Site icon Vistara News

Belly Fat Reduction: ಅಂಕೆ ಮೀರುತ್ತಿರುವ ನಿಮ್ಮ ಹೊಟ್ಟೆಗೆ ಲಗಾಮು ಹಾಕಬೇಕೆ? ಈ ಆಹಾರ ಪ್ರಯತ್ನಿಸಿ

Belly Fat Reduction

ಲೋಕದ ಎಲ್ಲರೂ ಬೆವರು ಹರಿಸುವುದು (Belly Fat Reduction) ತಂತಮ್ಮ ʻಹೊಟ್ಟೆಪಾಡಿʼಗಾಗಿ. ದಿನೇದಿನೆ ಅಂಕೆ ಮೀರುತ್ತಿರುವ ತೂಕ ಮತ್ತು ಹೊಟ್ಟೆಯ ಸುತ್ತಳತೆಗಳನ್ನು ನಿಗ್ರಹಿಸುವುದಕ್ಕಾಗಿಯೇ ಇಡೀ ಜಗತ್ತು ಬೆವರು ಹರಿಸುತ್ತಿದೆಯೇ ಎಂಬ ಭ್ರಮೆ ಹುಟ್ಟಿದರೆ ಅಚ್ಚರಿಯಿಲ್ಲ. ಅಷ್ಟರಮಟ್ಟಿಗೆ ಇಂಟರ್ನೆಟ್‌ ಪೂರಾ ತೂಕ ಇಳಿಸುವ ಜಪವನ್ನೇ ಕಾಣಬಹುದು. ವಾರವಿಡೀ ಬೇಕಾದ್ದಕ್ಕಿಂತ ಹೆಚ್ಚು ಬೇಡದ್ದನ್ನೇ ತಿಂದುಂಡುಕೊಂಡು, ವರ್ಷಾನುಗಟ್ಟಲೆ ಶ್ರಮವಹಿಸಿ ಆಯಾ ಶರೀರದ ಧಾರಣೆಯ ದುಪ್ಪಟ್ಟು ತೂಕವನ್ನು ಲೋಕವೆಲ್ಲ ಪೇರಿಸಿಕೊಂಡು ಕೂತಿರುವಾಗ, ವಾರ, ಹದಿನೈದು ದಿನಗಳಲ್ಲಿ ತೂಕ ಇಳಿಸುವ ಜಾದೂ ನಡೆಯದು. ಒಂದೊಮ್ಮೆ ಚುಟುಕು ಡಯೆಟ್‌ಗಳನ್ನು ಮಾಡಿದರೂ, ಅಷ್ಟೇ ಬೇಗ ತೂಕ ಏರುತ್ತದೆ. ಇದಕ್ಕಾಗಿ ಸುಸ್ಥಿರ ಬದಲಾವಣೆಗಳು ಬೇಕು. ಜೀವನಶೈಲಿಯನ್ನು ಹಸನು ಮಾಡಿಕೊಳ್ಳಬೇಕು. ನಿದ್ದೆ, ಆಹಾರ ಮತ್ತು ವ್ಯಾಯಾಮಗಳು ನಿತ್ಯವೂ ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ನಮಗೆ ತೂಕ ಇಳಿಸುವ ಮತ್ತು ಹೊಟ್ಟೆ ಕರಗಿಸುವ ಹಾದಿಯಲ್ಲಿ ನೆರವಾಗುತ್ತವೆ. ಯಾವುದವು?

ಓಟ್‌ಮೀಲ್‌

ನಾರಿನಂಶ ಹೇರಳವಾಗಿರುವ ಆಹಾರವಿದು. ಇದರಲ್ಲಿರುವ ಕರಗಬಲ್ಲ ನಾರಿನಂಶವು ದೇಹದಲ್ಲಿ ಜಮೆಯಾಗುವ ಕೆಟ್ಟ ಕೊಬ್ಬು, ಕೊಲೆಸ್ಟ್ರಾಲ್‌ಗಳನ್ನು ಕಡಿತ ಮಾಡಬಲ್ಲದು. ನಾರಿನಂಶ ಹೆಚ್ಚಿರುವ ಯಾವುದೇ ಆಹಾರಗಳನ್ನು ತಿಂದಾಗಲೂ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತವೆ. ಇದರಿಂದ ಆಗಾಗ ಹಸಿವಿನ ಅನುಭವವಾಗದೆ, ಪದೇಪದೆ ತಿನ್ನುತ್ತಿರಬೇಕೆಂಬ ಬಯಕೆ ಕಾಡುವುದಿಲ್ಲ. ಜೊತೆಗೆ, ದೇಹ ಬಳಲದಂತೆ ಸುಸ್ಥಿರವಾದ ಶಕ್ತಿಯನ್ನು ಸಹ ಒದಗಿಸುತ್ತದೆ. ಇದರ ಗ್ಲೈಸೆಮಿಕ್‌ ಸೂಚಿ ಕೂಡ ಕಡಿಮೆ ಇದ್ದು, ರಕ್ತದಲ್ಲಿ ಸಕ್ಕರೆಯಂಶ ದಿಢೀರ್‌ ಏರದಂತೆ ತಡೆಯಬಲ್ಲದು. ಇದನ್ನು ಬೆಳಗಿನ ತಿಂಡಿ ಅಥವಾ ರಾತ್ರಿಯೂಟಕ್ಕೆ ಬಳಸುವುದು ಹೆಚ್ಚು.

ಮೀನು

ಅತ್ಯಂತ ಆರೋಗ್ಯಕರ ಕೊಬ್ಬನ್ನು ದೇಹಕ್ಕೆ ನೀಡಿ, ಜೊತೆಗೆ ಸಾಕಷ್ಟು ಪ್ರೊಟೀನ್‌ ಸಹ ಒದಗುವಂತೆ ಮಾಡಬಲ್ಲ ಆಹಾರವಿದು. ಮೀನುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ದೇಹಕ್ಕೆ ಹತ್ತಾರು ರೀತಿಯಲ್ಲಿ ಉಪಕಾರಿ. ಕೆಟ್ಟ ಕೊಬ್ಬನ್ನು ಕರಗಿಸಿ, ಹೃದಯವನ್ನು ಕಾಪಾಡಬಲ್ಲದು; ಮೆದುಳಿಗೆ ಅಗತ್ಯ ಪೋಷಣೆಯನ್ನು ಒದಗಿಸಬಲ್ಲದು. ಇದರ ಖನಿಜಗಳು, ಕೊಬ್ಬು ಮತ್ತು ಪ್ರೊಟೀನ್‌ ಅಂಶಗಳು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತಿರಿಸಿ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ.

ಕಾಳುಗಳು

ಯಾವುದೇ ರೀತಿಯ ಕಾಳುಗಳು ಆರೋಗ್ಯಕ್ಕೆ ಬೇಕಾದವು. ಅವುಗಳನ್ನು ಮೊಳಕೆ ತರಿಸಿ ತಿಂದರೆ ಇನ್ನೂ ಉತ್ತಮ ಪರಿಣಾಮಗಳನ್ನು ಕಾಣಬಹುದು. ಅದಾಗದಿದ್ದರೆ ನೆನೆಸಿ ಬೇಯಿಸಿದರೂ ಒಳ್ಳೆಯದೆ. ರಾಜ್ಮ, ಕಡಲೆ, ಹೆಸರು, ಹುರುಳಿ ಮುಂತಾದವು ಒಳ್ಳೆಯ ನಾರು ಮತ್ತು ಪ್ರೊಟೀನನ್ನು ಒದಗಿಸುತ್ತವೆ. ಇದಲ್ಲದೆ, ಬಟಾಣಿ, ತೊಗರಿ, ಅವರೆ ಮುಂತಾದ ಕಾಳುಗಳನ್ನು ಹಸಿಯಾಗಿದ್ದಾಗಲೇ ಅಡುಗೆಯಲ್ಲಿ ಬಳಸಿದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.

ಕಾಯಿ-ಬೀಜಗಳು

ಪ್ರೊಟೀನ್‌, ವಿಟಮಿನ್‌, ಕೊಬ್ಬು ಮತ್ತು ನಾರಿನಂಶಗಳು ತೂಕ ಇಳಿಸುವುದಕ್ಕೆ ಮತ್ತು ಹೊಟ್ಟೆಯ ಕೊಬ್ಬು ಕತ್ತರಿಸುವುದಕ್ಕೆ ನೆರವಾಗುತ್ತವೆ. ದೇಹಕ್ಕೆ ಹಲವು ರೀತಿಯ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ, ಶಕ್ತಿಯ ಕೊರತೆ ಆಗದಂತೆ ಕಾಪಾಡುತ್ತವೆ. ಊಟ-ತಿಂಡಿಗಳ ನಡುವೆ ಹಸಿವಾದಾಗ ಬೇರೇನನ್ನೂ ತಿನ್ನದೆ ಒಂದಿಷ್ಟು ಕಾಯಿ-ಬೀಜಗಳನ್ನು ಮೆಲ್ಲುವುದು ಆರೋಗ್ಯಕರ ಅಭ್ಯಾಸಗಳಲ್ಲಿ ಒಂದು.

ಚಿಯಾ ಬೀಜ

ಪ್ರೊಟೀನ್‌, ನಾರು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿರುವ ಈ ಸಣ್ಣ ಬೀಜಗಳು ಖನಿಜಗಳ ಖನಿಯೂ ಹೌದು. ಕುಡಿಯುವ ನೀರಿನ ಬಾಟಲಿಗೆ ಒಂದು ಚಮಚ ಚಿಯಾ ಬೀಜ ಹಾಕಿಕೊಂಡು ಕುಡಿದರೂ ಸಾಕು, ಇದಕ್ಕಿಂತ ಹೆಚ್ಚಿನ ತಯಾರಿ ಬೇಡ ಚಿಯಾ ಸೇವನೆಗೆ. ಅದಲ್ಲದೆ, ನೆನೆಸಿದ ಚಿಯಾ ಬೀಜಗಳನ್ನು ಪಾನಕಕ್ಕೆ, ಹಾಲಿಗೆ, ಸ್ಮೂದಿಗಳಿಗೆ, ಸಲಾಡ್‌ಗಳೊಂದಿಗೂ ಸೇರಿಸಿ ಸೇವಿಸಬಹುದು.

ಕಿವಿ ಹಣ್ಣು

ದೇಹಕ್ಕೆ ಸಾಕಷ್ಟು ಗ್ಲೂಕೋಸ್‌ ಅಂಶದೊಂದಿಗೆ ಭರಪೂರ ನಾರನ್ನೂ ನೀಡುವಂಥ ಹಣ್ಣಿದು. ಬೇಸಿಗೆಯಲ್ಲಿ ಬಳಲುವ ದೇಹಕ್ಕೆ ಅಗತ್ಯ ಶಕ್ತಿಯನ್ನು ನೀಡಿ, ಬೇಗನೇ ಹಸಿವಾಗದಂತೆ ಕಾಪಾಡುತ್ತದೆ. ಇದು ತೂಕ ಇಳಿಸುವವರಿಗೆ ಪೂರಕ. ಇದರಲ್ಲಿರುವ ವಿಟಮಿನ್‌ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಗುಣವನ್ನು ಹೊಂದಿವೆ. ಮಾರಕ ರೋಗಗಳ ಭೀತಿಯನ್ನೂ ದೂರ ಮಾಡುವ ಸಾಮರ್ಥ್ಯ ಹೊಂದಿವೆ.

Exit mobile version