Site icon Vistara News

National Nutrition Week 2023: ಡಯೆಟ್‌ ಜತೆಗೆ ಪೌಷ್ಟಿಕತೆಯನ್ನು ಬ್ಯಾಲೆನ್ಸ್‌ ಮಾಡೋದು ಹೇಗೆ?

National Nutrition Week 2023

ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ (National Nutrition Week 2023) ಇಂದಿನಿಂದ (ಸೆ.1) ಆರಂಭವಾಗಿದೆ. ಪೌಷ್ಟಿಕತೆ ಎನ್ನುತ್ತಿದ್ದಂತೆ ನಾನಾ ಚಿತ್ರಗಳು ನಮ್ಮ ಭಿತ್ತಿಯಲ್ಲಿ ಮೂಡಬಹುದು. ಒಂದಿಷ್ಟು ಹಣ್ಣು-ತರಕಾರಿಗಳು, ಹಾಲು-ಮೊಸರು, ಬೇಳೆ-ಕಾಳುಗಳು ಇತ್ಯಾದಿ. ಈಗ ಫಿಟ್ನೆಸ್‌ ಎನುತ್ತಿದ್ದಂತೆ ಜಿಮ್‌ನಲ್ಲಿ ಬೆವರು ಸುರಿಸುವುದು, ಡಯೆಟ್‌ ಇತ್ಯಾದಿ ಕಲ್ಪನೆಗಳು ಇದ್ದಂತೆಯೇ ಇದೂ ಸಹ. ಆದರೆ ನಮ್ಮ ತಿಳುವಳಿಕೆ ಎಲ್ಲಾ ವಿಷಯಗಳಲ್ಲೂ ಸತ್ಯ, ಪೂರ್ಣ ಎನ್ನುವುದು ಕಷ್ಟ. ಉದಾ, ಡಯೆಟ್‌ ಎಂದರೆ ಎಂತೆಂಥ ಕಲ್ಪನೆಗಳುಂಟು ಗೊತ್ತೇ? ಉಪವಾಸ ಮಾಡುವುದು, ಒಂದೇ ಹೊತ್ತು ತಿನ್ನುವುದು, ಅರೆಹೊಟ್ಟೆ ತಿನ್ನುವುದು, ಬರೀ ಹಸಿ ತರಕಾರಿ ತಿನ್ನುವುದು, ಊಟ ಬಿಟ್ಟು ಜ್ಯೂಸ್‌ ಕುಡಿಯುವುದು, ಯಾವುದಾದರೂ ಒಂದೇ ಆಹಾರವನ್ನು ಮೂರ್‌ಹೊತ್ತೂ ತಿನ್ನುವುದು… ಈ ಪಟ್ಟಿಗೆ ಕೊನೆಯಿಲ್ಲ. ಇಷ್ಟಕ್ಕೂ ಡಯೆಟ್‌ ಎಂದರೇನು?

ತೀರಾ ಸರಳವಾಗಿ ಹೇಳುವುದಾದರೆ, ನಾವು ರೂಢಿಸಿಕೊಂಡಿರುವ ಆಹಾರ ಕ್ರಮವನ್ನು ಡಯೆಟ್‌ ಎನ್ನಬಹುದು. ಅದರಿಂದಲೇ ವೆಜ್‌ ಡಯೆಟ್‌ (ಸಸ್ಯಾಹಾರ ಕ್ರಮ), ವೇಗನ್‌ ಡಯೆಟ್‌ ಮುಂತಾದ ಹಲವು ಆಹಾರ ಕ್ರಮಗಳ ಉಗಮವಾಗಿದ್ದು. ನಾಡಿನಿಂದ ನಾಡಿಗೆ, ಪ್ರಾಂತ್ಯದಿಂದ ಪ್ರಾಂತ್ಯಕ್ಕೆ, ದೇಶ, ಭಾಷೆ, ಜಾತಿ, ಧರ್ಮ- ಈ ಎಲ್ಲದರ ಆಧಾರದ ಮೇಲೆ ಆಹಾರಕ್ರಮಗಳು ಭಿನ್ನವಾಗಬಹುದು. ಹಾಗಾಗಿ ಡಯೆಟ್‌ ಎಂದರೆ ತೂಕ ಇಳಿಸುವುದಕ್ಕೆ ನಾವು ಆಹಾರದ ಮೂಲಕ ಮಾಡುವ ಸರ್ಕಸ್‌ ಖಂಡಿತ ಅಲ್ಲ. ಬದಲಿಗೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಲ್ಲಿ, ಸಮತೋಲಿತ, ಸತ್ವಯುತವಾದ ಆಹಾರಕ್ರಮ. ಇದನ್ನೇ (healthy diet) ಡಯೆಟ್‌ ಎನ್ನುವ ಹೆಸರಿನಲ್ಲಿ ಜನಪ್ರಿಯವಾಗಿ ಕರೆಯಲಾಗುತ್ತದೆ.

ಏಕೆ ಬೇಕು?

ಹೆಲ್ತಿ ಡಯೆಟ್‌ (healthy diet) ಅಥವಾ ಸತ್ವಯುತ ಆಹಾರ ಕ್ರಮವನ್ನು ಏಕೆ ಅಳವಡಿಸಿಕೊಳ್ಳಬೇಕು? ಹಾಗೆಂದರೇನು? ದೇಹದೆಲ್ಲಾ ಅಂಗಾಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ ಅಗತ್ಯವಾದ ಶಕ್ತಿ ಒದಗಬೇಕಾದ್ದು ನಾವು ಸೇವಿಸುವ ಆಹಾರದಿಂದ. ಶಕ್ತಿ ಸಂಚಯಿಸುವುದು ಮಾತ್ರವಲ್ಲ, ಬೆಳವಣಿಗೆ, ರೋಗ ನಿರೋಧಕತೆ, ದೇಹದ ಕೋಶಗಳ ರಿಪೇರಿಗಳೆಲ್ಲಾ ನಾವು ತಿನ್ನುವುದರಿಂದಲೇ ಬರಬೇಕು. ಇದರಲ್ಲಿ ನೀರು, ಹಾಲು ಮತ್ತಿತರ ದ್ರವಾಹಾರವನ್ನೂ ಸೇರಿಸಬೇಕು. ನಾವೇನೇ ತಿಂದರೂ ದೇಹ ಅದನ್ನು ಚೂರ್ಣಿಸುತ್ತದೆ; ಹಾಗಿರುವಾಗ ಏನು ತಿನ್ನಬೇಕು ಎಂಬುದನ್ನು ನಾವು ತಿಳಿಯಬೇಕು. ಆಹಾರದ ಹೆಚ್ಚಿನ ಭಾಗ ತಾಜಾ ಮತ್ತು ಉತ್ತಮ ಕ್ಯಾಲೊರಿಗಳಿಂದ ಕೂಡಿದ್ದರೆ ಅದನ್ನು ಪೌಷ್ಟಿಕ ಡಯೆಟ್‌ ಎನ್ನಬಹುದು. ಇದೀಗ ಮತ್ತೂ ಒಗಟಾಯಿತು! ಇದನ್ನೇ ಬಿಡಿಸುತ್ತಾ ಹೋದರೆ…

ವಯಸ್ಕ ವ್ಯಕ್ತಿಯೊಬ್ಬ, (ತೀರಾ ಜಡವೂ ಅಲ್ಲದ, ಕ್ರೀಡಾಪಟುವೂ ಅಲ್ಲದ) ಸಾಮಾನ್ಯ ಜೀವನಶೈಲಿಯನ್ನು ಹೊಂದಿದ್ದರೆ, 2200 ಕ್ಯಾಲರಿ ಶಕ್ತಿ ನೀಡುವಂಥ ಆಹಾರ ಆತ/ ಆಕೆಗೆ ಸಾಕು. ಈ ಶಕ್ತಿಯ 50-60% ಭಾಗ ಪಿಷ್ಟದಿಂದ ಬರಬೇಕು. ಶೇ. 15-20ರವರೆಗೂ ಪ್ರೊಟೀನ್‌ನಿಂದ ಶಕ್ತಿ ಪೂರೈಕೆ ಆಗಬಹುದು. ಉಳಿದಿದ್ದು ಆರೋಗ್ಯಕರ ಕೊಬ್ಬು, ನಾರು, ಖನಿಜಗಳು ಮತ್ತು ಜೀವಸತ್ವಗಳಿಂದ ಬರಬೇಕು. ಆಹಾರದಲ್ಲಿ ʻಆರೋಗ್ಯಕರʼವಾಗಿದ್ದು ಎಂದರೇನು?

ಆರೋಗ್ಯಕರ ಎಂದರೆ

ಪಿಷ್ಟದಲ್ಲಿ ಆರೋಗ್ಯಕರವಾಗಿದ್ದೆಂದರೆ ಇಡೀ ಧಾನ್ಯಗಳು, ಬೇಳೆಗಳು, ಸಿರಿ ಧಾನ್ಯಗಳು, ತರಕಾರಿಗಳನ್ನು ಸೇರಿಸಬಹುದು. ಧಾನ್ಯಗಳ ಸಂಸ್ಕರಣೆ ಕಡಿಮೆ ಇದ್ದಷ್ಟೂ ಹೆಚ್ಚು ಆರೋಗ್ಯಕರವಾಗಿರುತ್ತವೆ. ಉದಾ, ತೌಡೆಲ್ಲಾ ತೆಗೆದು ಸಂಸ್ಕರಿಸಿದ ಬಿಳಿಯ ಅಕ್ಕಿಗಿಂತ ತೌಡು ತೆಗೆಯದ ಕೆಂಪಕ್ಕಿ ಬಳಕೆಗೆ ಸೂಕ್ತ.

ಪ್ರೊಟೀನ್

ಕಾಳುಗಳು, ಚಿಕನ್‌, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು, ಬೀಜಗಳು, ಕಿನೊವಾ, ಸಿರಿ ಧಾನ್ಯಗಳು ಇತ್ಯಾದಿಗಳನ್ನು ಸೇರಿಸಬಹುದು. ಪ್ರಾಣಿಜನ್ಯ ಆಹಾರಗಳಿಂದ ಪ್ರೊಟೀನ್‌ ಸೇವಿಸುತ್ತಿದ್ದರೆ, ಅದರಲ್ಲಿ ಕೊಬ್ಬು ಕಡಿಮೆ ಇರುವಂಥದ್ದನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ.

ಕೊಬ್ಬು

ಕೊಬ್ಬೆಲ್ಲಾ ಕೆಟ್ಟದ್ದು; ಎಣ್ಣೆ-ತುಪ್ಪಗಳನ್ನು ಸಂಪೂರ್ಣವಾಗಿ ತಿನ್ನಲೇಬಾರದು ಎಂಬ ತಪ್ಪುಕಲ್ಪನೆ ಹಲವರಲ್ಲಿದೆ. ಕೊಬ್ಬಲ್ಲಿ ಆರೋಗ್ಯಕರವಾದದ್ದು ದೇಹಕ್ಕೆ ಅಗತ್ಯವಾಗಿ ಬೇಕು. ಬೆಣ್ಣೆ ಹಣ್ಣು, ಬೀಜಗಳು, ಅಲ್ಪ ಪ್ರಮಾಣದಲ್ಲಿ ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ, ಕೊಬ್ಬಿನ ಮೀನುಗಳು- ಮುಂತಾದವು ದೇಹಕ್ಕೆ ಬೇಕಾದಂಥ ಕೊಬ್ಬುಗಳು

ಜೀವಸತ್ವಗಳು

ನಮ್ಮ ದೇಹಕ್ಕೆ ಅಗತ್ಯವಾದಂಥ 13 ಬಗೆಯ ಜೀವಸತ್ವಗಳಿವೆ. ಅವುಗಳು ತಾಜಾ ಹಣ್ಣು- ತರಕಾರಿಗಳು, ಬೀಜಗಳು, ಡೈರಿ ಉತ್ಪನ್ನಗಳು, ಮೊಟ್ಟೆ- ಮೀನು ಮುಂತಾದ ಆಹಾರದಿಂದ ನಮಗೆ ದೊರೆಯುತ್ತವೆ.

ಖನಿಜಗಳು

ತಿಂದಿದ್ದು ಶಕ್ತಿಯಾಗಿ ಮಾರ್ಪಾಡಾಗುವುದಕ್ಕೆ ಖನಿಜಗಳು ನೆರವಾಗುತ್ತವೆ. ಮಾತ್ರವಲ್ಲ, ದೇಹದ ಸ್ಥಿರತೆ, ಬೆಳವಣಿಗೆಗೂ ಇವು ಅಗತ್ಯ. ಕಬ್ಬಿಣ, ಕ್ಯಾಲ್ಶಿಯಂ, ಪೊಟಾಶಿಯಂ, ಅಯೋಡಿನ್‌, ಸೋಡಿಯಂ- ಇಂಥ ಎಲ್ಲವನ್ನೂ ಖನಿಜಗಳ ಸಾಲಿಗೆ ಸೇರಿಸಬಹುದು. ಬೇಳೆ-ಕಾಳುಗಳು, ಬೀಜಗಳು, ಮೊಟ್ಟೆ-ಮಾಂಸದಂಥ ಆಹಾರಗಳಿಂದ ನಮಗಿವು ದೊರೆಯುತ್ತವೆ

ನಾರು

ದೇಹದಲ್ಲಿ ಬೇಕಾದ್ದನ್ನು ಉಳಿಸಿಕೊಂಡು, ಬೇಡದ್ದನ್ನು ಹೊರಗಟ್ಟುವುದೂ ಆಗಬೇಕಲ್ಲ- ಅದಕ್ಕೆ ನಾರು ಅಗತ್ಯ. ಓಟ್‌, ಕಿನೊವಾ, ಕೆಂಪಕ್ಕಿ, ಇಡೀ ಧಾನ್ಯಗಳು, ಸೊಪ್ಪು- ತರಕಾರಿಗಳು, ಬೀಜಗಳು ಮುಂತಾದವೆಲ್ಲಾ ಈ ಕೆಲಸಕ್ಕೆ ಕೈ ಜೋಡಿಸುತ್ತವೆ.

ಇಂಥ ಆಹಾರಗಳು, ಇಷ್ಟಿಷ್ಟೇ ಪ್ರಮಾಣದಲ್ಲಿ ನಮ್ಮ ಊಟದ ತಟ್ಟೆಯನ್ನು ಸೇರಿದರೆ- ಪೌಷ್ಟಿಕಾಂಶಯುಕ್ತ ಆಹಾರ ಅಥವಾ ಹೆಲ್ತಿ ಡಯೆಟ್ ಎನಿಸಿಕೊಳ್ಳುತ್ತದೆ.‌ ಈ ಪಟ್ಟಿಯಲ್ಲಿ ಕೇಕ್‌, ಕುಕಿ, ಐಸ್‌ಕ್ರೀಂ, ಸೋಡಾ, ಸಮೋಸಾ, ಚಿಪ್ಸ್‌, ಪಿಜಾ, ಜಿಲೇಬಿ ಮುಂತಾದ ಸಕ್ಕರೆಭರಿತ, ಕರಿದ, ಸಂಸ್ಕರಿತ ಆಹಾರಗಳಿಗೆ ಜಾಗವಿಲ್ಲ.

FAQ

ಡಯೆಟ್‌ ಎಂದರೆ ನಮ್ಮಿಷ್ಟದನ್ನು ತಿನ್ನದಿರುವುದು ಎಂದರ್ಥವೇ?

ನಿಮಗೆ ಜಂಕ್‌ ಮಾತ್ರವೇ ಇಷ್ಟ ಎಂದರೆ- ನಿಮ್ಮ ಮಾತು ನಿಜ! ಅದಲ್ಲದಿದ್ದರೆ ಆರೋಗ್ಯಪೂರ್ಣ ಆಹಾರಕ್ರಮ ಎಂಬ ಅರ್ಥ ಜನಪ್ರಿಯವಾಗಿ ಬಳಕೆಯಲ್ಲಿದೆ.

ಕೊಬ್ಬು ತಿನ್ನಬಾರದು ಎನ್ನುತ್ತಾರಲ್ಲ?

ಕೊಬ್ಬಿಲ್ಲದಿದ್ದರೆ ದೇಹಕ್ಕೆ ಕಷ್ಟ. ಆದರೆ ಆರೋಗ್ಯಕರ ಕೊಬ್ಬುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

ಇದನ್ನೂ ಓದಿ: National Nutrition Week 2023: ರಾಷ್ಟ್ರೀಯ ಪೌಷ್ಟಿಕತಾ ಸಪ್ತಾಹ: ಸತ್ವಯುತ ಆಹಾರ ಸೇವಿಸಿ, ಪೂರ್ಣಾವಧಿ ಬದುಕಿ!

Exit mobile version