Site icon Vistara News

Natural Pain killers: ನಮ್ಮ ನೋವುಗಳಿಗೆ ಪ್ರಕೃತಿಯೇ ನೀಡಿದ ಪರಿಹಾರಗಳಿವು!

natural pain killers pudina clove turmeric ginger

ತಲೆನೋವು, ಸೊಂಟನೋವು, ಮೈ ಕೈ ನೋವು, ಕಾಲು ಸೆಳೆತ, ಹಲ್ಲು ನೋವು ಹೀಗೆ ಸಾಕಷ್ಟು ನೋವುಗಳನ್ನು ನಮ್ಮನ್ನು ಒಂದಲ್ಲ ಒಂದು ದಿನ ಕಾಡದೆ ಇರಲಾರದು. ಇಂತಹ ನೋವುಗಳಿಗೆ ತತ್ಕ್ಷಣದ ಪರಿಹಾರವೆಂದರೆ ನೋವು ನಿವಾರಕಗಳು. ನೋವುಗಳ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ನೋವು ನಿವಾರಕ ಮಾತ್ರೆಗಳನ್ನು ನುಂಗುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಆದರೆ, ಅದಕ್ಕೂ ಮೊದಲು ನಮ್ಮ ಸುತ್ತಮುತ್ತ, ಪ್ರಕೃತಿದತ್ತವಾದ ನೋವು ನಿವಾರಕಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇವುಗಳ ಸೇವನೆಯಿಂದ ನಿತ್ಯವೂ ಅನುಭವಿಸುವ ಕೆಲವು ಸಣ್ಣಪುಟ್ಟ ನೋವುಗಳಿಗೆ ಮುಕ್ತಿ ದೊರೆತು ಮನಸ್ಸು ನಿರಾಳವಾಗಿ, ದೇಹ ಹಗುರಾದಂತೆನಿಸುತ್ತದೆ. ಪ್ರಕೃತಿ ನಮಗಾಗಿ ನೀಡಿದ ಈ ಅಪರೂಪದ ಮೂಲಿಕೆಗಳ ಲಾಭವನ್ನು ನಾವು ನಿತ್ಯ ಪಡೆಯುವ ಮೂಲಕ ಆರೋಗ್ಯದ ಕಾಳಜಿ ಮಾಡಿಕೊಳ್ಳಬೇಕು. ಬನ್ನಿ, ನಮ್ಮ ಸುತ್ತಮುತ್ತ ಇರುವ ಐದು ಪ್ರಕೃತಿದತ್ತ ನೋವು ನಿವಾರಕಗಳಾವುದು (Natural pain killers) ಎಂಬುದನ್ನು ನೋಡೋಣ.

1. ಅರಿಶಿನ: ಆಹಾರಕ್ಕೆ ಹಳದಿ ಬಣ್ಣ ನೀಡುವ ಅರಿಶಿನ (turmeric) ಎಂಬ ನಮ್ಮ ನಿತ್ಯದ ಮಸಾಲೆ ಕೇವಲ ಮಸಾಲೆಯಷ್ಟೇ ಅಲ್ಲ, ಅದೊಂದು ಮ್ಯಾಜಿಕ್‌ ಮೂಲಿಕೆ ಕೂಡಾ ಹೌದು. ನಮ್ಮ ಹಿರಿಯರು, ಬಹಳ ಸಲ, ಗಾಯವಾದಾಗ, ಅಥವಾ ನೋವಿನಲ್ಲಿದ್ದಾಗ, ಎಲುಬು ಮೂಳೆ ಮುರಿದುಕೊಂಡಾಗ, ಕೀಟ ಕಡಿದಾಗ ಹೀಗಾ ನಾನಾ ಸಂದರ್ಭಗಳಲ್ಲಿ ಅರಿಶನವನ್ನು ಹಚ್ಚುವುದಕ್ಕೆ ಹಾಗೂ ಸೇವಿಸುವುದಕ್ಕೆ ಬಳಸುವುದನ್ನು ನೋಡಿರಬಹುದು. ಇಂಥ ಮನೆಮದ್ದುಗಳೆಲ್ಲ ಉಪಯೋಗಕ್ಕೆ ಬರುವುದಿಲ್ಲ ಎಂದು ನೀವು ಭಾವಿಸಿದರೆ ನಿಮ್ಮ ಎಣಿಕೆ ತಪ್ಪು ಯಾಕೆಂದರೆ ಅರಿಶಿನ ಪ್ರಕೃತಿದತ್ತವಾದ ನೋವುನಿವಾರಕವೂ ಹೌದು. ಇದರಲ್ಲಿ ಶಮನಕಾರೀ ಗುಣಗಳಿದ್ದು ನೋವು ಕಡಿಮೆಗೊಳಿಸುವ ಶಕ್ತಿಯೂ ಇದೆ. ಹಾಗಾಗಿ, ಮೂಳೆ ಮುರಿತಕ್ಕೊಳಗಾದಾಗಲೋ, ಬಿದ್ದು ಗಾಯಗೊಂಡಾಗಲೋ, ಅರಿಶಿನ ಹಾಲು ಕುಡಿಯುವುದು ಒಳ್ಳೆಯದು.

2. ಶುಂಠಿ: ನಿತ್ಯವೂ ಶುಂಠಿ (ginger) ಬಳಸುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದು ಕೇವಲ, ನೆಗಡಿ, ಶೀತಕ್ಕಷ್ಟೇ ಅಲ್ಲ, ಉತ್ತಮ ನೋವು ನಿವಾರಕವೂ ಹೌದು. ತಲೆನೋವು, ಮಾಂಸಖಂಡಗಳ ನೋವು ಇತ್ಯಾದಿಗಳಿಗೆ ಶುಂಠಿ ಉತ್ತಮ ಮನೆಮದ್ದು ಹೌದು. ರಾಷ್ಟ್ರೀಯ ಆರೋಗ್ಯ ಸಂಶ್ಥೆಯ ಪ್ರಕಾರ, ಶುಂಠಿ ಋತುಚಕ್ರದ ನೋವುಗಳಿಗೂ ಕೂಡಾ ಒಳ್ಳೆಯದು. ಹಾಗಾಗಿ, ಮಾಸಿಕ ಚಕ್ರದ ಸಂದರ್ಭ ಅತೀವ ನೋವುಗೂಂಟಾದಲ್ಲಿ, ಶುಂಠಿ ಟೀ ಕುಡಿದು ಸಮಾಧಾನದ ನಿಟ್ಟುಸಿರು ಪಡೆಯಬಹುದು.

ಇದನ್ನೂ ಓದಿ: Turmeric Milk: ಅರಿಶಿನ ಹಾಲು ಎಂಬ ಮನೆಮದ್ದನ್ನು ನಿತ್ಯವೂ ಬೇಸಿಗೆಯಲ್ಲಿ ಕುಡಿಯಬಹುದೇ?

3. ಲವಂಗ: ಲವಂಗವೂ (cloves) ಕೂಡಾ ಒಂದು ಬಗೆಯಲ್ಲಿ ನೋವು ನಿವಾರಕವೇ. ಮುಖ್ಯವಾಗಿ ಹಲ್ಲಿನ ಸಂಬಂಧೀ ನೋವುಗಳಿಗೆ ಲವಂಗವನ್ನು ತಲೆತಲಾಂತರದಿಂದ ಹಿರಿಯರು ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹಲ್ಲುನೋವಿಗೆ ಎಲ್ಲರೂ ಬಳಸುವ ಸಾಮಾನ್ಯ ಮನೆಮದ್ದು ಇದು.

4. ಚೆರ್ರಿ: ಬೇಸಗೆಯಲ್ಲಿ ದೊರೆಯುವ ಚೆರ್ರಿ ಹಣ್ಣುಗಳೂ ಕೂಡಾ ನೋವು ನಿವಾರಕಗಳು. ಇವುಗಳಲ್ಲಿ ಅತ್ಯಂತ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಮುಖ್ಯವಾಗಿ, ಮಾಂಸಖಂಡಗಳ ಸೆಳೆತ, ನೋವು ಇತ್ಯಾದಿಗಳಿಗೆ ಈ ಹಣ್ಣುಗಳ ಜ್ಯೂಸ್‌ ಮಾಡಿ ಕುಡಿಯುವ ಮೂಲಕ ಸಮಾಧಾನ ಕಂಡುಕೊಳ್ಳಬಹುದು.

5. ಪುದಿನ: ಪುದಿನ ಎಲೆಗಳ ಪರಿಮಳ ಯಾರಿಗಿಷ್ಟವಿಲ್ಲ ಹೇಳಿ? ತಾಜಾತನದ ಅನುಭೂತಿ ನೀಡುವ ವಿಶಿಷ್ಠ ಪರಿಮಳ ಇದರದ್ದು, ಇದಕ್ಕಾಗಿಯೇ ಇದನ್ನು ಟೂತ್‌ಪೇಸ್ಟ್‌ ಸೇರಿದಂತೆ ಹಲವು ವಸ್ತುಗಳಲ್ಲಿ ಬಳಸಲಾಗುತ್ತದೆ. ಪುದಿನ ಎಲೆಗಳಲ್ಲಿ ಕೂಡಾ ನೋವು ನಿವಾರಕ ಗುಣಗಳಿವೆ. ತಲೆನೋವು, ಮಾಂಸಖಂಡಗಳಲ್ಲಿ ನೋವು, ಹಲ್ಲು ನೋವುಗಳಿಗೆ ಪುದಿನ ಎಲೆಗಳಿಂದ ಸಾಕಷ್ಟು ಸಹಾಯವಾಗುತ್ತದೆ. ತಲೆನೋವಿನ ಸಂದರ್ಭ ಒಂದು ಪುದಿನ ಚಹಾ ಮಾಡಿ ಕುಡಿದು ನೋಡಿ,  ಹಾಯೆನಿಸಿದಂತಾಗುತ್ತದೆ. 

ಇದನ್ನೂ ಓದಿ: Health Tips: ಹಸಿ ಅರಿಶಿನ ಕೊಂಬು ಒಳ್ಳೆಯದೋ, ಒಣಗಿಸಿದ ಅರಿಶಿನ ಪುಡಿಯೋ?

Exit mobile version