲಾಗಿದ್ದವು. ಹಗಲಿನಲ್ಲಿ ಹೆಚ್ಚು ಮಲಗುವವರಲ್ಲಿ ರಾತ್ರಿಯ ನಿದ್ದೆಯ ಗುಣಮಟ್ಟವೂ ಕಡಿಮೆ ಇತ್ತು. ಹಾಗಾಗಿ ಅವರು ಮತ್ತೆ ಹಗಲು ನಿದ್ರಿಸುತ್ತಿದ್ದರು. ರಾತ್ರಿ ಮತ್ತೆ ನಿದ್ದೆ ಕಡಿಮೆ ಆಗುತ್ತಿತ್ತು. ಈ ಚಕ್ರದಿಂದ ಹೊರಬರಲಾಗದೆ ಕೆಲವರು ಒದ್ದಾಡುತ್ತಿದ್ದರು.
ಇದನ್ನೂ ಓದಿ: Midday Nap: ಮಧ್ಯಾಹ್ನ ಊಟ ಆದ ಮೇಲೆ ಮಲಗುವುದು ಒಳ್ಳೆಯ ಅಭ್ಯಾಸವೇ?