ದೇಹ ದಂಡಿಸುವವರಿಗೆ ಮಾತ್ರವೇ ಪೋಷಕಾಂಶಗಳು (National Nutrition Week 2023) ಬೇಕಾಗುತ್ತದೆ ಎನ್ನುವ ಕಾಲವೊಂದಿತ್ತು. ಆದರೀಗ ಸಾಮಾನ್ಯ ಜನರಲ್ಲಿ ಈ ಬಗ್ಗೆ ಮೊದಲಿಗಿಂತ ಜಾಗೃತಿ ಹೆಚ್ಚಿದೆ. ಹಾಗಾಗಿ ಸ್ವಸ್ಥವಾದ ಆರೋಗ್ಯಕ್ಕೆ ಪೋಷಕಾಂಶಗಳು (essential nutrients) ಬೇಕೇಬೇಕು ಎಂಬತ್ತ ಹಿಂದಿಗಿಂತ ಹೆಚ್ಚಿನ ಜನ ಗಮನ ನೀಡುತ್ತಿದ್ದಾರೆ.
ಆಹಾರವನ್ನು ದಿನಾ ತಿನ್ನುತ್ತೇವೆ. ಹಾಗಾದರೆ ತಿನ್ನುವ ಆಹಾರದಲ್ಲಿ ಒಂದಿಷ್ಟು ಪೋಷಕಾಂಶಗಳು ಇರಲೇಬೇಕು. ಅವುಗಳಲ್ಲಿ ಬೇಕಾದದ್ದು-ಬೇಡವಾದದ್ದು ಎಲ್ಲವೂ ಇರಬಹುದು. ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ಏನೆಲ್ಲಾ ಪೋಷಕಾಂಶಗಳು ಇರಬೇಕು ಅಥವಾ ನಾವು ಪ್ರತಿದಿನವೂ ತಿನ್ನಲೇಬೇಕಾದ ಪೋಷಕಾಂಶಗಳೇನು? ಸ್ಥೂಲವಾಗಿ ವಿಂಗಡಣೆಯಾಗುವ ಸತ್ವಗಳ ಜೊತೆಗೆ ಕೆಲವು ಸೂಕ್ಷ್ಮ ಪೋಷಕಾಂಶಗಳೂ ಪ್ರತಿದಿನ ಅಗತ್ಯವಾಗಿ (essential nutrients) ಬೇಕು. ಹಾಗಾದರೆ ಏನದು? ಯಾವುದದು? ಸ್ಥೂಲ ಸತ್ವಗಳು ಅಥವಾ ಮ್ಯಾಕ್ರೊನ್ಯೂಟ್ರಿಯೆಂಟ್‌ಗಳೆಂದು ಕರೆಸಿಕೊಳ್ಳುವಂಥ ಪ್ರೊಟೀನ್, ಪಿಷ್ಟ ಮತ್ತು ಕೊಬ್ಬು ದಿನವೂ ಧಾರಾಳವಾಗಿ ಬೇಕು. ಜೊತೆಗೆ, ನೀರು, ವಿಟಮಿನ್ ಮತ್ತು ಖನಿಜಗಳು ಅಲ್ಪ ಪ್ರಮಾಣದಲ್ಲಿ ಬೇಕು.
ಪ್ರೊಟೀನ್
ಹೀಗೆನ್ನುತ್ತಿದ್ದಂತೆ ದೇಹ ದಂಡಿಸುವವರಿಗೆ ಮಾತ್ರವೇ ಇದು ಬೇಕಾಗುತ್ತದೆ ಎನ್ನುವ ಕಾಲವೊಂದಿತ್ತು. ಆದರೀಗ ಸಾಮಾನ್ಯ ಜನರಲ್ಲಿ ಈ ಬಗ್ಗೆ ಮೊದಲಿಗಿಂತ ಜಾಗೃತಿ ಹೆಚ್ಚಿದೆ. ಹಾಗಾಗಿ ಸ್ವಸ್ಥವಾದ ಆರೋಗ್ಯಕ್ಕೆ ಪ್ರೊಟೀನ್ ಬೇಕೇಬೇಕು ಎಂಬತ್ತ ಹಿಂದಿಗಿಂತ ಹೆಚ್ಚಿನ ಜನ ಗಮನ ನೀಡುತ್ತಿದ್ದಾರೆ. ನಮ್ಮ ದೇಹದ ಪ್ರತಿಯೊಂದು ಕೋಶದ ಆರೋಗ್ಯ ರಕ್ಷಣೆಗೆ ಪ್ರೊಟೀನ್ ಬೇಕು- ಅದು ಕೂದಲು, ಚರ್ಮ, ಮೂಳೆಗಳವರೆಗೆ ಯಾವುದೇ ಭಾಗವಿರಲಿ. ಒಂದು ದಿನ ಪ್ರೊಟೀನ್ ತಿನ್ನದಿದ್ದರೆ ಮೂಳೆಯೇನು ಮುರಿಯುವುದಿಲ್ಲ ಎಂದು ವಾದಿಸುವವರಿದ್ದಾರೆ. ಆದರೆ ದಿನದಿನದ ಕೆಲಸವೇ ನಮ್ಮ ಅಭ್ಯಾಸದ ಭಾಗವಾಗುವುದಲ್ಲವೇ? ಹಾಗಾಗಿ ಪ್ರೊಟೀನ್ ದಿನವೂ (essential nutrients) ಬೇಕು.
ಪಿಷ್ಟ
ʻಲೋ-ಕಾರ್ಬ್ʼ ಎನ್ನುವ ಹಣೆಪಟ್ಟಿಯೊಂದಿಗೆ ಬರುವ ಆಹಾರಗಳು ಈಗೀಗ ಬಹಳ ಜನಪ್ರಿಯ. ಆದರೆ ಮೆದುಳಿನಿಂದ ಹಿಡಿದು ಬೆರಳುಗಳವರೆಗೆ- ದೇಹದ ಎಲ್ಲಾ ಅಂಗಾಂಗಗಳಿಗೆ ಶಕ್ತಿ ಒದಗಿಸುವುದಕ್ಕೆ ಪಿಷ್ಟ ಅಗತ್ಯ. ದಿನದ ಕ್ಯಾಲರಿಯಲ್ಲಿ ಶೇ. 55ರಿಂದ 65ರಷ್ಟು ಕ್ಯಾಲರಿಗಳು ಪಿಷ್ಟದಿಂದಲೇ ಬರಬೇಕು. ಆದರೆ ಸಮಸ್ಯೆ ಬರುವುದು ನಾವು ಆಯ್ಕೆ ಮಾಡಿಕೊಳ್ಳುವ ಪಿಷ್ಟದ ಮೂಲಗಳಿಂದ. ಸಕ್ಕರೆಭರಿತ, ಸಂಸ್ಕರಿತ ಆಹಾರಗಳತ್ತ ಓಡುವ ಬದಲು, ಇಡೀಧಾನ್ಯಗಳು, ಕಾಳುಗಳು, ನಾರುಭರಿತ ಹಣ್ಣು-ತರಕಾರಿಗಳನ್ನು ಆಯ್ದುಕೊಳ್ಳುವುದು ಜಾಣತನ. ನಾರು ಸಹ ಕಾರ್ಬ್‌ನ ಭಾಗವಾಗಿ ಸೇವಿಸಬಹುದು.
ಕೊಬ್ಬು
ʻತಿಂದ ಕೊಬ್ಬಾ?ʼ ಎಂದು ಕೇಳುವುದರಲ್ಲೇ ಕೊಬ್ಬು ನಮಗೆ ಬೇಡದ್ದು ಎಂಬ ಧೋರಣೆ ವ್ಯಕ್ತವಾಗುತ್ತದೆ. ಆದರೆ ವಾಸ್ತವವಾಗಿ ಆರೋಗ್ಯಕರ ಕೊಬ್ಬುಗಳು ನಮಗೆ ಬೇಕು. ಖನಿಜ ಮತ್ತು ಜೀವಸತ್ವಗಳನ್ನು ನಾವು ತಿಂದರೂ, ಅವುಗಳನ್ನು ದೇಹ ಹೀರಿಕೊಳ್ಳುವುದಕ್ಕೆ ಈ ಆರೋಗ್ಯಕರ ಕೊಬ್ಬು ಅಗತ್ಯ. ಮಾತ್ರವಲ್ಲ, ಸ್ನಾಯು ಮತ್ತು ಕೀಲುಗಳ ಸ್ವಾಸ್ಥ್ಯಕ್ಕೆ, ಕೋಶಗಳ ಮರುನಿರ್ಮಾಣಕ್ಕೆ- ಹೀಗೆ ಬಹಳಷ್ಟು ಕೆಲಸಗಳಿಗೆ- ತಿಂದು ಕೊಬ್ಬುವುದು ಬೇಡದಿದ್ದರೂ, ಕೊಬ್ಬು ತಿನ್ನುವುದು ಅಗತ್ಯ! ದಿನದ ಕ್ಯಾಲರಿ ಕೋಟಾದಲ್ಲಿ ಶೇ. 25ರಷ್ಟು ಬರಬೇಕಾಗಿದ್ದು ಕೊಬ್ಬಿನಿಂದ. ಆದರೆ ಕೊಬ್ಬುಗಳ ಕ್ಯಾಲರಿ ಬಹಳ ಹೆಚ್ಚಿರುವುದರಿಂದ ಸ್ವಲ್ಪ ಸೇವಿಸಿದರೂ ಕೋಟಾ ಪೂರ್ಣಗೊಳ್ಳುತ್ತದೆ ಎನ್ನುವುದು ನೆನಪಿರಲಿ. ಹಾಗಾಗಿ ಒಮೇಗಾ 3 ಮತ್ತು 6 ಕೊಬ್ಬಿನಾಮ್ಲ ಇರುವಂಥವು ಸೂಕ್ತ.
ಜೀವಸತ್ವಗಳು
ಇನ್ನೀಗ ಸೂಕ್ಷ್ಮ ಪೋಷಕಾಂಶಗಳ ಸರದಿ. ಇವು ನಮಗೆ ಅಗತ್ಯವಿರುವುದು ಕಡಿಮೆ ಪ್ರಮಾಣದಲ್ಲಿ. ಆದರೆ ದಿನವೂ ತಿಂದರಷ್ಟೇ ಸರಾಸರಿ ಮಟ್ಟವನ್ನು ದೇಹದಲ್ಲಿ ಕಾಯ್ದುಕೊಳ್ಳಬಹುದು. ಒಟ್ಟು 13 ಅಗತ್ಯ ವಿಟಮಿನ್‌ಗಳಿದ್ದು, ಇಷ್ಟನ್ನೂ ದಿನಂಪ್ರತಿ ತಿನ್ನಬೇಕೆಂದಲ್ಲ. ಆದರೆ ಒಂದಿಷ್ಟಾದರೂ, ಉದಾ ವಿಟಮಿನ್ ಸಿ ಮತ್ತು ಡಿಯಂಥವು, ದಿನವೂ ಬೇಕು. ರೋಗವನ್ನು ತಡೆಗಟ್ಟುವ, ಆರೋಗ್ಯ ಕಾಪಾಡುವ, ಮೂಳೆ, ಕಣ್ಣು, ಚರ್ಮ ಮುಂತಾದವುಗಳ ಸ್ವಾಸ್ಥ್ಯ ರಕ್ಷಣೆ ಮಾಡುವಂಥ ಹಲವು ಮಹತ್ವದ ಕೆಲಸಗಳು ಈ ಪೋಷಕಾಂಶಗಳಿಗಿವೆ. ಆದರೆ ಇವುಗಳನ್ನು ಪೂರಕ ಮಾತ್ರೆಗಳ ಮೂಲಕ ತಿನ್ನುವುದಕ್ಕಿಂತ ಆಹಾರದ ಮೂಲಕ ಸೇವಿಸುವುದು ಒಳ್ಳೆಯ ಆಯ್ಕೆ.
ಖನಿಜಗಳು
ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ಪೊಟಾಶಿಯಂ ಮುಂತಾದವೆಲ್ಲಾ ದಿನವೂ ನಮ್ಮ ದೇಹವನ್ನು ಸೇರಬೇಕಾಗಿದ್ದು ಅಗತ್ಯ. ಕ್ಯಾಲ್ಶಿಯಂ ಎನ್ನುತ್ತಿದ್ದಂತೆ ಮೂಳೆಗಳ ಬಗ್ಗೆ ಮಾತ್ರವೇ ಮಾತಾಡುತ್ತೇವೆ. ಆದರೆ ನರಗಳಲ್ಲಿನ ಸಂಕೇತಗಳ ರವಾನೆ, ಸ್ನಾಯುಗಳ ಸಂಚಲನ ಮುಂತಾದ ಎಷ್ಟೊ ಕೆಲಸಗಳಿಗೆ ಕ್ಯಾಲ್ಶಿಯಂ ಕಡ್ಡಾಯವಾಗಿ ಬೇಕು. ದೇಹದಲ್ಲಿ ಚೋದಕಗಳ ಸ್ರವಿಸುವಿಕೆಗೆ, ಕೆಂಪುರಕ್ತಕಣಗಳ ಉತ್ಪತ್ತಿಗೆ ಕಬ್ಬಿಣ ಇರಲೇಬೇಕು. ಪೆಟ್ಟುಗಳು ಮಾಯುವುದಕ್ಕೆ, ಗಾಯ ಗುಣವಾಗಲು ಮತ್ತು ಪ್ರತಿರೋಧಕ ಶಕ್ತಿಯನ್ನು ಬಲಪಡಿಸಲು ಜಿಂಕ್ ಬೇಕು. ರಕ್ತದೊತ್ತಡ ನಿಯಂತ್ರಣಕ್ಕೆ ಪೊಟಾಶಿಯಂ ಅಗತ್ಯ- ಹೀಗೆ ಒಂದೊಂದು ಖನಿಜವೂ ನಮ್ಮ ಒಟ್ಟಾರೆ ಸ್ವಾಸ್ಥ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ನೀರು
ಆರೆಂಟು ದಿನ ಆಹಾರವಿಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ…? ನಮ್ಮ ದೇಹ ತೂಕದ ಶೇ. 62ರಷ್ಟು ಬರುವುದು ನೀರಿನಿಂದಲೇ. ದೇಹಕ್ಕೆ ಸ್ವಲ್ಪ ನೀರು ಕಡಿಮೆಯಾದರೂ ಅದರ ಕ್ಷಮತೆ ಕ್ಷೀಣ…
FAQ
ನಮಗೆ ಬೇಕಾದ ಐದು ಮೂಲಭೂತ ಪೋಷಕಾಂಶಗಳು ಯಾವುವು?
ನೀರು, ಕಾರ್ಬ್, ಪ್ರೊಟೀನ್, ಖನಿಜಗಳು ಮತ್ತು ವಿಟಮಿನ್‌ಗಳು ನಮಗೆ ಅಗತ್ಯವಾಗಿ ಬೇಕು.
ʻಬ್ಯೂಟಿ ವಿಟಮಿನ್ʼ ಎನ್ನುತ್ತಾರಲ್ಲ, ಯಾವುದದು?
ವಿಟಮಿನ್ ಇ ಈ ಹೆಸರಿನಿಂದ ಕರೆಸಿಕೊಳ್ಳುತ್ತದೆ. ತ್ವಜೆಯ ಆರೋಗ್ಯ ವೃದ್ಧಿಯಲ್ಲಿ ಈ ಜೀವಸತ್ವದಲ್ಲಿ ಮುಖ್ಯ ಪಾತ್ರ.
ಇದನ್ನೂ ಓದಿ: National Nutrition Week 2023: ಪ್ರೊಟೀನ್ ಸಪ್ಲಿಮೆಂಟ್‌ಗಳಿಂದಾಗುವ ಸೈಡ್ ಎಫೆಕ್ಟ್‌ಗಳ ಬಗ್ಗೆ ತಿಳಿದಿರಲಿ!