Site icon Vistara News

Migraine Headache: ಮೈಗ್ರೇನ್‌ ತಲೆನೋವೇ?: ಹಾಗಿದ್ದರೆ ಈ ಆಹಾರಗಳಿಂದ ದೂರವಿರಿ!

Migraine Problem

ʻನನ್ನ ಶತ್ರುವಿಗೂ ಕೂಡಾ ಮೈಗ್ರೇನ್‌ ತಲೆನೋವು (Migraine headache) ಬಾರದಿರಲಿʼ ಎಂದು ಕೆಲವರು ತಲೆನೋವಿನ ನೋವಿನಲ್ಲಿದ್ದಾಗ ಹೇಳುವುದುಂಟು. ಯಾಕೆಂದರೆ, ಮೈಗ್ರೇನ್‌ ತಲೆನೋವು ಕೆಲವರನ್ನು ಎಡೆಬಿಡದೆ ಕಾಡುತ್ತದೆ. ಒಮ್ಮೆ ಬಂದರೆ ಬಿಟ್ಟೂ ಬಿಡದಂತೆ ಬಾಧಿಸುವ ಈ ತಲೆನೋವು, ಜೀವನದ ಎಲ್ಲದರಲ್ಲಿ ಜಿಗುಪ್ಸೆ ಬರುವ ಹಾಗೆ ಮಾಡುತ್ತದೆ. ಒಮ್ಮೆ ತಲೆನೋವು ವಕ್ಕರಿಸಿದರೆ ಸಾಕು, ಮತ್ತೆ ಯಾವುದೂ ಬೇಡವೆನ್ನಿಸುವ ಹಾಗೆ ಮಾಡುವುದು ನಿಶ್ಚಿತವೇ. ತಲೆನೋವಿನ ಜೊತೆಗೆ ಕೆಲವೊಮ್ಮೆ ತಲೆಸುತ್ತು, ವಾಂತಿ ಬಂದಂತಾಗುವುದು, ಶಬ್ದ ಬೆಳಕು ಯಾವುದೂ ಬೇಡ ಅನಿಸುವುದು, ಕಿರಿಕಿರಿಯಾಗುವುದು ಇತ್ಯಾದಿ ಸಹಜ. ಹೀಗೆ ಆಗಾಗ ಮೈಗ್ರೇನ್‌ ತಲೆನೋವು ಬಾಧಿಸುವ ಮಂದಿ ಕೆಲವು ಆಹಾರಗಳಿಂದ ದೂರವಿರುವುದು ಒಳ್ಳೆಯದು. ಹಾಗಾದರೆ ಆ ಆಹಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಕೆಫಿನ್

ಕಾಫಿ, ಚಹಾವಿಲ್ಲದೆ ದಿನ ಮುಂದೆ ಹೋಗುವುದಿಲ್ಲ ಅನಿಸುತ್ತಿದೆಯಾ? ನಿಮಗೆ ಮೈಗ್ರೇನ್‌ ತಲೆನೋವು ಇರುವುದು ಹೌದೇ ಆದಲ್ಲಿ, ಅದರಿಂದ ಬಿಡುಗಡೆ ಬೇಕು ಅನಿಸಿದೆಯಾದಲ್ಲಿ, ಖಂಡಿತಾ ನೀವು ಕಾಫಿ ಚಹಾ ಮತ್ತಿತರ ಕೆಫಿನ್‌ಯುಕ್ತ ಪೇಯಗಳಿಂದ ದೂರವಿರುವುದು ಒಳ್ಳೆಯದು. ಹೆಚ್ಚು ಕೆಫಿನ್ಯುಕ್ತ ಆಹಾರ ಸೇವಿಸುವುದರಿಂದ ಮೈಗ್ರೇನ್‌ ಇನ್ನೂ ತಾರಕ್ಕೇರಬಹುದು. ನಿಮಗೆ ಇದನ್ನು ಬಿಟ್ಟರೂ ಸಮಸ್ಯೆ ಅಂತಾದಲ್ಲಿ, ಸಂಪೂರ್ಣ ನಿಲ್ಲಿಸದೆ, ಹೆಚ್ಚೆಂದರೆ ದಿನಕ್ಕೆರಡು ಬಾರಿ ಅರ್ಧ ಲೋಟದಂತೆ ಕುಡಿಯಿರಿ.

ಚಾಕೋಲೇಟ್

ಚಾಕೋಲೇಟ್‌ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಮುದುಕರವರೆಗೂ ಚಾಕೋಲೇಟ್‌ ಕಂಡರೆ ಬಾಯಿ ಬಿಡುವವರೇ. ಆದರೆ ಚಾಕೋಲೇಟ್‌ನಲ್ಲಿ ಕೆಫಿನ್‌ನ ಪ್ರಮಾಣವೂ, ಆಂಟಿಆಕ್ಸಿಡೆಂಟ್‌ಗಳೂ ಸಾಕಷ್ಟಿರುವುದರಿಂದ ಇದು ಎರಡೂ ರೀತಿಯಲ್ಲಿ ಪರಿಣಾಮ ಬೀರಬಹುದು. ಅಂದರೆ, ಕೆಫಿನ್‌ನ ಸೇವನೆಯಿಂದ ಮೈಗ್ರೇನ್‌ ಅತಿಯಾಗಬಹುದು. ಅಥವಾ ಕಡಿಮೆಯೂ ಮಾಡಬಹುದು. ಕೆಲವೊಮ್ಮೆ ಮೈಗ್ರೇನ್‌ ಸಂದರ್ಭವೂ ಚಾಕೋಲೇಟ್‌ ತಿನ್ನುವ ಬಯಕೆಯುಂಟಾಗಬಹುದು. ಅಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಇದರಿಂದ ಲಾಭವಾದರೂ, ಹೆಚ್ಚಾಗಿ, ಚಾಕೋಲೇಟ್‌ನಿಂದ ಉತ್ತಮ ಪರಿಣಾಮ ಕಡಿಮೆ.

ಒಣಹಣ್ಣು ಮತ್ತು ಬೀಜಗಳು

ಒಣಹಣ್ಣು ಹಾಗೂ ಬೀಜಗಳು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದೇ ಆದರೂ, ಮೈಗ್ರೇನ್‌ ಇದ್ದಾಗ ಇದು ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಾಧ್ಯತೆಗಳಿವೆ ಎಂಬುದೂ ನಿಜ. ಒಣದ್ರಾಕ್ಷಿ, ಖರ್ಜೂರ, ಆಪ್ರಿಕಾಟ್‌, ಒಣ ಅಂಜೂರ ಹಾಗೂ ಕೆಲವು ಬೀಜಗಳು ಫೀನೈಲಾಲನೈನ್‌ ಎಂಬ ರಸಾಯನಿಕವನ್ನು ಹೊಂದಿರುವುದರಿಂದ ಇದಕ್ಕೆ ಮೈಗ್ರೇನನ್ನು ಇನ್ನಷ್ಟು ಪ್ರಚೋದಿಸುವ ಗುಣವೂ ಇದೆ. ಹಾಗಾಗಿ ಮೈಗ್ರೇನ್‌ ಇರುವ ಮಂದಿ ಇವುಗಳನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ.

ಆಲ್ಕೋಹಾಲ್‌

ಆಲ್ಕೋಹಾಲ್‌ ಸೇವಿಸುವ ಅಭ್ಯಾಸ ನಿಮಗೆ ಹೆಚ್ಚಿದ್ದರೆ ಖಂಡಿತಾ ಕಡಿಮೆ ಮಾಡುವುದು ಒಳ್ಳೆಯದು. ಇದು ಮೈಗ್ರೇನ್‌ಗೆ ದೊಡ್ಡ ಶತ್ರು. ವೈನ್‌ ಹಾಗೂ ಇತರ ಕೆಲವು ಆಲ್ಕೋಹಾಲ್‌ಗಳಲ್ಲಿ ಫ್ಲೇವನಾಯ್ಡ್‌ಗಳು ಇರುವುದರಿಂದ ಇವು ತಲೆನೋವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಆಲ್ಕೋಹಾಲ್‌ ಸೇವನೆ ನಿರ್ಲಜೀಕರಣವನ್ನುಂಟು ಮಾಡುವಿದರಿಂದಲೂ ತಲೆನೋವು ಹೆಚ್ಚಾಗುತ್ತದೆ.

ಹಣ್ಣುಗಳು

ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಅಂದಾದರೂ ಇಲ್ಲಿ ಯಾಕೆ ತಿನ್ನಾಬರದು ಎನ್ನುತ್ತಿದ್ದಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಹೀಗೆ ಹೇಳುವುದಕ್ಕೆ ಕಾರಣವೂ ಇದೆ. ಹಣ್ಣುಗಳಿಗೆ, ಮುಖ್ಯವಾಗಿ ಸಿಟ್ರಸ್‌ ಹಣ್ಣುಗಳಿಗೆ ತಲೆನೋವನ್ನು ಇನ್ನಷ್ಟು ಉದ್ದೀಪಿಸುವ ಗುಣವಿದೆ. ಹಾಗಾಗಿ ಮುಖ್ಯವಾಗಿ ಮೈಗ್ರೇನ್‌ ತಲೆನೋವಿನ ಮಂದಿ ಸಿಟ್ರಸ್‌ ಹಣ್ಣುಗಳನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ.

ಇದನ್ನೂ ಓದಿ: Skincare Tips For Spring: ಋತು ಬದಲಾವಣೆಯಲ್ಲಿ ಚರ್ಮದ ಆರೈಕೆ ಹೇಗಿರಬೇಕು?

Exit mobile version