ಮಾರಣಾಂತಿಕ ರೋಗಗಳ ವಿರುದ್ಧ ದೇಹದ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸುವ ಪರಿಣಾಮಕಾರಿ ಮತ್ತು ಸುರಕ್ಷಿತ ಕ್ರಮವೆಂದರೆ ಲಸಿಕೆ ಹಾಕುವುದು. ಯಾವುದೇ ಜಾತಿ, ಮತ, ಲಿಂಗ, ವಯಸ್ಸು ಹಾಗೂ ಸಾಮಾಜಿಕ ಅಂತಸ್ತುಗಳ ಭೇದವಿಲ್ಲದಂತೆ ಲಸಿಕೆಗಳನ್ನು ಅಗತ್ಯವಾದ ಎಲ್ಲರೂ ಪಡೆದುಕೊಳ್ಳಬೇಕು ಎಂಬ ಅರಿವು ಮೂಡಿಸುವುದು ರಾಷ್ಟ್ರೀಯ ಲಸಿಕಾ ದಿನದ (ಮಾ.16) (National Vaccination Day) ಉದ್ದೇಶ.
ಲಸಿಕೆಗಳ ಮಹತ್ವದ ಬಗ್ಗೆ ಇಂದಿನ ಜನರಿಗೆ ಹಿಂದೆಂದಿಗಿಂತ ಹೆಚ್ಚಿನ ಗೊಂದಲ, ಅನುಮಾನ ಮೂಡಿರುವ ದಿನಗಳಿವು. ಕೋವಿಡ್ ಲಸಿಕೆಯ ಸಮಸ್ಯೆಗಳ ಸತ್ಯಾಸತ್ಯತೆಯ ಬಗ್ಗೆ, ಕೆಎಫ್‌ಡಿ ಲಸಿಕೆಯ ಕೆಲಸ ಮಾಡದಿರುವ ಬಗ್ಗೆ ಹರಿದಾಡುತಿರುವ ಸುದ್ದಿಗಳು ಒಂದೆರಡೇ ಅಲ್ಲ. ಆದಾಗ್ಯೂ, ಮನುಕುಲವನ್ನು ಕಾಡುತ್ತಿರುವ ನೂರಾರು ಭಯಾನಕ ರೋಗಗಳ ವಿರುದ್ಧ ನಮಗಿರುವ ಗುರಾಣಿಯೆಂದರೆ ಅವುಗಳ ವಿರುದ್ಧದ ಲಸಿಕೆಗಳು ಮಾತ್ರ. ಈ ಹಿನ್ನೆಲೆಯಲ್ಲಿ, ಮಾರ್ಚ್ 16ರಂದು ಭಾರತ ಗುರುತಿಸಿಕೊಂಡ ರಾಷ್ಟ್ರೀಯ ಲಸಿಕಾ ದಿನ ಮಹತ್ವ ಪಡೆದಿದೆ.
ನೈಸರ್ಗಿಕ ಪ್ರತಿರೋಧ
ಚಿಕನ್ ಪಾಕ್ಸ್, ದಡಾರ, ಸಿಡುಬು, ರುಬೆಲ್ಲ, ಪೋಲಿಯೊ ಮುಂತಾದ ಮಾರಣಾಂತಿಕ ರೋಗಗಳ ವಿರುದ್ಧ ದೇಹದ ನೈಸರ್ಗಿಕ ಪ್ರತಿರೋಧವನ್ನು ಹೆಚ್ಚಿಸುವ ಪರಿಣಾಮಕಾರಿ ಮತ್ತು ಸುರಕ್ಷಿತ ಕ್ರಮವೆಂದರೆ ಲಸಿಕೆ ಹಾಕುವುದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಸಮಾಜಗಳ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ಲಸಿಕೆಯನ್ನು ನಿರ್ವಹಿಸುವುದೂ ಹೌದು. ಈ ದಿನದ ಬಗ್ಗೆ ತಿಳಿಯುವ ನೆವದಲ್ಲಿ ಲಸಿಕೆಗಳ ಬಗ್ಗೆ ಒಂದಿಷ್ಟು ಮಾಹಿತಿಗಳಿಲ್ಲಿದೆ.
ರಾಷ್ಟ್ರೀಯ ಲಸಿಕಾ ದಿನವನ್ನು 1995ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಹಮ್ಮಿಕೊಳ್ಳಲಾಯಿತು. ದೇಶದಲ್ಲಿ ಪೋಲಿಯೊ ನಿರ್ಮೂಲನೆ ಮಾಡುವ ಉದ್ದೇಶದಿಂದ ಪಲ್ಸ್ ಪೋಲಿಯೊ ಹಮ್ಮಿಕೊಂಡಿದ್ದ ಜೊತೆಗೇ ರಾಷ್ಟ್ರೀಯ ಲಸಿಕಾ ದಿನಕ್ಕೂ ಚಾಲನೆ ದೊರೆಯಿತು. “ದೋ ಬೂಂದ್ ಜಿಂದಗೀಕಿ” ಎನ್ನುವ ಘೋಷಣೆಯ ಜೊತೆಗೆ ಈ ದಿನಕ್ಕೆ ಪ್ರಚಾರ ನೀಡಲಾಗಿತ್ತು. 2014ರಲ್ಲೇ ಭಾರತವನ್ನು ಪೋಲಿಯೊ- ಮುಕ್ತ ಎಂದು ಘೋಷಿಸಲಾಗಿದೆ. ಇದು ಕೇವಲ ಪೋಲಿಯೊ ಹನಿಗಳ ಬಗ್ಗೆ ಮಾತ್ರವಲ್ಲ, ಕಾಲಕಾಲಕ್ಕೆ ಸುರಕ್ಷತೆಗಾಗಿ ಎಲ್ಲರೂ ತೆಗೆದುಕೊಳ್ಳಬೇಕಾದ ಲಸಿಕೆಗಳ ಬಗ್ಗೆ ಹೆಚ್ಚಿನ ಒತ್ತನ್ನು ನೀಡುತ್ತದೆ.
ಹಲವು ರೀತಿಯ ಲಸಿಕೆ
ನವಜಾತ ಶಿಶುಗಳಿಂದ ಹಿಡಿದು, ಹದಿಹರೆಯದ ಮಕ್ಕಳವರೆಗೆ ಹಲವು ರೀತಿಯ ಲಸಿಕೆಗಳನ್ನು ವಿಶ್ವದೆಲ್ಲ ದೇಶಗಳಲ್ಲಿ ನೀಡಲಾಗುತ್ತಿದೆ. ಇದರಿಂದ ಲಕ್ಷಾಂತರ ಜೀವಗಳನ್ನು ವರ್ಷಂಪ್ರತಿ ಉಳಿಸಲು ಸಾಧ್ಯವಾಗುತ್ತಿದೆ. ಜಾಗತಿಕವಾಗಿ, ೨೦-೩೦ ಲಕ್ಷ ಮಕ್ಕಳು ಮಾರಣಾಂತಿಕ ರೋಗಗಳಿಂದ ಪಾರಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 2023ರಲ್ಲಿ ಇನ್ನೂ ಕೋವಿಡ್ ಭೀತಿ ಸಂಪೂರ್ಣ ಮರೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, “ಲಸಿಕೆಗಳು ಅನಗತ್ಯ ಅವಘಡಗಳನ್ನು ತಪ್ಪಿಸುತ್ತವೆ” ಎಂದು ಘೋಷಿಸಲಾಗಿತ್ತು. ಈ ವರ್ಷ, “ಲಸಿಕೆಗಳು ಎಲ್ಲರಲ್ಲೂ ಪರಿಣಾಮಕಾರಿ” (Vaccines Work for All) ಎಂಬ ಘೋಷವಾಕ್ಯವನ್ನು ಹೊರಡಿಸಲಾಗಿದೆ.
ಲಸಿಕೆಯ ಮಹತ್ವಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ
- ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಪಡೆಯುವಲ್ಲಿ ಸಾಮೂಹಿಕವಾಗಿ ಪಡೆಯುವ ಲಸಿಕೆಗಳು ಮಹತ್ವದ ಭೂಮಿಕೆ ವಹಿಸುತ್ತವೆ.
- ಯಾವುದೇ ಸಾಂಕ್ರಾಮಿಕ ರೋಗಗಳ ಪ್ರಸರಣ ಹಾಗೂ ನಿಯಂತ್ರಣದಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
- ರೋಗ ಬಾರದಂತೆ, ಒಂದೊಮ್ಮೆ ಬಂದರೂ ಅದರ ತೀವ್ರತೆ ಬಹಳಷ್ಟು ಕಡಿಮೆಯಾಗುವಂತೆ ಮಾಡುತ್ತವೆ ಲಸಿಕೆಗಳು
- ಲಸಿಕೆಗಳಿದ ಜೀವ ಉಳಿಯುವುದು ಮಾತ್ರವಲ್ಲ, ಜೀವನದ ಗುಣಮಟ್ಟವೂ ವೃದ್ಧಿಸುತ್ತದೆ. ಪೂರ್ಣಾರೋಗ್ಯದಿಂದ ಬದುಕುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ: Pill Label: ಮಾತ್ರೆಗಳ ಮೇಲಿನ ಲೇಬಲ್ ಗಮನಿಸಿದ್ದೀರಾ? ಏನೇನಿವೆ ಅದರಲ್ಲಿ?