Site icon Vistara News

Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

Mouth Sleeping

ಹೀಗೊಂದು ಸನ್ನಿವೇಶವನ್ನು (Mouth Sleeping) ಊಹಿಸಿಕೊಳ್ಳಿ- ನಿಮಗೆ ಸಖತ್‌ ನೆಗಡಿಯಾಗಿದೆ. ಮೂಗೆಲ್ಲ ಕಟ್ಟಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಲಗಿದಾಗ ಈ ಸಮಸ್ಯೆ ಇನ್ನೂ ಹೆಚ್ಚು ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಾಯಲ್ಲಿ ಉಸಿರಾಡುವುದೊಂದೇ ಮಾರ್ಗ. ಆದರೆ ನೆಗಡಿ ಕಡಿಮೆಯಾದ ನಂತರ ಮರಳಿ, ಮೂಗಲ್ಲೇ ಉಸಿರಾಟ ಆರಂಭಿಸುತ್ತೀರಿ. ಹಾಗಲ್ಲದೆ, ಮಲಗಿದಾಗೆಲ್ಲ ಮೂಗಿನಲ್ಲಲ್ಲದೆ, ಬಾಯಲ್ಲೇ ಉಸಿರಾಡುತ್ತೀರಾ? ನೆಗಡಿ ಇಲ್ಲದಿದ್ದರೂ ನಿಮ್ಮ ಉಸಿರಾಟ ಬಾಯಲ್ಲೇ ನಡೆಯುತ್ತದೆಯೇ? ಹಾಗಾದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಅತಿಯಾಗಿ ವ್ಯಾಯಾಮ ಮಾಡುವಾಗ, ಜೋರಾಗಿ ಓಡುವಾಗ ಅಥವಾ ನಡೆಯುವಾಗಲೂ ನಾವು ಬಾಯಲ್ಲಿ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ಬೇಕಾದ ಆಮ್ಲಜನಕವನ್ನು ಬೇಗನೇ ಒದಗಿಸುವುದಕ್ಕೆ ಸಾಧ್ಯ. ಆದರೆ ಮಲಗಿದಾಗ, ನಿದ್ದೆಯಲ್ಲಿ ಬಾಯಲ್ಲಿ ಉಸಿರಾಡುವುದು ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಿದ್ದೆ ಮಾಡುತ್ತಿರುವವರಿಗೆ ಅವರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದು ತಿಳಿಯುವುದಾದರೂ ಹೇಗೆ?

ತಿಳಿಯಬಹುದು

ನಿದ್ದೆ ಮಾಡುವಾಗ ತಿಳಿಯದಿದ್ದರೂ, ನಿದ್ದೆಯಿಂದ ಎದ್ದಾಗ ತಿಳಿಯುವುದಕ್ಕೆ ದಾರಿಗಳಿವೆ. ಬೆಳಗ್ಗೆ ಎದ್ದಾಗ ಬಾಯೆಲ್ಲ ಒಣಗಿದಂತಿದ್ದರೆ, ಬಾಯಲ್ಲಿ ದುರ್ಗಂಧ ಅತಿಯಾಗಿದ್ದರೆ, ಧ್ವನಿ ಒರಟಾಗಿದ್ದರೆ, ಏಳುವಾಗ ಅತಿಯಾದ ಸುಸ್ತು ಅಥವಾ ಕಿರಿಕಿರಿ ಎನಿಸುತ್ತಿದ್ದರೆ, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣುತ್ತಿದ್ದರೆ, ಎದ್ದಾಗ ಬುದ್ಧಿಯಲ್ಲಿ ಸ್ಪಷ್ಟತೆಯ ಬದಲು ಗೊಂದಲ ಇದ್ದರೆ- ಮಲಗಿದಾಗ ಬಾಯಲ್ಲಿ ಉಸಿರಾಡಿರುವ ಸಾಧ್ಯತೆಗಳು ಅಧಿಕ.

ಯಾಕೆ ಹೀಗೆ?

ಮೂಗಿನಲ್ಲಿ ಸರಾಗ ಉಸಿರಾಡುವುದಕ್ಕೆ ಯಾವುದೇ ಸಮಸ್ಯೆ ಎದುರಾದರೂ, ತಕ್ಷಣಕ್ಕೆ ಬಾಯಲ್ಲಿ ಉಸಿರಾಡುವುದು ದೇಹಧರ್ಮ. ಮೂಗು ಕಟ್ಟಿದ್ದರೆ, ಕಫ ಬಿಗಿದಿದ್ದರೆ, ಟಾನ್ಸಿಲ್‌ ಸಮಸ್ಯೆಯಿದ್ದರೆ, ಶ್ವಾಸನಾಳದಲ್ಲಿ ಎಲ್ಲಾದರೂ ಪಾಲಿಪ್‌ಗಳಿದ್ದರೆ, ಅತಿಯಾದ ಸುಸ್ತು, ಒತ್ತಡದಿಂದ ಬಳಲುತ್ತಿದ್ದರೆ- ಹೀಗೆ ಮೂಗಿನ ಬದಲು ಬಾಯಲ್ಲಿ ಉಸಿರಾಡುವುದಕ್ಕೆ ಹಲವಾರು ಕಾರಣಗಳು ಇರಬಹುದು.

ಏನಾಗುತ್ತದೆ?

ನಿದ್ದೆ ಮಾಡುವಾಗ ಹೀಗೆ ಬಾಯಲ್ಲಿ ಉಸಿರಾಡಿದರೆ ಆಗುವ ಸಮಸ್ಯೆಯೇನು? ಹೇಗೋ ಒಂದು- ಉಸಿರಾಡುವುದು ಮುಖ್ಯವಲ್ಲವೇ? ಉಸಿರಾಡುವುದು ಮುಖ್ಯ ಎಂಬುದು ಹೌದಾದರೂ, ಹೇಗೋ ಒಂದು ಎಂಬುದು ಸರಿಯಲ್ಲ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳ ಸಂಖ್ಯೆ ತ್ವರಿತವಾಗಿ ದ್ವಿಗುಣಗೊಳ್ಳುತ್ತದೆ. ಜೊತೆಗೆ ಇನ್ನಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ.

ಇದನ್ನೂ ಓದಿ: Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಪರಿಹಾರ ಏನು?

ತಲೆಯನ್ನು ಕೊಂಚ ಎತ್ತರಿಸಿ ಮಲಗುವುದರಿಂದ ಶ್ವಾಸನಾಳಗಳು ತೆರೆದುಕೊಂಡು, ಮೂಗಲ್ಲಿ ಉಸಿರಾಡುವುದು ಸುಲಭವಾಗುತ್ತದೆ. ಮೂಗು ಕಟ್ಟಿದಾಗ ಸಲೈನ್‌ ಸ್ಪ್ರೇಗಳನ್ನು ಉಪಯೋಗಿಸುವುದರಿಂದ ಉಸಿರಾಟ ಸುಲಭವಾಗಬಹುದು. ಮನೆಯ ವಾತಾವರಣವನ್ನು ಶುಚಿಯಾಗಿ ಇರಿಸಿಕೊಳ್ಳುವುದರಿಂದ ಅಲರ್ಜಿಯನ್ನು ಮಟ್ಟ ಹಾಕಲು ಸಾಧ್ಯ. ಯೋಗ, ಪ್ರಾಣಾಯಾಮಗಳು ಶ್ವಾಸಕೋಶದ ಬಲವರ್ಧನೆ ಮಾಡಿ, ಮೂಗಿನ ಉಸಿರಾಟವನ್ನು ಸುಲಭ ಮಾಡುತ್ತವೆ.

Exit mobile version