ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದರೂ ಸಾಮಾನ್ಯವಾಗಿ ಕೆಲವರಿಗೆ ಮಾತ್ರ ಸೊಳ್ಳೆಗಳು (Mosquitoes Bite) ಹೆಚ್ಚಾಗಿ ಕಡಿಯುವುದನ್ನು ಕಾಣುತ್ತೇವೆ. ಆದರೆ ಯಾಕೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಹೆಣ್ಣು ಸೊಳ್ಳೆಗಳು (female Mosquitoes) ಮಾತ್ರ ರಕ್ತದಿಂದ (blood) ಪ್ರೊಟೀನ್ ಗಳನ್ನು (proteins) ಪಡೆಯಲು ಮನುಷ್ಯರನ್ನು ಕಚ್ಚುತ್ತವೆ ಮತ್ತು ಬಳಿಕ ಮೊಟ್ಟೆಗಳನ್ನು ಇಡುತ್ತದೆ. ಅದರಲ್ಲೂ ಕೆಲವರಿಗೆ ಮಾತ್ರ ಹೆಚ್ಚಾಗಿ ಸೊಳ್ಳೆಗಳು ಕಚ್ಚುತ್ತವೆ.
ಕೆಲವರು ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿರಲು ಹಲವು ಕಾರಣಗಳೂ ಇವೆ. ಬೆವರು, ಲ್ಯಾಕ್ಟಿಕ್ ಆಮ್ಲ, ಅಮೋನಿಯಾ ಮತ್ತು ಇತರ ಸಂಯುಕ್ತಗಳಿಂದ ಸೊಳ್ಳೆಗಳು ಕೆಲವರಿಗೆ ಹೆಚ್ಚಾಗಿ ಕಚ್ಚುತ್ತದೆ.
ಸೊಳ್ಳೆಗಳು ಮಲೇರಿಯಾ, ಝಿಕಾ ಮತ್ತು ಡೆಂಗ್ಯೂ ಜ್ವರದಂತಹ ಹಲವು ಸಾಂಕ್ರಾಮಿಕ ರೋಗಗಳನ್ನು ಹರಡುವ ಕಾರಣ ಸೊಳ್ಳೆ ಕಡಿತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ಸೂಳ್ಳೆಗಳು ಕೆಲವು ಜನರನ್ನು ಮಾತ್ರ ಹೆಚ್ಚಾಗಿ ಕಡಿಯಲು ಕಾರಣಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದಕ್ಕಾಗಿ ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಾಗಿದ್ದು ಅದರಲ್ಲಿ ರಕ್ತದ ಪ್ರಕಾರವೂ ಒಂದು ಕಾರಣವಾಗಿದೆ.
ರಕ್ತದ ಪ್ರಕಾರ ಹೇಗೆ ಕಾರಣ?
ಒಂದು ರಕ್ತದ ಪ್ರಕಾರವನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ. ಪೋಷಕರಿಂದ ಪಡೆದಿರುವ ವಿಭಿನ್ನ ರಕ್ತ ಪ್ರಕಾರಗಳನ್ನು ಹೊಂದಿರುವ ಜನರು ತಮ್ಮ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ನಿರ್ದಿಷ್ಟ ಪ್ರೋಟೀನ್‌ಗಳ (ಪ್ರತಿಜನಕ) ವಿಭಿನ್ನ ಸೆಟ್‌ಗಳನ್ನು ಹೊಂದಿರುತ್ತಾರೆ.
ಎ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಪ್ರತಿಜನಕ ಮಾತ್ರ ಇರುತ್ತದೆ. ಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಬಿ ಪ್ರತಿಜನಕ ಮಾತ್ರ, ಎಬಿ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಮತ್ತು ಬಿ ಪ್ರತಿಜನಕ, ಒ ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಎ ಅಥವಾ ಬಿ ಪ್ರತಿಜನಕವಿರುವುದಿಲ್ಲ.
ಕೆಲವು ಜನರು ಲಾಲಾರಸ ಅಥವಾ ಕಣ್ಣೀರಿನಂತಹ ದೇಹದ ದ್ರವಗಳಲ್ಲಿ ಈ ಪ್ರತಿಜನಕಗಳನ್ನು ಹೊಂದಿರುತ್ತಾರೆ. ಎ ರಕ್ತದ ಪ್ರಕಾರವನ್ನು ಹೊಂದಿರುವವರು ಎ ಪ್ರಕಾರದ ಪ್ರತಿಜನಕವನ್ನು ಸ್ರವಿಸುತ್ತಾರೆ. ಒ ರಕ್ತದ ಗುಂಪು ಹೊಂದಿರುವವರು ಹೆಚ್ ಪ್ರತಿಜನಕವನ್ನು ಸ್ರವಿಸುತ್ತಾರೆ. ಅಧ್ಯಯನಗಳ ಪ್ರಕಾರ ಸೊಳ್ಳೆಗಳು ಇತರ ರಕ್ತ ಪ್ರಕಾರಗಳಿಗಿಂತ ಒ ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಇದಕ್ಕೆ ರಕ್ತದ ಪ್ರಕಾರ ಮತ್ತು ಸ್ರವಿಸುವ ಸ್ಥಿತಿ ಮುಖ್ಯ ಕಾರಣವಾಗಿದೆ.
ಸೊಳ್ಳೆಗಳು ಎ, ಬಿ ಪ್ರತಿಜನಕಕ್ಕಿಂತ ಹೆಚ್ ಪ್ರತಿಜನಕವನ್ನು ಹೊಂದಿರುವ ಜನರತ್ತ ಹೆಚ್ಚು ಆಕರ್ಷಿತವಾಗುತ್ತವೆ. ಯಾಕೆಂದರೆ ಇದು ಲಾಲಾರಸ ಮತ್ತು ಕಣ್ಣೀರಿನಲ್ಲಿ ಕಂಡುಬರುವುದರಿಂದ ಸೊಳ್ಳೆಗಳು ಒಬ್ಬ ವ್ಯಕ್ತಿಯನ್ನು ಸಮೀಪಿಸಿದಾಗ ಈ ಪ್ರತಿಜನಕಗಳನ್ನು ಬಹುಬೇಗನೆ ಗ್ರಹಿಸುತ್ತದೆ ಎನ್ನಲಾಗುತ್ತದೆ.
ಇನ್ನು ಹಲವು ಕಾರಣಗಳು
ಸೊಳ್ಳೆಗಳು ನಮ್ಮತ್ತ ಹೆಚ್ಚು ಆಕರ್ಷಿತವಾಗಲು ಇನ್ನು ಹಲವು ಕಾರಣಗಳಿವೆ.
ಇಂಗಾಲದ ಡೈಆಕ್ಸೈಡ್
ಉಸಿರಾಡುವಾಗ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದರೆ ಸೊಳ್ಳೆಯು ಇವರತ್ತ ಬಹುಬೇಗನೆ ಆಕರ್ಷಿತಗೊಳ್ಳುತ್ತದೆ. ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಳವು ಹತ್ತಿರದಲ್ಲಿರುವ ಸೊಳ್ಳೆಯನ್ನು ಎಚ್ಚರಿಸುತ್ತದೆ.
ದೇಹದ ವಾಸನೆ
ದೇಹದ ವಾಸನೆಯು ಇತರ ಜನರಿಗಿಂತ ಸೊಳ್ಳೆಗಳು ನಿಮ್ಮತ್ತ ಆಕರ್ಷಿತರಾಗಲು ಇನ್ನೊಂದು ಪ್ರಮುಖ ಕಾರಣ. ಯಾಕೆಂದರೆ ವಾಸನೆಯನ್ನು ಬಹುಬೇಗನೆ ಸೊಳ್ಳೆಗಳು ಗ್ರಹಿಸುತ್ತವೆ.
ಚರ್ಮದ ಮೇಲಿನ ಸಂಯುಕ್ತಗಳಲ್ಲಿ ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲ ಸೊಳ್ಳೆಗಳನ್ನು ಬಹುಬೇಗನೆ ಆಕರ್ಷಿಸುತ್ತವೆ. ಚರ್ಮದ ಮೇಲೀನಾ ಬ್ಯಾಕ್ಟೀರಿಯಾಗಳು ಕೂಡ ದೇಹದ ವಾಸನೆಗೆ ಕಾರಣವಾಗಿರುತ್ತದೆ.
ದೇಹದ ತಾಪಮಾನ
ದೇಹದ ತಾಪಮಾನವು ಸೊಳ್ಳೆಗಳನ್ನು ಆಕರ್ಷಿಸಲು ಕಾರಣವಾಗಿರುತ್ತದೆ. ದೇಹದ ತಾಪವು ಹೆಚ್ಚು ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲು, ಕಾರಣವಾಗಿರುತ್ತದೆ.
ಬಣ್ಣ
ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಸೊಳ್ಳೆಗಳು ಕಪ್ಪು ವಸ್ತುಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ ಎಂಬುದನ್ನು ಅಧ್ಯಯನವೊಂದು ಹೇಳಿದೆ. ನೀವು ಗಾಢ ಬಣ್ಣಗಳನ್ನು ಧರಿಸಿದರೆ ನೀವು ಹೆಚ್ಚು ಸೊಳ್ಳೆ ಕಡಿತವನ್ನು ಪಡೆಯುತ್ತೀರಿ ಎನ್ನಬಹುದು.
ಮದ್ಯಪಾನ
ಸೊಳ್ಳೆಗಳು ಮದ್ಯಪಾನ ಮಾಡುವ ಜನರತ್ತ ಹೆಚ್ಚು ಆಕರ್ಷಿತವಾಗಬಹುದು. ಇದರಲ್ಲಿ ವಾಸನೆ ಪ್ರಮುಖ ಅಂಶವಾಗಿದೆ ಎನ್ನಲಾಗುತ್ತದೆ. ಅಂದರೆ ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದಾಯಿತು!
ಇದನ್ನೂ ಓದಿ: Chandipura Virus: ಡೆಂಗ್ಯೂ ಹಾವಳಿ ನಡುವೆ ಕಾಡುತ್ತಿದೆ ಚಾಂದಿಪುರ ವೈರಸ್; ಇದುವರೆಗೆ 6 ಮಕ್ಕಳು ಬಲಿ: ಏನಿದರ ಲಕ್ಷಣ?
ಗರ್ಭಿಣಿಯರು
ಗರ್ಭಿಣಿಯರಲ್ಲದ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಸೊಳ್ಳೆಗಳು ಗರ್ಭಿಣಿಯರತ್ತ ಆಕರ್ಷಿತವಾಗುತ್ತದೆ. ಗರ್ಭಿಣಿಯರು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ಮತ್ತು ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುವುದರಿಂದ ಇವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತರಾಗುತ್ತಾರೆ.