ಪ್ರತಿ ವರ್ಷವೂ ಸೆಪ್ಟೆಂಬರ್ ಒಂದರಿಂದ ಏಳರವರೆಗೆ ರಾಷ್ಟ್ರೀಯ ಪೋಷಕಾಂಶ ಸಪ್ತಾಹವನ್ನಾಗಿ (national nutrition week 2023) ಆಚರಿಸಲಾಗುತ್ತದೆ. ಆ ಮೂಲಕ ಜನರಲ್ಲಿ, ಪೋಷಕಾಂಶಯುಕ್ತ (nutrient rich) ಆಹಾರ ಸೇವನೆಯ ಅರಿವು ಮೂಡಿಸುವ ಪ್ರಯತ್ನ ಸರ್ಕಾರದ್ದು. ಪ್ರತಿಯೊಬ್ಬ ಮನುಷ್ಯನ ಆರೋಗ್ಯಯುತ ಜೀವನಕ್ಕೆ (Healthy life) ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು (Nutrients) ದೊರೆಯುವುದು ಅತ್ಯಂತ ಅಗತ್ಯ ಕೂಡಾ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಪೋಷಕಾಂಶ ಸಪ್ತಾಹದ ಹಿನ್ನೆಲೆಯಲ್ಲಿ, ನಮ್ಮ ನಿತ್ಯದ ಆಹಾರಕ್ರಮದಲ್ಲಿ (Daily foods) ಸೇವಿಸಲು ನಾವು ಮರೆಯಲೇಬಾರದ ಆಹಾರಗಳಿವು.
1. ಹಸಿರು ಸೊಪ್ಪುಗಳು: ಬಸಳೆ, ಪಾಲಕ್, ಕೊತ್ತಂಬರಿ ಸೊಪ್ಪು, ಪುದಿನ ಸೇರಿದಂತೆ ಬಗೆಬಗೆಯ ಸೊಪ್ಪುಗಳು ಮಾರುಕಟ್ಟೆಯಲ್ಲಿ ಸದಾ ಲಭ್ಯ. ಇಂತಹ ಸೊಪ್ಪುಗಳು ನಮ್ಮ ಆಹಾರದ ಭಾಗವಾಗುವುದರಿಂದ ಸಾಕಷ್ಟು ಜೀವಸತ್ವಗಳು, ಖನಿಜಾಂಶಗಳು ನಮ್ಮ ಹೊಟ್ಟೆ ಸೇರುತ್ತವೆ. ಕಡಿಮೆ ಕ್ಯಾಲರಿ ಇರುವ ಆದರೆ ಹೆಚ್ಚು ಪೋಷಕಾಂಶಗಳಿರುವ ಸೊಪ್ಪುಗಳನ್ನು ನಾವು ಆಗಾಗ ಸೇವಿಸುವುದರಿಂದ ಆರೋಗ್ಯಕರ ತೂಕ ಕಾಯ್ದುಕೊಳ್ಳುವಲ್ಲಿಯೂ ಇವು ನೆರವಾಗುತ್ತವೆ.
2. ಬೆರ್ರಿಗಳು: ಹಣ್ಣುಗಳ ಪೈಕಿ ಬೆರ್ರಿಗಳನ್ನು ನಾವು ಆಗಾಗ ಸೇವಿಸುವುದು ಒಳ್ಳೆಯದು. ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಸಬೆರ್ರಿಗಳಂತಹ ಬೆರ್ರಿ ಹಣ್ಣುಗಳಲ್ಲಿ ವಿಟಮಿನ್ ಜೊತೆಗೆ ನಾರಿನಂಶವೂ ಸಮೃದ್ಧವಾಗಿರುವುದರಿಂದ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಸಹಾಯ ಮಾಡುತ್ತವೆ.
3. ಮೀನು: ನೀವು ಮಾಂಸಾಹಾರವನ್ನೂ ಮಾಡುವವರಾಗಿದ್ದರೆ ಖಂಡಿತಾ ಸಾಲ್ಮನ್, ಸಾರ್ಡಿನ್, ಮೆಕೆರಲ್‌ನಂತಹ ಮೀನುಗಳನ್ನು ಆಗಾಗ ಬಳಸಬಹುದು. ಇವುಗಳಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಮಿದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
4. ಬೀಜಗಳು: ಬಾದಾಮಿ, ಚಿಯಾ ಬೀಜಗಳು, ಫ್ಲ್ಯಾಕ್ ಸೀಡ್‌ಗಳು, ವಾಲ್‌ನಟ್ ಇತ್ಯಾದಿ ಬೀಜಗಳಲ್ಲಿ ಭರಪೂರ ಪ್ರೊಟೀನ್ ಹಾಗೂ ಜೀವಸತ್ವಗಳು ಇರುವುದರಿಂದ ಇವುಗಳನ್ನು ನಿತ್ಯಾಹಾರದಲ್ಲಿ ಸೇವಿಸುವ ಮೂಲಕ ಹಲವು ರೋಗಗಳು ಬರದಂತೆ ತಡೆಗಟ್ಟಿಕೊಳ್ಳಬಹುದು.
5. ಧಾನ್ಯಗಳು: ಧಾನ್ಯಗಳ ಬಳಕೆ ನಿತ್ಯ ಜೀವನದಲ್ಲಿ ಅತ್ಯಗತ್ಯ. ಗೋಧಿ, ಅಕ್ಕಿ, ರಾಗಿ, ಜೋಳ ಇತ್ಯಾದಿಗಳ ಜೊತೆಗೆ ಓಟ್ಸ್ ಇತ್ಯಾದಿಗಳ ಸೇವನೆಯ ಮೂಲಕ ಜೀರ್ಣಾಂಗವ್ಯೂಹದ ಆರೋಗ್ಯವನ್ನು ಸಮತೋಲನದಲ್ಲಿಡಬಹುದು.
6. ಮೊಸರು: ಮೊಸರು ಎಂಬ ಡೈರಿ ಉತ್ಪನ್ನ ಕೂಡಾ ನಿತ್ಯಾಹಾರದಲ್ಲಿ ಒಳ್ಳೆಯದು. ಕ್ಯಾಲ್ಶಿಯಂ ಸೇರಿದಂತೆ ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಉಳಿವಿಗೆ ಇದು ಅತ್ಯಗತ್ಯ.
7. ಮೊಟ್ಟೆ: ನೀವು ಮೊಟ್ಟೆ ತಿನ್ನುವವರಾಗಿದ್ದರೆ, ಖಂಡಿತಾ ಆಗಾಗ ಇದನ್ನು ನೀವು ನಿಮ್ಮ ನಿತ್ಯಾಹಾರದಲ್ಲಿ ಸೇರಿಸಿ. ಪ್ರೊಟೀನ್, ಖನಿಜಾಂಶಗಳು ಹಾಗೂ ವಿಟಮಿನ್‌ಗಳು ಮಾಂಸಖಂಡಗಳ ಬೆಳವಣಿಗೆಗೆ ಅತ್ಯಗತ್ಯ.
8. ಬೆಣ್ಣೆಹಣ್ಣು: ಪೋಷಕಾಂಶಗಳನ್ನು ಭರಪೂರ ಇಟ್ಟುಕೊಂಡಿರುವ ಸಮೃದ್ಧ ಹಣ್ಣುಗಳ ಪೈಕಿ ಪ್ರಮುಖವಾದದ್ದು, ಈ ಬೆಣ್ಣೆಹಣ್ಣು ಅಥವಾ ಅವಕಾಡೋ. ಇದರಲ್ಲಿ ಒಳ್ಳೆಯ ಕೊಬ್ಬು, ನಾರಿನಂಶ, ಹಾಗೂ ಪೊಟಾಶಿಯಂ ಹೇರಳವಾಗಿರುವುದರಿಂದ ಹೃದಯ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.
9. ಬೇಳೆಕಾಳುಗಳು: ಬೇಳೆ ಕಾಳುಗಳು ನಿತ್ಯ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಬಗೆಬಗೆಯ ಬೇಳೆ ಕಾಳುಗಳನ್ನು ಬಗೆಬಗೆ ರೂಪದಲ್ಲಿ ಸೇವಿಸುವುದರಿಂದ ಎಲ್ಲ ಬಗೆಯ ಪೋಷಕಾಂಶಗಳೂ ದೇಹಕ್ಕೆ ಲಭ್ಯವಾಗುತ್ತವೆ.
10. ಬ್ರೊಕೋಲಿ: ಬ್ರೊಕೋಲಿಯಂತಹ ತರಕಾರಿಗಳ ಸೇವನೆ ಮಾಡಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಜೀವಸತ್ವಗಳು, ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಲಭ್ಯವಾಗಿ, ದೇಹಕ್ಕೆ ರೋಗ ನಿರೋಧಕ ಶಕ್ತಿ ಲಭ್ಯವಾಗುತ್ತದೆ.
ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!
11. ಟೊಮೇಟೋ: ಟೊಮೇಟೋನಲ್ಲಿ ವಿಟಮಿನ್ ಸಿ ಹಾಗೂ ಎ ಸಮೃದ್ಧವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
12. ಬೆಳ್ಳುಳ್ಳಿ: ಆಲಿಸಿನ್ ಹೆಚ್ಚಾಗಿರುವ ಬೆಳ್ಳುಳ್ಳಿಯ ಸೇವನೆಯಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಸಮತೋಲನಕ್ಕೆ ಬರಬಹುದು. ಅಷ್ಟೇ ಅಲ್ಲ, ರೋಗ ನಿರೋಧಕ ಶಕ್ತಿ ಹೆಚ್ಚಬಹುದು.
13. ಸಿಟ್ರಸ್ ಹಣ್ಣುಗಳು: ಕಿತ್ತಳೆ, ನಿಂಬೆ ಸೇರಿದಂತೆ ಎಲ್ಲ ಬಗೆಯ ಸಿಟ್ರಸ್ ಹಣ್ಣುಗಳಲ್ಲಿ ಹಾಘೂ ನೆಲ್ಲಿಕಾಯಿಯಲ್ಲಿ ಸಿ ವಿಟಮಿನ್ ಸಮೃದ್ಧವಾಗಿರುತ್ತವೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
14. ನೀರು: ನೀರು ಆಹಾರದಂತೆ ಪರಿಗಣಿಸಲ್ಪಡದಿದ್ದರೂ, ಬದುಕಿರಲು ಅತ್ಯಂತ ಅಗತ್ಯವಾಗಿರುವವುಗಳ ಪೈಕಿ ನೀರು ಪ್ರಮುಖವಾಗುತ್ತದೆ. ನೀರು ದೇಹಕ್ಕೆ ನಿತ್ಯವೂ ಸಿಗಬೇಕಾದುದು ಆರೋಗ್ಯಕ್ಕೆ ಕೀಲಿಕೈ. ಹಾಗಾಗಿ ಅಗತ್ಯ ಪ್ರಮಾಣದಲ್ಲಿ ನೀರಿನ ಸೇವನೆ ಅತ್ಯಂತ ಮುಖ್ಯವಾದದ್ದು ಎಂಬುದನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: Health Tips: ಕಿತ್ತಳೆ ಹಣ್ಣಿನ ಸಿಪ್ಪೆಯಿಂದಲೂ ಇಷ್ಟೆಲ್ಲಾ ಲಾಭವಿದೆ, ಮತ್ಯಾಕೆ ಎಸೀತೀರಾ!