Site icon Vistara News

Morning Drink: ಆರೋಗ್ಯವಂತ ಶರೀರಕ್ಕೆ ಇಲ್ಲಿದೆ ಬೆಳಗಿನ ಮ್ಯಾಜಿಕ್‌ ಡ್ರಿಂಕ್‌!

juice

ಏನೇ ಅಡುಗೆ ಮಾಡಲಿ ತನ್ನ ಪಿಂಕ್‌ ಬಣ್ಣವನ್ನು ಧಾರಾಳವಾಗಿ ಧಾರೆ ಎರೆದು, ಆ ಪದಾರ್ಥವನ್ನು ಕಲರ್‌ಫುಲ್‌ ಆಗಿಸುವ ಗುಣ ಬೀಟ್‌ರೂಟ್‌ಗಿದೆ. ಇದೇ ಬೀಟ್‌ರೂಟ್‌ಗೆ ನಮ್ಮ ಬದುಕನ್ನೂ ಕಲರ್‌ಫುಲ್‌ ಆಗಿಸುವ ಗುಣ ಇದೆ ಎಂದು ಗೊತ್ತೇ? ಹೌದು. ಬೀಟ್‌ರೂಟ್‌ ಎಂಬ ಸೂಪರ್‌ ಫುಡ್‌ ಅನ್ನು ಕ್ಯಾರೆಟ್‌ ಎಂಬ ಇನ್ನೊಂದು ಸೂಪರ್‌ ಫುಡ್‌ ಜೊತೆಗೆ ಜ್ಯೂಸ್‌ ಮಾಡಿ ದಿನದ ಆರಂಭದಲ್ಲಿ (Morning Drink) ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿವೆ ಎಂಬುದು ಗೊತ್ತೇ?

ಹೌದು. ಬೀಟ್‌ರೂಟ್‌ ಹಾಗೂ ಕ್ಯಾರೆಟ್‌ ಎಂಬ ಎರಡು ನೆಲದಡಿಯ ತರಕಾರಿಗಳು ನಮ್ಮ ದೇಹದ ಮೇಲೆ ಮಾಡುವ ಮ್ಯಾಜಿಕ್‌ ಒಂದೆರಡಲ್ಲ. ಪ್ರತಿನಿತ್ಯ ಬೆಳಗ್ಗೆ ಕ್ಯಾರೆಟ್‌ ಹಾಗೂ ಬೀಟ್‌ರೂಟ್‌ ಜ್ಯೂಸ್‌ ಸೇವನೆಯಿಂದ ನಮ್ಮ ರಕ್ತ ಪರಿಚಲನೆ ಸರಾಗವಾಗಿ ಆಗಿ, ರಕ್ತದೊತ್ತಡದ ತೊಂದರೆ ಇರುವ ಮಂದಿಗೆ ಈ ಸಮಸ್ಯೆ ಹತೋಟಿಗೆ ಬರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಪೋಷಕಾಂಶಗಳು, ದೇಹದಲ್ಲಿರುವ ವಿಷಕಾರಕ ಕಲ್ಮಶಗಳನ್ನೆಲ್ಲ ಇದು ಹೊರಗೆ ಕಳಿಸಿ ಆರೋಗ್ಯಕರವಾಗಿರಿಸುತ್ತದೆ. ಇದರ ವಾಸನೆ ಹಾಗೂ ರುಚಿಯನ್ನು ಇಷ್ಟಪಡದ ಮಂದಿ ಇದಕ್ಕೆ ಶುಂಠಿ, ಪುದಿನ, ಟೊಮೇಟೋ ಅಥವಾ ನಿಂಬೆಹಣ್ಣಿನ ರಸ, ನೆಲ್ಲಿಕಾಯಿ, ಸೈಂದವ ಲವಣ ಹಾಗೂ ಕರಿಮೆಣಸನ್ನು ಹಾಕಿ ರುಚಿಕರವನ್ನಾಗಿ ಮಾಡಬಹುದು. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ಒಳ್ಳೆಯದು.

ಬೀಟ್‌ರೂಟ್‌ನಲ್ಲಿರುವ ಬೀಟೈನ್‌ ಪಿತ್ತಕೋಶಕ್ಕೆ ಅತ್ಯುತ್ತಮ. ಪಿತ್ತಕೋಶದ ಸಮಸ್ಯೆ ಇರುವ ಮಂದಿ ಇದನ್ನು ನಿತ್ಯವೂ ತಮ್ಮ ಆಹಾರಕ್ರಮದ ಭಾಗವಾಗಿ ವೈದ್ಯರಸಲಹೆಯ ಮೇರೆಗೆ ತೆಗೆದುಕೊಳ್ಳಬಹುದು. ಕ್ಯಾರೆಟ್‌ ದೇಹದಲ್ಲಿರುವ ಕಲ್ಮಶಗಳನ್ನು ಹೊರಕ್ಕೆ ಕಳುಹಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು ರೋಗಗಳಿಂದ ಗುಣಮುಖವಾಗಿಸುವ ಹಂತವನ್ನು ಬಹುಬೇಗನೆ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಆಹಾರ. ಇದು ಜೀರ್ಣಶಕ್ತಿಯನ್ನು ವೃದ್ಧಿಸಿ, ಇದರಲ್ಲಿರುವ ನಾರಿನಂಶ ನಿತ್ಯವೂ ಸರಿಯಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶವನ್ನೂ ಸಮತೋಲನದಲ್ಲಿಡುವಂತೆ ಇದು ಮಾಡುತ್ತದೆ.

ಇದನ್ನೂ ಓದಿ: Health Tips: ಬೆಳಗ್ಗೆದ್ದ ಕೂಡಲೇ ಚಹಾ ಬಿಸ್ಕತ್‌ ತಿನ್ನಬಾರದು ಯಾಕೆ ಗೊತ್ತೇ?

ಬೀಟ್‌ರೂಟ್‌ ನೈಟ್ರೇಟ್‌ ಆಹಾರವಾದ್ದರಿಂದ ಇದು, ದೇಹದಲ್ಲಿ ರಕ್ತ ಸರಿಯಾಗಿ ಪರಿಚಲನೆಯಾಗಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಹೃದಯಕ್ಕೆ ರಕ್ತ ಪೂರೈಕೆ ಹಾಗೂ ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತದೆ. ಬೀಟ್‌ರೂಟ್‌ ಹಾಗೂ ಕ್ಯಾರೆಟ್‌ ಎರಡರಲ್ಲೂ ಬೀಟಾ ಕ್ಯಾರಟಿನ್‌ ಇರುವುದರಿಂದ ಇದು ವಿಟಮಿನ್‌ ಎ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್‌ ಎ ಅತ್ಯಗತ್ಯವಾಗಿರುವುದರಿಂದ ವಯಸ್ಸಾದ ಮಂದಿಗೆ ಕಣ್ಣಿನ ಪೊರೆ ಸಮಸ್ಯೆ ಇರುವವರಿಗೂ ಇದು ಬಹಳ ಒಳ್ಳೆಯದು. ಇದರಲ್ಲಿ ಕಬ್ಬಿಣಾಂಶವೂ ಹೇರಳವಾಗಿರುವುದರಿಂದ, ಮಹಿಳೆಯರ ಆರೋಗ್ಯಕ್ಕೆ ಅತ್ಯುತ್ತಮ. ಮಹಿಳೆಯರ ಋತುಚಕ್ರದ ಸಮಸ್ಯೆಗೂ, ಋತುಬಂಧದ ಸಮಯದಲ್ಲಿ ಆಗುವ ಆರೋಗ್ಯ ವೈಪರೀತ್ಯಕ್ಕೂ ಇದು ನಿಜವಾದ ಅರ್ಥದಲ್ಲಿ ಮ್ಯಾಜಿಕ್‌ ಡ್ರಿಂಕ್‌ ಆಗಿ ಕೆಲಸ ಮಾಡುತ್ತದೆ. ರಕ್ತಹೀನತೆಯಿಂದ ಬಳಲುವ ಮಂದಿಗೆ, ರಕ್ತದಲ್ಲಿ ಹಿಮೋಗ್ಲೋಬಿನ್‌ ಕಡಿಮೆ ಇರುವ ಮಂದಿಗೆ ನಿಃಶಕ್ತಿಯ ಸಮಸ್ಯೆ ಇರುವ ಮಂದಿಗೆ ಇದು ಹೇಳಿ ಮಾಡಿಸಿದ ನೈಸರ್ಗಿಕವಾದ ಉಡುಗೊರೆ. ಇದರಲ್ಲಿ ಖನಿಜಾಂಶಗಳೂ ಹೇರಳವಾಗಿರುವುದರಿಂದ ಕೂದಲ ಆರೋಗ್ಯಕ್ಕೂ ಒಳ್ಳೆಯದು.

ವಯಸ್ಸಾದ ಮಂದಿಗೆ, ರಕ್ತದೊತ್ತಡದ ಸಮಸ್ಯೆ ಇರುವ ಮಂದಿಗೆ ಈ ಡ್ರಿಂಕ್‌ ಅತ್ಯುತ್ತಮ. ಇದಕ್ಕೆ ಪುದಿನ ಸೇರಿಸಿ ಜ್ಯೂಸ್‌ ಮಾಡಿ ನಿತ್ಯವೂ ಕುಡಿಯುವುದರಿಂದ ರಿಫ್ರೆಶ್‌ ಅನುಭವ ನೀಡುತ್ತದೆ. ಇಡೀ ದಿನವನ್ನು ತಾಜಾ ಆಗಿಸುವ ಶಕ್ತಿ ಇದರಲ್ಲಿದೆ. ಹಾಗಾಗಿ, ತಾಜಾ ಆಗಿ ಈಗ ಸಿಗುವ ಕ್ಯಾರೆಟ್‌, ಬೀಟ್‌ರೂಟನ್ನು ನಿರ್ಲಕ್ಷ್ಯ ಮಾಡದೆ ಸರಿಯಾಗಿ ಬಳಸಿ!

ಇದನ್ನೂ ಓದಿ: Health Tips: ಗ್ಯಾಸ್‌, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!

Exit mobile version