Site icon Vistara News

Eating Ragi In Winter: ರಾಗಿಯ ತಿನಿಸು ಚಳಿಗಾಲಕ್ಕೆ ಒಳಿತು; ಏಕೆಂದರೆ…

Eating Ragi In Winter

ರಾಗಿ ತಿಂದವ ನಿರೋಗಿ ಎಂಬ ಮಾತಿದೆ. ಎಷ್ಟೋ ತಲೆಮಾರುಗಳಿಂದ ರಾಗಿ ಬೆಳೆದು ತಿನ್ನುತ್ತಿರುವ ಪ್ರದೇಶಗಳನ್ನೂ ಈಗ ಬೇರೆ ಧಾನ್ಯಗಳು ಆವರಿಸಿವೆ. ಅದಷ್ಟೇ ಆದರೆ ತೊಂದರೆಯಿರಲಿಲ್ಲ. ಒಳ್ಳೆಯ ಆಹಾರಗಳ ಜಾಗಗಳಲ್ಲಿ ಈಗ ಸಂಸ್ಕರಿತ ಆಹಾರಗಳು ಕೂತಿವೆ. ಎಲ್ಲರ ಹೊಟ್ಟೆ ಹಾಳು, ಆರೋಗ್ಯ ಜಾಳು! ಇದಕ್ಕೆ ಉತ್ತರವೋ ಎಂಬಂತೆ ರಾಗಿಯಂಥ ಕಿರು ಧಾನ್ಯಗಳಿಗೆ (millets) ಎಲ್ಲೆಡೆ ಪ್ರೋತ್ಸಾಹ ದೊರೆಯುತ್ತಿದೆ. ರಾಗಿ (ragi) ಎಲ್ಲರಿಗೂ ಅಭ್ಯಾಸ ಇರುವುದಿಲ್ಲ ಎಂಬುದು ನಿಜ. ಆದರೆ ಚಳಿಗಾಲದ ದಿನಗಳಲ್ಲಿ ಈ ಅಭ್ಯಾಸ ರೂಢಿಸಿಕೊಂಡರೆ ಲಾಭವಿದೆ ಎನ್ನುತ್ತಾರೆ ಆಹಾರ ತಜ್ಞರು. ಏನದು?

ಚಳಿಗಾಲಕ್ಕೂ ರಾಗಿಗೂ ನಂಟಿದೆ!

ಚಳಿಗಾಲದಲ್ಲಿ ನಾವು ಪರಂಪರಾಗತವಾಗಿ ಸೇವಿಸುವ ಆಹಾರಗಳನ್ನು ಗಮನಿಸಿ. ಹೆಚ್ಚಿನವು ದೇಹವನ್ನು ಬೆಚ್ಚಗೆ ಇಡುವಂಥವು; ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥವು; ಮೂಳೆ ಗಟ್ಟಿ ಮಾಡುವಂಥ ಕ್ಯಾಲ್ಶಿಯಂ ಇರುವಂಥವು- ಇಂಥ ಆಹಾರಗಳೇ ಹೆಚ್ಚು. ರಾಗಿಯೂ ದೇಹಧರ್ಮಕ್ಕೆ ಅನುಸಾರವಾಗಿ ಶರೀರವನ್ನು ಬೆಚ್ಚಗೆ ಇರಿಸುತ್ತದೆ. ಹೊರಗಿನ ಚಳಿಗೆ ಅನುಸಾರವಾಗಿ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ.

ಮಧುಮೇಹ ನಿಯಂತ್ರಣ

ಚಳಿಗಾಲ ಬರುತ್ತಿದ್ದಂತೆ ಕೆಲವೊಮ್ಮೆ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಸಮಸ್ಯೆಯಾಗಬಹುದು. ಚಳಿಗಾಲಕ್ಕೂ ಮಧುಮೇಹಕ್ಕೂ ನೇರ ನಂಟು ಇಲ್ಲದಿದ್ದರೂ, ಅನ್ಯ ಕಾರಣಗಳಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾಗಿ ರಾಗಿ ಸೇವನೆ ಇದಕ್ಕೆ ನೆರವು ನೀಡುತ್ತದೆ. ಇದರಲ್ಲಿರುವ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ಇದನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಳಿತ ಆಗುವುದಿಲ್ಲ.

ಸತ್ವಗಳು ಅಪಾರ

ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಹಲವು ರೀತಿಯಲ್ಲಿ ದೇಹವನ್ನು ಗಟ್ಟಿ ಮಾಡುತ್ತವೆ. ಹಲವು ರೀತಿಯ ಜೀವಸತ್ವಗಳಿದ್ದು, ಚರ್ಮ ಮತ್ತು ಕೂದಲ ಪೋಷಣೆಗೆ ನೆರವಾಗುತ್ತವೆ. ಕ್ಯಾಲ್ಶಿಯಂ, ಮೆಗ್ನೀಶಿಯಂಗಳು ಮೂಳೆಗಳನ್ನು ಬಲಗೊಳಿಸಿದರೆ, ಕಬ್ಬಿಣದಂಶ ರಕ್ತಹೀನತೆಯನ್ನು ನಿವಾರಿಸುತ್ತದೆ. ನಾರು ಯಥೇಚ್ಛವಾಗಿದ್ದು ಮಲಬದ್ಧತೆಯನ್ನು ನಿವಾರಿಸಲು ಅನುಕೂಲವಾಗುತ್ತದೆ.

ಶಕ್ತಿ ಸಂಚಯನ

ರಾಗಿ ತಿಂದ ಮೇಲೆ ದೀರ್ಘ ಕಾಲದವರೆಗೆ ಹಸಿವಾಗುವುದಿಲ್ಲ. ಕಾರಣ, ಇದರಲ್ಲಿರುವ ನಾರಿನಂಶದಿಂದ ಇದು ನಿಧಾನವಾಗಿ ಕರಗಿ ರಕ್ತ ಸೇರುತ್ತದೆ. ಜೊತೆಗೆ, ಇದರ ಸಂಕೀರ್ಣ ಪಿಷ್ಟಗಳು ದೀರ್ಘಕಾಲದವರೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತಿರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣುವ ಜಡತೆ, ಸುಸ್ತು ಇಂಥವಕ್ಕೆ ರಾಗಿ ತಿನ್ನುವವರಲ್ಲಿ ಆಸ್ಪದ ಇರುವುದಿಲ್ಲ.

ಜೀರ್ಣಾಂಗಗಳು ಚುರುಕು

ಇದರಲ್ಲಿರುವ ನಾರಿನಂಶ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ, ಪಚನವನ್ನು ಸುಲಭವಾಗಿಸುತ್ತದೆ. ಜೀರ್ಣವಾಗುವುದಕ್ಕೆ ದೀರ್ಘ ಕಾಲ ತೆಗೆದುಕೊಂಡರೂ, ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಹೀರಲ್ಪಡುವುದು ಪ್ರಮುಖ ಅಂಶ. ಬರುತ್ತಿರುವುದು ಚಳಿಗಾಲವಾದ್ದರಿಂದ ಜೀರ್ಣಾಂಗಗಳ ಕೆಲಸ ನಿಧಾನವಾಗುವ ಹಿನ್ನೆಲೆಯಲ್ಲಿ ರಾಗಿಯಂಥ ಸಿರಿಧಾನ್ಯಗಳು ಸೇವನೆ ಲಾಭದಾಯಕ

ಪ್ರತಿರೋಧಕ ಶಕ್ತಿ ಹೆಚ್ಚಳ

ನೆಗಡಿ-ಶೀತದ ದಿನಗಳು ಮುಂದಿವೆ. ಕಿವಿ-ಗಂಟಲು ಸೋಂಕುಗಳು, ಕೆಮ್ಮು-ಜ್ವರಗಳು ಎಲ್ಲೆಡೆ ಕಾಡುತ್ತವೆ. ಇಂಥ ಕಾಲದಲ್ಲಿ ವಿಟಮಿನ್‌ ಮತ್ತು ಸತು ಇರುವಂಥ ಆಹಾರದ ಸೇವನೆ ಅಗತ್ಯ. ರಾಗಿಯಲ್ಲಿ ಈ ಎಲ್ಲಾ ಗುಣಗಳಿವೆ. ಇದೇ ಹಿನ್ನೆಲೆಯಲ್ಲಿ ರಾಗಿ ತಿಂದವ ನಿರೋಗಿ ಎಂಬ ಗಾದೆ ಚಾಲ್ತಿಯಲ್ಲಿ ಇರಬಹುದು

ಬಳಕೆ ಕಷ್ಟವಲ್ಲ

ರಾಗಿ ಎನ್ನುತ್ತಿದ್ದಂತೆ ನೆನಪಿಗೆ ಬರುವುದು ಜನಪ್ರಿಯವಾದ ರಾಗಿಮುದ್ದೆ. ಆದರೆ ಅದನ್ನು ಮುದ್ದೆಯ ರೂಪದಲ್ಲೇ ಸೇವಿಸಬೇಕೆಂದಿಲ್ಲ. ರಾಗಿ ಅಂಬಲಿಯಿಂದ ಹಿಡಿದು, ರಾಗಿ ದೋಸೆ, ರೊಟ್ಟಿ, ಥಾಲಿಪೆಟ್ಟು, ರಾಗಿ ಇಡ್ಲಿ, ಹುರಿಟ್ಟು, ಶಾವಿಗೆ, ರಾಗಿ ಬಿಸ್ಕೆಟ್…‌ ಹೀಗೆ ಬಗೆಬಗೆಯ ಆಹಾರಗಳನ್ನು ಇದರಲ್ಲಿ ತಯಾರಿಸಬಹುದು.

ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು

Exit mobile version