Site icon Vistara News

Monsoon Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Monsoon Health Tips

ಮಳೆ ಶುರುವಾಯಿತೆಂದರೆ ಹರವಿರುವ ಬಟ್ಟೆ ತೆಗೆಯುವ, ಒಣಗಿಸಿದ ಇನ್ನೇನನ್ನೋ ತೆಗೆಯುವ ಧಾವಂತ ಹಿರಿಯರಿಗೆ. ಆದರೆ ಮಕ್ಕಳಿಗೆ ಹೇಗಾದರೂ ಮಾಡಿ ಮಳೆಯಲ್ಲಿ ನೆನೆದಾಡಬೇಕೆಂಬ ಹವಣಿಕೆ. ಮಳೆ ಬರುವಾಗ ಎಲ್ಲೋ ಒಂದು ಸೂರಿನಡಿ ಮಗುವನ್ನೂ ನಿಲ್ಲಿಸಿಕೊಂಡು ನಿಂತಿದ್ದೀರಿ ಎಂದಿಟ್ಟುಕೊಳ್ಳಿ. ಮಳೆ ಕಡಿಮೆಯಾದ ಮೇಲೆ ಹೊರಟರೆ, ದಾರಿಯಲ್ಲಿ ನಿಂತಿರುವ ಮಳೆ ನೀರಲ್ಲೇ ಪಚಪಚ ಮಾಡುತ್ತಾ ನಡೆಯದಿದ್ದರೆ ಅವರು ಮಕ್ಕಳು ಅನಿಸಿಕೊಂಡಾರೆಯೇ? ಎಳೆಯರಿಗೆ ಮಳೆಯಲ್ಲಾಡುವ ಬಯಕೆ ಸಹಜ. ಆದರೆ ಆರೋಗ್ಯ…? ನೆಗಡಿ, ಕೆಮ್ಮು. ಜ್ವರ, ಗಂಟಲು ನೋವು, ಕಿವಿನೋವು ಮುಂತಾದ ಏನೇನೆಲ್ಲ ವೈರಸ್‌ಗಳು ಇವೆಯೋ ಅವೆಲ್ಲವೂ ವಕ್ಕರಿಸಿಕೊಳ್ಳುತ್ತವೆ.
ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹೇಳಲು ಬಾರದ, ಹೇಳಿದ್ದು ತಿಳಿಯದ ಮಕ್ಕಳ ಅನಾರೋಗ್ಯವೆಂದರೆ ಮನೆಯ ಹಿರಿಯರಿಗೆ ತಲೆಬಿಸಿ. ಮಳೆಯಲ್ಲೇ ನೆನೆಯಬೇಕೆಂದಿಲ್ಲ, ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ, ಶೀತ-ಥಂಡಿಯ ಹವಾಮಾನ ಬರುತ್ತಿದ್ದಂತೆ ನಾನಾ ವೈರಸ್‌ಗಳು ಬೆನ್ನು ಬೀಳುತ್ತವೆ. ಹಾಗಾದರೆ ಮಳೆಗಾಲದಲ್ಲಿ ಮಕ್ಕಳನ್ನು ಜೋಪಾನ (Monsoon Health Tips) ಮಾಡುವುದು ಹೇಗೆ?

ಲಸಿಕೆಗಳು

ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಯಾವುದೇ ಚುಚ್ಚುಮದ್ದುಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಮಕ್ಕಳ ಪಾಲಿಗೆ, ರೋಗಗಳ ವಿರುದ್ಧದ ಮೊದಲ ರಕ್ಷಾ ಕವಚವಿದು. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಂತೆ ಲಸಿಕೆ ಬಾಕಿ ಇರುವ ಯಾವ್ಯಾವುದೋ ರೋಗಗಳು ಹೆತ್ತವರಿಗೆ ನೆನಪಾಗಿ ನೆಮ್ಮದಿ ಕೆಡಿಸುವುದಿಲ್ಲ. ಫ್ಲೂ ಲಸಿಕೆಗಳ ಬಗ್ಗೆಯೂ ವೈದ್ಯರಲ್ಲಿ ಮಾತಾಡಿ

ಆಹಾರ

ಮಕ್ಕಳಿಗೆ ಮಳೆ-ಚಳಿಯೆನ್ನದೆ ಎಲ್ಲ ಕಾಲದಲ್ಲೂ ಐಸ್‌ಕ್ರೀಂ ಬೇಕು. ಆದರೆ ಅವರು ಕೇಳಿದ ಗುಜರಿ ತಿಂಡಿಗಳ ಬದಲು, ಸತ್ವಯುತ ಆಹಾರದ ಬಗ್ಗೆ ಗಮನ ನೀಡಿ. ಬೀದಿ ಬದಿಯ ಆಹಾರವಂತೂ ಬೇಡವೇಬೇಡ. ಋತುಮಾನದ ಹಣ್ಣು-ತರಕಾರಿಗಳು ಮಕ್ಕಳಿಗೆ ಬೇಕು. ಅವರು ತಿನ್ನುವುದಿಲ್ಲ ಎನ್ನುವುದು ಅನಾರೋಗ್ಯಕ್ಕೆ ನೆವವೂ ಆದೀತು. ವಿಟಮಿನ್‌ ಸಿ, ಜಿಂಕ್ ಹೆಚ್ಚಿರುವ ಆಹಾರಗಳು, ಪ್ರೊಬಯಾಟಿಕ್‌ ಮತ್ತು ಇಡೀ ಧಾನ್ಯಗಳು, ಪ್ರೊಟೀನ್‌ ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳು‌, ಶುಂಠಿ-ಬೆಳ್ಳುಳ್ಳಿಯಂಥ ಮಸಾಲೆಗಳು ಸೋಂಕು ದೂರ ಇರಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

ನೀರು ನಿಲ್ಲದಿರಲಿ

ಮನೆಯ ಸುತ್ತೆಲ್ಲೂ ನೀರು ನಿಲ್ಲದಂತೆ ಜಾಗ್ರತೆ ಮಾಡಿ. ಇದರಿಂದ ಹುಟ್ಟುವ ಸೊಳ್ಳೆಗಳಿಂದ ಮಕ್ಕಳಿಗೆ ಮಾತ್ರವಲ್ಲ, ಮನೆಮಂದಿಗೆಲ್ಲ ಅಪಾಯ. ಹೂವಿನ ಕುಂಡಗಳಲ್ಲೂ ಸೊಳ್ಳೆಗಳ ಸಂತಾನಾಭಿವೃದ್ಧಿ ಆಗಬಹುದು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ. ಇದರಿಂದ ರೋಗಾಣುಗಳ ಅಬ್ಬರ ಕಡಿಮೆಯಾಗುತ್ತದೆ.

ಧಿರಸು

ಮಳೆಗಾಲದ ವಾತಾವರಣವನ್ನು ಹೀಗೆಂದು ಹೇಳಲು ಕಷ್ಟ. ಮನೆಯಿಂದ ಹೊರಬೀಳುವಾಗ ಸಣ್ಣ ಬಿಸಿಲಿತ್ತು ಎಂದರೂ, ಇನ್ನರ್ಧ ಗಂಟೆಯೊಳಗೆ ಜೋರು ಮಳೆ ಬರಬಹುದು. ಆಡಲು ಹೋದ ಮಕ್ಕಳು ತುಂತುರು ಮಳೆಗೆಲ್ಲ ಸೂರಿನಡಿ ಬರುವುದೇ ಇಲ್ಲ. ಹಾಗಾಗಿ ಗಾಳಿ-ಮಳೆಗೆ ಹೊಂದುವಂಥ ಬಟ್ಟೆಯನ್ನೇ ಮಕ್ಕಳಿಗೆ ಹಾಕಿ.

ಇದನ್ನೂ ಓದಿ: Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

ಸೊಳ್ಳೆಪರದೆ

ಸೊಳ್ಳೆಗಳಿಂದ ಬರುವ ರೋಗಗಳ ಹಾವಳಿ ಎಲ್ಲೆಡೆ ವಿಪರೀತ ಹೆಚ್ಚಿರುವುದರಿಂದ, ಮನೆಯ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಪರದೆಗಳನ್ನು ಹಾಕಿಕೊಳ್ಳಿ. ರಾತ್ರಿ ಮಲಗುವಾಗ ಸೊಳ್ಳೆಪರದೆಯ ಒಳಗೇ ಮಲಗಿ. ಎಳೆಕೂಸುಗಳಿಗೂ ಅದು ಬೇಕು. ಮಕ್ಕಳಿಗೆ ರಿಪೆಲ್ಲೆಂಟ್‌ಗಳನ್ನು ಹಚ್ಚಿ. ಮಕ್ಕಳ ಸೂಕ್ಷ್ಮ ಚರ್ಮಕ್ಕೆ ಯಾವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ. ಮುಸ್ಸಂಜೆಯ ಹೊತ್ತಿಗೆ ಸೊಳ್ಳೆಗಳ ಚಟುವಟಿಕೆ ಜೋರಾಗಿರುತ್ತದೆ. ಸಾಧ್ಯವಾದರೆ ಆ ಹೊತ್ತಿಗೆ ಮಕ್ಕಳನ್ನು ಆಟದಿಂದ ಒಳಗೆ ಕರೆಯಿರಿ.

ನೀರು

ಇವೆಲ್ಲ ಅಲ್ಲದೆ, ವಾಂತಿ- ಅತಿಸಾರಗಳು ಸಹ ಮುಂಗಾರಿನ ಕೊಡುಗೆಯೇ ಆಗಿರುತ್ತವೆ. ಹಾಗಾಗಿ ನೀರನ್ನು ಕುದಿಸಿ ಕುಡಿಯುವುದು ಸೂಕ್ತ. ಆಹಾರದ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಇದ್ದಷ್ಟೂ ಹೊಟ್ಟೆ ಕ್ಷೇಮವಾಗಿ ಇರುತ್ತದೆ.

Exit mobile version