ಕೊರೋನಾ ಮಹಾಮಾರಿ (corona virus) ಎರಡು ವರ್ಷಗಳ ಕಾಲ ನಮ್ಮ ಬದುಕನ್ನು ಅಲ್ಲಾಡಿಸಿ, ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಸೇರಿದಂತೆ ನಮ್ಮ ಬದುಕಿನ ಹಲವು ಮಜಲುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಆಹ್ವಾನಿಸಿ ಹೊರನಡೆದಿದೆ. ಇದು ನಮ್ಮ ದಿನನಿತ್ಯದ ಬದುಕನ್ನು ಬದಲಾಯಿಸಿ ಹೋದ ರೀತಿ ಎಂದಿಗೂ ಮರೆಯಲಾಗದ್ದು. ಪ್ರತಿಯೊಂದು ಹೊರಗಿನ ಕೆಲಸವೂ ಮನೆಯ ಒಳ ಹೊಕ್ಕು ನಿತ್ಯದ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿರುವುದು ಗೊತ್ತೇ ಇದೆ. ಮನೆಯೇ ಕಚೇರಿಯಾಗಿದೆ (Work from home). ಮನೆಯೇ ಶಾಲೆಯಾಗಿದೆ. ಓಡಾಡಿ ಅಡ್ಡಾಡಿ ಮಾಡುವ ಕೆಲಸ ಕುರ್ಚಿಯಲ್ಲೇ ಕೂತು ಮಾಡಿಬಿಡುವಷ್ಟು ಬದಲಾಗಿಬಿಟ್ಟಿದೆ. ಇವೆಲ್ಲವೂ ದೈಹಿಕವಾಗಿಯೂ ಬೀರಿರುವ ಪರಿಣಾಮ ದೊಡ್ಡದು. ದಿನನಿತ್ಯ ನಮ್ಮ ಮಾಂಸಖಂಡಗಳಿಗೆ (muscle health) ದೊರೆಯುತ್ತಿದ್ದ ವ್ಯಾಯಾಮವು (exercise) ಕಡಿಮೆಯಾಗಿ, ಗಂಟೆಗಳ ಕಾಲ ಕೂತೇ ಇರುವುದರಿಂದ ದೇಹ ಹಲವಾರು ಬದಲಾವಣೆಗಳನ್ನು ಕಂಡಿದೆ. ಹಲವರು, ಸ್ನಾಯುಸೆಳೆತ, ಬೆನ್ನುನೋವು, ಸೊಂಟನೋವು ಮತ್ತಿತರ ತೊಂದರೆಗಳೆಗೆ (Muscle problems) ಸಿಲುಕಿಕೊಂಡಿದ್ದಾರೆ. ಇಂತಹ ತೊಂದರೆಗಳನ್ನು ನಾವು ಶೀಘ್ರದಲ್ಲೇ ದೂರ ಮಾಡದಿದ್ದರೆ ದೀರ್ಘಕಾಲಿಕ ತೊಂದರೆಗಳಿಂದ ಬಳಲುವ ಸಾಧ್ಯತೆಗಳೂ ಇದೆ. ಹಾಗಾಗಿ, ಇಂತಹ ತೊಂದರೆಗಳನ್ನು ಕಡಿಮೆ ಮಾಡುವ (Muscle relief) ಸರಳೋಪಾಯಗಳನ್ನು ಇಲ್ಲಿ ನೋಡೋಣ.
1. ಬಹಳಷ್ಟು ಜನರು ಮಾಡುವ ತಪ್ಪೆಂದರೆ, ಇಂತಹ ತೊಂದರೆಗಳು ಕಾಣಿಸಿಕೊಂಡ ತಕ್ಷಣ ನೇರವಾಗಿ ಕ್ಲಿಷ್ಟಕರ ಆಸನಗಳಿಗೋ, ವ್ಯಾಯಾಮಕ್ಕೋ ನೇರವಾಗಿ ಧುಮುಕಿಬಿಡುವುದು. ಇದರಿಂದ ಇಂಥ ನೋವು, ತೊಂದರೆಗಳು ಮೊದಲ ಮೂರ್ನಾಲ್ಕು ದಿನಗಳ ಕಾಲ ಉಲ್ಬಣಗೊಳ್ಳುತ್ತದೆ. ಸರಿಯಾಗಿ ವಾರ್ಮ್ ಅಪ್ ಮಾಡಿಕೊಳ್ಳದೇ ನೇರವಾಗಿ ಕಠಿಣ ವ್ಯಾಯಾಮಕ್ಕೆ ಧುಮುಕುವುದರಿಂದ ಮಾಂಸಖಂಡಗಳ ಜೀವಕೋಶಗಳು ಹರಿದುಹೋಗುವ ಸಂಭವವೂ ಇರುತ್ತದೆ. ಅದಕ್ಕಾಗಿಯೇ, ಯಾವಾಗಲೂ ೫ರಿಂದ ೧೦ ನಿಮಿಷಗಳ ವಾರ್ಮ್ ಅಪ್ ಅಭ್ಯಾಸ ಮಾಡಿಕೊಳ್ಳಿ. ಇದು ಅನವಶ್ಯಕ ತೊಂದರೆಗಳಿಗೆ ಸಿಲುಕುವುದನ್ನು ತಡೆಯುತ್ತದೆ.
2. ವ್ಯಾಯಾಮವೆಂಬುದು ನಿಮಗೆ ಯಾತನಾದಾಯಕವಾಗಿದ್ದರೆ ಮಾಡಬೇಡಿ. ನಿಧಾನವಾಗಿ ಒಂದೊಂದಾಗಿ ಹೆಚ್ಚಿಸುತ್ತಾ ಅಭ್ಯಾಸಕ್ಕೆ ತನ್ನಿ. ಸರಿಯಾಗಿ ಹೇಗೆ ಮಾಡಬೇಕೆಂದು ತಿಳಿದುಕೊಂಡು ಮಾಡಿ, ತಪ್ಪು ವ್ಯಾಯಾಮಗಳಿಂದ ಉಪಯೋಗಕ್ಕಿಂತ ತೊಂದರೆಗಳೇ ಹೆಚ್ಚಿರುತ್ತದೆ. ಆರಂಭಿಕರು ನೀವಾಗಿದ್ದರೆ, ಆಗಾಗ ಬ್ರೇಕ್ ತೆಗೆದುಕೊಂಡು ನಿಧಾನವಾಗಿ ಮುಂದುವರಿಯಿರಿ.
3. ಎಲ್ಲಕ್ಕಿಂತ ಡಯಟ್ ನಿಮ್ಮ ಪ್ರಥಮ ಆದ್ಯತೆಯಾಗಿರಲಿ. ಪ್ರತಿನಿತ್ಯ ಕಡಿಮೆಯೆಂದರೂ ೭-೮ ಲೋಟ ನೀರನ್ನು ಕುಡಿಯಿರಿ. ಓಡುವುದು, ವ್ಯಾಯಾಮ ಇತ್ಯಾದಿಗಳು ನಿಮ್ಮ ದಿನಚರಿಯಲ್ಲಿದ್ದರೆ, ಇದಕ್ಕಿಂತ ಹೆಚ್ಚು ನೀರು ನೀವು ಕುಡಿಯಲೇಬೇಕು.
4. ನೀವು ಆಹಾರದ ಮೂಲಕ ತೆಗೆದುಕೊಳ್ಳುವ ಪೊಟೀನ್, ಕಾರ್ಬೋಹೈಡ್ರೇಟ್ ಪ್ರಮಾಣ ಮುಖ್ಯವಾಗಿ ಗಮನಿಸುತ್ತಿರಬೇಕು. ಮೀನು, ಮಾಂಸ, ಮೊಟ್ಟೆ, ಬಾದಾಮಿ, ಹಾಲು, ಬೇಳೆಕಾಳುಗಳು ಇವೆಲ್ಲವೂ ಪ್ರೊಟೀನ್ ಮೂಲಗಳಾಗಿದ್ದು, ಇವು ಮಾಂಸಖಂಡಗಳ ಬಲವರ್ಧನೆಗೆ, ತೊಂದರೆಗೊಳಗಾದ ಜೀವಕೋಶಗಳನ್ನು ಮತ್ತೆ ಜೋಡಿಸುವಲ್ಲಿ, ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು ಮಾಂಸಖಂಡಗಳನ್ನು ಮತ್ತೆ ಆರೋಗ್ಯವಾಗಿರಿಸುವಲ್ಲಿ ಸಹಾಯ ಮಾಡುವುದಲ್ಲದೆ ಶಕ್ತಿಯನ್ನೂ ನೀಡುತ್ತವೆ. ಧಾನ್ಯಗಳೇ ಇವುಗಳ ಮೂಲಗಳು.
5. ಸ್ನಾಯುಗಳಲ್ಲಿ, ಮಾಂಸಖಂಡಗಳಲ್ಲಿ ಸೆಳೆತ, ನೋವು ಇದ್ದಲ್ಲಿ, ನೋವು ನಿವಾರಕ ತೈಲಗಳಿಂದ ಮಸಾಜ್ ಮಾಡಿಕೊಳ್ಳಿ. ಆಯುರ್ವೇದ ತೈಲಗಳಾದ ಮಹಾ ನಾರಾಯಣ ತೈಲ, ವಿಷಗರ್ಭ ತೈಲ, ಕರ್ಪೂರ ಮತ್ತಿತರ ನೈಸರ್ಗಿಕ ಮೂಲದ ಔಷಧಿಗಳಿಂದ ಪರಿಹಾರೋಪಾಯಗಳನ್ನು ಕಂಡುಕೊಳ್ಳಿ. ಹೆಚ್ಚು ನೋವಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಬಿಸಿ ಹಬೆಯ ಚಿಕಿತ್ಸೆಯಿಂದಲೂ ನೋವು ಕಡಿಮೆ ಮಾಡಿಕೊಳ್ಳಬಹುದು.
6. ಸ್ನಾಯುಸೆಳೆತ, ಮಾಂಸಖಂಡಗಳ ನೋವಿನ ಸಂದರ್ಭಗಳಲ್ಲಿ ಬಿಸಿ ನೀರಿನ ಸ್ನಾನ ರಿಲ್ಯಾಕ್ಸ್ ಮಾಡಿಸುತ್ತದೆ. ಎಪ್ಸಂ ಸಾಲ್ಟ್, ಲ್ಯಾಂವೆಂಡರ್ ತೈಲ ಅಥವಾ ಗುಲಾಬಿ ತೈಲಗಳನ್ನು ಬೆಚ್ಚಗಿನ ನೀರಿಗೆ ಸೇರಿಸಿ, ಸ್ನಾನ ಮಾಡುವುದರಿಂದ ಕಾಲುಗಳನ್ನು 15-20 ನಿಮಿಷಗಳ ಕಾಲ ಮುಳುಗಿಸಿಟ್ಟುಕೊಳ್ಳುವುದರಿಂದ ನೋವಿಗೆ ತಾತ್ಕಾಲಿಕ ಶಮನ ದೊರಕಿ ನಿರಾಳವಾಗುತ್ತದೆ.
ಇದನ್ನೂ ಓದಿ: How To Make Time For Exercise In Your Busy Schedule: ವ್ಯಾಯಾಮ ಮಾಡುವಷ್ಟು ಸಮಯವೇ ಸಿಗುತ್ತಿಲ್ಲವೇ? ಹೀಗೆ ಮಾಡಿ