ಈಗ ಏನಿದ್ದರೂ ರೆಡಿಮೇಡ್ ಕಾಲ. ಎಲ್ಲವೂ ದಿಢೀರ್ ಆಗಬೇಕು. ಕಾಯುವುದಕ್ಕೆ, ಮಾಡುವುದಕ್ಕೆ ಯಾರಿಗೂ ಸಮಯವಿಲ್ಲ. ಅಡುಗೆಯಿಂದ ಹಿಡಿದು ಪೋಷಣೆಯವರೆಗೆ ನಮಗೆ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ವಸ್ತುಗಳೇ ಬೇಕು. ಪ್ರೊಟೀನ್‌ಗಾಗಿ ಪ್ರೊಟೀನ್ ಮಿಕ್ಸ್‌ಗಳು, ಮಲ್ಟಿವಿಟಮಿನ್ ಮಾತ್ರೆಗಳು ಇತ್ಯಾದಿಗಳ ಸೇವನೆಯೂ ಸಹಜ ಎಂಬಷ್ಟು ಸಲೀಸಾಗಿದೆ. ಆದರೆ, ನಾವು ನಿತ್ಯವೂ ಸೇವಿಸುವ ಆಹಾರ ಮೂಲಗಳಲ್ಲೇ ನಾವು ಪೋಷಕಾಂಶಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ವಿಪರ್ಯಾಸ. ಮಾರುಕಟ್ಟೆಯಲ್ಲೂ ವಿಧವಿಧವಾದ ಮಲ್ಟಿವಿಟಮಿನ್‌ಗಳು, ಪೋಷಣೆಯ ಡ್ರಿಂಕ್‌ಗಳೂ ಲಭ್ಯವಿರುವುದರಿಂದ ನಿತ್ಯದ ಪೋಷಣೆಯನ್ನು ಅವುಗಳ ಮೂಲಕವೇ ಸುಲಭವಾಗಿ ಪಡೆಯುವುದು ಬಹಳ ಮಂದಿಗೆ ಧಾವಂತದ ಜೀವನದಲ್ಲಿ ಅಭ್ಯಾಸವೂ ಆಗಿಬಿಟ್ಟಿದೆ. ಆದರೆ ಇವು ನಿಜಕ್ಕೂ, ಆಹಾರಗಳನ್ನು ಸೇವಿಸುವ ಮೂಲಕ ಪಡೆಯುವ ಪೋಷಣೆಯಂತೆ ಒಳ್ಳೆಯದನ್ನೇ ಮಾಡಬಲ್ಲವೇ? ನಾವು ಸೇವಿಸುವ ಎಲ್ಲವೂ ಸರಿಯಾದ ಮೂಲದಿಂದ ಬಂದ ಉತ್ತಮ ಪೋಷಣೆಯ ಮಾತ್ರೆಗಳೇ ಎಂಬ ಬಗ್ಗೆ ಗೊಂದಲಗಳು ಇದ್ದೇ ಇವೆ. ಆದರೆ, ನಾವು ಸರಿಯಾದ ಆಹಾರ ಸೇವನೆಯ ಮೂಲಕವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಣೆಯನ್ನೂ ಆರೋಗ್ಯಯುತವಾದ ನೈಸರ್ಗಿಕ ಮಾರ್ಗದಲ್ಲಿಯೇ ಪಡೆದುಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮಲ್ಟಿವಿಟಮಿನ್ ಮಾತ್ರೆಗಳಿಗಿಂತಲೂ (multivitamin pill) ಹೆಚ್ಚು ಪೋಷಣೆಯನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಹಳದಿ ಕ್ಯಾಪ್ಸಿಕಂ
ಹಳದಿ ಬಣ್ಣದ ಕ್ಯಾಪ್ಸಿಕಂ ವಿಟಮಿನ್ ಸಿ ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರಗಳ ಪೈಕಿ ಬಹುಮುಖ್ಯವಾದುದು. ವಿಟಮಿನ್ ಸಿ ನೀರಿನಲ್ಲಿ ಕರಗಬಲ್ಲ ಹಾಗೂ ದೇಹ ಹೆಚ್ಚುವರಿಯನ್ನು ಶೇಖರಿಸಿ ಇಡಲಾಗದ ಪೋಷಕಾಂಶವಾದ್ದರಿಂದ ಇದು ನಿತ್ಯವೂ ನಮ್ಮ ದೇಹಕ್ಕೆ ಬೇಕಾದ ಪೋಷಣೆ. ವಿಟಮಿನ್ ಸಿ ಕೊರತೆಯಿಂದ ಸ್ಕರ್ವಿ ಸೇರಿದಂತೆ ತಲೆಸುತ್ತು, ಸುಸ್ತು, ಚರ್ಮದಲ್ಲಿ ಕಜ್ಜಿ-ಗುಳ್ಳೆಗಳು, ಮಾಂಸಖಂಡಗಳಲ್ಲಿ ಊತ ಹಾಗೂ ರಕ್ತಸ್ರಾವದಂತಹ ಸಮಸ್ಯೆಗಳೂ ಬರಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ವಿಟಮಿನ್ ಸಿ ಬೇಕೇಬೇಕು. ಒಂದು ಹಳದಿ ಕ್ಯಾಪ್ಸಿಕಂನಲ್ಲಿ 75-90 ಎಂಜಿಗಳಷ್ಟು ವಿಟಮಿನ್ ಸಿ ಇರುವುದರಿಂದ ಹಲವು ಹಲವು ಸಮಸ್ಯೆಗಳನ್ನು ಇದರ ಸೇವನೆಯಿಂದಲೇ ದೂರ ಇರಿಸಬಹುದಾಗಿದೆ.
ಹಸಿರು ತರಕಾರಿಗಳು
ಹಸಿರು ಬಣ್ಣದ ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿರುತ್ತವೆ. ಪಾಲಕ್, ಬಸಳೆ, ನುಗ್ಗೆಸೊಪ್ಪು, ಕ್ಯಾಬೇಜ್ ಇತ್ಯಾದಿಗಳಲ್ಲಿ ಹೆಚ್ಚು ವಿಟಮಿನ್ ಇರುತ್ತದೆ. ವಿಟಮಿನ್ ಎ, ಕೆ, ಇ, ಸಿ, ಬೀಟಾ ಕೆರೋಟಿನ್, ಫೋಲೇಟ್, ವಿಟಮಿನ್ ಬಿ1, ಬಿ2, ಬಿ5, ಬಿ3 ಹಾಗೂ ಬಿ6ಗಳಿಗಾಗಿ ಈ ಹಸಿರು ಬಣ್ಣದ ತರಕಾರಿ ಸೊಪ್ಪುಗಳನ್ನು ಆಗಾಗ ಸೇವಿಸಿ.
ಮೀನು
ಒಮೆಗಾ 3 ಫ್ಯಾಟಿ ಆಸಿಡ್‌ಗಳಿಗಾಗಿ ಮೀನಿನ ಸೇವನೆ ಬಹಳ ಮುಖ್ಯ. ಮೀನಿನಲ್ಲಿ ವಿಟಮಿನ್ ಬಿ೨, ವಿಟಮಿನ್ ಡಿ, ಕ್ಯಾಲ್ಶಿಯಂ, ಕಬ್ಬಿಣಾಂಶ, ಝಿಂಕ್, ಪಾಸ್ಪರಸ್, ಮೆಗ್ನೀಶಿಯಂ, ಅಯೋಡಿನ್, ಪೊಟಾಶಿಯಂ ಇವೆಲ್ಲ ಖನಿಜಾಂಶಗಳೂ ಇರುವುದರಿಂದ ಇದು ಅತ್ಯಂತ ಆರೋಗ್ಯಕರ.
ಮೊಟ್ಟೆ
ಪ್ರೊಟೀನ್‌ಗಾಗಿ ರೆಡಿಮೇಡ್ ಡ್ರಿಂಕ್‌ಗಳನ್ನು ಕುಡಿಯುವ ಬದಲು ಮೊಟ್ಟೆ ಸೇವಿಸಿದರೆ ಸಾಕು. ಅತ್ಯಂತ ಸರಳ ಹಾಗೂ ಸುಲಭವಾದ ವಿಧಾನವಿದು. ಮೊಟ್ಟೆಯಲ್ಲಿ ಪ್ರೊಟೀನ್, ವಿಟಮಿನ್ ಎ, ಬಿ, ಬಿ೨, ಬಿ12 ಹಾಗೂ ವಿಟಮಿನ್ ಡಿ ಹೇರಳವಾಗಿದೆ. ಅಯೋಡಿನ್ ಹಾಗೂ ಸೆಲೆನಿಯಮ್ ಕೂಡಾ ಇವೆ.
ಮೊಸರು
ಕ್ಯಾಲ್ಶಿಯಂ ದೇಹಕ್ಕೆ ಬೇಕೆಂದರೆ, ಮೊಸರು ತಿನ್ನುವುದನ್ನು ಬಿಡಬೇಡಿ. ಕ್ಯಾಲ್ಶಿಯಂ, ವಿಟಮಿನ್ ಬಿ, ಬಿ12 ಇತ್ಯಾದಿಗಳ ಆಗರ ಮೊಸರು. ಹಾಗೂ ಹಾಲಿನ ಉತ್ಪನ್ನಗಳು. ಹಾಗಾಗಿ, ಹಾಲು, ಮೊಸರು, ಪನೀರ್‌ನಂತಹ ಆಹಾರಗಳನ್ನು ಆಗಾಗ ಸೇವಿಸಿ. ದೇಹಕ್ಕೆ ನಿತ್ಯವೂ ಕ್ಯಾಲ್ಶಿಯಂ ಕೊರತೆಯಾಗದಂತೆ ನೋಡಿಕೊಳ್ಳಿ. ನೆನಪಿಡಿ, ಇವಿಷ್ಟಲ್ಲದೆ, ಒಣಹಣ್ಣುಗಳು, ಒಣ ಬೀಜಗಳು, ಧಾನ್ಯ ಬೇಳೆ ಕಾಳುಗಳು, ತರಕಾರಿ ಹಣ್ಣುಗಳು ಇತ್ಯಾದಿಗಳಿಂದ ಸಮೃದ್ಧವಾದ ಊಟವನ್ನು ನೀವು ನಿತ್ಯವೂ ಮಾಡುತ್ತಿದ್ದರೆ, ಖಂಡಿತವಾಗಿಯೂ ಮಲ್ಟಿ ವಿಟಮಿನ್‌ಗಳ ಸೇವನೆಯ ಅಗತ್ಯವೂ ಬಾರದು.
ಇದನ್ನೂ ಓದಿ: Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!