Site icon Vistara News

Monsoon Food: ಮಳೆಗಾಲದಲ್ಲಿ ನಿದ್ದೆ ಹೊಡೆದೋಡಿಸಬೇಕೆ? ಹಾಗಾದರೆ ಇವನ್ನೆಲ್ಲ ಸೇವಿಸಬಹುದು!

monsoon drinks

ಮಳೆಗಾಲ ಬಂದಾಗ ನಮ್ಮಲ್ಲೊಂದು ಉದಾಸೀನತೆ ಹರಡಿಕೊಳ್ಳಲು ಶುರುವಾಗುತ್ತದೆ. ಅಷ್ಟರವರೆಗೆ ಬೆವರಿಳಿಸುತ್ತಾ ಸೂರ್ಯನ ಬಿಸಿಲಿಗೆ ಬೈಯುತ್ತಾ ಬೆಳಗ್ಗಿನಿಂದ ರಾತ್ರಿಯವರೆಗೆ ಚುರುಕಾಗಿ ಓಡಾಡಿಕೊಂಡಿದ್ದ ನಾವುಗಳು ಮಳೆಗಾಲ ಬಂದೊಡೆ, ಸುಮ್ಮನೆ ಕೂತುಬಿಡುತ್ತೇವೆ. ಬೆಳ್ಳಂಬೆಳಗ್ಗೇ ಧೋ ಎಂದು ಸುರಿವ ಮಳೆಗೆ, ಅಯ್ಯೋ, ಆಫೀಸಿಗೆ ಹೋಗಬೇಕಾ ಅಂತನಿಸುತ್ತದೆ. ಬೆಚ್ಚನೆ ಹೊದ್ದು ಮಲಗುವ ಅನಿಸುತ್ತದೆ. ಬಿಸಿಬಿಸಿ ಕಾಫಿಯನ್ನೋ ಚಹಾವನ್ನು ಯಾರಾದರೂ ನನಗಾಗಿ ಮಾಡಿ ತಂದು ಕೈಗಿಡಬಾರದೇ ಎನಿಸುತ್ತದೆ. ಸಂಜೆಯ ಹೊತ್ತು ಬಿಸಿ ಬಿಸಿ ಬಜ್ಜಿ ಪಕೋಡಾ ತಿನ್ನುವ (Monsoon Food) ಅನಿಸುತ್ತದೆ. ಇವತ್ತು ಶಾಲೆಗೆ ರಜೆ ಇರಲಿ ಎಂದು ಮಕ್ಕಳೂ ಬಯಸುತ್ತವೆ. ಒಟ್ಟಾರೆ, ಬೇಸಿಗೆಯ ಚುರುಕುತನವನ್ನೆಲ್ಲ ನಿವಾಳಿಸಿ ಎಸೆದು ಮಳೆ ಸುರಿಯುತ್ತದೆ. ಜಡಿ ಮಳೆಗೆ ಮಾಡಬೇಕಿದ್ದ ಕೆಲಸಗಳೂ ನೆನೆಗುದಿಗೆ ಬೀಳುತ್ತವೆ.

ಯಾಕೆ ಹೀಗೆ? ಮಳೆಗಾಲದಲ್ಲಿ ಸೋಂಬೇರಿಯಂತೆ ಮಲಗುವ ಅನಿಸುವುದ್ಯಾಕೆ? ಇಂಥ ಮಳೆಯಲ್ಲೂ ನಮ್ಮನ್ನು ನಾವು ಚುರುಕಾಗಿಸಲು ಏನು ಮಾಡಬಹುದು? ಯಾವೆಲ್ಲ ಬಗೆಯ ಆಹಾರಗಳನ್ನು ಸೇವಿಸುವ ಮೂಲಕ (Monsoon Food) ಮಳೆಗಾಲಕ್ಕೂ ಸೆಡ್ಡು ಹೊಡೆದು ಚುರುಕಾಗಿ ಕೆಲಸಗಳನ್ನು ಮಾಡಿಕೊಂಡಿರಬಹುದು ಎಂಬುದನ್ನು ನೋಡೋಣ.

1. ಮಸಾಲಾ ಚಹಾ: ಮಳೆಗಾಲ ಎಂದರೆ ಮಸಾಲೆ ಚಹಾ (masala tea). ಮಸಾಲೆ ಸಹಾ ಎಂದರೆ ಮಳೆಗಾಲ ಎಂಬೊಂದು ನಂಟೂ ಇದೆ. ಚಹಾದ ಎಲೆ ಹಾಗೇ ಕುದಿಯುತ್ತಿರುವಾಗ ಚೆನ್ನಾಗಿ ಕುಟ್ಟಿ ಪುಡಿ ಮಾಡಿದ ಚೆಕ್ಕೆ, ಲವಂಗ, ಏಲಕ್ಕಿ, ಶುಂಠಿಯನ್ನು ಹಾಕಿ ಅದನ್ನೊಂದು ಕುದಿ ಬರಿಸಿ ಚಹಾ ಮಾಡಿದರೆ ಹದವಾದ ಶುಂಠಿಯ ಖಾರ, ಮಸಾಲೆಯ ಘಮ ಬೆರೆತು ಚಹಾವನ್ನು ಸ್ವರ್ಗಕ್ಕೇರಿಸುತ್ತದೆ. ಜಿಟಿಜಿಟಿ ಮಳೆ ಸುರಿವಾಗ ಒಂದೊಳ್ಳೆ ಚಹಾ ಮಾಡಿ ಮಳೆ ನೋಡುತ್ತಾ ಕುಳಿತರೆ, ಕೈಗೊಂದು ಪುಸ್ತಕವೂ ಸಿಕ್ಕರೆ, ಆ ಸುಖ ವರ್ಣನೆಗೆ ಪದಗಳೇ ಬೇಕಿಲ್ಲ. ಅನುಭವಿಸಿಯೇ ತೀರಬೇಕು!

2. ಸೂಪ್‌: ಸೂಪ್‌ ಕುಡಿಯಬೇಕೆಂದರೆ ಹದವಾಗ ಚಳಿ ಇರಬೇಕು. ಅದು ಮಳೆಯಿಂದ ಉಂಟಾದ ಚಳಿಯಿರಬಹುದು ಅಥವಾ ಚಳಿಗಾಲದ ಚಳಿಯಿರಬಹುದು, ಒಟ್ಟಾರೆ ಚಳಿಯಲ್ಲಿ ಬಿಸಿಬಿಸಿ ಸೂಪ್‌ ಹೀರುವುದು ಹಿತವಾಗಿರುತ್ತದೆ. ಮಳೆಗೆ ಸಣ್ಣಗೆ ಹೊದ್ದು ಮಲಗುವ ತೂಕಡಿಕೆ ಆವರಿಸಿಬಿಟ್ಟರೆ, ಸೂಪ್‌ ಒಳ್ಳೆಯದು. ಇದು ಹೊಟ್ಟೆ ಅಗ್ನಿಯನ್ನೂ ಚುರುಕಾಗಿಸಿ, ಬೇಕಾದ ಪೋಷಕಾಂಶಗಳನ್ನೂ ನೀಡಿ, ಶೀತ ಕಫಗಳಿಂದ ದೂರವಿರಿಸಿ ರೋಗ ನಿರೋಧಕತೆ ಹೆಚ್ಚಿಸುತ್ತದೆ.

ಇದನ್ನೂ ಓದಿ: Monsoon Food Tips: ಮಳೆಗಾಲದಲ್ಲಿ ಮರೆಯಲೇಬಾರದ ಆಹಾರ ಸಂಗ್ರಹಣೆಯ ನವಸೂತ್ರಗಳಿವು!

3. ಖಿಚಡಿ: ಆರೋಗ್ಯ ಸರಿ ಇಲ್ಲದಾಗ, ಜ್ವರ ಬಂದಾಗ ಖಿಚಡಿ ತಿಂದರೆ ಹೊಟ್ಟೆಗೆ ಹಿತವಾಗಿರುವುದು ನಿಜ. ಹಾಗೆಯೇ, ಮಳೆಗಾಲಕ್ಕೂ ಖಿಚಡಿಗೂ ಸಂಬಂಧವಿದೆ. ಖಿಚಡಿಯಲ್ಲಿ ಬೇಳೆಕಾಳುಗಳು, ತರಕಾರಿಗಳು ಎಲ್ಲವೂ ಇರುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್‌ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಏಕಕಾಲಕ್ಕೆ ಲಭ್ಯವಾಗುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಹದವಾಗಿ ನಿದ್ದೆ ಬರುವ ಮಧ್ಯಾಹ್ನವೊಂದು ಬಿಸಿಬಿಸಿ ಖಿಚಡಿ ಮಡಿ ತಿಂದರೆ, ಬೇರೇನೂ ಬೇಡ.

4. ಕಷಾಯ (Kadha) ಹಾಗೂ ಹರ್ಬಲ್‌ ಚಹಾಗಳು (Herbal tea): ಮಳೆಗಾಲಕ್ಕೂ ಕಷಾಯಕ್ಕೂ ಅವಿನಾಭಾವ ನಂಟು. ಮಳೆಯೊಂದು ಬಂದರೆ ಸಾಕು, ಶೀತ, ನೆಗಡಿ, ಕೆಮ್ಮು, ಕಫ ಎಂಬ ಒಂದಲ್ಲ ಒಂದು ತಾಪತ್ರಯಗಳು ಎಲ್ಲರನ್ನೂ ಕಾಡದೆ ಇರದು. ಇಂಥ ಸಂದರ್ಭ ನೆನಪಾಗುವುದೇ ಕಷಾಯ. ಅಷ್ಟೇ ಅಲ್ಲ, ಬಗೆಬಗೆಯ ಹರ್ಬಲ್‌ ಚಹಾಗಳೂ ಕೂಡಾ ಬಿಸಿಬಿಸಿಯಾಗಿ ಹಬೆಯಾಡುತ್ತಾ ಮಾಡಿ ಕುಡಿದುಕೊಂಡರೆ ಗಂಟಲ ಕೆರೆತವೆಲ್ಲ ಮಾಯ.

5. ಪ್ರೊಬಯಾಟಿಕ್‌: ಮಳೆಗಾಲವಿರಲಿ, ಚಳಿಗಾಲವಿರಲಿ, ಬೇಸಿಗೆಯೇ ಇರಲಿ, ನಮ್ಮ ದೇಹಕ್ಕೆ ಪ್ರೊಬಯಾಟಿಕ್‌ಗಳು ಬೇಕೇ ಬೇಕು. ಆಗಷ್ಟೇ ನಮ್ಮ ಜೀರ್ಣಾಂಗವ್ಯೂಹ ಸರಿಯಾಗಿ ಚುರುಕಾಗಿ ಕೆಲಸ ಮಾಡಬಲ್ಲದು. ಹಾಗಾಗಿ ಮೊಸು, ಮಜ್ಜಿಗೆಯಂಥ ಪ್ರೊಬಯಾಟಿಕ್‌ಗಳು ನಿತ್ಯಾಹಾರದಲ್ಲಿರುವುದು ಬಹಳ ಮುಖ್ಯ. ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಂಪಕ್ಕಿ ಅನ್ನ!

Exit mobile version