Site icon Vistara News

Mindfulness | ಮನಸ್ಸಿಗೂ ಬೇಕು ವಿಶ್ರಾಂತಿ, ಸದಾ ಕೂಲ್‌ ಆಗಿರಲು ಇಲ್ಲಿವೆ ಸೂತ್ರಗಳು

mind

ನಮ್ಮ ದೇಹದ ಇತರೆ ಅಂಗಾಂಗಗಳಂತೆಯೇ ಮನಸ್ಸಿಗೂ ವಿಶ್ರಾಂತಿ ಬೇಕಾಗುತ್ತದೆ. ಹಾಗೆ ನೋಡಿದರೆ, ನಮ್ಮ ದೇಹದಲ್ಲಿ ಅತ್ಯಂತ ಬ್ಯುಸಿಯಾಗಿರುವುದು ಮನಸ್ಸು. ಮನುಷ್ಯನ ಮನಸ್ಸು ಯಾವಾಗಲೂ ಏನಾದರೊಂದು ವಿಚಾರವನ್ನು, ವಿಷಯವನ್ನೂ ಚಿಂತಿಸುತ್ತಲೇ ಇರುವ ಗುಣವಿರುವುದರಿಂದ ಇದಕ್ಕೆ ವಿಶ್ರಾಂತಿ ಎಂಬುದೇ ಇರುವುದಿಲ್ಲ.

ನಿದ್ರೆ ಮಾಡುವಾಗಲೂ ಸೇರಿದಂತೆ, ೨೪ ಗಂಟೆಗಳಲ್ಲಿ ಮನುಷ್ಯ ೭೦,೦೦೦ ಯೋಚನೆಗಳನ್ನು ಮಾಡಬಲ್ಲವನಾಗಿರುತ್ತಾನಂತೆ. ಹಾಗಾದಲ್ಲಿ, ಪ್ರತಿದಿನಕ್ಕೆ ೮೬,೪೦೦ ಸೆಕೆಂಡುಗಳಿದ್ದರೆ, ಪ್ರತಿ ೧.೨ ಸೆಕೆಂಡುಗಳಿಗೆ ಒಂದು ಯೋಚನೆಯಂತೆ ಈತನ ತಲೆಯಲ್ಲಿ ಹೊಳೆಯುತ್ತದೆ ಎಂದಾಯಿತು. ನಮ್ಮ ಮಿದುಳು ಎಂದಿಗೂ ಕೆಲಸ ನಿಲ್ಲಿಸುವುದಿಲ್ಲ, ನಿದ್ರೆಯಲ್ಲೂ! ಅದಕ್ಕಾಗಿಯೇ ಮನುಷ್ಯನಿಗೆ ದೇಹಕ್ಕೆ ಸಿಗಬೇಕಾದ ವಿಶ್ರಾಂತಿಯಷ್ಟೇ ಮನಸ್ಸಿಗೆ ಸಿಗಬೇಕಾದ ವಿಶ್ರಾಂತಿಯೂ ಬಹಳ ಅಗತ್ಯ. ಬಹಳಷ್ಟು ಸಾರಿ ನಾವು ಇದನ್ನೇ ನಿರ್ಲಕ್ಷ್ಯ ಮಾಡಿಬಿಡುತ್ತೇವೆ.

ಹಾಗಾದರೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ಎಂದರೆ ಮೊದಲು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಆರೋಗ್ಯಕರ ಆಹಾರವನ್ನು ಉಣ್ಣುವುದು, ಚೆನ್ನಾಗಿ ನೀರು ಕುಡಿಯುವುದು, ಸರಿಯಾದ ನಿದ್ರೆ ಮಾಡುವುದು ಮಾನಸಿಕವಾಗಿ ಆರೋಗ್ಯ ಹೊಂದಲು ಬೇಕಾದ ಮೂಲಭೂತ ಅವಶ್ಯಕತೆಗಳು. ಮಾನಸಿಕವೇಕೆ, ದೈಹಿಕ ಆರೋಗ್ಯಕ್ಕೂ ಇವೇ ಅಗತ್ಯ ಅಂಶಗಳು. ಹಾಗಾಗಿಯೇ ಮಾನಸಿಕ ಹಾಗೂ ದೈಹಿಕ ಆರೋಗ್ಯ ಯಾವಾಗಲೂ ಒಂದನ್ನೊಂದು ಅವಲಂಬಿಸಿರುತ್ತದೆ. ಇವರಿಬ್ಬರಲ್ಲಿ ಒಂದು ಸರಿಯಾಗಿಲ್ಲದಿದ್ದರೂ ಎಲ್ಲ ಏರುಪೇರಾಗುತ್ತದೆ.

ನಮ್ಮ ಮಿದುಳಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ಮಾನಸಿಕವಾಗಿ ಆರೋಗ್ಯವಂತರಾಗಲು ಪ್ರತಿಯೊಬ್ಬನೂ ಮಾಡಬೇಕಾದುದೇನು, ಮಾಡಬಾರದ್ದೇನು ಎಂದು ವಿಚಾರ ಮಾಡಿದರೆ ಸಿಗುವ ತೀರಾ ಸರಳ. ಯಾವಾಗಲೂ ಫೋನ್‌ ಕೈಯಲ್ಲಿ ಹಿಡಿದು ಅದರಲ್ಲೇ ಮುಳುಗಿರುವುದು, ಆಗಾಗ ಪ್ರತಿ ನಿಮಿಷಕ್ಕೊಮ್ಮೆ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಸ್ಕ್ರಾಲ್‌ ಮಾಡುವುದು, ಆಗಾಗ ಫೋನ್‌ ಹಿಡಿದು ಅದರಲ್ಲಿ ಮಿಂಚಿ ಮರೆಯಾಗುವ ಸುದ್ದಿ ಓದುವುದು, ಸದಾ ಆನ್‌ಲೈನ್‌ ಶಾಪಿಂಗ್‌ ಮಾಡುವುದು, ಯುಟ್ಯೂಬ್‌ ವಿಡಿಯೋಗಳನ್ನು ನೋಡುವುದು, ಸಾಮಾಜಿಕ ಜಾಲತಾಣದಲ್ಲಿ ಸಮಯದ ಪರಿವೇಯೇ ಇಲ್ಲದೆ ರೀಲ್ಸ್‌ ನೋಡುತ್ತಲೇ ಇರುವುದು, ಅತಿ ಹೆಚ್ಚು ಕೆಫಿನ್‌ಯುಕ್ತ ಆಹಾರ ಸೇವನೆ ಮಾಡುವುದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಮಗೆ ಮಾರಕವಾಗುವ ಸಂಗತಿಗಳು.

ಹಾಗಾದರೆ ನಾವು ರೂಢಿಸಿಕೊಳ್ಳಬೇಕಾದ್ದೇನು ಎಂದು ನೋಡಿದರೆ ಅದಕ್ಕೂ ಉತ್ತರ ಸರಳವೇ. ಎಲ್ಲರಿಗೂ ಗೊತ್ತಿರುವಂಥದ್ದೇ ಆದರೂ, ಇವುಗಳ ಪಾಲನೆ ಕಷ್ಟವೆನಿಸಿದರೂ ಪಾಲಿಸುವುದು ಮಾತ್ರ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

೧. ಆದಷ್ಟೂ ಸಾಮಾಜಿಕ ಸಂಬಂಧಗಳನ್ನು ಮುಂದುವರಿಸಿ. ಫೋನ್‌ ಕಾಲ್‌, ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಮಾತಾಡಿಕೊಂಡಿದ್ದರೂ, ವ್ಯಕ್ತಿಯನ್ನು ಮುಖತಃ ಮಾತನಾಡುವ ಫೀಲ್‌ ಬೇರೆಯೇ. ಜನರನ್ನು ಭೇಟಿಯಾಗಿ ಮಾತನಾಡುವುದು, ನಗು, ಹರಟೆ ಒಳ್ಳೆಯದು.

ಇದನ್ನೂ ಓದಿ: Amritha JOSH! ತಂದೆ ಆಸೆ ಈಡೇರಿಸಲು ಬೈಕಲ್ಲಿ ದೇಶ ಸುತ್ತಿದ ಮಗಳು, 5 ತಿಂಗಳಲ್ಲಿ 23,000 ಕಿ.ಮೀ ಪ್ರಯಾಣ

೨. ಚುರುಕಾಗಿರಿ. ನಿಯಮಿತ ವ್ಯಾಯಾಮ, ಓಡಾಟ, ನಡಿಗೆ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ನೆನಪಿನ ಶಕ್ತಿಯನ್ನು ವೃದ್ಧಿಸಿ, ಒಳ್ಳೆಯ ನಿದ್ದೆಯನ್ನು ನೀಡುತ್ತದೆ.

೩. ಆಪ್ತ ಗೆಳೆಯರ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡಿ. ಹಗುರಾಗಿ. ಹೆಚ್ಚು ಖಾಸಗಿ ವಿಚಾರಗಳನ್ನು ಒಳಗಿಟ್ಟು ಕೊರಗದೆ, ನಂಬಿಕಸ್ಥ ಗೆಳೆಯ ಗೆಳತಿಯರ ಜೊತೆಗೆ ಮನಬಿಚ್ಚಿ ಮಾತನಾಡಿ.

೪. ಒಂದು ಚಂದದ ಹಾಡು, ಸುಮ್ಮನೆ ಪ್ರಕೃತಿಯ ಮಡಿಲಲ್ಲೊಂದು ಸಂಜೆಯ ವಾಕ್‌ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಎಂದಾದಲ್ಲಿ ಖಂಡಿತ ಅವಕ್ಕೆ ಸಮಯ ಕೊಡಿ.

೫. ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.

೬. ಪ್ರತಿದಿನವೂ ನಿಮಗಾಗಿ ಒಂದಿಷ್ಟು ಸಮಯವನ್ನು ತೆಗೆದಿಡಿ. ನಿಮಗಿಷ್ಟ ಬಂದಿದ್ದನ್ನು ಆಗ ಮಾಡಿ. ಪಾಸಿಟಿವ್‌ ಸಂಗತಿಗಳಿಗೆ ಈ ಸಮಯ ಸಿಗಲಿ.

೭. ಮಿದುಳಿನ ಆರೋಗ್ಯಕ್ಕೆ ಪೂರಕ ಆಹಾರ ತಿನ್ನಿ. ಒಮೆಗಾ ೩ಎಸ್‌ ಹೆಚ್ಚಿರುವ ಆಹಾರ ಉತ್ತಮ. ಮೀನು, ಗೋಡಂಬಿ, ಬಾದಾಮಿ, ವಾಲ್‌ನಟ್‌, ನೆಲಗಡಲೆಯಂಥ ಒಣಬೀಜಗಳು, ಅವಕಾಡೋ (ಬೆಣ್ಣಹಣ್ಣು), ಬೀನ್ಸ್‌, ಹಸಿರು ಸೊಪ್ಪು, ಬ್ಲೂಬೆರಿ, ಮುಂತಾದವುಗಳು ಒಳ್ಳೆಯದು.

೮. ಕೌಟುಂಬಿಕವಾಗಿಯೂ ಸಂಬಂಧಗಳಿಗೆ ಬೆಲೆ ಕೊಡಿ. ಪ್ರೀತಿಸುವ ಜೀವಗಳಿಗೆ ಸಮಯ ಕೊಡಿ. ಅವರೊಡನೆ ತಿರುಗಾಡಿಕೊಂಡು ಬನ್ನಿ.

ನೀವು ನಿಮ್ಮ ಮನಸ್ಸಿಗೆ ಆಗಾಗ ವಿಶ್ರಾಂತಿ ಕೊಡದೇ ಇದ್ದರೆ ಅದು ಚೆನ್ನಾಗಿ ಕೆಲಸ ಮಾಡದು. ಇದು ಆಗಾಗ ಆರೋಗ್ಯ ಸಂಬಂಧೀ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಮಾನಸಿಕ ಒತ್ತಡ ಹೆಚ್ಚುತ್ತದೆ. ಹಾಗಾಗಿ ಇಂತಹ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಬೇಕಾಗಿಲ್ಲ!

ಇದನ್ನೂ ಓದಿ: ಮನಿ ಕಹಾನಿ ಅಂಕಣ | ನಮಗೆ ದುಡ್ಡು ಕೊಡೋ ಕಾನ್ಫಿಡೆನ್ಸೇ ಬೇರೆ!

Exit mobile version