Site icon Vistara News

Mobile Overuse: ಅತಿಯಾದ ಮೊಬೈಲ್ ಬಳಕೆಯಿಂದಲೂ ಬರುತ್ತದೆ ಕೀಲುನೋವು!

Mobile Overuse

ಸದಾಕಾಲ ಕುತ್ತಿಗೆಯನ್ನು ಕೊಂಚ ಮುಂದೆ ಮಾಡಿ, ಅರೆಬಗ್ಗಿದ ಸ್ಥಿತಿಯಲ್ಲೇ ಇರಿಸಿಕೊಳ್ಳುತ್ತಿರುವುದರಿಂದ, (Mobile Overuse) ಬೆನ್ನುಹುರಿಯ ಸರ್ವೈಕಲ್ ಮತ್ತು ಲಂಬರ್ ಭಾಗಗಳಲ್ಲಿ ತೊಂದರೆ ಅಥವಾ ಗಾಯಗಳು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಕಿರಿಯ ಮತ್ತು ಯುವ ವಯಸ್ಸಿನವರಲ್ಲಿ ಈ ತೊಂದರೆಗಳು ಕಾಣುತ್ತಿರುವುದು ಎಷ್ಟು ಸಾಮಾನ್ಯವೋ ಅಷ್ಟೇ ಅಪಾಯಕಾರಿಯೂ ಹೌದು.

ಬೆಳಗ್ಗೆ ಏಳುತ್ತಿದ್ದಂತೆಯೇ ಪೂರ್ವದಿಕ್ಕಿನಲ್ಲಿ ಏಳುವ ಬಾಲಭಾಸ್ಕರನನ್ನು ನೋಡುವುದು ಅಥವಾ ಪಂಚಕನ್ಯಾ ಸ್ಮರೇ ನಿತ್ಯಂ ಎನ್ನುವುದೋ ನಮ್ಮಜ್ಜಿಯರ ಕಾಲದ ಮಾತಾಯಿತು. ಈಗಿನವರು ಏಳುತ್ತಿದ್ದಂತೆ ಮಾಡುವುದು ಒಂದೇ ಕೆಲಸ- ಮೊಬೈಲ್ ನೋಡುವುದು! ಮೊಬೈಲ್ ಪ್ರಪಂಚದಲ್ಲಿ ಎಲ್ಲವೂ ಸರಿ ಇದೆಯೋ ಎಂಬುದನ್ನು ಖಾತ್ರಿ ಪಡಿಸಿಕೊಂಡಾದ ಮೇಲೆ ಹಲ್ಲುಜ್ಜುವುದು ಮುಂತಾದ ನಿತ್ಯಕರ್ಮಗಳು. ಇದೀಗ ಬರೀ ಬೆಳಗಿನ ಮಾತಲ್ಲ, ಇಡೀ ದಿನ ಇದೇ ಹಾಡು- ಇದೇ ರಾಗ. ಅತಿಯಾಗಿ ಸ್ಮಾರ್ಟ್ ಫೋನ್ ಬಳಕೆಯಿಂದಾಗಿ (Mobile Overuse) ಕಲಿಕೆಯಲ್ಲಿ ಸಮಸ್ಯೆಗಳು, ನಿದ್ರಾಹೀನತೆ, ನೆನಪಿನ ದೋಷದಂಥವು ಈಗಾಗಲೇ ಆಧುನಿಕ ಬದುಕಿನ ಆಭರಣಗಳು ಎನಿಸಿಯಾಗಿದೆ. ಜೊತೆಗೆ, ಇದರ ನೇರ ಪರಿಣಾಮವಾಗಿ ದೇಹದ ಹಲವಾರು ಕೀಲುಗಳು ಶ್ರುತಿ ತಪ್ಪುತ್ತಿವೆ.

ಬೇಕಾದವರೊಂದಿಗೆ ಮಾತಾಡುವುದಕ್ಕಷ್ಟೇ ಮೊಬೈಲುಗಳೆಂಬ ಮಾಯಾವಿಗಳು ಬಳಕೆಯಾಗುತ್ತಿದ್ದರೆ ಇವೆಲ್ಲ ಸಮಸ್ಯೆಗೆ ಅವಕಾಶವೇ ಇರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಟೆ ಹೊಡೆಯಲು, ತಂತಮ್ಮ ಸಿದ್ಧಾಂತಗಳನ್ನು ಪ್ರಚಾರ ಮಾಡಲು, ಸಿನೆಮಾ ನೋಡಲು, ಶಾಪಿಂಗ್ ಮಾಡಲು- ಹೀಗೆ ಎಲ್ಲದಕ್ಕೂ ಮೊಬೈಲೇ ಆಸರೆ (Mobile Overuse). ಸದಾಕಾಲ ಕುತ್ತಿಗೆಯನ್ನು ಕೊಂಚ ಮುಂದೆ ಮಾಡಿ, ಅರೆಬಗ್ಗಿದ ಸ್ಥಿತಿಯಲ್ಲೇ ಇರಿಸಿಕೊಳ್ಳುತ್ತಿರುವುದರಿಂದ, ಬೆನ್ನುಹುರಿಯ ಸರ್ವೈಕಲ್ ಮತ್ತು ಲಂಬರ್ ಭಾಗಗಳಲ್ಲಿ ತೊಂದರೆ ಅಥವಾ ಗಾಯಗಳು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಕಿರಿಯ ಮತ್ತು ಯುವ ವಯಸ್ಸಿನವರಲ್ಲಿ ಈ ತೊಂದರೆಗಳು ಕಾಣುತ್ತಿರುವುದು ಎಷ್ಟು ಸಾಮಾನ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಹಾಗಾದರೆ ಅತಿಯಾಗಿ ಸ್ಮಾರ್ಟ್ ಫೋನ್ ಬಳಸುವವರಲ್ಲಿ ಕಾಣಿಸಿಕೊಳ್ಳುವ ಕೀಲಿನ ತೊಂದರೆಗಳು ಯಾವುವು?

ಕುತ್ತಿಗೆ, ಭುಜ, ಬೆನ್ನು

ಕೂತಲ್ಲಿ, ನಿಂತಲ್ಲಿ ಮತ್ತು ನಡೆಯುತ್ತಾ ಮೊಬೈಲು ಬಳಸುವವರ ಬೆನ್ನು ಬೀಳುವುದು ಮೊದಲಿಗೆ ಕುತ್ತಿಗೆ ನೋವು. ಸರ್ವೈಕಲ್ ಭಾಗದಲ್ಲಿ ಆರಂಭವಾಗುವ ತೊಂದರೆ, ಕ್ರಮೇಣ ಕಟಿಯ ಮೇಲ್ಭಾಗದ ಹಲವೆಡೆಗಳಿಗೆ ಹರಡುತ್ತದೆ. ಮಲಗಿ ಮೊಬೈಲ್ ಗೀರುವವರಾದರೆ ಭುಜದ ನೋವು ಗಂಟುಬೀಳುತ್ತದೆ. ಇವೆಲ್ಲವುಗಳ ಜೊತೆಗೆ ಕೂರುವ, ನಿಲ್ಲುವ ಭಂಗಿಗಳೂ ವಿಕಾರಗೊಂಡು ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಬೆರಳುಗಳ ಕೀಲುಗಳು

ಆಸ್ಟಿಯೊ ಆರ್ಥರೈಟಿಸ್ ಸಾಮಾನ್ಯವಾಗಿ ವಯಸ್ಸಾದವರ ಖಾಯಿಲೆ ಎಂಬ ಭಾವನೆಯಿದೆ. ಅದೇನು ಸುಳ್ಳಲ್ಲ. ಆದರೆ ಯುವಜನರ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಬೆರಳುಗಳಲ್ಲಿ, ಅದರಲ್ಲೂ ಹೆಬ್ಬೆರಳಿನ ಕೀಲಿನಲ್ಲಿ ಸವೆತದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಪರಿಣತರಿಗೆ ಆತಂಕದ ವಿಷಯ ಎನಿಸಿದೆ.

ಮಣಿಕಟ್ಟು, ಮೊಣಕೈ

ಮಣಿಕಟ್ಟಿನಲ್ಲಿ ಆರಂಭವಾಗುವ ನೋವು ಕೈಯ ಉದ್ದಗಲಕ್ಕೂ ವ್ಯಾಪಿಸುತ್ತದೆ. ತಪ್ಪಾದ ಭಂಗಿಯಲ್ಲಿ , ಬಗ್ಗಿಸಿ, ವಕ್ರವಾಗಿ ಇರಿಸಿಕೊಳ್ಳುವುದರಿಂದ ಮೊಣಕೈ ಭಾಗದಲ್ಲಿ ನೋವು, ಗಾಯ ಉಂಟಾಗಬಹುದು. ಕುತ್ತಿಗೆಯಲ್ಲಿನ ನೋವು ಸಹ ಕೆಲವೊಮ್ಮೆ ಕೈಯ ಉದ್ದಗಲಕ್ಕೆ ಹರಡಿಕೊಂಡು, ಎಲ್ಲಿ ಯಾವುದಕ್ಕಾಗಿ ನೋವು ಎಂಬುದೇ ತಿಳಿಯದಂತಾಗುತ್ತದೆ.

ಎಚ್ ಎ ವಿ ಎಸ್

ಅಂದರೆ ಹ್ಯಾಂಡ್ ಆರ್ಮ್ ವೈಬ್ರೇಷನ್ ಸಿಂಡ್ರೋಮ್. ಮೊಬೈಲಿನಲ್ಲಿ ಅತಿಯಾಗಿ ಗೇಮಿಂಗ್ ಚಟವಿರುವ ಮಕ್ಕಳಿಗೆ ಅಮರಿಕೊಳ್ಳುವ ಸಮಸ್ಯೆಯಿದು. ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಕಾಣದಿದ್ದರೂ ಕೈ ಮತ್ತು ತೋಳಿನ ಭಾಗದಲ್ಲಿ ಕಾಣುವ ಅತಿಯಾದ ನೋವಿಗೆ ಈ ಹೆಸರು ಮತ್ತು ಕಾರಣವನ್ನು ಪರಿಣತರು ನೀಡಿದ್ದಾರೆ. ಇದಲ್ಲದೆ, ಮಣಿಕಟ್ಟು ಮತ್ತು ತೋಳುಗಳಲ್ಲಿ ಪದೇಪದೆ ಹಿಂಡುವ ನೋವು, ಜುಂ ಎನ್ನುವ ಅನುಭವ, ಮರಗಟ್ಟಿದಂತಾಗುವುದು, ಸೊಟ್ಟಾದಂತೆ ಕಾಣುವುದು- ಇವೆಲ್ಲವೂ ಅತಿಯಾದ ಮೊಬೈಲ್ ಬಳಕೆಯ ಬಳುವಳಿಗಳು.

ಪರಿಹಾರವಿಲ್ಲವೇ?

ಇಲ್ಲವೆಂದಲ್ಲ! ಆದರೆ ಮೊಬೈಲ್ ಬಳಕೆಯನ್ನು ತಗ್ಗಿಸುವುದು ಆಗದ ಮಾತು ಎನ್ನುವ ಹಂತಕ್ಕೆ ಈಗಾಗಲೇ ಬಹಳಷ್ಟು ಮಂದಿ ಬಂದಾಗಿದೆಯಲ್ಲ. ಸ್ಮಾರ್ಟ್ ಫೋನುಗಳನ್ನು ಆದಷ್ಟು ಎರಡೂ ಕೈಗಳಲ್ಲಿ ಬಳಸುವುದು ಸೂಕ್ತ. ಮಲಗಿದಾಗ, ನಡೆಯುವಾಗ ಹೀಗೆ ಯಾವಾಗೆಂದರೆ ಆವಾಗ ಬಳಸುವ ಬದಲು, ಬಳಕೆಗೊಂದು ಶಿಸ್ತು ಹಾಕಿಕೊಳ್ಳುವುದು ಕ್ಷೇಮ. ಅದಕ್ಕೊಂದು ಸ್ಟ್ಯಾಂಡ್ ಅಥವಾ ವರ್ಕಿಂಗ್ ಸ್ಟೇಷನ್ ರೀತಿಯಲ್ಲಿ ಇರಿಸಿಕೊಂಡು ಬಳಸುವುದು ಇನ್ನೂ ಒಳ್ಳೆಯದು. ನೆನಪಿಡಿ, ಈ ಗೆಜೆಟ್ ಗಳು ನಮ್ಮ ಸೇವೆಗಾಗಿ ಇರುವುದು; ನಾವು ಅವುಗಳ ದಾಸರಾಗಬೇಕಿಲ್ಲ.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version