Site icon Vistara News

ಯುವಪೀಳಿಗೆಯಲ್ಲಿ ಟ್ರೆಂಡ್‌ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ

vegan diet

ಭಾರತೀಯರ ಆಹಾರ ಪದ್ಧತಿ ನಿಧಾನವಾಗಿ ವಿಶ್ವದ ಹಲವು ಆಹಾರ ಪದ್ಧತಿಗಳ ಸಾಧ್ಯತೆಗಳಿಗೆ ತೆರೆದುಕೊಂಡು ಬದಲಾವಣೆಯೆಡೆಗೆ ಮುನ್ನುಗ್ಗುತ್ತಿದೆ. ಇಂಥ ಬದಲಾವಣೆಗಳಲ್ಲಿ ಸದ್ಯ ಯುವಜನತೆಯಲ್ಲಿ ಟ್ರೆಂಡ್‌ನಲ್ಲಿರುವ ಆಹಾರ ಪದ್ಧತಿಯೆಂದರೆ ವೇಗನ್!‌ ಪ್ರಾಣಿಜನ್ಯ ಮೂಲಗಳ ಎಲ್ಲ ಆಹಾರಗಳಿಗೆ ನೋ ಹೇಳುವ ಈ ಹೊಸ ಆಹಾರ ಸಂಸ್ಕೃತಿಯಲ್ಲಿ ಡೈರಿ ಉತ್ಪನ್ನಗಳಿಗೂ ಪ್ರವೇಶವಿಲ್ಲ. ಆರೋಗ್ಯಕರ ಆಹಾರ ಪದ್ಧತಿ ಎನ್ನುವ ಈ ವೇಗನಿಸಂ ಡೈರಿ ಉತ್ಪನ್ನಗಳಿಗೆ ಬದಲಾಗಿ ಪರ್ಯಾಯ ಸಸ್ಯಮೂಲಗಳನ್ನೇ ಬಳಸುವುದು ಪದ್ಧತಿ. ಪ್ರಾಣಿಜನ್ಯ ಆಹಾರ ಮೂಲಗಳು ಈ ಪರಿಸರಕ್ಕೆ ಮಾರಕ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಈ ಆಹಾರ ಪದ್ಧತಿಯನ್ನು ಬೆಂಬಲಿಸುವವರ ನಂಬಿಕೆ. ಮಧುಮೇಹ, ಹಲವು ವಿಧದ ಕ್ಯಾನ್ಸರ್‌, ಹೃದಯ ಸಂಬಂಧೀ ಸಮಸ್ಯೆಗಳು ಎಲ್ಲವಕ್ಕೂ ನಾವು ತಿನ್ನುವ ಪ್ರಾಣಿಜನ್ಯ ಆಹಾರಕ್ರಮವೇ ಕಾರಣ ಎಂಬ ವಾದ ವೇಗನ್‌ಗಳದ್ದು. ಆದರೂ ವೇಗನ್‌ ಆಹಾರ ಪದ್ಧತಿ ಕೊಂಚ ಕಷ್ಟದ್ದು, ಇದರ ಪಾಲನೆ ಸಾಮಾನ್ಯರಿಗಲ್ಲ, ಕೇವಲ ಸಸ್ಯಾಹಾರದ ಹಾಗೆ ಸುಲಭವಾಗಿ ಇದನ್ನು ಪಾಲಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಬಹುತೇಕರಿಗಿದೆ. ಹಾಗಾದರೆ, ವೇಗನ್‌ ಆಹಾರ ಕ್ರಮದ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳ ಬಗೆಗೆ ನೋಡೋಣ.

೧. ವೇಗನ್‌ ಆಹಾರ ಕ್ರಮ ದುಬಾರಿ ಹಾಗೂ ಕಠಿಣ ಡಯಟ್ ಎಂಬ ಭ್ರಮೆ ಸಾಮಾನ್ಯ. ಇದು ಶ್ರೀಮಂತರಿಗಷ್ಟೇ ಇರುವ ಆಹಾರಕ್ರಮ. ಈ ಆಹಾರ ಕ್ರಮದ ಪಾಲನೆ ಮಧ್ಯಮ ವರ್ಗಕ್ಕೆ ಎಟಕುವಂತದ್ದಲ್ಲ ಎಂಬ ನಂಬಿಕೆ ಸಮಾಜದಲ್ಲಿದೆ. ಆದರೆ, ಇದು ಹಾಗಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ಪಾಲನೆ ಸಾಧ್ಯವಿದೆ. ಸುಲಭವಾಗಿ ಸಿಗುವ ಪ್ರಾಣಿಜನ್ಯ ಆಹಾರಗಳಿಗಿಂತಲೂ ಕಡಿಮೆ ದರದಲ್ಲಿ ಲಭ್ಯವಿರುವ ಆಹಾರಗಳೂ ಇವೆ. ಸ್ವಲ್ಪ ಈ ಬಗ್ಗೆ ಆಸಕ್ತಿ ತೋರಿದರೆ ದಾರಿ ಕಾಣುತ್ತದೆ.‌ ಜೊತೆಗೆ ಕಠಿಣ ಡಯಟ್‌ ಕೂಡಾ ಅಲ್ಲ. ಈಗಾಗಲೇ ಸಸ್ಯಾಹಾರಿಗಳಾಗಿರುವ ಮಂದಿಗೆ ವೇಗನ್‌ ಡಯಟ್‌ ಭಾರೀ ಬದಲಾವಣೆಯೇನಲ್ಲ.

ಇದನ್ನೂ ಓದಿ | Vegetarian Meat: ಆಹಾರ ಸಂಸ್ಕೃತಿಯಲ್ಲೊಂದು ಹೊಸ ಟ್ರೆಂಡ್‌!

೨. ವೇಗನ್‌ ಆಹಾರದಲ್ಲಿ ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ಸಿಕ್ಕುವುದಿಲ್ಲ ಎಂಬ ತಪ್ಪು ತಿಳುವಳಿಕೆ ಬಹಳಷ್ಟು ಜನರಲ್ಲಿದೆ. ದೇಹಕ್ಕೆ ಅಗತ್ಯವಾಗಿ ಪ್ರತಿದಿನ ಬೇಕಾಗುವ, ಹಾಗೂ ದೇಹವನ್ನು ವ್ಯಾಯಾಮ ಮಾಡಿ ಹುರಿಗೊಳಿಸುವ ಹೊತ್ತಿನಲ್ಲಿ ತಿನ್ನಲೇಬೇಕಾದ ಪ್ರೋಟೀನು ಪ್ರಾಣಿಜನ್ಯವಷ್ಟೇ ಸಾಧ್ಯ ಎಂಬ ನಂಬಿಕೆ ಹಲವರದ್ದು. ಆದರೆ, ಬ್ರೊಕೋಲಿ, ಬಸಳೆ, ಪಾಲಕ್‌, ಓಟ್ಸ್‌, ಬೀಜಗಳು, ಟೋಫು ಹಾಗೂ ಹಲವು ದ್ವಿದಳ ಧಾನ್ಯಗಳ ಮೂಲಕ ಪ್ರತಿದಿನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು.

೩. ಡೈರಿ ಉತ್ಪನ್ನಗಳಿಗೆ ಸರಿಸಮನಾದ ಆಹಾರ ವೇಗನ್‌ನಲ್ಲಿ ಸಿಗುವುದಿಲ್ಲ ಎಂಬ ಭ್ರಮೆ ವೇಗನ್‌ ಬಗೆಗಿದೆ. ಹೀಗಾಗಿ, ವೇಗನ್‌ ಆಹಾರ ಕ್ರಮ ಪಾಲನೆಗೆ ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಮೂಳೆಗೆ ಬೇಕಾದ ಕ್ಯಾಲ್ಶಿಯಂ ಹಾಲಿನಲ್ಲಷ್ಟೆ ಸಿಗುತ್ತದೆ ಎಂಬ ನಂಬಿಕೆಯಷ್ಟೇ ಇದರ ಮೂಲ. ಆದರೆ, ಕೇವಲ ಎಲುಬಿಗಷ್ಟೆ ಅಲ್ಲ, ದೇಹದ ಮಾಂಸಖಂಡಗಳ ಬಲವರ್ಧನೆಗೆ, ರಕ್ತ ಹೆಪ್ಪುಗಟ್ಟಲು, ರಕ್ತದೊತ್ತಡ ಸಮತೋಲನದಲ್ಲಿರಲು, ಹಾಗೂ ನರಮಂಡಲಕ್ಕೆ ಸಂದೇಶ ರವಾನೆ ಮಾಡುವುದು ಎಲ್ಲವೂ ಸರಿಯಾಗಿ ಸಮತೂಕದಲ್ಲಿ ನಡೆಯುತ್ತಲೇ ಇರಬೇಕಾದರೆ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರಬೇಕು. ‌

ಇದನ್ನೂ ಓದಿ | Health Tips | ಮೆದುಳಿಗೆ ಮರೆವು ಆವರಿಸದಿರಲು ಬೇಕು ವಿಟಮಿನ್‌ ಬಿ12

ಅದಕ್ಕೆ ಹಾಲು ಸುಲಭವಾಗಿ ಸಿಗುವ ಪ್ರತಿನಿತ್ಯದ ಆಹಾರವಾದರೂ, ವೇಗನ್‌ನಲ್ಲೂ ಕ್ಯಾಲ್ಶಿಯಂಗೆ ಬೇರೆ ಪರ್ಯಾಯ ಆಯ್ಕೆಗಳಿವೆ. ಸೋಯಾ ಉತ್ಪನ್ನಗಳು, ಬೀನ್ಸ್‌, ಚಿಯಾ ಸೀಡ್ಸ್‌, ಬಟಾಣಿ, ಎಳ್ಳು, ಬಾದಾಮಿ, ಅಂಜೂರ, ಪಾಲಕ್‌, ಬಸಳೆಯಂತಹ ಹಲವು ವೇಗನ್‌ ಆಹಾರಗಳಲ್ಲಿ ಉತ್ತಮ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಈಗ ಡೈರಿ ಹಾಲಿಗೆ ಬದಲಾಗಿ ಹಲವು ಬಗೆಯ ಪರ್ಯಾಯ ವೇಗನ್‌ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇತ್ತೀಚೆಗೆ ವೇಗನ್‌ ಸಂಪ್ರದಾಯ ನಗರಗಳಲ್ಲಿ ಹೆಚ್ಚುತ್ತಿರುವುದರಿಂದ ವೇಗನ್‌ ಹೆಸರಿನ ರೆಸ್ಟೋರೆಂಟ್‌ಗಳು, ಆಹಾರ ಮಳಿಗೆಗಳೂ ಆರಂಭವಾಗಿವೆ. ಹಾಗಾಗಿ ಈ ಆಹಾರ ಕ್ರಮವನ್ನು ಪಾಲಿಸಲು ಬಯಸುವವರಿಗೆ ಮಾರ್ಗ ಸಾಕಷ್ಟು ಸುಲಭವೇ ಆಗಿದೆ.

Exit mobile version