ವೈದ್ಯರನ್ನು ನಾರಾಯಣನೆಂದು ಕರೆಯುವ ವಾಡಿಕೆಯಿದೆ ಭಾರತದಲ್ಲಿ. ಹಾಗೆಲ್ಲ ದೇವರೆಂದು ಪೂಜಿಸುವ ವೃತ್ತಿಯಲ್ಲಿರುವವರಿಗೂ ʻಸಾಕಪ್ಪಾʼ ಎನಿಸುವಂತೆ ವೈದ್ಯರ ಮೇಲಿನ ದಾಳಿಗಳು, ನೀಟ್ ಪರೀಕ್ಷೆಗಳ ಅವಾಂತರ ಮುಂತಾದವು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿವೆ. ಅವುಗಳ ನಡುವೆಯೇ, ಈ ಗುಣ ಪಡಿಸುವ ಕೈಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಬಂದಿದೆ. ಇಂದು ರಾಷ್ಟ್ರೀಯ ವೈದ್ಯರ ದಿನ (National Doctor’s Day).
ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಈ ದಿನವನ್ನು ಮೀಸಲಿಡಲಾಗಿದೆ. ಇದೊಂದೇ ದಿನ ಸಾಕು ಎನ್ನುವ ಅರ್ಥದಲ್ಲಿ ಅಲ್ಲ, ಆದರೆ ಇಂದಾದರೂ ನೆನಪಿನಿಂದ ನಿಂನಿಮ್ಮ ವೈದ್ಯರಿಗೆ ಸಣ್ಣದೊಂದು ʻಥ್ಯಾಂಕ್ಸ್ʼ ಹೇಳಲು, ಅವರ ಕಾಳಜಿಯ ಕುರಿತಾಗಿ ಕೃತಜ್ಞತೆ ಸಲ್ಲಿಸಲು ಮರೆಯದಿರಿ ಎನ್ನುವ ಉದ್ದೇಶ ಇದರ ಹಿಂದಿದೆ.
ಇಂದೇ ಏಕೆ?
ಜುಲೈ ಮೊದಲ ದಿನವೇ ವೈದ್ಯರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ರೋಗಿಗಳ ನೋವನ್ನು ಶಮನ ಮಾಡುವ, ಗುಣಪಡಿಸುವ ಮತ್ತು ಬದುಕನ್ನು ಸಹನೀಯಗೊಳಿಸುವ ವೈದ್ಯರಿಗೆ ಇಂದೇ ಕೃತಜ್ಞತೆ ಸಲ್ಲಿಸುವುದಕ್ಕೆ ಕಾರಣಗಳಿವೆ. ಡಾ. ಬಿಪಿನ್ ಚಂದ್ರ ರಾಯ್ ಅವರ ಸಂಸ್ಮರಣಾರ್ಥವಾಗಿ ಭಾರತ ಸರಕಾರ ಈ ದಿನವನ್ನು ವೈದ್ಯರ ದಿನವೆಂದು 1991ರಲ್ಲಿ ಘೋಷಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಪಿನ್ ಚಂದ್ರ ರಾಯ್, ಖ್ಯಾತ ವೈದ್ಯರು ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದರು.
ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!
ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿ, ವೈದ್ಯಕೀಯ ಕ್ಷೇತ್ರಕ್ಕೆ ಸಾಂಸ್ಥಿಕ ಬಲವನ್ನು ನೀಡುವಲ್ಲಿ ಡಾ. ರಾಯ್ ಪ್ರಮುಖರಾಗಿದ್ದರು. ತಾವೇ ಸ್ವತಃ ಒಳ್ಳೆಯ ವೈದ್ಯರಾಗಿ, ಬಹಳಷ್ಟು ಜೀವಗಳನ್ನು ಉಳಿಸಿದ್ದರು. ಸ್ವಾತಂತ್ರ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ, ಭಾರತದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಆರೋಗ್ಯಕ್ಷೇತ್ರ ಮತ್ತು ನಾಗರಿಕ ಆರೋಗ್ಯ ವಲಯದಲ್ಲಿ ವೃತ್ತಿಪರತೆ ಮತ್ತು ಮಾನವೀಯತೆಯ ಉನ್ನತ ಆದರ್ಶಗಳನ್ನು ಸೃಷ್ಟಿಸಿರುವ ಸಾವಿರಾರು ವೈದ್ಯರು ನಮ್ಮ ಕಣ್ಣೆದುರಿಗಿದ್ದಾರೆ. ನೂರೆಂಟು ಸವಾಲುಗಳ ನಡುವೆ, ಜೀವ ಉಳಿಸುವ ಕೈಂಕರ್ಯದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು, ಅದರಲ್ಲೇ ತೃಪ್ತಿಯನ್ನು ಕಂಡವರ ಕತೆಗಳನ್ನು, ದೃಷ್ಟಾಂತಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲೇ ಜೀವ ಒತ್ತಡ ಇಟ್ಟು ಹಗಲಿರುಳು ದುಡಿದ ವೈದ್ಯರು ಜಗತ್ತಿನ ಉದ್ದಗಲಕ್ಕೆ ಕಾಣಸಿಗುತ್ತಾರೆ. ಸಮಾಜಕ್ಕೆ ಈ ವೃತ್ತಿ ನೀಡುತ್ತಿರುವ ಕೊಡುಗೆಗೆ ಧನ್ಯವಾದ ಹೇಳುವುದೂ ಅಗತ್ಯವಲ್ಲವೇ? ಈ ವರ್ಷದ ಘೋಷವಾಕ್ಯ: ಗುಣಪಡಿಸುವ ಕೈಗಳು, ಕಾಳಜಿಯ ಹೃದಯಗಳು.