ತೂಕ ಇಳಿಕೆ (Weight loss) ಮಾಡಿಕೊಳ್ಳಲು ಈಗಿನ ಮಂದಿ ಮಾಡುವ ಸರ್ಕಸ್ಸು ಒಂದೆರಡಲ್ಲ. ಎಲ್ಲರಿಗೂ ಆದಷ್ಟು ಬೇಗ ತೂಕದಲ್ಲಿ ಇಳಿಕೆ ಬೇಕು. ನಿಧಾನವಾಗಿ ಒಂದೊಂದೇ ಕಿಲೋನಂತೆ ತಿಂಗಳುಗಟ್ಟಲೆ ಸರಿಯಾದ ಕ್ರಮದಲ್ಲಿ ತೂಕ ಇಳಿಸಲು ಯಾರಿಗೂ ಈಗ ಸಮಯ ಇಲ್ಲ, ವ್ಯವಧಾನವೂ ಇಲ್ಲ. ಅದಕ್ಕಾಗಿಯೇ. ಬೇರೆ ಬೇರೆ ಬಗೆಯ ಡಯಟ್‌ಗಳು ಇಂದು ಹುಟ್ಟಿಕೊಂಡಿವೆ. ಬಹಳಷ್ಟು ಜನರು ಉಪವಾಸವಿರುವುದು, ಕೆಲವು ಗಂಟೆಗಳ ಉಪವಾಸ, ಇನ್ನೂ ಕೆಲವರು ಕೇವಲ ಒಂದೇ ಆಹಾರವನ್ನೇ ದಿನಗಟ್ಟಲೆ ತಿನ್ನುವಂಥ ಏಕಾಹಾರ ಪದ್ಧತಿ (Mono Diet) ಇತ್ಯಾದಿಗಳನ್ನು ಟ್ರೈ ಮಾಡುವುದುಂಟು. ಆದರೆ ಇಂತಹ ದಿಢೀರ್ ತೂಕ ಇಳಿಸುವ ಉಪಾಯಗಳು ನಿಜವಾಗಿಯೂ ಫಲ ಕೊಡುತ್ತದೆಯೋ? ಇವುಗಳಿಂದ ಲಾಭ ಇದೆಯೋ ಎಂಬ ಬಗ್ಗೆ ತಿಳಿಯೋಣ.
ಏಕಾಹಾರ ಪದ್ಧತಿ ಅಥವಾ ಮೋನೋಟ್ರೋಪಿಕ್ ಡಯಟ್ ಎಂದರೆ ಒಂದೇ ಬಗೆಯ ಅಥವಾ ಒಂದೇ ಆಹಾರವನ್ನೇ ಹಲವು ವಾರಗಳ ಕಾಲ ತಿನ್ನುವುದು. ಆ ಮೂಲಕ ತೂಕ ಇಳಿಸುವುದು. ಉದಾಹರಣೆಗೆ ಹಲವು ಕೇವಲ ಬಾಳೆಹಣ್ಣನ್ನು ತಿನ್ನುವುದು, ಇನ್ನೂ ಕೆಲವರು ಕೇವಲ ಕಲ್ಲಂಗಡಿ ಹಣ್ಣು ಅಥವಾ ಪಪ್ಪಾಯಿ ತಿನ್ನುವುದು ಇತ್ಯಾದಿ. ಈ ಮಾದರಿಯ ಡಯಟ್‌ನಲ್ಲಿ ಯಾರೂ ವ್ಯಾಯಾಮದ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಕೇವಲ ಆಹಾರ ಪದ್ಧತಿಯಿಂದಲೇ ತೂಕ ಇಳಿಸುವ ಕ್ರಮವಿದು. ವ್ಯಾಯಾಮ ಮಾಡಲು ಸಮಯ ಇಲ್ಲದವರು, ಅಷ್ಟು ತಾಳ್ಮೆ ಇಲ್ಲದವರು ಕೆಲವು ವಾರಗಳ ಕಾಲ ಹೀಗೆ ತೂಕ ಇಳಿಸಲು ಟ್ರೈ ಮಾಡುವುದುಂಟು.
ಹಾಗಾದರೆ ಈ ಬಗೆಯ ಡಯಟ್ ಪರಿಣಾಮಕಾರಿ ಹೌದೋ ಎಂದರೆ ಉತ್ತರ ಹೌದು. ಇದರಿಂದ ದಿಢೀರ್ ತೂಕ ಇಳಿಕೆಯಾಗುತ್ತದೆ ಎಂಬುದಂತೂ ನಿಜ. ಆದರೆ ಇದು ಆರೋಗ್ಯಕರ ಮಾದರಿಯೇ ಎಂಬ ಪ್ರಶ್ನೆ ಬೆನ್ನಲ್ಲೇ ಹಾಕಿಕೊಂಡರೆ ಖಂಡಿತಾ ಇಲ್ಲ. ಇಲ್ಲಿ ನಮಗೆ ತೂಕ ಇಳಿಯುತ್ತದೆ ಎಂಬುದು ನಿಜವಾದರೂ ಇದು ಆರೋಗ್ಯಕರವಲ್ಲ ಎಂಬುದೂ ಸತ್ಯ. ಯಾಕೆಂದರೆ ಇಲ್ಲಿ ಎಲ್ಲ ಬಗೆಯ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಸಾಮಾನ್ಯವಾಗಿ ಡಯಟ್ ಎಂದರೆ ಒಂದು ಸಿದ್ಧ ಮಾದರಿಯ ಸರಿಯಾದ ಅಳತೆಯ ಪೋಷಕಾಂಷಯುಕ್ತ ಆಹಾರಪದ್ಧತಿಯನ್ನು ಶಿಸ್ತಾಗಿ ಅನುಸರಿಸುವುದು. ಆದರೆ, ಏಕಾಹಾರ ಪದ್ಧತಿಯಲ್ಲಿ ಎಲ್ಲ ಬಗೆಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗದೆ ಇರುವುದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ಇದ್ದಕ್ಕಿದ್ದಂತೆ ಮಾಂಸಖಂಡಗಳು ಕಡಿಮೆಯಾಗಿ, ಆ ಮೂಲಕ ಜೀರ್ಣಕ್ರಿಯೆಯೂ ಕುಂಠಿತವಾಗುತ್ತದೆ.
ಮಾಂಸಖಂಡಗಳಲ್ಲಿ ಇಳಿಮುಖ, ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಇತ್ಯಾದಿಗಳಿಂದಾಗಿ ತೂಕ ಕಡಿಮೆಯಾದರೂ ಈ ಬಗೆಯ ತೂಕ ಇಳಿಕೆ ಶಾಶ್ವತವಲ್ಲ. ಸಾಮಾನ್ಯ ಆಹಾರ ಪದ್ಧತಿಗೆ ಮರಳಿದ ಕೂಡಲೇ, ಬಹುಬೇಗನೆ ತೂಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್ ಇದೆಯೇ? ಇಲ್ಲಿವೆ ಟಿಪ್ಸ್!
ಬಹುಮುಖ್ಯವಾಗಿ ಈ ಬಗೆಯ ಡಯಟ್‌ನ ನಂತರ ಇನ್ನಷ್ಟು ಮತ್ತಷ್ಟು ತಿನ್ನಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಡಯಟ್ ಮಾಡಿದ ಕಾರಣ, ಹಲವು ದಿನಗಳಿಂದ ಇಷ್ಟಾಹಾರಗಳನ್ನು ಬಿಟ್ಟಿದ್ದರಿಂದ ಇನ್ನಷ್ಟು ತಿನ್ನಬೇಕೆಂಬ ಬಯಕೆ ಕೆಚ್ಚಾಗಿ ಹೆಚ್ಚು ತಿನ್ನುವ ಮೂಲಕ ಇಳಿಸಿಕೊಂಡ ತೂಕ ಮತ್ತೆ ಏರುವ ಸಂಭವವೇ ಹೆಚ್ಚು.
ಈ ಬಗೆಯ ಆಹಾರ ಪದ್ಧತಿಯಲ್ಲಿ, ಆಹಾರ ಪಥ್ಯವೇ ಹೆಚ್ಚಿರುವುದರಿಂದ ಭವಿಷ್ಯದಲ್ಲಿ ಮಲಬದ್ಧತೆ, ಪೋಷಕಾಂಶಗಳ ಕೊರತೆಯಂತ ಸಮಸ್ಯೆಗಳು ಕಾಡಬಹುದು. ಅಷ್ಟೇ ಅಲ್ಲ, ಇದು ಆಹಾರ ಪದ್ಧತಿಯಲ್ಲಿ ಒಳ್ಳೆಯ ಅಭ್ಯಾಸಗಳನ್ನು ಮುಂದುವರಿಸಲು ಸಹಕಾರಿಯಾಗುವುದಿಲ್ಲ.
ಇಂತಹ ಕಾರಣಗಳಿಂದಾಗಿ, ತೂಕ ಇಳಿಕೆಯ ಮನಸ್ಸು ಮಾಡುವವರು ಎಂದಿಗೂ ದಿಢೀರ್ ತೂಕ ಇಳಿಕೆಯ ಶಾರ್ಟ್‌ಕಟ್ ವಿಧಾನಗಳಿಗೆ ಬಲಿ ಬೀಳುವುದಕ್ಕಿಂತ, ಹಿತ ಮಿತವಾದ ವ್ಯಾಯಾಮ, ಜಂಕ್ ಬದಿಗಿಟ್ಟು ಸರಿಯಾದ ಪೋಷಕಾಂಶಯುಕ್ತ ಶಿಸ್ತಿನ ಆಹಾರ ಪದ್ಧತಿಯ ಮೂಲಕ ನಿಧಾನವಾಗಿ ತೂಕ ಇಳಿಸಿಕೊಳ್ಳುವುದೇ ಒಳ್ಳೆಯದು. ಅವಸರ ಎಂದಿಗೂ ಅಪಾಯಕ್ಕೆ ದಾರಿ, ನೆನಪಿರಲಿ.
ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ