ಸೊಳ್ಳೆ ಎಂಬ ಪುಟಾಣಿ ಜೀವಿ ನಮ್ಮ ಬದುಕನ್ನು ಕೆಲವೊಮ್ಮೆ ಅಲ್ಲೋಲಕಲ್ಲೋಲ ಮಾಡುವುದಂತೂ ನಿಜ. ಮಳೆಗಾಲ ಬಂದ ತಕ್ಷಣ ಅದೆಲ್ಲಿಂದಲೋ ಉದ್ಭವಗೊಂಡು ಮನೆಯೊಳಗೆ ನುಸುಳಿಕೊಂಡು ನಮ್ಮ ಜೀವ ಹಿಂಡಿ ಬಿಡುತ್ತವೆ. ಸೊಳ್ಳೆಗಳಿಂದಾಗಿ ಬರುವ ರೋಗಗಳು ಒಂದಾ ಎರಡಾ? ಮಲೇರಿಯಾದಿಂದ ಹಿಡಿದು ಡೆಂಗ್ಯೂವರೆಗೆ ಸೊಳ್ಳೆಗಳ ಕಾಣಿಕೆ ಬಹಳಷ್ಟಿವೆ. ಸಣ್ಣ ಜೀವಿಗಳೆಂದು ನಿರ್ಲಕ್ಷ್ಯ ಮಾಡಲಾಗದ ಮಾಡಬಾರದ ಇವನ್ನು ಮಟ್ಟ ಹಾಕಲು ಮನುಷ್ಯ ನೂರಾರು ವಿಧಾನಗಳನ್ನು ಕಂಡು ಹಿಡಿದಿದ್ದರೂ, ಬಹಳ ಸಾರಿ ಇದರಿಂದ ಅಡ್ಡ ಪರಿಣಾಮಗಳೂ ಆಗುವುದುಂಟು. ಪ್ರಕೃತಿಯೇ ನಮಗೆ ವರದಂತೆ ಸಾಕಷ್ಟು ಉಪಾಯಗಳನ್ನು ಕೊಟ್ಟಿರುವಾಗ, ನೈಸರ್ಗಿಕ ವಿಧಾನಗಳನ್ನು ನಾವು ಯಾಕೆ ಮರೆಯಬೇಕು ಹೇಳಿ! ಬನ್ನಿ, ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ಸುರಕ್ಷಿತವಾದ Natural (Mosquito Repellents) ಉಪಾಯಗಳು.
ಲೆಮೆನ್‌ಗ್ರಾಸ್(ಮಜ್ಜಿಗೆಹುಲ್ಲು)
ನಿಂಬೆ ಘಮದ ಹುಲ್ಲೊಂದನ್ನು ನೀವು ನಿಮ್ಮ ಮನೆಗಳಲ್ಲಿ ಬೆಳೆಸಿರಬಹುದು. ಅಂಗಳದ ಮೂಲೆಯಲ್ಲೆಲ್ಲೋ ಬೆಳೆಸಿದ ಈ ಹುಲ್ಲಿನ ನಿಜವಾದ ಲಾಭವನ್ನು ನೀವು ಬಳಸಿಕೊಂಡಿದ್ದೀರಾ? ಇಲ್ಲವೆಂದಾದರೆ, ಬಳಸಿ. ಸೊಳ್ಳೆಗಳ ಕಾಲಕ್ಕೆ ಮಾರುಕಟ್ಟೆಯ ರಾಸಾಯನಿಕಯುಕ್ತ ಸೊಳ್ಳೆ ಬತ್ತಿಗಳ ಮೊರೆ ಯಾಕೆ ಹೋಗುವಿರಿ? ನಿಮ್ಮ ಮನೆಯಂಗಳದ ಈ ಲೆಮೆನ್ ಗ್ರಾಸ್‌ನ ಎಲೆಯನ್ನು ಸ್ವಲ್ಪ ಕೈಯಲ್ಲಿ ಕಿವುಚಿಕೊಂಡು ಅದನ್ನು ಮೈಮೇಲೆ ಸವರಿ. ಅಥವಾ ಇದರ ಎಣ್ಣೆಯನ್ನು ಮಾಡಿ ಅಥವಾ ಕೊಂಡುಕೊಂಡು ಮೈಮೇಲೆ ಹಚ್ಚಿ. ಯಾವ ಸೊಳ್ಳೆಯೂ ನಿಮ್ಮ ಹತ್ತಿರ ಏಳೆಂಟು ಗಂಟೆಗಳ ಕಾಲ ಸುಳಿಯದು.
ವಿನೆಗರ್
ಮೂರು ಕಪ್ ನೀರಿಗೆ ಒಂದು ಕಪ್ ವಿನೆಗರ್ ಅನ್ನು ಸೇರಿಸಿ ಒಂದು ಸ್ಪ್ರೇ ಮಾಡುವ ಬಾಟಲಿಯಲ್ಲಿ ಹಾಕಿಡಿ. ಮನೆಯಲ್ಲಿ ಬೇಕಾದ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ನಿಮ್ಮ ಮೈಮೇಲೂ ಸ್ಪ್ರೇ ಮಾಡಬಹುದು.
ಲ್ಯಾವೆಂಡರ್ ಎಣ್ಣೆ
ಸೊಳ್ಳೆಗಳಿಗೆ ಪರಿಮಳ/ವಾಸನೆ ಎಂದರೆ ಆಗದು. ಹಾಗಾಗಿ ಅವುಗಳನ್ನು ದೂರ ಓಡಿಸಲು ಲ್ಯಾವೆಂಡರ್ ಎಣ್ಣೆ ಸೂಕ್ತ. ಲ್ಯಾವೆಂಡರ್ ಎಣ್ಣೆಯನ್ನು ನಿಮ್ಮ ಮೈಮೇಲೆ ಹಚ್ಚುವ ಮೂಲಕ ಅಥವಾ ಸ್ಪ್ರೇ ಮಾಡುವ ಮೂಲಕ ಸೊಳ್ಳೆಯಿಂದ ಮುಕ್ತಿ ಪಡೆಯುವಿರಿ.
ತುಳಸಿ
ಮೇಲೆ ಹೇಳಿರುವುದೆಲ್ಲವುಗಳು ಸಿಗುತ್ತಿಲ್ಲವಾದರೆ ತುಳಸಿಯನ್ನು ಬಳಸಿ. ತುಳಸಿ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಸಸ್ಯ. ತುಳಸಿಯ ಎಣ್ಣೆಯನ್ನು ಮೈಮೇಲೆ ಹಚ್ಚುವುದರಿಂದ ಸೊಳ್ಳೆ ನಿಮ್ಮ ಹತ್ತಿರ ಸುಳಿಯದು. ಎಣ್ಣೆ ಮಾಡಲಾಗದಿದ್ದರೆ, ತುಳಸಿ ಎಲೆಯನ್ನು ಕಿವುಚಿಕೊಂಡು ಚರ್ಮದ ಮೇಲೆ ಹಚ್ಚಿಕೊಳ್ಳಿ.
ಕರ್ಪೂರ
ಕರ್ಪೂರವಂತೂ ಎಲ್ಲರ ಮನೆಗಳಲ್ಲಿ ದೇವರ ಕೋನೆಯಲ್ಲಿ ಇದ್ದೇ ಇರುತ್ತದೆ. ಸ್ವಲ್ಪ ನೀರಿನಲ್ಲಿ ಕರ್ಪೂರವನ್ನು ಕರಗಿಸಿಕೊಂಡು ಅದನ್ನು ನಿಮ್ಮ ಮನೆಯೊಳಗೆ ಹಾಗೂ ಸೊಳ್ಳೆ ಬರುವ ಜಾಗಗಳಿಗೆ ಸ್ಪ್ರೇ ಮಾಡಿ. ಜೊತೆಗೆ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ, ೨೦ ನಿಮಿಷಗಳ ಕಾಲ ಕರ್ಪೂರವನ್ನು ಮನೆಯೊಳಗೆ ಹೊತ್ತಿಸಿಟ್ಟು ನೀವು ಹೊರಗಿರಿ. ಸೊಳ್ಳೆಗಳೆಲ್ಲ ಓಡುತ್ತವೆ.
ತೆಂಗಿನೆಣ್ಣೆ ಹಾಗೂ ಕಹಿ ಬೇವಿನೆಣ್ಣೆ
ಈ ಎರಡೂ ಎಣ್ನೆಗಳನ್ನು ಮಿಕ್ಸ್ ಮಾಡಿ ನೀರನ್ನೂ ಸ್ವಲ್ಪ ಸೇರಿಸಿ, ನಿಮ್ಮ ಮೈಮೇಲೆ ಸಿಂಪಡಿಸಿಕೊಳ್ಳಬಹುದು. ಸುಮಾರು ನಾಲ್ಕೈದು ಗಂಟಗಳ ಕಾಲ ಸೊಳ್ಲೆಗಳಿಂದ ನಿಮಗೆ ರಕ್ಷಣೆ ದೊರೆಯುತ್ತದೆ.
ಕಾಫಿ
ಕಾಫಿ ಪುಡಿಯನ್ನು ಒಂದು ಟ್ರೇಯಲ್ಲಿಟ್ಟು ಬೆಂಕಿ ಕೊಡಿ. ಇದನ್ನು ಉರಿಸುವುದರಿಂದ ಸೊಳ್ಳೆಗಳು ಓಡಿಹೋಗುತ್ತವೆ.
ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ
ಚೆಕ್ಕೆ ಎಣ್ಣೆ
ಚೆಕ್ಕೆಯನ್ನು ಕೇವಲ ಪಲಾವಿಗೆ ಮಾತ್ರ ಬಳಸುತ್ತೀರಾ? ಇದನ್ನು ಸೊಳ್ಳೆಯ ವಿರುದ್ಧವೂ ಬಳಸಿ ನೋಡಿ. ಚೆಕ್ಕೆಯ ಎಣ್ಣೆಯಲ್ಲಿ ಸೊಳ್ಳೆಯ ಮೊಟ್ಟೆಗಳೆಲ್ಲ ಸಾಯುತ್ತವಂತೆ. ದೊಡ್ಡ ಸೊಳ್ಳೆಗಳು ಚೆಕ್ಕೆ ಎಣ್ಣೆಗೆ ಹೆದರಿ ಓಡುತ್ತವಂತೆ. ಮೈಮೇಲೆ ಸ್ವಲ್ಪ ಹಚ್ಚಿಕೊಂಡರೂ ಸಾಕು, ಸೊಳ್ಳೆ ನಿಮ್ಮನ್ನು ಮೂಸುವ ಧೈರ್ಯವನ್ನೂ ಮಾಡಲಾರದು.