Site icon Vistara News

Mono diet: ಏನಿದು ಏಕಾಹಾರ ಪದ್ಧತಿ? ತೂಕ ಇಳಿಕೆಗೆ ಇದು ಸೂಕ್ತವೇ?

Mono diet

ಈಗಿನ ಜೀವನಶೈಲಿಯಲ್ಲಿ (Mono diet) ಯಾವುದೇ ಪ್ರಾಯದವರಾದರೂ, ಒಂದು ಜಪ ಇದ್ದೇ ಇರುತ್ತದೆ. ದೇವರನಾಮವಲ್ಲ- ತೂಕ ಇಳಿಕೆಯದ್ದು! ಸಣ್ಣ ಪ್ರಾಯದವರಿಗೆ ಸೌಂದರ್ಯಕ್ಕಾಗಿ ತೂಕ ಇಳಿಸುವ (ಅಥವಾ ಏರಲು ಬಿಡದಿರುವ) ಹುಕಿ ಬಂದರೆ, ಯೌವನದಲ್ಲಿದ್ದವರಿಗೆ ಫಿಟ್‌ನೆಸ್‌ ಜಪ. ನಲವತ್ತರ ಮೇಲಿನವರಿಗೆ ಏರುತ್ತಿರುವ ತೂಕವನ್ನು, ಹಿಗ್ಗುತ್ತಿರುವ ಹೊಟ್ಟೆಯನ್ನು ಹಿಡಿತದಲ್ಲಿ ಇರಿಸುವ ತವಕ, ಹಿರಿಯ ನಾಗರಿಕರಿಗೆ ಮಂಡಿನೋವು ಇನ್ನಿತರ ಕಾಡುತ್ತಿರುವ ನೋವುಗಳ ದೆಸೆಯಿಂದ ತೂಕ ನಿಯಂತ್ರಿಸುವುದು ಅನಿವಾರ್ಯ. ಅಂತೂ, ತೂಕದ ಜಪ ಇಲ್ಲದ ದಿನ- ದಿನವೇ ಅಲ್ಲ!

ಇದಕ್ಕಾಗಿ ಬೆವರಿಳಿಸುವವರು ಇಂದಿಷ್ಟು ಜನರಾದರೆ, ಆಹಾರದಲ್ಲಿ ಆರೋಗ್ಯ ಅರಸುವವರು ಇನ್ನಷ್ಟು ಮಂದಿ. ಎರಡನ್ನೂ ಸಮತೂಕಕ್ಕೆ ತೂಗಲು ಯತ್ನಿಸುವುದು ಸೂಕ್ತ ಹೌದಾದರೂ, ಅಷ್ಟು ಸಮಯ, ವ್ಯವಧಾನ ಎಲ್ಲರಿಗೂ ಇರಬೇಕಲ್ಲ. ಅಂಥ ಹೊತ್ತಿನಲ್ಲಿ ಅನುಕೂಲ ಎನಿಸುವುದು ಹಲವು ರೀತಿಯ ಚುಟುಕು ಡಯೆಟ್‌ಗಳು. ಅಂಥದ್ದರಲ್ಲಿ ಒಂದು ಮೊನೊ ಡಯೆಟ್‌ (mono diet) ಅಥವಾ ಏಕಾಹಾರ ಪದ್ಧತಿ. ಅಂದರೆ, ಯಾವುದಾದರೂ ಒಂದು ಆಹಾರವನ್ನು ಆರಿಸಿಕೊಂಡು, ದಿನದ ಎಲ್ಲಾ ಹೊತ್ತಿನಲ್ಲೂ ಕೇವಲ ಅದೊಂದನ್ನೇ ತಿನ್ನುವುದು. ಉದಾ, ಬಾಳೆಹಣ್ಣನ್ನು ಆರಿಸಿಕೊಂಡರೆ ಹಲವಾರು ದಿನಗಳ ಅಥವಾ ವಾರಗಳ ಕಾಲ ಮೂರೂ ಹೊತ್ತು ಕೇವಲ ಬಾಳೆಹಣ್ಣನ್ನು ಮಾತ್ರವೇ ತಿನ್ನುವುದು.

ಇಂಥ ಮೊನೊ ಡಯೆಟ್‌ (mono diet) ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಹೆಚ್ಚು ಶ್ರಮವಿಲ್ಲದೆ, ಖರ್ಚಿಲ್ಲದೆ, ಗುದ್ದಾಟವಿಲ್ಲದೆ, ಯಾರು ಬೇಕಿದ್ದರೂ ಪಾಲಿಸಬಹುದಾದ ಸರಳ ಆಹಾರಪದ್ಧತಿಯಿದು. ಮಾತ್ರವಲ್ಲ, ತೂಕ ಇಳಿಕೆಯೂ ನಿಶ್ಚಿತ ಎಂಬಂಥ ಮಾತುಗಳು ಕೇಳಿಬರುತ್ತವೆ. ಆದರೆ ಹೀಗೆ ಒಂದೇ ಆಹಾರವನ್ನು ಎಷ್ಟೋ ದಿನಗಳ ಕಾಲ ಸತತವಾಗಿ ತಿನ್ನುವುದರಿಂದ ತೂಕ ಇಳಿಸಲು ಸಾಧ್ಯವೇ? ಈ ಕ್ರಮವೇ ಸಾಧುವೇ? ಇಂಥ ಪ್ರಯೋಗಗಳಿಗೆ ಅಡ್ಡ ಪರಿಣಾಮಗಳಿಲ್ಲವೇ? ಇತ್ಯಾದಿ ಬಹಳಷ್ಟು ಪ್ರಶ್ನೆಗಳು ಮುಂದಿವೆ.

ತೂಕ ಇಳಿಯುವುದೇ?

ಮೊನೊ ಡಯೆಟ್‌ನಿಂದ ತೂಕ ಇಳಿಯುವುದೇ ಎಂದು ಕೇಳಿದರೆ ಹೌದು, ಇಳಿಯುತ್ತದೆ. ಆದರೆ ಈ ಇಳಿಕೆ ತಾತ್ಕಾಲಿಕ ಮತ್ತು ಆರೋಗ್ಯಕರ ಇಳಿಕೆಯೂ ಅಲ್ಲ. ಅದೂ ಅಲ್ಲದೆ, ಜೀವನಪೂರ್ತಿ ಅದೊಂದನ್ನೇ ತಿಂದುಕೊಂಡಿರುವುದಕ್ಕೆ ಸಾಧ್ಯವಿಲ್ಲವಲ್ಲ. ಹಾಗಾಗಿ ಏಕಾಹಾರ ಪದ್ಧತಿಯಿಂದ ಎಂದಿನ ಆಹಾರಕ್ರಮಕ್ಕೆ ಮರಳಿದ ಕೂಡಲೇ ತೂಕ ಮತ್ತೆ ಹೆಚ್ಚುವುದು ಖಂಡಿತ. ಇದೇ ಕಾರಣದಿಂದ ಹೆಚ್ಚಿನ ಮಂದಿ ತೂಕ ಇಳಿಸಲು ಡಯೆಟ್‌ ಆರಂಭಿಸುವ ಪೂರ್ವದಲ್ಲಿ ಏಕಾಹಾರ ಪದ್ಧತಿಯತ್ತ ಒಲವು ತೋರುತ್ತಾರೆ. ಒಂದಿಷ್ಟು ತೂಕ ಇಳಿಯುತ್ತಿದ್ದಂತೆ, ತೂಕ ಇಳಿಕೆಯ ಮುಂದಿನ ಹಂತಕ್ಕೆ ಜಾರುತ್ತಾರೆ. ದೀರ್ಘಕಾಲೀನ ಪರಿಣಾಮಗಳನ್ನು ಕಾಣುವುದಕ್ಕೆ ಮೊನೊ ಡಯೆಟ್‌ಗಳು ಸುರಕ್ಷಿತವೂ ಅಲ್ಲ, ಸುಸ್ಥಿರವೂ ಅಲ್ಲ. ಏನಿದರ ಅಡ್ಡ ಪರಿಣಾಮಗಳು?

ತಿನ್ನುವ ಬಯಕೆ ಹೆಚ್ಚುತ್ತದೆ

ಇದಂತೂ ಹದಿನಾರಾಣೆ ಸತ್ಯ! ಕೇವಲ ಕಾರ್ಬ್‌ ಇರುವ ಆಹಾರವನ್ನು ಈ ಡಯೆಟ್‌ಗಾಗಿ ಆಯ್ದುಕೊಂಡಿರೋ, ಶರೀರ ಪ್ರೊಟೀನ್‌ ಬೇಡುತ್ತದೆ. ಕೇವಲ ಪ್ರೊಟೀನ್‌ ತಿನ್ನುತ್ತಿದ್ದರೆ, ಕೊಬ್ಬೂ ಬೇಕಲ್ಲ ದೇಹಕ್ಕೆ. ಅಂದರೆ ದೇಹಕ್ಕೆ ಅಗತ್ಯವಾದ್ದನ್ನು ನಾಲಗೆ ಬೇಡಲು ಆರಂಭಿಸುತ್ತದೆ. ಈ ಬಾಯಿರುಚಿಗೆ ಕಡಿವಾಣ ಹಾಕಲು ಕಷ್ಟವೆನಿಸಿದರೆ, ಸಿಕ್ಕಿದ್ದೆಲ್ಲಾ ತಿನ್ನುವಂತಾಗಿ ತೂಕ ಏರಲಾರಂಭಿಸುತ್ತದೆ.

ತೂಕ ಇಳಿಕೆ ತಾತ್ಕಾಲಿಕ

ದೇಹಕ್ಕೆ ಅಗತ್ಯ ಕ್ಯಾಲರಿಗಳು ದೊರೆಯದೆ ಹೋದರೆ ತೂಕ ದಿಢೀರ್‌ ಇಳಿಯಬಹುದು. ಇದರಿಂದ ದೇಹದ ಕೊಬ್ಬು ಶೇಖರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗದಿದ್ದರೂ, ಮಾಂಸಖಂಡಗಳು ಕಡಿಮೆಯಾಗುತ್ತವೆ. ಇದರಿಂದ ದೇಹದ ಚಯಾಪಚಯ ಕ್ರಿಯೆಯೂ ಕುಂಠಿತವಾಗಿ, ತೂಕ ಇಳಿಕೆಯ ಮುಂದಿನ ಹಾದಿ ಕಠಿಣವಾಗುತ್ತದೆ.

ಇದನ್ನೂ ಓದಿ: Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!

ಅತಿಯಾದ ಕಡಿವಾಣ

ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು, ಸರಿಯಾದ ಪ್ರಮಾಣದಲ್ಲಿ ಬೇಕಾಗುತ್ತದೆ. ಮೊನೊ ಡಯೆಟ್‌ನ ಅತಿಯಾದ ಅಡಿವಾಣದಿಂದ ಕೇವಲ ಪ್ರೊಟೀನ್‌ ತಿನ್ನುತ್ತಾ ಕುಳಿತರೆ ಮಲಬದ್ಧತೆಯಂಥ ಸಮಸ್ಯೆ ಕಾಡಬಹುದು. ಬರೀ ನಾರು ತಿನ್ನುತ್ತಿದ್ದರೆ ನಿರ್ಜಲೀಕರಣ, ಸುಸ್ತು ಇತ್ಯಾದಿಗಳು ಗಂಟು ಬೀಳಬಹುದು. ಯಾವುದೇ ಒಂದು ಆಹಾರಕ್ಕೆ ನಮ್ಮ ಊಟ ಸೀಮಿತವಾದರೆ ದೇಹದಲ್ಲಿ ಎಲೆಕ್ಟ್ರೋಲೈಟ್‌ ಏರುಪೇರು, ಮಾಸಿಕ ಸ್ರಾವದಲ್ಲಿ ವ್ಯತ್ಯಾಸ, ವಿಟಮಿನ್‌ ಮತ್ತು ಖನಿಜಗಳ ಕೊರತೆ, ಅಪೌಷ್ಟಿಕತೆ- ಹೀಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ನಿಶ್ಚಿತ. ಹಾಗಾಗಿ ತೂಕ ಇಳಿಸುವ ಇರಾದೆ ಇದ್ದವರು ಯಾವ ಡಯೆಟ್‌ ತಮಗೆ ಸೂಕ್ತ ಎಂಬುದನ್ನು ತಜ್ಞರಿಂದ ಅರಿತು ನಡೆಯುವುದು ಆರೋಗ್ಯಕ್ಕೆ ಹಿತ.

Exit mobile version