Site icon Vistara News

Migraine Remedy: ಮೈಗ್ರೇನ್‌ ಕಿರಿಕಿರಿಗೆ ಅಡುಗೆಮನೆಯಲ್ಲಿಯೇ ಇದೆ ಮದ್ದು!

migrane remedy

ಮೈಗ್ರೇನ್‌ (Migraine) ಇಂದು ಬಹಳ ಮಂದಿಯನ್ನು ಕಾಡುವ ಸಮಸ್ಯೆ. ಜೀವನಶೈಲಿ (lifestyle disease) ಸಮಸ್ಯೆಗಳು ಹಾಗೂ ಒತ್ತಡದ (stress) ಕಚೇರಿ ಕೆಲಸಗಳು ಇದಕ್ಕೆ ಕಾರಣವಾಗುತ್ತದೆ. ಈ ಅರೆತಲೆ ನೋವು (migraine problem) ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ತರಹ ಇರಬಹುದು. ಆದರೆ ಬಹುತೇಕವಾಗಿ ಈ ನೋವು ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚಿದಂತಹ ನೋವು ಯಾವಾಗಲೂ ಬಾಧಿಸುತ್ತಿರುತ್ತದೆ. ಈ ಮೈಗ್ರೇನ್ ತಲೆನೋವನ್ನು ಆಯುರ್ವೇದದ ಚಿಕಿತ್ಸೆಯ (Migraine Remedy) ಮೂಲಕವೂ ನಿವಾರಿಸಬಹುದು. ಅದಕ್ಕೂ ಹೆಚ್ಚಾಗಿ ನಮ್ಮ ಅಡುಗೆಮನೆಯಲ್ಲಿಯೇ (Migraine home Remedy) ಇದಕ್ಕೆ ಹಲವು ಮದ್ದುಗಳಿವೆ. ಅವು ಯಾವುವು ಅಂತ ನೋಡೋಣ.

ಮೈಗ್ರೇನ್‌ನ ಕೆಲವು ಲಕ್ಷಣಗಳು

ಮೈಗ್ರೇನ್‌ ನೋವು ತಲೆಯ ಮುಂಭಾಗದಲ್ಲಿ ಕಾಣಿಸಿಕೊಂಡು, ತಲೆಯ ಒಂದು ಬದಿಯಿಂದ ಮತ್ತೊಂದು ಭಾಗಕ್ಕೆ ನೋವು ಸ್ಥಳಾಂತರಗೊಂಡು ನಂತರದ ದಿನಗಳಲ್ಲಿ ಸಂಪೂರ್ಣ ತಲೆ ನೋಯಿಸಲು ಪ್ರಾರಂಭವಾಗಬಹುದು. ಸಾಮಾನ್ಯವಾಗಿ ವಾಕರಿಕೆ, ವಾಂತಿ ಇರುತ್ತವೆ. ಬೆಳಕಿನ ವಿಪರೀತ ಕಿರಣಗಳನ್ನು ದೇಹ ತಡೆದುಕೊಳ್ಳುವುದಿಲ್ಲ. ತಲೆನೋವು ಕೆಲವು ಗಂಟೆಗಳು ಅಥವಾ ಹಲವಾರು ದಿನ ಇರಬಹುದು. ದೈಹಿಕ ಚಟುವಟಿಕೆಯನ್ನು ಕುಂಠಿತಗೊಳಿಸುವ ಸಾಮರ್ಥ್ಯವನ್ನು ಈ ಮೈಗ್ರೇನ್‌ ಹೊಂದಿದೆ. ಹಾಗಿದ್ರೆ ಮನೆಮದ್ದಿನ ಮೂಲಕ ಮೈಗ್ರೇನ್‌ನಿಂದ ದೂರವುಳಿಯುವುದು ಹೇಗೆ? ಯಾವುದೇ ತಲೆನೋವಿನಂತೆ ಮೈಗ್ರೇನ್ ಸಹಾ ಪ್ರಾರಂಭದಲ್ಲಿ ನಿಧಾನವಾಗಿದ್ದು ಕ್ರಮೇಣ ಏರುತ್ತಾ ತೀವ್ರಸ್ವರೂಪ ಪಡೆಯುತ್ತದೆ. ಆದ್ದರಿಂದ ಈ ನೋವು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳಷ್ಟು ಉತ್ತಮ.

ನೆನೆಸಿದ ಒಣದ್ರಾಕ್ಷಿ ಸೇವನೆ: ಮೈಗ್ರೇನ್ ನೋವನ್ನು ನಿವಾರಿಸಲು 10ರಿಂದ 15 ಒಣದ್ರಾಕ್ಷಿಗಳನ್ನು ರಾತ್ರಿ ನೆನೆಸಿಟ್ಟು, ಮುಂಜಾನೆ ಸೇವಿಸಬೇಕು. ಈ ನೆನೆಸಿದ ಒಣದ್ರಾಕ್ಷಿಗಳನ್ನು 12 ವಾರಗಳ ಕಾಲ ಸತತವಾಗಿ ಸೇವಿಸಿದರೆ ಒಣದ್ರಾಕ್ಷಿಗಳು ದೇಹದಲ್ಲಿನ ಹೆಚ್ಚುವರಿ ಪಿತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಆಮ್ಲೀಯತೆ, ವಾಕರಿಕೆ, ಕಿರಿಕಿರಿ, ಒಂದೇ ಕಡೆಯ ತಲೆನೋವು ಮುಂತಾದ ಮೈಗ್ರೇನ್‌ಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಸಹ ನಿಯಂತ್ರಿಸುತ್ತದೆ.

ಜೀರಿಗೆ-ಏಲಕ್ಕಿ ಚಹಾ ಸೇವನೆ: ಮೈಗ್ರೇನ್ ಲಕ್ಷಣಗಳು ಕಾಣಿಸಿಕೊಂಡಾಗ ಈ ರೋಗ ನಿರೋಧಕಗಳಿಂದ ಸಮೃದ್ಧವಾದ ಚಹಾವನ್ನು ಕುಡಿಯುವುದು ಹೆಚ್ಚು ಪರಿಣಾಮಕಾರಿ. ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಒಂದು ಗಂಟೆಯ ನಂತರ ಈ ಚಹಾವನ್ನು ನಿಯಮಿತವಾಗಿ ದಿನಾಲು ಕುಡಿಯಲು ಪ್ರಯತ್ನಿಸಿ. ಆಗ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ.

ಹಸುವಿನ ತುಪ್ಪ ಸೇವಿಸಿ: ಆಯುರ್ವೇದದ ಪ್ರಕಾರ, ದೇಹ ಮತ್ತು ಮನಸ್ಸಿನಲ್ಲಿ ಹೆಚ್ಚುವರಿ ಪಿತ್ತವನ್ನು ಸಮತೋಲನಗೊಳಿಸುವಲ್ಲಿ ಹಸುವಿನ ತುಪ್ಪಕ್ಕಿಂತ ಉತ್ತಮವಾದುದು ಬೇರೆ ಯಾವ ಪದಾರ್ಥವೂ ಇಲ್ಲ. ಆಹಾರ ತಯಾರಿಕೆಯ ವಿವಿಧ ವಿಧಾನಗಳಲ್ಲಿ ತುಪ್ಪವನ್ನು ಊಟದಲ್ಲಿ ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.

ಕೋಲ್ಡ್‌ ಪ್ಯಾಕ್‌: ಒಂದು ಶುದ್ಧವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಹಣೆಯ ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಬಹುದು. ಇಲ್ಲವೆಂದರೆ ಕಣ್ಣು ಮುಚ್ಚಿ ಅಂಗಾತ ಮಲಗಿ ಐಸ್ ಬ್ಯಾಗ್ ಅನ್ನು ಹಣೆಯ ಮೇಲ್ಭಾಗದಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಕಳೆದರೆ ತಲೆನೋವಿನಿಂದ ಮುಕ್ತಿ ಹೊಂದಬಹುದು. ಈ ಕೋಲ್ಡ್ ಕಂಪ್ರೆಸ್ಸಿಂಗ್ ವಿಧಾನವನ್ನು ಹಣೆಯ ಮೇಲೆ ಸುಮಾರು 15ರಿಂದ 20 ನಿಮಿಷಗಳು ಮಾಡುವುದು ಒಳ್ಳೆಯದು.

ಶುಂಠಿ ಬಳಕೆ: ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಬಹುದು. ಶುಂಠಿಗೆ ಅಲರ್ಜಿ ಇಲ್ಲ ಎನ್ನುವವರು ತಮ್ಮ ದೀರ್ಘ ಕಾಲದ ಮೈಗ್ರೇನ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಶುಂಠಿಯ ಬಳಕೆ ಮಾಡಬಹುದು.

ಇದನ್ನೂ ಓದಿ: Migraine Problem: ಮುಟ್ಟಿನ ದಿನಗಳಲ್ಲಿ ಮೈಗ್ರೇನ್‌ ಕಾಟಕ್ಕೆ ಕಾರಣವೇನು?

Exit mobile version