ʻಎಲ್ಲಾರೂ ಮಾಡುವುದು ಹೊಟ್ಟೆಗಾಗಿ…ʼ ಎಂದು ದಾಸವರೇಣ್ಯರೇ ಹೇಳಿದ್ದಾರೆ. ನಮ್ಮ ಹೊಟ್ಟೆ ಎಷ್ಟು ಮುಖ್ಯ ಎಂಬುದು ಇದರಲ್ಲೇ ವೇದ್ಯವಾಗಬೇಕು ನಮಗೆ. ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಹೊಟ್ಟೆಯೇ ಸರಿಯಿಲ್ಲದಿದ್ದರೆ ದೇಹದ ಅವಸ್ಥೆ ಏನಾಗಬೇಕು? ಜಠರ ಅನಾರಾಗ್ಯಕ್ಕೆ ಒಳಗಾದರೆ ಸಂಪೂರ್ಣ ಆರೋಗ್ಯವೇ ಏರುಪೇರು. ಹೆಚ್ಚಿನ ಸಾರಿ ʻನನ್ನ ಬಗ್ಗೆ ಗಮನ ಕೊಡಿʼ ಎಂದು ಹೊಟ್ಟೆ ಹೇಳುತ್ತಿದ್ದರೂ ನಾವು ಕೇಳಿಸಿಕೊಂಡಿರುವುದಿಲ್ಲ. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಎಚ್ಚರ ವಹಿಸಬೇಕು ಎನ್ನುವ ಒಂದಿಷ್ಟು ಮಾಹಿತಿ ಇಲ್ಲಿದೆ
ಹೊಟ್ಟೆಯಲ್ಲಿ ತಳಮಳ: ಇದು ಅಪರೂಪಕ್ಕೆ ಎಲ್ಲರಿಗೂ ಆಗುವಂಥದ್ದೇ. ಆದರೆ ಹೀಗಾಗದಿರುವುದು ಅಪರೂಪ ಎನ್ನುವಂತಾದರೆ ಮಾತ್ರ ಕಷ್ಟ. ಹೊಟ್ಟೆ ಉಬ್ಬರ, ನೋವು, ಎದೆ ಉರಿ, ಹುಳಿತೇಗು ಇಂಥವೆಲ್ಲಾ ನಮ್ಮ ಹೊಟ್ಟೆಯ ಅನಾರೋಗ್ಯದ ರಿಪೋರ್ಟ್ ಕಾರ್ಡ್ ನೀಡಿದಂತೆ. ಅದಕ್ಕಾಗಿಯೇ ಅಲ್ಲವೇ ಔಷಧಿ ಅಂಗಡಿಗಳಲ್ಲಿ ಇಂಥ ಔಷಧಿಗಳಿಗಾಗಿ ದೊಡ್ಡ ರ್ಯಾಕ್‌ಗಳೇ ಇರುವುದು. ಹೊಟ್ಟೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಅನಾರೋಗ್ಯಕ್ಕೀಡಾದರೆ ಉಂಟಾಗುವ ಸಮಸ್ಯೆಗಳಿವು.
ಮೂಡ್ ಏರುಪೇರು: ಇಂದಿನ ಜೀವನದಲ್ಲಿ, ನಾನಾ ಕಾರಣಗಳಿಗಾಗಿ, ಎಲ್ಲರೂ ಪದೇಪದೆ ಅನುಭವಿಸುವ ತಾಪತ್ರಯವಿದು. ನಮ್ಮ ಜೀರ್ಣಾಂಗ ಸರಿಯಿಲ್ಲದಿರುವಾಗಲೂ ಈ ಸಮಸ್ಯೆ ತಲೆದೋರಬಹುದು. ಶರೀರದಲ್ಲಿ ಏನಾಗುತ್ತಿದೆ ಮತ್ತು ಯಾಕಾಗುತ್ತಿದೆ ಎಂಬುದನ್ನು ಅರಿಯುವುದು ಬಹಳ ಮಹತ್ವದ್ದು. ನಮ್ಮನ್ನು ಸಂತೋಷವಾಗಿಡುವ ಸೆರೋಟೋನಿನ್ ಚೋದಕದ ಹೆಚ್ಚಿನ ಭಾಗ ಉತ್ಪತ್ತಿಯಾಗುವುದು ಜಠರದಲ್ಲೇ.
ತೂಕ ವ್ಯತ್ಯಾಸ: ಹೆಚ್ಚಿನವರಿಗೆ ತೂಕದ ಮಿಷನ್ ಅಂದರೆ ಶತ್ರುವಿನ ಹಾಗೆ, ಸದಾ ನಮಗೆ ಬೇಡದ ಮಾಹಿತಿಯನ್ನೇ ನೀಡುತ್ತದೆ ಎಂಬ ಕಾರಣಕ್ಕೆ. ಆದರೆ ನಿಮ್ಮ ಆಹಾರ ಮತ್ತು ಚಟುವಟಿಕೆ- ಎರಡೂ ವ್ಯತ್ಯಾಸವಾಗದೆ, ತೂಕ ಮಾತ್ರ ಏರುಪೇರಾಗುತ್ತಿದೆ ಎಂದರೆ ಎಚ್ಚರಿಕೆ ವಹಿಸಿ. ಹೊಟ್ಟೆಗೊ ಅಥವಾ ಶರೀರದ ಇನ್ನಾವುದೋ ಭಾಗಕ್ಕೊ ಸಮಸ್ಯೆ ಇರಬಹುದು. ಆಹಾರ ಸರಿಯಾಗಿ ಪಚನವಾಗದಿರುವಾಗಲೂ ಇಂಥ ಸೂಚನೆಗಳು ಕಾಣಬಹುದು. ಹಾಗಂತ, ಅಲ್ಪಸ್ವಲ್ಪ ತೂಕ ವ್ಯತ್ಯಾಸ ಎಲ್ಲರಿಗೂ ಆಗುವಂಥದ್ದೇ.
ಮಲಬದ್ಧತೆ: ಗ್ರಹಿಸಲೇಬೇಕಾದ ಸೂಚನೆಯಿದು. ಹಾಗಂತ ಅಪರೂಪಕ್ಕೆ ಎಲ್ಲರ ಹೊಟ್ಟೆಯೂ ಹಠ ಮಾಡುವುದಂಟು! ಆದರೆ ಮಲಬದ್ಧತೆ ಸಾಮಾನ್ಯ ಎಂಬಂತಾದರೆ, ಹೊಟ್ಟೆಗೇನು ಹಾಕುತ್ತಿದ್ದೀರಿ ಎನ್ನುವ ಬಗ್ಗೆ ಖಂಡಿತಾ ನಿಮ್ಮ ಆಯ್ಕೆ ಸರಿಯಿಲ್ಲ. ಮಾತ್ರವಲ್ಲ, ಶರೀರಕ್ಕೆ ಸಾಕಷ್ಟು ಚಟುವಟಿಕೆ ಇಲ್ಲದಿದ್ದರೂ ಹೀಗಾಗುವ ಸಾಧ್ಯತೆಯಿದೆ. ʻನಾರ್ಮಲ್ʼ ಎನ್ನುವುದು ಆಯಾ ಶರೀರಕ್ಕೆ ಸಂಬಂಧಿಸಿದ್ದು, ನಿಜ. ಆದ್ದರಿಂದಲೇ ಇಂಥ ಏರುಪೇರುಗಳು ನಮ್ಮ ಗ್ರಹಿಕೆಗೆ ಬರಲೇಬೇಕು.
ಇದನ್ನೂ ಓದಿ : Processed Food | ಸಂಸ್ಕರಿಸಿದ ಆಹಾರ ವಸ್ತುಗಳಿಂದ ಸಣ್ಣ ವಯಸ್ಸಿಗೇ ಕ್ಯಾನ್ಸರ್, ಹೃದ್ರೋಗ!
ಸಿಹಿಯೇ ಬೇಕೆನಿಸುತ್ತಿದೆಯೇ?: ಹೀಗಾಗುವುದುಂಟು. ಹೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಆರೋಗ್ಯವಂತ ಬ್ಯಾಕ್ಟೀರಿಯಾ ಇಲ್ಲದಿದ್ದರೆ ವಿಪರೀತ ಸಿಹಿ ತಿನ್ನುವ ಆಸೆಯಾಗಬಹುದು. ಹಾಗಂತ ಸಿಹಿ ತಿನ್ನುವವರಿಗೆಲ್ಲಾ ಇದನ್ನೇ ಹೇಳುವಂತಿಲ್ಲ. ಸಮಸ್ಯೆಯೇನೆಂದರೆ, ಸಕ್ಕರೆ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತಿದೆ. ಹೀಗೆ ಹೆಚ್ಚಿದ ಉರಿಯೂತದಿಂದ ಜಠರದ ಬ್ಯಾಕ್ಟೀರಿಯಾಗಳು ಏರುಪೇರಾಗುತ್ತವೆ. ಈ ಏರುಪೇರಿನಿಂದಾಗಿ ಸಿಹಿ ತಿನ್ನುವ ಆಸೆ ಹೆಚ್ಚಲೂಬಹುದು. ಅಂತೂ ಸಕ್ಕರೆಯಿಂದ ಸುಖವಿಲ್ಲ ಎನ್ನಿ.
ಅತಿ ಆಯಾಸ: ಸಾವಿಲ್ಲದವರ ಮನೆಯ ಸಾಸಿವೆ ತರುವುದು, ಆಯಾಸ ಆಗದವರನ್ನು ಹುಡುಕುವುದು- ಎರಡೂ ಒಂದೇ ಎನ್ನುವಿರಾ? ನಿಜ, ಕೆಲಸ, ಒತ್ತಡ ಹೆಚ್ಚಿದಂತೆ ಆಯಾಸ ತಪ್ಪುವುದಿಲ್ಲ. ತೀರಾ ಸುಸ್ತಾದಾಗ ಸಣ್ಣ ನಿದ್ದೆ ತೆಗೆದರೆ ಶರೀರ ಚೇತರಿಸಿಕೊಳ್ಳಬೇಕು. ಆದರೆ ೨೪/೭ ಆಯಾಸ ತಪ್ಪುತ್ತಲೇ ಇಲ್ಲದೆಂದಾದರೆ ವಿಷಯ ಗಂಭೀರ ಎಂದರ್ಥ. ಆಹಾರದಲ್ಲಿರುವ ಪೋಷಕಾಂಶಗಳು ಶರೀರಕ್ಕೆ ಸರಿಯಾಗಿ ದೊರೆಯದಿದ್ದರೆ ಆಗುವ ಸಮಸ್ಯೆಗಳಲ್ಲಿ ಇದೂ ಒಂದು. ಮಾತ್ರವಲ್ಲ, ಹಗಲಿಗೆ ತೂಕಡಿಸುವಂತಾಗಿ, ರಾತ್ರಿ ನಿದ್ದೆ ಬರುತ್ತಿಲ್ಲವೇ? ಹೊಟ್ಟೆ ಸರಿಯಾಗಿದೆಯೇ ಎಂದು ಯೋಚಿಸಬೇಕಾದ ವಿಷಯ ಖಂಡಿತಾ ಹೌದು.
ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!