ಆಯುರ್ವೇದದ ಪ್ರಕಾರ, ಕಹಿಬೇವು ಪುರಾತನ ಕಾಲದಿಂದಲೂ ಅಂದರೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನಿಂದಲೂ ಮನುಷ್ಯ ಔಷಧೀಯ ಗುಣಗಳನ್ನು ಕಂಡುಕೊಂಡು ಬಳಸುತ್ತಿದ್ದಾನೆ. ಪ್ರಕೃತಿ ತನ್ನಲ್ಲಿ ತೊಂದರೆಯೊಂದಿಗೆ ಹೇಗೆ ಪರಿಹಾರವನ್ನೂ ಕೊಟ್ಟಿದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಗುಣಗಳನ್ನು ಹೊಂದಿರುವ ಕಹಿಬೇವು ರುಚಿಯಲ್ಲಿ ಕಹಿಯಾದರೂ, ಮನುಷ್ಯನಿಗೆ ಆರೋಗ್ಯದ ಸಿಹಿಯುಣಿಸುವ ಸಸ್ಯ. ಬನ್ನಿ ಕಹಿಬೇವಿನಿಂದಾಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
1. ಗಾಯಕ್ಕೆ, ಕೀಟಗಳ ಕಡಿತಕ್ಕೆ: ಕಹಿಬೇವು ಗಾಯವನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಕಹಿಬೇವಿನ ಪೇಸ್ಟನ್ನು ಗಾಯಕ್ಕೆ ಹಚ್ಚಿದರೆ ಅಥವಾ ಕೀಟಗಳ ಕಡಿತದ ಮೇಲೆ ಹಚ್ಚಿದರೆ, ಗಾಯ ಬಹುಬೇಗನೆ ಗುಣಮುಖವಾಗುತ್ತದೆ. ದಿನದಲ್ಲಿ ಮೂರ್ನಾಲ್ಕು ಬಾರಿ ಹಚ್ಚಬಹುದು.
2. ತಲೆಹೊಟ್ಟಿಗೆ: ಒಂದಿಷ್ಟು ಕಹಿಬೇವಿನ ಸೊಪ್ಪನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕುದಿಸಿ, ಆ ನೀರು ಹಸಿರು ಬಣ್ಣಕ್ಕೆ ತಿರುಗಿದಾಗ ಅದನ್ನು ತಣ್ಣಗಾಗಲು ಬಿಡಿ. ನಂತರ ತಲೆಯನ್ನು ಶಾಂಪೂನಿಂದ ತೊಳೆದ ಮೇಲೆ ಈ ಕಹಿಬೇವಿನ ನೀರಿನಿಂದ ಕೊನೆಯಲ್ಲಿ ತೊಳೆದುಕೊಳ್ಳಿ. ಕೂದಲುದುರುವಿಕೆಗೂ ಇದು ಒಳ್ಳೆಯ ಮದ್ದು.
3. ಕಣ್ಣಿನ ತೊಂದರೆಗೆ: ಕಹಿಬೇವಿನ ಸೊಪ್ಪನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಅದನ್ನು ತಣ್ಣಗಾಗಲು ಬಿಟ್ಟು ಆ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಿ. ಕಣ್ಣು ತುರಿಸುವಿಕೆ, ಕಣ್ಣಿನಲ್ಲಿ ಸುಸ್ತು ಅಥವಾ ಕಣ್ಣು ಕೆಂಪಾಗುವುದು ಇತ್ಯಾದಿ ಕಣ್ಣಿನ ತೊಂದರೆಗೆ ಇದು ಒಳ್ಳೆಯದು.
4. ಮೊಡವೆಗೆ: ಕಹಿಬೇವಿನ ಸೊಪ್ಪನ್ನು ಚೆನ್ನಾಗಿ ಪೇಸ್ಟ್ ಮಾಡಿ ಪ್ರತಿನಿತ್ಯವೂ ಮುಖಕ್ಕೆ ಹಚ್ಚಿ. ಮೊಡವೆಯು ಬೇಗನೆ ಒಣಗುತ್ತದೆ. ಕಪ್ಪು ಕಲೆಗಳು, ಕಜ್ಜಿಯಂತಹುಗಳಿಗೂ ಇದು ಒಳ್ಳೆಯದು.
5 ಕಿವಿಗೆ: ಕಹಿಬೇವಿನ ಸೊಪ್ಪನ್ನು ಹಿಂಡಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕಿವಿಗೆ ಒಂದೆರಡು ಬಿಂದು ಹಾಖಿದರೆ ಕಿವಿಯ ಕಜ್ಜಿ ಗುಣವಾಗುತ್ತದೆ.
6. ಚರ್ಮದ ತೊಂದರೆಗಳು: ಕಹಿಬೇವಿನ ಪೇಸ್ಟ್ ಜೊತೆಗೆ ಅರಿಶಿನ ಸೇರಿಸಿ ಕಜ್ಜಿ, ತುರಿಕೆ, ರಿಂಗ್ ವರ್ಮ್, ಎಕ್ಸಿಮಾ ಹಾಗೂ ಸಣ್ಣಪುಟ್ಟ ಚರ್ಮದ ತೊಂದರೆಗಳ ಮೇಲೆ ಹಚ್ಚಿದರೆ ಅವು ಕಡಿಮೆಯಾಗುತ್ತದೆ.
7. ರೋಗನಿರೋಧಕತೆ: ಕಹಿಬೇವಿನ ಸೊಪ್ಪನ್ನು ಜಜ್ಜಿ ರಸ ಹಿಂಡಿ ಅದನ್ನು ಒಂದು ಲೋಟ ನೀರಿಗೆ ಸೇರಿಸಿ ಕುಡಿದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
8. ಅಡುಗೆಗೂ ಬೇಕು: ಕಹಿಬೇವಿನ ಹೂ ಅತ್ಯಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ಅಡುಗೆಗೂ ಬಳಸುವ ಮೂಲಕ ಸಾಕಷ್ಟು ಪೋಷಕಾಂಶಗಳು, ಔಷಧೀಯ ಸತ್ವಗಳು ದೇಹಕ್ಕೆ ಸೇರುತ್ತವೆ. ಕಹಿಬೇವಿನ ಹೂವಿನ ರೈಸ್‌ಬಾತ್, ಪಚಡಿ, ರಸಂ ಇತ್ಯಾದಿಗಳನ್ನು ಮಾಡಬಹುದು. ಕರುಳಿನ ಜಂತು ಹುಳುವಿನ ಸಮಸ್ಯೆಗೆ ಇದು ಒಳ್ಳೆಯದು.
ಇದನ್ನೂ ಓದಿ: Health Tips | ಕರಿಬೇವಿನ ಸೊಪ್ಪು- ಏಕೆ ಬೇಕು?
9. ತೊಗಟೆಯೂ ಮದ್ದು: ಕಹಿಬೇವಿನ ತೊಗಟೆಯೂ ಕೂಡಾ ಔಷಧಿಯೇ. ಪುರಾತನ ಕಾಲದಿಂದಲೂ ಕಹಿಬೇವಿನ ಕಡ್ಡಿಯಿಂದ ನಿತ್ಯವೂ ಜನರು ಹಲ್ಲು ಕ್ಲೀನ್ ಮಾಡುತ್ತಿದ್ದುದು ಗೊತ್ತೇ ಇದೆ. ಕಹಿಬೇವಿನ ಕಡ್ಡಿಯನ್ನು ಬ್ರಷ್‌ನಂತೆ ಮಾಡಿ ಬಳಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಇದು ಹಲ್ಲನ್ನು ಸ್ವಚ್ಛ ಮಾಡುವುದಲ್ಲದೆ, ಹಲ್ಲನ್ನು ಆರೋಗ್ಯಯುತವಾಗಿ ನೋಡಿಕೊಳ್ಳುತ್ತದೆ.
10. ಮಸಾಜ್: ಕಹಿಬೇವಿನ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಮುಖದಲ್ಲಿ ಸುಕ್ಕು, ನಿರಿಗೆಗಳು ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಆಂಟಿ ಏಜಿಂಗ್ ಗುಣಗಳನ್ನು ಹೊಂದಿದೆ.
11. ಸೊಳ್ಳೆ ಓಡಿಸಿ: ಕಹಿಬೇವಿನ ಎಣ್ಣೆಯನ್ನು ಅಥವಾ ಕಹಿಬೇವಿನ ಪುಡಿಯನ್ನು ದೇಹಕ್ಕೆ ಹಚ್ಚಿಕೊಳ್ಳುವ ಮೂಲಕ ತೆಂಗಿನೆಣ್ಣೆಯಲ್ಲಿ ಮಿಕ್ಸ್ ಮಾಡಿ ಸೊಳ್ಳೆ ಕಚ್ಚದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
12. ಬ್ಲ್ಯಾಕ್‌ಹೆಡ್ ನಿವಾರಕ: ಮುಖದ ಮೇಲಿನ ಬ್ಲ್ಯಾಕ್‌ಹೆಡ್‌ಗೆ ಕೂಡಾ ಕಹಿಬೇವು ಒಳ್ಳೆಯದು. ಕಹಿಬೇವಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳುವುದು. ಇದನ್ನು ಅಗಾಗ ಮಾಡುವುದರಿಂದ ಬ್ಲ್ಯಾಕ್ ಹೆಡ್ ಮಾಯವಾಗುತ್ತದೆ.
ಇದನ್ನೂ ಓದಿ: Curry leaves: ಕೂದಲಿಗೂ ಹಾಕಿ ಕರಿಬೇವಿನ ‘ಒಗ್ಗರಣೆ’; ಸಿದ್ಧಪಡಿಸಿಕೊಳ್ಳಿ ಪೇಸ್ಟ್, ಎಣ್ಣೆ!