Site icon Vistara News

National Nutrition Week 2023: ಸಿರಿಧಾನ್ಯ ಸೇವನೆಯಿಂದ ಎಷ್ಟೊಂದು ಪ್ರಯೋಜನ! ಸೈಡ್‌ ಎಫೆಕ್ಟ್‌ ಇದೆಯಾ?

Millet Benefits

ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ, ದಕ್ಷಿಣ ಭಾಗದಲ್ಲಿ ಅಕ್ಕಿ ಬಳಕೆ ಹೆಚ್ಚಿದ್ದರೆ, ಇನ್ನುಳಿದ ಭಾಗಗಳಲ್ಲಿ ರಾಗಿಯದ್ದೇ ಪ್ರಾಬಲ್ಯ. ಇತ್ತೀಚಿನ ದಿನಗಳಲ್ಲಿ ಈ ರಾಗಿ ಬಳಕೆ ಪೂರ್ತಿ ಕರ್ನಾಟಕಕ್ಕೆ ಹಬ್ಬಿದೆ. ರಾಗಿ, ಜೋಳದಂತಹ ಸಿರಿಧಾನ್ಯಗಳ ಬಳಕೆ ಮನುಷ್ಯರ ಆರೋಗ್ಯಕ್ಕೆ ಒಂದು ರೀತಿಯಲ್ಲಿ ಅಮೃತವೆನ್ನಬಹುದು. ಅನೇಕ ರೀತಿಯ ಪ್ರಯೋಜನಗಳನ್ನು ಹೊತ್ತು ತರುವ ಈ ಸಿರಿಧಾನ್ಯಗಳಿಂದ (National Nutrition Week 2023) ಮನುಷ್ಯನ ಆರೋಗ್ಯದ ಮೇಲಾಗುವ ಎಲ್ಲ ಪರಿಣಾಮಗಳನ್ನು ಅರಿಯೋಣ (Millet Benefits and Side Effects) ಬನ್ನಿ.

ಸಿರಿಧಾನ್ಯಗಳನ್ನು ಪ್ರಪಂಚದಾದ್ಯಂತ ಏಕದಳ ಬೆಳೆಯಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಯಜುರ್ವೇದ ಗ್ರಂಥದಲ್ಲಿಯೂ ಸಿರಿಧಾನ್ಯಗಳ ಉಲ್ಲೇಖವಿದೆ. ಇದು ಭಾರತದಲ್ಲಿ ಎಷ್ಟೊಂದು ವರ್ಷಗಳ ಹಿಂದೆಯೇ ಸಿರಿಧಾನ್ಯಗಳ ಬಳಕೆಯಿತು ಎನ್ನುವುದನ್ನು ತೋರಿಸುತ್ತದೆ. ಪ್ರತಿ 100 ಗ್ರಾಂ ಸಿರಿಧಾನ್ಯಗಳಲ್ಲಿ 378 ಕ್ಯಾಲೋರಿ ಶಕ್ತಿ, 4.2 ಗ್ರಾಂ ಕೊಬ್ಬು ಇರುತ್ತದೆ. ಹಾಗೆಯೇ ಕಾರ್ಬೋಹೈಡ್ರೇಟ್ ಅಂಶ 73 ಗ್ರಾಂ, ಆಹಾರದ ಫೈಬರ್ 8.5 ಗ್ರಾಂ, ಪ್ರೋಟೀನ್ ಅಂಶ 11 ಗ್ರಾಂ, ಫೋಲೇಟ್ 85 ಎಂಸಿಜಿ, ನಿಯಾಸಿನ್ 4.720 ಮಿಗ್ರಾಂ, ಪ್ಯಾಂಟೊಥೆನಿಕ್ ಆಮ್ಲ 0.848 ಮಿಗ್ರಾಂ, ರೈಬೋಫ್ಲಾವಿನ್ 0.290 ಮಿಗ್ರಾಂ, ಥಯಾಮಿನ್ 0.421 ಮಿಗ್ರಾಂ, ವಿಟಮಿನ್ ಬಿ6 0.384 ಮಿಗ್ರಾಂ, ವಿಟಮಿನ್ ಇ 0.05 ಮಿಗ್ರಾಂ, ಟೊಕೊಫೆರಾಲ್ ಆಲ್ಫಾ 0.05 ಮಿಗ್ರಾಂ, ವಿಟಮಿನ್ ಕೆ 0.9 ಎಂಸಿಜಿ ಇರುತ್ತದೆ. ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿರುವ ಸಿರಿಧಾನ್ಯಗಳೆಂದರೆ ಅವು ರಾಗಿ ಮತ್ತು ಮುಸುಕಿನ ಜೋಳ. ಅವುಗಳ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ.

ಸಿರಿಧಾನ್ಯಗಳ ಪ್ರಯೋಜನಗಳು…

ಹೃದಯ ರೋಗಕ್ಕೆ:

ರಾಗಿ ಮತ್ತು ಜೋಳದ ಸೇವನೆಯು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ರಕ್ತದ ಪ್ಲೇಟ್‌ಲೆಟ್‌ ಗಟ್ಟಿಯಾಗುವುದು ತಡೆಯುತ್ತದೆ ಮತ್ತು ರಕ್ತ ತೆಳುವಾಗಿರುವುದಕ್ಕೆ ಸಹಾಯಕಾರಿಯಾಗುತ್ತದೆ. ಹಾಗಾಗಿ ಮನುಷ್ಯರಲ್ಲಿ ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಹಾಗೆಯೇ ಪಾಶ್ವವಾಯು ಸಾಧ್ಯತೆ ಕಡಿಮೆಯಾಗುತ್ತದೆ.

ತೂಕ ಇಳಿಕೆ:

ಸಿರಿಧಾನ್ಯಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ. ಈ ಆಮ್ಲ ಹಸಿವನ್ನು ಕಡಿಮೆ ಮಾಡಿ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ರಾಗಿ ನಿಧಾನವಾಗಿ ಜೀರ್ಣವಾಗುವುದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿರುತ್ತದೆ. ಹಾಗೆಯೇ ರಾಗಿಯಲ್ಲಿ ನೀರಿನಾಂಶ ಜಾಸ್ತಿ ಇರುವುದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಅದರಿಂದ ನೀವು ಹೆಚ್ಚು ಆಹಾರ ಸೇವನೆ ಮಾಡುವುದು ತಪ್ಪಿದಂತಾಗುತ್ತದೆ. ಇದರಿಂದಾಗಿ ತೂಕ ಕಡಿಮೆಯಾಗುವುದಕ್ಕೆ ಸಹಕಾರಿಯಾಗುತ್ತದೆ. ಹಲವಾರು ರೀತಿಯ ರಾಗಿಗಳಿದ್ದು, ನೀವು ಅದರಿಂದ ವಿವಿಧ ರೀತಿಯ ಖಾದ್ಯ ಮಾಡಿಕೊಂಡು ತಿನ್ನಬಹುದು.

ಕರುಳಿನ ಕ್ಯಾನ್ಸರ್‌ ತಡೆ

ಫಾಕ್ಸ್‌ಟೈಲ್‌ ಸಿರಿಧಾನ್ಯದಲ್ಲಿ ಫೈಬರ್‌ ಜತೆ ಫೈಟೊನ್ಯೂಟ್ರಿಯೆಂಟ್‌ ಇರುತ್ತದೆ. ಇವೆರೆಡರ ಸಂಯೋಜನೆಯಿಂದ ಕರುಳಿನ ಕ್ಯಾನ್ಸರ್‌ ಅಪಾಯ ಕಡಿಮೆಯಾಗುತ್ತದೆ. ಸಿರಿಧಾನ್ಯಗಳಲ್ಲಿರುವ ಫೈಟೊನ್ಯೂಟ್ರಿಯೆಂಟ್ ಲಿಗ್ನಾನ್ ಅಂಶ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್‌ ಅನ್ನು ತಡೆಯುವುದಕ್ಕೂ ಸಹಾಯಕಾರಿ. ಸಿರಿಧಾನ್ಯ ಸೇವನೆಯು ಸ್ತನ ಕ್ಯಾನ್ಸರ್‌ ಸಾಧ್ಯತೆಯನ್ನು ಶೇ.10ರಷ್ಟು ಕಡಿಮೆ ಮಾಡುತ್ತದೆ.

ರಕ್ತದೊತ್ತಡ ಕಡಿಮೆ

ರಾಗಿಯಲ್ಲಿರುವ ಮೆಗ್ನೀಸಿಯಮ್ ಅಂಶವು ಹೃದಯದ ಅಪಧಮನಿಯ ಒಳಭಾಗದಲ್ಲಿರುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ರಾಗಿ ಆಸ್ತಮಾದ ತೀವ್ರತೆ ಮತ್ತು ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ.

ಸೆಲಿಯಾಕ್‌

ಸೆಲಿಯಾಕ್‌ ಎನ್ನುವ ಕಾಯಿಲೆ ಮನುಷ್ಯನ ಸಣ್ಣ ಕರುಳನ್ನು ಹಾನಿಗೊಳಿಸುತ್ತದೆ. ಅದರಿಂದಾಗಿ ಆಹಾರದಿಂದ ಪೋಷ್ಟಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಸಾಧಯವಾಗುವುದಿಲ್ಲ. ಈ ಕಾಯಿಲೆ ಇರುವವರು ಸಿರಿಧಾನ್ಯ ಸೇವನೆಯನ್ನು ಮಾಡಬಹುದು. ಸಿರಿಧಾನ್ಯ ಅಂಟಾಗಿರುವುದಿಲ್ಲವಾದ್ದರಿಂದ ನಿಮಗೆ ಸೆಲಿಯಾಕ್‌ ಸಮಸ್ಯೆಯೂ ಕಡಿಮೆಯಾಗುತ್ತದೆ.

ಮಧುಮೇಹ ನಿಯಂತ್ರಣ

ಪ್ರತಿನಿತ್ಯ ಸೇವಿಸುವ ಅನ್ನದಲ್ಲೂ ಸಕ್ಕರೆಯಾಂಶ ಇದ್ದೇ ಇರುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವೆಂದರೆ ಅದು ರಾಗಿ ಮತ್ತು ಜೋಳ. ಇವುಗಳಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನವಾಗುತ್ತದೆ ಮತ್ತು ಸಕ್ಕರೆ ಅಂಶವು ಸರಿಯಾದ ಅನುಪಾತದಲ್ಲಿ ಇರುತ್ತದೆ. ಟೈಪ್‌ 2 ಮಧುಮೇಹದಿಂದ ಬಳಲುತ್ತಿರುವವರು ಸಕ್ಕರೆ ಮಟ್ಟ ನಿಯಂತ್ರಿಸಲು ಸಿರಿಧಾನ್ಯ ಸೇವನೆ ಮಾಡುವುದು ಒಳ್ಳೆಯದು.

ಉತ್ಕರ್ಷಣ ನಿರೋಧಕ

ಸಿರಿಧಾನ್ಯ ಒಳ್ಳೆಯ ಉತ್ಕರ್ಷಣ ನಿರೋಧಕವೂ ಹೌದು. ಇದು ದೇಹದಲ್ಲಿರುವ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಸಿರಿಧಾನ್ಯ ಸೇವನೆಯಿಂದ ಬೇಘ ವಯಸ್ಸಾದಂತೆ ಕಾಣುವುದೂ ಇಲ್ಲ ಎನ್ನುವುದು ವಿಶೇಷ.

ಸ್ನಾಯುವಿನ ರಕ್ಷಣೆ

ಸಿರಿಧಾನ್ಯ ಹೆಚ್ಚು ಪ್ರೋಟೀನ್‌ ಮತ್ತು ಲೈಸಿನ್‌ ಹೊಂದಿರುತ್ತದೆ. ಇದರಲ್ಲಿ ಅಮೈನೋ ಆಮ್ಲ ಇರುತ್ತದೆ. ಇದರಿಂದ ನಿಮ್ಮ ಸ್ನಾಯುವಿನ ಅವನತಿ ನಿಧಾನವಾಗುತ್ತದೆ.

ನಿದ್ರೆಗೂ ಸಹಾಯಕ

ಸಿರಿಧಾನ್ಯಗಳಲ್ಲಿರುವ ಟ್ರಿಪ್ಟೊಫಾನ್ ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಒಂದು ಕಪ್ ರಾಗಿ ಗಂಜಿ ಕುಡಿಯುವುದರಿಂದ ಚಿಂತೆ ದೂರ ಮಾಡಿಕೊಂಡು ಅರಾಮವಾಗಿ ಮಲಗಬಹುದು.

ಮುಟ್ಟಿನ ನೋವಿಗೂ ಮದ್ದು

ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ನೋವು ಸಾಮಾನ್ಯ. ರಾಗಿ ಮತ್ತು ಮುಸುಕಿನ ಜೋಳದಲ್ಲಿ ಹೆಚ್ಚಿನ ಮೆಗ್ನೀಶಿಯಂ ಇರುವುದರಿಂದ ಮುಟ್ಟಿನ ನೋವು ಕೂಡ ಕಡಿಮೆಯಾಗುತ್ತದೆ.

ಎದೆ ಹಾಲು ಉತ್ಪಾದನೆ

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ತಮ್ಮ ದೇಹದಲ್ಲಿ ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ. ಇದು ಮಗುವಿಗೆ ದೀರ್ಘಕಾಲದವರೆಗೆ ಆಹಾರವನ್ನು ನೀಡಲು ತಾಯಿಯನ್ನು ಶಕ್ತಗೊಳಿಸುತ್ತದೆ.

ಚರ್ಮದ ಸೌಂದರ್ಯ

ಸಿರಿಧಾನ್ಯಗಳಲ್ಲಿ ಎಲ್-ಲೈಸಿನ್ ಮತ್ತು ಎಲ್-ಪ್ರೋಲಿನ್ ಎಂಬ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ, ಇದರಿಂದ ದೇಹದಲ್ಲಿ ಕಾಲಜನ್‌ ರಚನೆಗೆ ಸಹಕಾರಿಯಾಗುತ್ತದೆ. ಇದು ನಿಮ್ಮ ದೇಹದ ಚರ್ಮವನ್ನು ಸುಂದರವಾಗಿರಿಸಿಕೊಳ್ಳುವಂತೆ ಮಾಡುತ್ತದೆ. ಬೇಗನೆ ಸುಕ್ಕುಗಳು ಬಾರದಂತೆ ಕಾಪಾಡಿಕೊಳ್ಳುತ್ತದೆ.

ಅತಿಯಾದ ಅಮೃತವೂ ವಿಷ ನೆನಪಿರಲಿ

ಅತಿಯಾದರೆ ಅಮೃತವೂ ವಿಷವೇ ಎನ್ನುವ ಮಾತಿದೆ. ಅದೇ ರೀತಿ ಸಿರಿಧಾನ್ಯ ಕೂಡ. ಸಿರಿಧಾನ್ಯವನ್ನು ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಅದನ್ನು ಬಿಟ್ಟು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಸಿರಿಧಾನ್ಯಗಳು ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆಗೆ ಅಡ್ಡಿಪಡಿಸುವ ಗೋಯಿಟ್ರೋಜೆನ್ ಅನ್ನು ಹೊಂದಿರುತ್ತವೆ. ಸಿರಿಧಾನ್ಯಗಳ ಅತಿಯಾದ ಸೇವನೆಯಿಂದ ಅಯೋಡಿನ್‌ ಕೊರತೆ ಉಂಟಾಗಬಹುದು. ಇದರಿಂದ ಥೈರಾಯ್ಡ್‌ ಗ್ರಂಥಿ ಬೆಳೆವಣಿಗೆಯಾಗುವ ಸಾಧ್ಯತೆಯಿರುತ್ತದೆ. ಅದನ್ನು ಗಾಯ್ಟರ್‌ ಎಂದು ಕರೆಯಲಾಗುತ್ತದೆ. ಗಾಯ್ಟರ್ ಶುಷ್ಕ ಚರ್ಮ, ಆತಂಕ, ಖಿನ್ನತೆ ಮತ್ತು ನಿಧಾನ ಚಿಂತನೆಗೆ ಕಾರಣವಾಗುತ್ತದೆ. ಹಾಗಾಗಿ ಥೈರಾಯ್ಡ್‌ನಿಂದ ಬಳಲುತ್ತಿರುವವರು ಸಿರಿಧಾನ್ಯಗಳ ಸೇವನೆ ಮಾಡದಿರುವುದು ಒಳಿತು.

ಇದನ್ನೂ ಓದಿ: National Nutrition Week 2023: ದಿನವೂ ನಾವು ಸೇವಿಸಲೇಬೇಕಾದ ಪೋಷಕಾಂಶಗಳಿವು

Exit mobile version