ಮಗುವಿನ ನಿರೀಕ್ಷೆಯಲ್ಲಿದ್ದೀರೇ? ಅಭಿನಂದನೆಗಳು! ಕೌತುಕ, ತಳಮಳ, ಹೆದರಿಕೆ, ನಿರೀಕ್ಷೆ, ಆಯಾಸ- ಏನೇನೆಲ್ಲ ಆಗುತ್ತಿರಬೇಕಲ್ಲವೇ ಈಗ. ಜೀವದೊಳಗೆ ಜೀವವಿರುವ ಅನುಭವವೇ ವರ್ಣನೆಗೆ ನಿಲುಕದ್ದು. ಈ ನವಮಾಸಗಳು ಮಹಿಳೆಯರ ಬದುಕಿನ ಮಹತ್ವದ ಹಂತಗಳು. ಇವು ಆಯಾ ಮಹಿಳೆಯ ಬದುಕಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೇ ನಿರೀಕ್ಷೆಯ ಮಾಸಗಳು. ಈ ದಿನಗಳಲ್ಲಿ ಆಕೆಯ ಆರೋಗ್ಯ ಸ್ಥಿರವಾಗಿ ಇರಬೇಡವೇ? ಆರೋಗ್ಯವೆಂದರೆ ದೇಹಾರೋಗ್ಯ ಮಾತ್ರವೇ ಅಲ್ಲ, ಮಾನಸಿಕ, ಭಾವನಾತ್ಮಕ ಸ್ಥಿತಿಗಳೂ ಸುದೃಢವಾಗಿ ಇರಬೇಕು. ಈ ಹಂತದಲ್ಲಿ ನೆರವಾಗುವುದು ಗರ್ಭಿಣಿಯರಿಗಾಗಿಯೇ ಇರುವ ಪ್ರೀನೇಟಲ್ ಯೋಗ. ಮೊದಲಿಗೆ ಯೋಗ ಮಾಡುವುದು ಆಯಾ ಗರ್ಭಿಣಿಯ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ವೈದ್ಯರಲ್ಲಿ ದೃಢಪಡಿಸಿಕೊಳ್ಳಬೇಕು. ಆನಂತರ ಅನುಭವಿ ಯೋಗ (International Yoga Day 2024) ಶಿಕ್ಷಕರ ಮಾರ್ಗದರ್ಶನ ಪಡೆಯುವುದು ಸರಿಯಾದ ಮಾರ್ಗ.
ಏನು ಪ್ರಯೋಜನ?
- ಗರ್ಭಿಣಿಯ ಆರೋಗ್ಯ ಸ್ಥಿರವಾಗಿದೆ ಎಂದಾದರೆ, ಒಂದಿಲ್ಲೊಂದು ವ್ಯಾಯಾಮ ಈ ದಿನಗಳಲ್ಲಿ ಬೇಕು. ಅದರಲ್ಲೂ ಯೋಗವನ್ನೇ ಅಭ್ಯಾಸ ಮಾಡುವುದರಿಂದ ಹಲವು ರೀತಿಯ ಲಾಭಗಳಿವೆ.
- ಮೊದಲಿಗೆ, ಶರೀರ ಬಿಗಿಯದಂತೆ ಹಗುರವಾಗಿ ಇರಿಸಿಕೊಳ್ಳಬಹುದು. ಹೆರಿಗೆಯ ಸಂದರ್ಭದಲ್ಲಿ ಇದು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
- ಪ್ರಾಣಾಯಾಮ, ಧ್ಯಾನದ ಜೊತೆಗೆ ಯೋಗವನ್ನು ಅಭ್ಯಾಸ ಮಾಡಿದಾಗ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು, ಉದ್ವೇಗವನ್ನು ದೂರ ಮಾಡಲು ಸಾಧ್ಯ. ಅದರಲ್ಲೂ ದೀರ್ಘ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಹೆರಿಗೆಯ ಸಮಯದಲ್ಲಿ ಅನುಕೂಲ ಹೆಚ್ಚು.
- ಯೋಗಾಭ್ಯಾಸದಿಂದ ಬೆಳಗಿನ ತಳಮಳಗಳು, ಕಾಲಿನ ಸೆಳೆತ, ಪಾದಗಳು ಊದಿಕೊಳ್ಳುವುದು, ಕೀಲಿನಲ್ಲಿ ನೋವು, ಮಲಬದ್ಧತೆ ಮುಂತಾದ ಆರೋಗ್ಯದ ಕಿರಿಕಿರಗಳನ್ನು ನಿಭಾಯಿಸುವುದು ಕಷ್ಟವಾಗುವುದಿಲ್ಲ
- ಗರ್ಭಾವಸ್ಥೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಹೆರಿಗೆಯ ನಂತರ ಶರೀರ ಬೇಗ ಮೊದಲಿನ ಸ್ಥಿತಿಗೆ ಬರುತ್ತದೆ.
ಯಾವ ಆಸನಗಳನ್ನು ಮಾಡಬಹುದು?
ಮೊದಲಿನ ಮೂರು ತಿಂಗಳು ನಿಂತು ಮಾಡುವ ಆಸನಗಳು ಬೇಕಾಗುತ್ತವೆ. ಇದರಿಂದ ಕಾಲುಗಳ ಶಕ್ತಿಯನ್ನು ಹೆಚ್ಚಿಸಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಭಂಗಿಗಳು ಗರ್ಭಿಣಿಯರಿಗೆ ಸೂಕ್ತವಲ್ಲ. ತಿರುಗುವ ಆಸನಗಳು ಶರೀರದ ಮೇಲಿನ ಭಾಗಗಳಿಗೇ ಹೊರತು ಕಿಬ್ಬೊಟ್ಟೆ ಮತ್ತು ಕಟಿಯ ಭಾಗಕ್ಕಲ್ಲ. ತಲೆಕೆಳಗು ಮಾಡುವ ಆಸನಗಳು ಸಹ ಗರ್ಭಿಣಿಯರಿಗೆ ಸಲ್ಲದು.
ಯಾವುದು ಸೂಕ್ತ?
ವಜ್ರಾಸನ, ತಾಡಾಸನ, ಕೋನಾಸನ, ಬದ್ಧಕೋನಾಸನ, ವೀರಭದ್ರಾಸನ, ಮಾರ್ಜರಿಯಾಸನ, ಶವಾಸನ, ಯೋಗನಿದ್ರೆ ಮುಂತಾದವು ಗರ್ಭಿಣಿಯರಿಗೆ ಹಿತವಾದ ಭಂಗಿಗಳು.
ಯಾವುದು ಬೇಡ?
ನೌಕಾಸನ, ಚಕ್ರಾಸನ, ಅರ್ಧಮತ್ಸೇಂದ್ರಾನಸ, ಭುಜಂಗಾಸನ, ವಿಪರೀತ ಶಲಭಾಸನ, ಹಲಾಸನ, ಧನುರಾಸನ ಮುಂತಾದ ಕಟಿ, ಹೊಟ್ಟೆ, ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀಳುವಂಥ ಯಾವ ಆಸನಗಳೂ ಸೂಕ್ತವಲ್ಲ.
ಪ್ರಾಣಾಯಾಮ
ದೀರ್ಘ ಉಸಿರಾಟದಿಂದಲೂ ಬಹಳಷ್ಟು ಪ್ರಯೋಜನವಿದೆ ಭಾವೀ ತಾಯಂದಿರಿಗೆ. ಕಡೆಯ ಮೂರು ತಿಂಗಳುಗಳಲ್ಲಿ ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಯೋಜನ ಕಾಣಬಹುದು. ಆದರೆ ಭಸ್ತ್ರಿಕಾ, ಕಪಾಲಭಾತಿಯಂಥ ಉಸಿರಾಟದ ಕ್ರಮಗಳನ್ನು ಈ ದಿನಗಳಲ್ಲಿ ಮಾಡದಿದ್ದರೆ ಒಳಿತು. ಬದಲಿಗೆ, ನಾಡಿಶೋಧನ ಮತ್ತು ಭ್ರಾಮರಿಯಂಥ ಪ್ರಾಣಾಯಾಮ, ಧ್ಯಾನ ಮುಂತಾದವು ಗರ್ಭಿಣಿಯರಿಗೆ ಸೂಕ್ತವಾದದ್ದು.
ಎಚ್ಚರಿಕೆ ಬೇಕು
- ಪ್ರೀನೇಟಲ್ ಯೋಗವನ್ನು ಅನುಭವಿಯಾದ ಮಾರ್ಗದರ್ಶಕರ ನೆರವಿನಿಂದಲೇ ಮಾಡುವುದು ಸರಿಯಾದ ಕ್ರಮ. ಜೊತೆಗೆ ಕೆಲವು ಎಚ್ಚರಿಕೆಗಳೂ ಬೇಕಾಗುತ್ತವೆ.
- ಮೊದಲ ಮೂರು ತಿಂಗಳು ನಿಂತು ಮಾಡುವ ಆಸನಗಳು ಸೂಕ್ತ. ಇದರಿಂದ ಕಾಲುಗಳನ್ನು ಬಲಪಡಿಸಬಹುದು, ರಕ್ತ ಪರಿಚಲನೆ ಹೆಚ್ಚಿಸಬಹುದು ಮತ್ತು ಕಾಲು ಸೆಳೆತ ಕಡಿಮೆಯಾಗಬಹುದು
- ಗರ್ಭಾವಸ್ಥೆಯ ನಡುವಿನ ಮೂರು ತಿಂಗಳಲ್ಲಿ ಆಯಾಸವಾಗದೆ ಎಷ್ಟು ಆಸನಗಳು ಸಾಧ್ಯವೋ ಅಷ್ಟೇ ಮಾಡಿ. ಆಸನಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಬೇಡಿ, ಬೇಗ ಮುಗಿಸಿ.
- ಕಡೆಯ ಮೂರು ತಿಂಗಳಲ್ಲಿ ಆಸನಗಳಿಗಿಂತ ಧ್ಯಾನ ಮತ್ತು ಪ್ರಾಣಾಯಾಮದತ್ತ ಗಮನ ನೀಡಿ. ಉಸಿರಾಟವನ್ನು ಬಲಪಡಿಸಿಕೊಂಡು, ದೇಹಕ್ಕೆ ಹೆಚ್ಚಿನ ಆಮ್ಲಜನಕ ಒದಗಿಸುವುದು ಕಡೆಯ ದಿನಗಳಲ್ಲಿ ಅಗತ್ಯವಾಗುತ್ತದೆ.
ಇದನ್ನೂ ಓದಿ: International Yoga Day 2024: ಧ್ಯಾನ ಎಂದರೇನು? ಇದರಿಂದ ಏನೇನು ಪ್ರಯೋಜನ?