Site icon Vistara News

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

Mint Leaf Water

ಬೇಸಿಗೆ ಕಾಲಕ್ಕೂ ಪುದಿನಕ್ಕೂ ಚಂದನೆಯ ಬಾಂಧವ್ಯವಿದೆ. ಇದರಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನವನ್ನು ಚಟ್ನಿ, ಸಲಾಡ್‌, ಕರಿ, ಪೇಯಗಳಲ್ಲಿ ಬಳಸಿದರೆ ಸಾಕು, ತನ್ನಲ್ಲಿರುವ ಅಪರೂಪದ ಘಮವನ್ನು ಅದು ಈ ಎಲ್ಲ ಆಹಾರಕ್ಕೆ ನೀಡಿ ಬೇರೆಯದೇ ಬಗೆಯ ಫೀಲ್‌ ನೀಡುತ್ತದೆ. ಇಂಥ ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿರುಬಹುದು. ಕೇವಲ ಒಂದು ಪುದಿನ ಇನ್‌ಫ್ಯೂಸ್ಡ್‌ ವಾಟರ್‌ನಿಂದ ಪುದಿನದ ಲಾಭಗಳನ್ನು ಪಡೆಯಬಹುದು. ಅಧವಾ ಪುದಿನ ಹಾಗೂ ನಿಂಬೆಹಣ್ಣಿನ ರಸವನ್ನು ಸೇರಿಸಿದ ನೀರನ್ನು, ನೀರಿನ ಬದಲಾಗಿಯೂ ದಿನಕ್ಕೊಮ್ಮೆ ಕುಡಿಯಬಹುದು. ಬನ್ನಿ, ಪುದಿನ ನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (Mint leaf water) ಎಂಬುದನ್ನು ನೋಡೋಣ.

ದೇಹಕ್ಕೆ ನೀರು ಅಗತ್ಯ

ಬೇಸಿಗೆಯಲ್ಲಿ ದೇಹಕ್ಕೆ ನೀರು ಎಲ್ಲಕ್ಕಿಂತ ಹೆಚ್ಚು ಅಗತ್ಯ. ಹೈಡ್ರೇಟೆಡ್‌ ಆಗಿರುವುದು ಆರೋಗ್ಯಕ್ಕೆ ಮೂಲ. ಆದರೆ ಇಡೀ ದಿನ ಇಷ್ಟು ನೀರು ಕುಡಿಯಬೇಕು ಎಂಬ ಒತ್ತಡಕ್ಕೆ ಬಿದ್ದು ಖಾಲಿ ನೀರು ಕುಡಿಯುವುದು ಹೇಗೆ ಎಂಬ ಸಮಸ್ಯೆ ಎದುರಿಸುವ ಮಂದಿಗೆ ಪುದಿನ ನೀರು ಒಳ್ಳೆಯದು. ಪುದಿನವನ್ನು ಕೈಯಲ್ಲಿ ಕೊಂಚ ರಸ ಬಿಡುವ ಹಾಗೆ ಹಿಸುಕಿ ನೀರಿಗೆ ಹಾಕಿಟ್ಟು ಆಗಾಗ ಅವಶ್ಯಕತೆ ಬಿದ್ದಾಗ ಹೀರುತ್ತಿರಬಹುದು. ಇದರಿಂದ ಪುದಿನದ ಸತ್ವಗಳೂ ದೇಹಕ್ಕೆ ಸೇರಿ, ಬೇಸಿಗೆಯಲ್ಲಿ ರಿಫ್ರೆಶಿಂಗ್‌ ಅನುಭವ ನೀಡುತ್ತದೆ.

ಜೀರ್ಣಕ್ರಿಯೆಗೆ ಪುದಿನ ಒಳ್ಳೆಯದು

ಜೀರ್ಣಕ್ರಿಯೆಗೆ ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಮೆಂಥಾಲ್‌ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿಗೆ ಅನುಕೂಲಕರ ವಾತಾವರಣ ಇದು ನಿರ್ಮಿಸುವುದರಿಂದ ಸಹಜವಾಗಿ, ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯ ಎಲ್ಲ ಬಗೆಯ ಸಮಸ್ಯೆಗಳಿಗೆ ಪುದಿನದಲ್ಲಿ ಉತ್ತರವಿದೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಗ್ಯಾಸ್‌, ಹೊಟ್ಟಿಯಲ್ಲಿ ಕಿಚ್ಚು ಹೊತ್ತಿಸಿದಂತಃ ಅನುಭವ, ಅಸಿಡಿಟಿ ಈ ಎಲ್ಲ ಸಮಸ್ಯೆಗಳಿಗೆ ಪುದಿನ ಸಮಾಧಾನಕರ ಉತ್ತರ ನೀಡುತ್ತದೆ.

ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ

ತೂಕ ಇಳಿಸುವಲ್ಲಿ ಪುದಿನದ ಪಾತ್ರ ದೊಡ್ಡದು. ಪುದಿನದ ಎಲೆ ಜೀರ್ಣಕ್ರಿಯೆಯ ಕಿಣ್ವಗಳಿಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡುವುದರಿಂದ ಜೀರ್ಣಕ್ರಿಯೆ ಸಹಜವಾಗಿ ಆಗುತ್ತದೆ. ಜೊತೆಗೆ ತೂಕ ಇಳಿಕೆಗೆ ನೆರವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆರೋಗ್ಯಕರವಾದ ರೀತಿಯಲ್ಲಿ ಆದರೆ ತೂಕ ಇಳಿಕೆಯೂ ಆಗುತ್ತದೆ. ಸರಿಯಾದ ಆಹಾರದ ಜೊತೆಜೊತೆಗೇ, ಪುದಿನ ನೀರನ್ನು ಆಗಾಗ ಕುಡಿಯುವುದರಿಂದ ತೂಕ ಇಳಿಕೆಯ ಪ್ರಯತ್ನವನ್ನು ಮಾಡಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ರೋಗ ನಿರೋಧಕ ಶಕ್ತಿ

ಪುದಿನದಲ್ಲಿರುವ ಇನ್ನೊಂದು ಅತ್ಯಂತ ಅಮೂಲ್ಯವಾದ ಶಕ್ತಿ ಎಂದರೆ ಅದರಲ್ಲಿರುವ ರೋಗ ನಿರೋಧಕ ಶಕ್ತಿ. ಪುದಿನ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ನಾವು ಸೇವಿಸುವ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳೂ ದೇಹದಲ್ಲಿ ಹೀರಲ್ಪಟ್ಟು ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಪುದಿನದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಗಳು ಇರುವುದರಿಂದ ದೇಹಕ್ಕೆ ಎಲ್ಲ ವಿಧದಲ್ಲೂ ಇದು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಪುದಿನ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮದ ರಂಧ್ರಗಳನ್ನು ಬಿಗಿಯಾಗಿಸಲು, ಚರ್ಮಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಸಲು, ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ಉತ್ತರ ನೀಡುತ್ತದೆ. ಮೊಡವೆ, ಕಜ್ಜಿಗಳು, ಬೆವರು ಸಾಲೆ, ಚರ್ಮದ ಸುಕ್ಕು, ನಿರಿಗೆಗಳು, ಒಣಕಕಲು ಚರ್ಮ, ಎಣ್ಣೆಯುಕ್ತ ಚರ್ಮ, ಕಪ್ಪು ಕಲೆ ಇತ್ಯಾದಿ ಇತ್ಯಾದಿ ಮುಖದ ಚರ್ಮದ ಸಮಸ್ಯೆಗಳೂ ಕೂಡಾ ಪುದಿನ ನೀರು ಕುಡಿಯುವುದರಿಂದ ಪರಿಹಾರ ಪಡೆಯುತ್ತದೆ.

Exit mobile version