ಅಣಬೆ (Mushroom Benefits) ಇಂದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಸಿಗುತ್ತದೆ. ಈಗ ಮಳೆಗಾಲಕ್ಕೇ ಅಂತ ಕಾಯಬೇಕಾದ ಅಗತ್ಯವಿಲ್ಲ. ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್, ಸಲಾಡ್, ಸ್ಟರ್ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಿದ್ದರೆ ತೂಕ ಇಳಿಸುವವರಿಗೆ ಸಹಾಯವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ, ಝಿಂಕ್‌ಗಳುದೇಹದ ಹಲವು ಮುಖ್ಯ ಕೆಲಸಗಳಿಗೆ ಬೇಕೇ ಬೇಕಾಗುವ ಪೋಷಕಾಂಶಗಳು. ಎಲುಬಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಲು ಅಣಬೆ ಉತ್ತಮ ಆಹಾರ. ಬನ್ನಿ, ಅಣಬೆಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭಗಳಿವೆ ಎಂಬುದನ್ನು ವಿವರವಾಗಿ ನೋಡೋಣ.
ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ
ಅಣಬೆಯಲ್ಲಿ ಪ್ರೊಟೀನ್ ಕೂಡಾ ಹೇರಳವಾಗಿದೆ. ಆದರೆ, ಕೊಲೆಸ್ಟೆರಾಲ್ ಅಥವಾ ಕೊಬ್ಬು ಬಹಳ ಕಡಿಮೆ ಇದೆ. ಇದರಲ್ಲಿರುವ ನಾರಿನಂಶ ಹಾಗೂ ಕೊಬ್ಬು ಕೊಲೆಸ್ಟೆರಾಲ್ ಅನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.
ಮೂಳೆಗಳನ್ನು ಗಟ್ಟಿಗೊಳಿಸುತ್ತದೆ
ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ನಮ್ಮ ಎಲುಬನ್ನು ಸದೃಢಗೊಳಿಸಲು ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಅಣಬೆಯನ್ನು ಆಗಾಗ ಸೇವಿಸುವುದರಿಂದ ಮೂಳೆ ಸವೆತ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು, ಮೂಳೆ ಮುರಿತ, ಬಲಹೀನತೆಯಂಥ ಸಮಸ್ಯೆಗಳು ಹತ್ತಿರ ಸುಳಿಯದು.
ರೋಗ ನಿರೋಧಕತೆ ಹೆಚ್ಚಿಸುತ್ತದೆ
ಅಣಬೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾಗಾಗಿ ಇದು ದೇಹವನ್ನು ಪ್ರೀ ರ್ಯಾಡಿಕಲ್ಸ್‌ಗಳಿಂದ ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಲವು ಇನ್‌ಫೆಕ್ಷನ್‌ಗಳನ್ನು ದೂರ ಓಡಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಎಲ್ಲವೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವಲ್ಲಿ ನೆರವಾಗುತ್ತದೆ.
ಮಧುಮೇಹಿಗಳಿಗೂ ಒಳ್ಳೆಯದು
ಅಣಬೆಯಲ್ಲಿ ಕ್ರೋಮಿಯಂ ಹೇರಳವಾಗಿದ್ದು, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಇಳಿಸುವಲ್ಲಿ ನೆರವಾಗುತ್ತದೆ. ಅಣಬೆಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬು ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದನ್ನೇ ಮಾಡುತ್ತದೆ.
ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?
ತೂಕ ಇಳಿಸುತ್ತದೆ
ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕಾರ್ಬೋಹೈಡ್ರೇಟ್ ಕಡಿಮೆಯಿದ್ದು, ಕೊಬ್ಬು ಇಲ್ಲೇ ಇಲ್ಲ ಎನ್ನಬಹುದು. ಉಳಿದಂತೆ, ಪ್ರೊಟೀನ್ ಸೇರಿದಂತೆ ಎಲ್ಲ ಪೋಷಕಾಂಶಗಳೂ ಹೆಚ್ಚಿರುವುದರಿಂದ ಇದು ತೂಕ ಹೇಳಿಕೆಗೆ ಹೇಳಿ ಮಾಡಿಸಿದಂಥ ಆಹಾರ.
ಎಲ್ಲರೂ ಅಣಬೆಯನ್ನು ಇಷ್ಟಪಡಲಾರರು. ಆದರೆ, ಆರೋಗ್ಯದ ದೃಷ್ಠಿಯಿಂದ ಅಣಬೆ ಸಂಪೂರ್ಣ ಆಹಾರ. ಕೆಲವು ಅಣಬೆಗಳು ವಿಷಕಾರಿ ಕೂಡಾ. ಮಳೆಗಾಲದಲ್ಲಿ ಬೆಳೆಯುವ ಅಣಬೆಗಳನ್ನು ಸಂಗ್ರಹಿಸಿ ಅಡುಗೆ ಮಾಡುವ ಮುನ್ನ ಅಣಬೆಗಳ ಬಗ್ಗೆ ಸಾಕಷ್ಟು ಜ್ಞಾನ ಇರಬೇಕು. ಇಲ್ಲವಾದರೆ, ವಿಷಕಾಋ ಅಣಬೆಗಳನ್ನು ಸೇವಿಸುವ ಅಪಾಯ ಇದೆ. ಆದರೆ, ಮಾರುಕಟ್ಟೆಯಲ್ಲಿ ಸದಾ ಲಭ್ಯವಿರುವ ಅಣಬೆಗಳಲ್ಲಿ ಈ ಭಯವಿಲ್ಲ. ಆರಾಮವಾಗಿ ಅಡುಗೆ ಮಾಡಿ ತಿನ್ನಬಹುದು.