Site icon Vistara News

Monsoon Skincare: ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು?

Monsoon Skincare

ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂಬ ಮಾತು ಸರ್ವಕಾಲಕ್ಕೂ ಸತ್ಯ. ಏಕೆಂದರೆ, ಬೇಸಿಗೆಯಲ್ಲಿದ್ದಂತೆ ಮಳೆಗಾಲದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಮಳೆಗಾಲಕ್ಕೆಂದೇ ಕೆಲವು ಪ್ರದೇಶಗಳಲ್ಲಿ ವಿಶೇಷ ತಯಾರಿಯೂ ಬೇಕಾಗುತ್ತದೆ. ಮೂರು ತಿಂಗಳು ಸತತವಾಗಿ ಮಳೆ ಚಚ್ಚುವ ಸ್ಥಳಗಳಲ್ಲಿ ಹೊರ ಜಗತ್ತಿನ ಸಂಪರ್ಕವೂ ಕಡಿಮೆಯಾಗಬಹುದು. ಅದಕ್ಕಾಗಿ ಅಕ್ಕಿ-ಬೇಳೆಗಳಲ್ಲಿ ಶೇಖರಿಸಿಟ್ಟುಕೊಂಡು, ಕೆಲವು ವಿಶೇಷ ಬಗೆಯ ತರಕಾರಿಗಳನ್ನು ಬೇಸಿಗೆಯಲ್ಲಿ ಒಣಗಿಸಿಟ್ಟುಕೊಂಡು, ದೀರ್ಘಕಾಲ ಬಾಳಿಕೆ ಬರುವ ಬೂದುಗುಂಬಳ, ಸಿಹಿಕುಂಬಳ, ಗಡ್ಡೆಗೆಣಸುಗಳು ಮುಂತಾದವನ್ನು ಮಳೆಗಾಲಕ್ಕೆಂದೇ ಕಾಪಿಟ್ಟುಕೊಳ್ಳುತ್ತಾರೆ. ಇವೆಲ್ಲ ಕೆಲವು ಪ್ರದೇಶಗಳ ಮಾತಾಯಿತು. ಆದರೆ ಹಾಗೆಲ್ಲ ಇಲ್ಲದ ಸ್ಥಳಗಳಲ್ಲೂ ಮಳೆಗಾಲಕ್ಕೆ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸೂಕ್ತ ವಸ್ತ್ರಗಳು, ಭಿನ್ನ ರೀತಿಯ ಆಹಾರಗಳು… ಹೀಗೆ. ಆದರೆ ತ್ವಚೆಯ ಆರೈಕೆಗಾಗಿ ನಾವೇನು ಮಾಡುತ್ತೇವೆ? ಚಳಿಗಾಲಕ್ಕೆ ನಮ್ಮ ಚರ್ಮ ಹೆಚ್ಚಿನ ಆರೈಕೆಯನ್ನು ಬೇಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಳೆಗಾಲದಲ್ಲಿ ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ ನಾವು. ತೇವಾಂಶ ಹೆಚ್ಚಿರುವ ಋತುವಿನಲ್ಲೂ ಚರ್ಮಕ್ಕೆ ಬೇರೆ ರೀತಿಯ ಆರೈಕೆ ಬೇಕಾಗುತ್ತದೆ. ಏನದು ಎಂಬುದನ್ನು ತಿಳಿಯೋಣ.
ಹವಾಮಾನ ಶುಷ್ಕವಾಗಿದ್ದಾಗ ಹೆಚ್ಚಿನ ತೇವವನ್ನು ತ್ವಚೆಗೆ ನಾವೇ ಒದಗಿಸಬೇಕಾಗುತ್ತದೆ. ಆದರೆ ಋತುಮಾನವೇ ಒದ್ದೆ ಸುರಿಯುತ್ತಿರುವಾಗ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಬಿಡಬಹುದು. ಕಾರಣ, ತೈಲದಂಥ ಸೇಬಮ್‌ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇದರ ಜೊತೆಗೆ, ವೈರಸ್‌, ಬ್ಯಾಕ್ಟೀರಿಯಗಳ ಕಾಟವೂ ಹೆಚ್ಚಿರುತ್ತದೆ. ಇವೆಲ್ಲದರ ಫಲವಾಗಿ ಚರ್ಮ ಹೊಳಪು ಕಳೆದುಕೊಂಡು, ಮಂಕಾಗಿ, ಎಣ್ಣೆ ಸುರಿದು, ಮೊಡವೆಗಳೂ ಹೆಚ್ಚುವಂತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಚರ್ಮದ ಆರೈಕೆಯನ್ನು (Monsoon Skincare) ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ.

ಸ್ವಚ್ಛತೆ

ಎಣ್ಣೆ ಸುರಿಯುವ ಮುಖವನ್ನು ತೊಳೆದು ಶುದ್ಧವಾಗಿ ಇರಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಒಳ್ಳೆಯ ಕ್ಲೆನ್ಸರ್‌ ಬಳಸಿ. ಮುಖದ ಎಣ್ಣೆಯನ್ನು ತೆಗೆಯುವ ನೆವದಲ್ಲಿ, ತ್ವಚೆಯ ನೈಸರ್ಗಿಕ ತೈಲವನ್ನೂ ಕಿತ್ತು ತೆಗೆಯುವಂಥ ಕಠೋರ ಕ್ಲೆನ್ಸರ್‌ಗಳು ಬೇಡ. ಆದರೆ ಎಣ್ಣೆಗರೆಯುವ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸುವಂತಿರಬೇಕು. ಜೊತೆಗೆ ಸನ್‌ಬ್ಲಾಕ್‌, ಮೇಕಪ್‌ ಮುಂತಾದ ಯಾವುದನ್ನೇ ಆದರೂ ಮುಖದ ಮೇಲೆ ಉಳಿಸಿಕೊಳ್ಳುವಂತಿಲ್ಲ. ಅದನ್ನೂ ರಾತ್ರಿ ಮಲಗುವ ಮುನ್ನ ಸಂಪೂರ್ಣ ತೆಗೆಯಬೇಕಾಗುತ್ತದೆ. ಹಾಗಿಲ್ಲದಿದ್ದರೆ ಚರ್ಮದ ರಂಧ್ರಗಳು ಬಿಗಿಯುವುದು ಖಚಿತ.

ಎಕ್ಸ್‌ಫಾಲಿಯೇಟರ್‌

ಲಘುವಾದ ಸ್ಕ್ರಬ್‌ಗಳು ಈ ಹೊತ್ತಿಗೆ ಬೇಕು. ಕಾರಣ, ಒಮ್ಮೆ ಮನೆಯಿಂದ ಹೊರಗೆ ಹೋಗ ಬಂದರೆ ವಾತಾವರಣದ ಕೊಳೆಯೆಲ್ಲ ಎಣ್ಣೆ ಸುರಿಯುವ ಮುಖಕ್ಕೆ ಅಂಟಿಕೊಳ್ಳುತ್ತದೆ. ಹಾಗಾಗಿ ಮೇಲ್ಪದರದ ಕೊಳೆಯನ್ನು ಸೌಮ್ಯವಾಗಿ ತೆಗೆಯುವುದು ಅಗತ್ಯ. ಇದಕ್ಕಾಗಿ ನಿಮ್ಮಿಷ್ಟದ ಫೇಸ್‌ಮಾಸ್ಕ್‌ ಉಪಯೋಗಿಸಿದರೂ ಆದೀತು. ಇವುಗಳನ್ನು ವಾರದಲ್ಲಿ ಮೂರು ಬಾರಿಯವರೆಗೂ ಉಪಯೋಗಿಸಬಹುದು.

ಮಾಯಿಶ್ಚರೈಸರ್

ಇದು ಮಳೆಗಾಲದಲ್ಲೂ ಬೇಕು. ಆದರೆ ಬಹಳ ಜಿಡ್ಡಿರುವಂಥದ್ದನ್ನು ಬಳಸಬೇಡಿ. ಲಘುವಾಗಿ ಚರ್ಮಕ್ಕೆ ತೇವವನ್ನು ಒದಗಿಸಿದರೆ ಸಾಕಾಗುತ್ತದೆ. ಹಾಗೆಂದು ಸಂಪೂರ್ಣ ಬಳಸದೆಯೂ ಇರಬೇಡಿ. ಇದು ಗಾಳಿ ಜೋರಾಗಿರುವ ಸಮಯವಾದ್ದರಿಂದ ಚರ್ಮವೆಲ್ಲ ಬಿರಿದಂತೆ ಆಗಬಹುದು. ವಾತಾವರಣದಲ್ಲಿ ತೇವ ಹೆಚ್ಚಿರುವ ಕಾರಣ ತೀರಾ ಎಣ್ಣೆಯ ಕ್ರೀಮ್‌ಗಳು ಬೇಡ.

ಅತಿಯಾಗಬಾರದು

ಜಾಹೀರಾತುಗಳಲ್ಲಿ ಏನೇನೋ ನೋಡಿ, ಸಿಕ್ಕಿದ್ದೆಲ್ಲವನ್ನೂ ತಂದು ಮುಖಕ್ಕೆ ಬಳಿದು ಪ್ರಯತ್ನಿಸುವ ಕಾಲವಿದು. ಹ್ಯಾಲುರೋನಿಕ್‌ ಆಮ್ಲ, ಗ್ಲೈಕಾಲ್‌, ರೆಟಿನಾಲ್‌ ಮುಂತಾದ ಹತ್ತು ಹಲವು ಅಂಶಗಳಿರುವ ನಾಲ್ಕಾರು ಉತ್ಪನ್ನಗಳನ್ನು ಒಟ್ಟಿಗೇ ಮುಖಕ್ಕೆ ಹಚ್ಚಿಕೊಳ್ಳುವವರಿದ್ದಾರೆ. ಉದಾ, ವಿಟಮಿನ್‌ ಸಿ, ವಿಟಮಿನ್‌ ಇ ಮತ್ತು ರೆಟಿನಾಲ್‌- ಇವಿಷ್ಟನ್ನೂ ಒಟ್ಟಿಗೆ ಚರ್ಮಕ್ಕೆ ಲೇಪಿಸಿದರೆ ಚರ್ಮದ ಮೇಲಿರುವ ಸೂಕ್ಷ್ಮ ರಕ್ಷಾ ಪರದೆ ಸಂಪೂರ್ಣ ನಾಶವಾಗಬಹುದು. ಯಾವ ಅಂಶದ ಗುಣಗಳು ಏನೇನು ಎಂಬುದನ್ನು ತಿಳಿದು ಬಳಸಬೇಕು. ಈ ನಿಟ್ಟಿನಲ್ಲಿ ತಜ್ಞರಲ್ಲಿ ಕೇಳಿಯೇ ಮುಂದುವರಿಯಿರಿ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಪೋಷಕಾಂಶ

ನಮ್ಮ ಚರ್ಮದ ಆರೋಗ್ಯ ಶೇ. ೭೦ರಷ್ಟು ನಿರ್ಧಾರವಾಗುವುದು ನಮ್ಮ ದೇಹಕ್ಕೆ ದೊರೆಯುವ ಸತ್ವಗಳ ಮೇಲೆ. ಉಳಿದ ಶೇ. ೩೦ರಷ್ಟು ಮಾತ್ರವೇ ಇತರ ಆರೈಕೆಯನ್ನು ಅವಲಂಬಿಸಿದೆ. ಹಾಗಾಗಿ ಮಳೆಗಾಲವಾದರೂ ಸಾಕಷ್ಟು ನೀರು ಕುಡಿಯಿರಿ. ಈ ದಿನಗಳಲ್ಲಿ ದೊರೆಯುವ ಹಣ್ಣು-ತರಕಾರಿಗಳನ್ನು ತಿನ್ನಿ. ಜಿಡ್ಡಿ, ಕರಿದ ತಿಂಡಿಗಳನ್ನು ತಿಂದಷ್ಟೂ ಚರ್ಮದ ಅವಸ್ಥೆ ಹದಗೆಡುತ್ತದೆ. ದೇಹವನ್ನು ಆಗಾಗ ಡಿಟಾಕ್ಸ್‌ ಮಾಡಿ.

Exit mobile version