Site icon Vistara News

Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

Moringa Leaves Health Benefits

ನುಗ್ಗೆ ಸೊಪ್ಪು (Moringa Leaves Health Benefits) ಎನ್ನುತ್ತಿದ್ದಂತೆ ಅದರ ಪಾಕದ ಘಮಕ್ಕೆ ಮೂಗರಳಿಸುವವರು ಹಲವರಿದ್ದಾರು. ಭಾರತದ ಉದ್ದಗಲಕ್ಕೆ ನುಗ್ಗೆ ಜನಪ್ರಿಯ. ಆದರೆ ಬೇಸಿಗೆಯಲ್ಲಿ ಇದು ದೇಹದ ಉಷ್ಣತೆ ಹೆಚ್ಚಿಸುತ್ತದೆ ಎಂದು ಇದನ್ನು ದೂರ ಮಾಡಿ, ಮಳೆಗಾಲ-ಚಳಿಗಾಲದಲ್ಲಿ ಮಾತ್ರವೇ ಬಳಸುವ ಕ್ರಮ ಹಲವೆಡೆಗಳಲ್ಲಿದೆ. ಆದರೆ ಈ ಎಲೆಗಳಲ್ಲಿ ಸಾಕಷ್ಟು ನೀರಿನಂಶವೂ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವಂಥ ಸೂಪರ್‌ ಫುಡ್‌ ಇದು ಎಂಬುದು ಗೊತ್ತೇ? ಉಳಿದೆಲ್ಲ ಸೊಪ್ಪುಗಳಂತೆ ಅಲ್ಲವೇ ಇದು ಸಹ? ಅಂಥ ಗುಣಗಳು ಏನಿವೆ ಇದರಲ್ಲಿ? ಇದನ್ನೇಕೆ ಸೂಪರ್‌ಫುಡ್‌ ಎಂದು ಕರೆಯಬೇಕು? ಇದನ್ನು ಎಷ್ಟು ತಿಂದರೆ ಒಳ್ಳೆಯದು?

ಸತ್ವಗಳೇನಿವೆ?

ಇದರಲ್ಲಿ ಉಳಿದೆಲ್ಲ ಸೊಪ್ಪುಗಳಿಗಿಂತ ಪ್ರೊಟೀನ್‌ ಸಾಂದ್ರವಾಗಿದೆ. 18 ಬಗೆಯ ಅಮೈನೊ ಆಮ್ಲಗಳು ಇದರಲ್ಲಿವೆ. ಇದರಲ್ಲದೆ, ವಿಟಮಿನ್‌ ಎ, ವಿಟಮಿನ್‌ ಸಿ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಹೇರಳವಾಗಿದೆ. ಇವೆಲ್ಲವುಗಳಿಂದ ಸ್ನಾಯುಗಳು ದೃಢಗೊಂಡು, ದೃಷ್ಟಿ ಕ್ಷೇಮವಾಗಿದ್ದು, ಪ್ರತಿರೋಧಕ ಶಕ್ತಿ ಸುಧಾರಿಸಿ, ಮೂಳೆಗಳು ಬಲಗೊಂಡು, ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಸುಧಾರಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಕ್ವೆರ್ಸೆಟಿನ್‌, ಕ್ಲೊರೊಜೆನಿಕ್‌ ಆಮ್ಲ ಮತ್ತು ಬೀಟಾ ಕ್ಯಾರೊಟಿನ್‌ಗಳು ವಿಫುಲವಾಗಿವೆ. ಈ ಅಂಶಗಳು ದೇಹದಲ್ಲಿ ಅಂಡಲೆಯುವ ಮುಕ್ತಕಣಗಳನ್ನು ಪ್ರತಿಬಂಧಿಸುತ್ತವೆ. ಇದರಿಂದ ಮಾರಕ ರೋಗಗಳು ಬಾರದಂತೆ ತಡೆಯಬಹುದು. ಜೊತೆಗೆ ದೇಹದೆಲ್ಲೆಡೆ ಹೆಚ್ಚುವ ಉರಿಯೂತದ ಕಾಟದಿಂದ ಮುಕ್ತರಾದರೆ ಆರ್ಥರೈಟಿಸ್‌ನಿಂದ ಹಿಡಿದು ಹೃದಯ ರೋಗಗಳವರೆಗೆ ಬಹಳಷ್ಟು ತೊಂದರೆಗಳನ್ನು ದೂರ ಇರಿಸಲು ಸಾಧ್ಯವಿದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಇದರಲ್ಲಿ ವಿಟಮಿನ್‌ ಸಿ ಪ್ರಮಾಣ ಹೆಚ್ಚಿದೆ. ಅಂದಾಜಿಗೆ ಹೇಳುವುದಾದರೆ, ಕಿತ್ತಳೆ ಹಣ್ಣುಗಳಲ್ಲಿ ಇರುವ ಪ್ರಮಾಣಕ್ಕಿಂತಲೂ ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಸಿ ಜೀವಸತ್ವವಿದೆ. ಹಾಗಾಗಿ ಸೋಂಕುಗಳನ್ನು ದೂರ ಮಾಡಲು, ಒಂದೊಮ್ಮೆ ಋತುಮಾನದ ವೈರಸ್‌ಗಳು ಕಾಡಿದರೂ ಬೇಗ ಚೇತರಿಸಿಕೊಳ್ಳಲು ಇದರ ನಿಯಮಿತ ಸೇವನೆಯಿಂದ ಸಾಧ್ಯವಾಗುತ್ತದೆ.

ತೂಕ ಇಳಿಸಲು ನೆರವು

ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ನೀಡುವಂಥ ಆಹಾರಗಳು ತೂಕ ಇಳಿಸಿಕೊಳ್ಳಲು ಸೂಕ್ತವಾದಂಥವು. ಜೊತೆಗೆ ಹೇರಳವಾದಂಥ ನಾರು ಮತ್ತು ಪ್ರೊಟೀನ್‌ ಅಂಶಗಳಿದ್ದ ಆಹಾರದಿಂದ ಹೊಟ್ಟೆ ತುಂಬುವುದು ಬೇಗ, ಕಳ್ಳ ಹಸಿವಿನ ಕಾಟವೂ ಇಲ್ಲ. ಈ ಎಲ್ಲ ಗುಣಗಳನ್ನು ಹೊಂದಿರುವ ನುಗ್ಗೆ ಸೊಪ್ಪು ತೂಕ ಇಳಿಸಿಕೊಳ್ಳುವವರಿಗೆ ಪ್ರಯೋಜನಕಾರಿ.

ಮಧುಮೇಹಿಗಳಿಗೆ ಒಳ್ಳೆಯದು

ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಮಧುಮೇಹಿಗಳಿಗೆ ಪೂರಕ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ ಎನ್ನುವುದನ್ನು ಅಧ‍್ಯಯನಗಳು ತಿಳಿಸುತ್ತವೆ. ಇದರ ಜೊತೆಗೆ, ನುಗ್ಗೆಯಲ್ಲಿರುವ ಐಸೊಥಿಯೊಸಯನೇಟ್‌ ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿ ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾಲಿಫೆನಾಲ್‌ ಅಂಶಗಳೂ ಇದರಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ರಕ್ಷಣೆ ಮಾಡುವುದು ಕಷ್ಟವಲ್ಲ.

ಎಷ್ಟು ಸೇವಿಸಬೇಕು?

ಶರೀರಕ್ಕೆ ಯಾವುದಾದರೂ ಸತ್ವ ಅತಿಯಾದರೂ ಜೀರ್ಣಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಬಹುದು. ಹಾಗಾಗಿ ನುಗ್ಗೆ ಸೊಪ್ಪು ಒಳ್ಳೆಯದು ಎನ್ನುವುದು ನಿಜ. ಆದರೆ ಅದನ್ನು ಎಷ್ಟು ಸೇವಿಸಬೇಕು? ಎಷ್ಟು ತಿಂದರೆ ದೇಹ ತೆಗೆದುಕೊಳ್ಳಬಲ್ಲದು? ನುಗ್ಗೆ ಸೊಪ್ಪಿನ ಪುಡಿಯನ್ನು (ಮೊರಿಂಗ ಪೌಡರ್‌) ಸೇವಿಸುವ ಅ‍ಭ್ಯಾಸವಿದ್ದರೆ ದಿನಕ್ಕೆ ಒಂದು ದೊಡ್ಡ ಚಮಚ ಸಾಕಾಗುತ್ತದೆ. ಇದರಿಂದ, ಅಂದಾಜಿಗೆ ಹೇಳುವುದಾದರೆ, 35 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದಿಲ್ಲದಿದ್ದರೆ, ಒಂದು ದೊಡ್ಡ ಮುಷ್ಟಿಯಷ್ಟು ಹಸಿ ಸೊಪ್ಪು ಸೇವನೆಯಿಂದ ಈ ಅಭ್ಯಾಸವನ್ನು ಪ್ರಾರಂಭಿಸಬಹುದು. ಗರ್ಭಿಣಿಯರು ಸ್ವಲ್ಪ ತಿಂದರೆ ತೊಂದರೆಯಿಲ್ಲ, ಆದರೆ ಅತಿಯಾಗಿ ತಿನ್ನುವುದು ಸಮಸ್ಯೆಗಳನ್ನು ತರಬಹುದು.

ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ಹೇಗೆಲ್ಲ ತಿನ್ನಬಹುದು?

ಬೆಳಗ್ಗೆ ನುಗ್ಗೆ ಸೊಪ್ಪಿನ ಪುಡಿಯ ಕಷಾಯ ಅಥವಾ ಚಹಾ ಮಾಡಿ ಸೇವಿಸುವವರಿದ್ದಾರೆ. ಈ ಪುಡಿಯನ್ನು ಸ್ಮೂದಿಗಳಿಗೆ ಬಳಸಬಹುದು. ಸ್ಯಾಂಡ್‌ವಿಚ್‌ಗಳಿಗೆ ಇದರ ಪೇಸ್ಟ್‌ ಬಳಸಬಹುದು; ಡಿಪ್‌ ಆಗಿಯೂ ರುಚಿ ಹೆಚ್ಚಿಸುತ್ತದೆ. ಸೂಪ್‌ಗಳಿಗೆ ಬಲು ರುಚಿ. ಪೆಸ್ಟೊ ಪಾಸ್ತ ಮಾಡುವಾಗ ಬೆಸಿಲ್‌ ಬದಲಿಗೆ ನುಗ್ಗೆ ಎಲೆಗಳನ್ನು ಬಳಸಿಕೊಳ್ಳಬಹುದು. ಉಳಿದಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಸಾಂಬಾರ್‌, ಪಲ್ಯ, ರೊಟ್ಟಿ, ಗೊಜ್ಜುಗಳಿಗೆ ಇದನ್ನು ಖಂಡಿತವಾಗಿ ಬಳಸಬಹುದು.

Exit mobile version