Site icon Vistara News

Nipah Virus: ಡೇಂಜರಸ್‌ ನಿಫಾ ವೈರಸ್‌; ಇದರ ಲಕ್ಷಣಗಳೇನು? ನಮಗೆ ಅಪಾಯ ಇದೆಯೆ?

Nipah Virus

ಡೆಂಗ್ಯೂ ಮತ್ತು ಜಿಕಾ ಸೋಂಕುಗಳ (Nipah Virus) ಭೀತಿಯಲ್ಲಿ ನರಳುತ್ತಿರುವ ದಿನಗಳಲ್ಲೇ ನಿಫಾ ವೈರಸ್‌ ಸಹ ಸುದ್ದಿ ಮಾಡುತ್ತಿದೆ. ಅದರಲ್ಲೂ ನೆರೆಯ ರಾಜ್ಯ ಕೇರಳದ ಕೋಯಿಕ್ಕೋಡ್‌ನಲ್ಲಿ ಹದಿಹರೆಯದ ಬಾಲಕನೊಬ್ಬ ಈ ವೈರಸ್‌ಗೆ ಮೃತಪಟ್ಟಿರುವುದು ಆತಂಕ ಮೂಡಿಸಿದೆ. 2018ರಲ್ಲಿ ಕೇರಳ ಇದೇ ಪ್ರದೇಶಗಳಲ್ಲಿ ನಿಫಾ ವೈರಸ್‌ ಕಾಣಿಸಿಕೊಂಡಿದ್ದು, 17 ಮಂದಿ ಮೃತಪಟ್ಟಿದ್ದರು. 1999ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿಗೆ ಈ ವೈರಸ್‌ ಪತ್ತೆಯಾಗಿತ್ತು. ಬಾವಲಿಗಳಿಂದ ಉಳಿದ ಜೀವಿಗಳಿಗೆ ಹರಡುವ ಈ ವೈರಸ್‌ಗೆ ಯಾವುದೇ ಲಸಿಕೆಗಳಾಗಲಿ ಅಥವಾ ನಿಗದಿತ ಚಿಕಿತ್ಸೆಯಾಗಲೀ ಇಲ್ಲ. ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರನ್ನು ಪ್ರತ್ಯೇಕ ಇರಿಸಿಯೇ ಚಿಕಿತ್ಸೆ ನೀಡಬೇಕಾಗುತ್ತದೆ.

ಲಕ್ಷಣಗಳೇನು?

ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾದರೆ ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು. ಯಾವುದೇ ಸೋಂಕುಗಳಲ್ಲೂ ಮೊದಲಿಗೆ ಜ್ವರ ಕಾಣಬಹುದು. ನಿಫಾ ವೈರಸ್‌ ಸೋಂಕು ತಾಗಿದರೂ ಮೊದಲಿಗೆ ತೀವ್ರ ಸುಡುವ ಜ್ವರ ಕಾಣುತ್ತದೆ. ಇದರ ಬೆನ್ನಿಗೆ ಉಳಿದ ಲಕ್ಷಣಗಳು ಕಂಡುಬರುತ್ತವೆ. ತೀವ್ರ ಪ್ರಮಾಣದ ತಲೆನೋವು ಸಹ ಈ ಸೋಂಕಿನಲ್ಲಿ ಸಾಮಾನ್ಯ. ಸಿಕ್ಕಾಪಟ್ಟೆ ಮೈ-ಕೈ ನೋವು, ಸುಸ್ತು ಸಹ ಉಳಿದೆಲ್ಲ ಸೋಂಕುಗಳಲ್ಲಿ ಇರುವಂತೆಯೆ ಇರಬಹುದು. ಜೊತೆಗೆ, ಕೆಮ್ಮು, ಗಂಟಲಲ್ಲಿ ಉರಿ, ಉಸಿರಾಟದ ತೊಂದರೆಗಳು ಕಾಣಬಹುದು. ಇದಿಷ್ಟು ಲಕ್ಷಣಗಳು ಕಾಣುವಾಗಲೇ ವೈದ್ಯಕೀಯ ನೆರವು ಕೋರುವುದು ಅಗತ್ಯ. ಸೋಂಕು ಮುಂದುವರಿದಂತೆ ತಲೆ ಸುತ್ತುವುದು, ಮಾನಸಿಕ ಗೊಂದಲ ಕಾಣುವುದು ಮಹತ್ವದ್ದು. ಇದರರ್ಥ ಕೇಂದ್ರ ನರಮಂಡಲವನ್ನು ಸೋಂಕು ವ್ಯಾಪಿಸುತ್ತಿದ್ದು, ತುರ್ತಾಗಿ ವೈದ್ಯಕೀಯ ನೆರವು ರೋಗಿಗೆ ಬೇಕಾಗಿದೆ. ಎನ್ಸೆಫಲೈಟಿಸ್‌ ರೀತಿಯಲ್ಲಿ ಮೆದುಳಿನಲ್ಲಿ ಊತ ಉಂಟಾಗುತ್ತಿರುವ ಲಕ್ಷಣವಿದು. ಈ ಹಂತವನ್ನು ಪ್ರವೇಶಿಸುವ ಮುನ್ನವೇ ಚಿಕಿತ್ಸೆ ಆರಂಭವಾಗಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಕಡಿಮೆ. ಒಮ್ಮೆ ಈ ಲಕ್ಷಣಗಳು ಕಾಣತೊಡಗಿದರೆ, ರೋಗಿಗೆ ಅಪಸ್ಮಾರ ಆರಂಭವಾಗಿ, ಕೋಮಾಗೆ ಹೋಗಿ, ಜೀವಕ್ಕೆ ಎರವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ವೈರಸ್‌ ಸೋಂಕಿನ ಲಕ್ಷಣಗಳು ಆರಂಭ ಆಗುತ್ತಿದ್ದಂತೆಯೇ ಹೆಚ್ಚಿನ ಜಾಗ್ರತೆ ವಹಿಸಬೇಕು. ಅದರಲ್ಲೂ ನಿಫಾ ಸೋಂಕು ಇರುವಂಥ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದರೆ, ಜ್ವರ ಬರುತ್ತಿದ್ದಂತೆ ವೈದ್ಯರಲ್ಲಿ ವಿಷಯ ತಿಳಿಸುವುದು ಸೂಕ್ತ.

ಯಾರಿಗೆಲ್ಲ ಅಪಾಯ ಹೆಚ್ಚು?

ನಿಫಾ ವೈರಸ್‌ ಸೋಂಕು ಯಾರಿಗೂ ಬರಬಹುದು. ಆದರೂ, ಕೆಲವರಿಗೆ ಇದರ ಅಪಾಯ ಹೆಚ್ಚು. ಯಾರಾರಿಗೆ ಇದರ ಅಪಾಯ ಹೆಚ್ಚು ಮತ್ತು ಅಧಿಕ ಜಾಗ್ರತೆಯನ್ನು ವಹಿಸಬೇಕು ಎಂಬುದನ್ನು ಈಗ ನೋಡೋಣ.

ಪಶುಸಂಗೋಪನೆ

ರೈತರು ಮತ್ತು ಪಶುಸಂಗೋಪನೆಯಲ್ಲಿ ಇರುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಅದರಲ್ಲೂ ಹಂದಿ ಸಾಕಣಿಕೆ ಮಾಡುವವರು, ಬಾವಲಿಗಳು ಹೆಚ್ಚಿರುವಂಥ ಜಾಗಗಳಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿ. ಬಾವಲಿಗಳೇ ನಿಫಾ ವೈರಸ್‌ನ ಕೇಂದ್ರಸ್ಥಳ. ಹಂದಿಗಳು ಸಹ ಈ ವೈರಸ್‌ಗಳನ್ನು ಮಧ್ಯಂತರವಾಗಿ ದಾಟಿಸುತ್ತಿರುವುದು ಖಾತ್ರಿಯಾಗಿದೆ. ಹಾಗಾಗಿ ಪ್ರಾಣಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವವರು, ಸೋಂಕಿನ ಲಕ್ಷಣಗಳನ್ನು ಉದಾಸೀನ ಮಾಡಬೇಡಿ.

ಆರೋಗ್ಯ ಕಾರ್ಯಕರ್ತರು

ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರುವ ಆರೋಗ್ಯ ಕಾರ್ಯಕರ್ತರು ಅಪಾಯಕ್ಕೆ ಸಿಲುಕಬಹುದು. ಕಾರಣ ಬಹಳಷ್ಟು ಸೋಂಕುಗಳ ಆರಂಭಿಕ ಲಕ್ಷಣಗಳಲ್ಲಿ ಜ್ವರ, ಮೈ-ಕೈ ನೋವು, ತಲೆನೋವು ಇತ್ಯಾದಿಗಳು ಕಾಣುತ್ತವೆ. ಹಾಗಾಗಿ ನಿಫಾ ಸೋಂಕು ಎಂಬುದು ಗೊತ್ತಿಲ್ಲದೆಯೇ ರೋಗಿಯ ಸಂಪರ್ಕಕ್ಕೆ ಕಾರ್ಯಕರ್ತರು ಬಂದಿರಬಹುದು.

ಕುಟುಂಬದವರು

ಇದಲ್ಲದೆ, ರೋಗಿಯ ಕುಟುಂಬದವರು ಮತ್ತು ಅವರ ನೇರ ಸಂಪರ್ಕಕ್ಕೆ ಬಂದ ಯಾರೇ ಆದರೂ ಸೋಂಕು ಪತ್ತೆಗಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಕಚೇರಿಯಲ್ಲಿ ಜೊತೆಗೇ ಇರುವವರೂ ತಪಾಸಣೆಗೆ ಒಳಗಾಗುವುದು ಸೂಕ್ತ. ಕಾರಣ, ಎಂಜಲು ಸೇರಿದಂತೆ ದೇಹದ ಯಾವುದೇ ದ್ರವ, ಸ್ರಾವದ ಮೂಲಕವೂ ಈ ವೈರಸ್‌ ಪ್ರಸರಣವಾಗುತ್ತದೆ.

ಇದನ್ನೂ ಓದಿ: World Brain Day: ಮೆದುಳನ್ನು ಸದಾ ಚುರುಕಾಗಿಡಲು ಈ ಪೇಯಗಳನ್ನು ಕುಡಿಯುತ್ತಿರಿ!

ಪ್ರಯಾಣದ ಹಿನ್ನೆಲೆಯವರು

ಕೆಲವು ಭೌಗೋಳಿಕ ಪ್ರದೇಶದಲ್ಲಿ ನಿಫಾ ಸೋಂಕು ಇದೆ, ಆ ವೈರಸ್‌ ಸಕ್ರಿಯವಾಗಿದೆ ಎಂಬುದನ್ನು ತಿಳಿಯದೆಯೇ ಅಲ್ಲಿಗೆ ಪ್ರಯಾಣ ಮಾಡಿರಬಹುದು. ಭಾರತದಲ್ಲೇ ಕೆಲವು ಜಾಗಗಳು, ಬಾಂಗ್ಲಾದೇಶದ ಕೆಲವೆಡೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ತಿಳಿದೊ/ ತಿಳಿಯದೆಯೊ ಸೋಂಕು ಅಂಟಬಹುದು. ಪ್ರಯಾಣದ ನಂತರ ಯಾವುದೇ ಜ್ವರದ ಲಕ್ಷಣಗಳು ಕಂಡರೂ ಮೊದಲು ವೈದ್ಯಕೀಯ ನೆರವು ಪಡೆಯಿರಿ. ಎಲ್ಲಿಗೆ ಪ್ರಯಾಣ ಮಾಡಿದ್ದಿರಿ ಎಂಬುದನ್ನೂ ವೈದ್ಯರಿಗೆ ತಿಳಿಸಿ.

Exit mobile version