ಕವಿಮನಸ್ಸಿನ, ಭಾವುಕ ಮಂದಿ ಮಳೆಗಾಲದ ಬಗ್ಗೆ ಗುಣಗಾನ ಮಾಡುವುದೇನೋ ಸರಿ, ಆದರೆ ಮಳೆಗಾಲಕ್ಕೂ ಆರೋಗ್ಯಕ್ಕೂ (monsoon health) ಹಾವು ಮುಂಗುಸಿ ಸಂಬಂಧ. ಇದ್ದಕ್ಕಿದ್ದಂತೆ ಬೇಸಿಗೆಯ ರಣ ಬಿಸಿಲನ್ನು ಮಳೆ ಬಂದು ತಂಪಾಗಿಸಿದರೂ, ದೇಹ ಈ ದಿಡೀರ್ ಬದಲಾವಣೆಗೆ ಒಗ್ಗಿಕೊಳ್ಳಲು ಹೆಣಗಾಡುವುದು ಒಂದೆಡೆಯಾದರೆ, ವಾತಾವರಣದಲ್ಲಿ ಹೆಚ್ಚಿದ ನೀರಿನಂಶದಿಂದ, ಮಳೆಯಲ್ಲಿ ನೆನೆಯುವುದರಿಂದ ಹಾಗೂ ಇನ್ನಿತರ ನಾನಾ ಕಾರಣಗಳಿಂದ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗದವರು (monsoon health guide) ಇಲ್ಲವೇ ಇಲ್ಲ. ಜ್ವರ, ನೆಗಡಿ, ಶೀತ, ಕೆಮ್ಮು ಎಂದು ಪರದಾಡುವುದು ತಿಳಿದೇ ಇದ್ದರೂ, ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಶರೀರ ಅತ್ಯಂತ ದುರ್ಬಲವಾಗುವುದೂ ಇದೇ ಕಾಲದಲ್ಲಿಯೇ ಎಂಬುದನ್ನು ಗಮನಿಸಬೇಕು.
ಮಳೆಗಾಲದಲ್ಲಿ ನಮ್ಮ ದೇಹದ ಶಕ್ತಿ, ಸಾಮರ್ಥ್ಯ ಇದ್ದಕ್ಕಿದ್ದಂತೆಯೇ ಕುಗ್ಗುತ್ತದೆ. ಹಸಿವು ಕಡಿಮೆಯಾಗುತ್ತದೆ. ಚರ್ಮ, ಕೂದಲಿನಂತಹ ಸಾಮಾನ್ಯ ತೊಂದರೆಗಳಿಂದ ಹಿಡಿದು ಎಲುಬಿನ ಸಮಸ್ಯೆಗಳವರೆಗೆ ಆರೋಗ್ಯ ತೊಂದರೆಗಳು ಮೆಲ್ಲನೆ ಹೆಡೆ ತೆರೆದು ನಿಲ್ಲುತ್ತದೆ. ಅಷ್ಟರವರೆಗೆ ಸುಮ್ಮನಿದ್ದ ಕೀಲು ನೋವು ಮತ್ತೆ ವಕ್ಕರಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ನಿರಾಳವಾಗಿದ್ದ ಅಸ್ತಮಾ/ ಉಬ್ಬಸದಂತಹ ತೊಂದರೆ ಮೊದಲೇ ಇದ್ದವರಿಗೆ ಈ ಸಮಸ್ಯೆ ದಿಢೀರ್ ಹೆಚ್ಚಾಗುತ್ತದೆ. ಒಮ್ಮೆ ಶುರುವಾದ ಕೆಮ್ಮು ನಿಲ್ಲುವುದೇ ಇಲ್ಲ. ಹೊರಗಿನ ವಾಕಿಂಗ್ (walking) ಕಡಿಮೆಯಾಗಿ, ದೇಹದಲ್ಲಿ ಆಲಸ್ಯ ಮನೆ ಮಾಡುತ್ತದೆ. ಸೂರ್ಯ ಮೂಡಿದ ಮೇಲೂ ಮಲಗಿಕೊಂಡೇ ಇರುವ ಅನಿಸತೊಡಗುತ್ತದೆ. ಹೀಗಾಗಿ ಸಹಜವಾಗಿಯೇ ದೇಹದ ಚುರುಕುತನ ಕಡಿಮೆಯಾಗಿ, ಸರಿಯಾದ ವ್ಯಾಯಾಮವೂ ದಕ್ಕದೆ ಜಡತ್ವ ಮನೆ ಮಾಡುತ್ತದೆ. ಪರಿಣಾಮ ನಿಃಶಕ್ತಿಯೂ ಹೆಚ್ಚುತ್ತದೆ.
ಹಾಗಾದರೆ, ದೇಹಕ್ಕೆ ಅಗತ್ಯವಾಗಿ ಬೇಕಾಗುವ ರೋಗ ನಿರೋಧಕ ಶಕ್ತಿ, ಸಾಮರ್ಥ್ಯ, ಚುರುಕುತನ ಹೆಚ್ಚಿಸಲು ಸುಲಭವಾಗಿ ಮಾಡಬಹುದಾದ ಸರಳ ಉಪಾಯ ಇಲ್ಲಿದೆ. ಬೆಳಗ್ಗೆ ಎದ್ದ ಕೂಡಲೇ, ಎಳ್ಳೆಣ್ಣೆಯನ್ನು ದೇಹವಿಡೀ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಬಿಸಿನೀರಿನಲ್ಲಿ ಸ್ನಾನ ಮಾಡಿ ತಿಂಡಿ ಮಾಡಬಹುದು. ಆಯುರ್ವೇದದಲ್ಲಿ ಅಭ್ಯಂಗ ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ದೇಹದಲ್ಲಿರುವ ಕಶ್ಮಲಗಳು ದೂರವಾಗಿ, ಚರ್ಮದ ಆರೋಗ್ಯವೂ ವೃದ್ಧಿಸುತ್ತದೆ. ಸಹಜವಾಗಿಯೇ, ದೇಹದಲ್ಲಿ ನವೋಲ್ಲಾಸ ಮೂಡಿ ಇಡೀ ದಿನಕ್ಕೆ ಬೇಕಾದ ಎನರ್ಜಿ ನಿಮ್ಮದಾಗುತ್ತದೆ. ಇವಿಷ್ಟೇ ಅಲ್ಲ, ಮಳೆಗಾಲದಲ್ಲಿ ಇನ್‌ಸ್ಟ್ಯಾಂಟ್ ಎನರ್ಜಿ ಬೇಕಿದ್ದರೆ, ನಾವು ಸೇವಿಸುವ ಆಹಾರದಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಬಹುದು. ಹೆಚ್ಚು ಮಾಡಿಕೊಳ್ಳಲು ಸಮಯ ಇಲ್ಲದವರು ಕೆಂಪಕ್ಕಿ ಅನ್ನವನ್ನು ಉಣ್ಣುವ ಸುಲಭ ವಿಧಾನದ ಮೂಲಕವೂ ಚೈತನ್ಯವನ್ನು ಮರಳಿ ಪಡೆಯಬಹುದು. ರೋಗ ನಿರೋಧಕತೆಯನ್ನು (immunity) ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ: Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?
ಕೆಂಪಕ್ಕಿ ಅನ್ನದಲ್ಲಿ ಮಧುಮೇಹವನ್ನು (Diabetes) ನಿಯಂತ್ರಣದಲ್ಲಿಡುವ ಶಕ್ತಿ ಇದೆ. ಇದು ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ. ಅಸ್ತಮಾದ ಸಮಸ್ಯೆಯಿರುವ ಮಂದಿಗೂ ಕೆಂಪಕ್ಕಿಯಿಂದ ಹಲವು ಪ್ರಯೋಜನಗಳಿವೆ. ಇದರಲ್ಲಿ ಮೆಗ್ನೀಶಿಯಂ ಪ್ರಮಾಣ ಹೆಚ್ಚಿರುವುದರಿಂದ ಇದು ಅಸ್ತಮಾದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕದ ಪರಿಚಲನೆಯಲ್ಲೂ ಇದು ಮುಖ್ಯಪಾತ್ರ ವಹಿಸುತ್ತದೆ. ನಿಧಾನ ಜೀರ್ಣವಾಗುವುದು ಹಾಗೂ ಜೀರ್ಣಕ್ರಿಯೆಯ ತೊಂದರೆಯಿಂದ ಬಳಲುವ ಮಂದಿಗೂ ಕೆಂಪಕ್ಕಿ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ದೇಹದ್ಲಿರು ಕಲ್ಮಶಗಳನ್ನು ಹೊರಕ್ಕೆ ಕಳಿಸುವಲ್ಲಿ ನೆರವಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ಕೆಂಪಕ್ಕಿಯಲ್ಲಿರುವ ಕೆಂಪು ಭಾಗದಲ್ಲಿ ಇತರ ಎಲ್ಲ ಅಕ್ಕಿಗಳಲ್ಲಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪೋಷಕಾಂಶಗಳಿವೆ. ಕೆಂಪಕ್ಕಿಯ ಅನ್ನವನ್ನು ಗಂಜಿಯ ಜೊತೆಗೆ ಹಾಗೇ ಉಣ್ಣುವುದರಿಂದ ಬಳಲಿದ ದೇಹಕ್ಕೆ ಶಕ್ತಿ ಚೈತನ್ಯ ದೊರೆಯುತ್ತದೆ. ಇದನ್ನು ಅನ್ನವಾಗಿ ಮಾಡಿ ಉಣ್ಣುವ ಜೊತೆಗೇ ಹಲವು ಬಗೆಯ ರೆಸಿಪಿಗಳನ್ನು ಮಾಡಬಹುದು, ಕೆಂಪಕ್ಕಿ ಪುಲಾವ್, ಕೆಂಪಕ್ಕಿ ಖೀರು, ಕೆಂಪಕ್ಕಿ ಸಿಹಿ ಪೊಂಗಲ್, ಕೆಂಪಕ್ಕಿ ಹುಗ್ಗಿ ಹೀಗೆ ಹಲವು ಆಯ್ಕೆಗಳೂ ಇವೆ. ಅಥವಾ ಕೆಂಪಕ್ಕಿ ಅನ್ನಕ್ಕೆ ಕೊಂಚ ತೆಂಗಿನ ಹಾಲನ್ನು ಸೇರಿಸಿ, ಅದಕ್ಕೆ ತುಪ್ಪದಲ್ಲಿ ಜೀರಿಗೆ ಒಗ್ಗರಣೆಯನ್ನು ಮಾಡಿಕೊಂಡು, ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಉಪ್ಪು ಸೇರಿಸಿ ಉಣ್ಣಬಹುದು. ಇದು ಅತ್ಯುತ್ತಮ ಶಕ್ತಿವರ್ಧಕ!
ಇದನ್ನೂ ಓದಿ: Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!