Site icon Vistara News

Nose Bleeding: ಬೇಸಿಗೆಯಲ್ಲಿ ಮೂಗಿನಲ್ಲಿ ರಕ್ತ ಬರುವುದೇಕೆ? ಪರಿಹಾರವೇನು?

nose bleeding

ಮೂಗಿನಲ್ಲಿ ರಕ್ತ (Nose Bleeding) ಬರುವುದು ಬಹಳಷ್ಟು ಜನರಿಗೆ ಒಂದಲ್ಲಾ ಒಂದು ಬಾರಿ ಆಗಿರಬಹುದು. ಸಾಮಾನ್ಯವಾಗಿ ಅಂಥ ಗಂಭೀರ ಸಮಸ್ಯೆ ಇದಲ್ಲವಾದರೂ, ಆಗುತ್ತಿರುವುದೇಕೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ, ಹೀಗಾಗುವುದಕ್ಕೆ ಕಾರಣಗಳು ಹಲವು. ಅದರಲ್ಲೂ ಬೇಸಿಗೆಯಲ್ಲಿ ಮೂಗಿನಲ್ಲಿ ರಕ್ತ ಸೋರುವುದು ಸ್ವಲ್ಪ ಹೆಚ್ಚು. ಏಕೆ ಹೀಗಾಗುತ್ತದೆ?

ಕಾರಣಗಳು ಹಲವು

ಒಣಹವೆ ಹೆಚ್ಚಾದರೆ ಹೀಗಾಗುವ ಸಾಧ್ಯತೆಯಿದೆ. ವಾತಾವರಣದ ಶುಷ್ಕತೆಯಿಂದಾಗಿ ಮೂಗಿನೊಳಗಿನ ಕೊಶಗಳು ಬಿರಿದು, ರಕ್ತ ಜಿನುಗುವ ಸಾಧ್ಯತೆಯಿದೆ. ಇದಲ್ಲದೆ, ಮೂಗಿಗೆ ಪೆಟ್ಟಾಗಿದ್ದರೆ, ಮೂಗು ಸ್ವಚ್ಛ ಮಾಡಿಕೊಳ್ಳುವ ಅಥವಾ ತುರಿಸಿಕೊಳ್ಳುವ ಭರದಲ್ಲಿ ಗಾಯ ಮಾಡಿಕೊಂಡಿದ್ದರೆ ರಕ್ತ ಸೋರಬಹುದು.

ಅಲರ್ಜಿ ಮತ್ತು ಸೋಂಕುಗಳು

ದೇಹದಲ್ಲಿ ಕೆಲವೊಮ್ಮೆ ಉರಿಯೂತ ಇದ್ದಾಗ ಅಥವಾ ಇನ್ನಾವುದೇ ರೀತಿಯ ಅಲರ್ಜಿ ಇದ್ದಾಗ ಹೀಗಾಗುವ ಸಂಭವ ಇಲ್ಲದಿಲ್ಲ. ಸೈನಸ್‌ ಸೋಂಕು ಇಲ್ಲವೇ ಸಾಮಾನ್ಯ ನೆಗಡಿಯಿಂದಲೂ ಮೂಗಿನೊಳಗೆ ಹುಣ್ಣಾಗಿ ಸೋಂಕಾಗಬಹುದು. ಆಗಲೂ ಮೂಗಿನಿಂದ ರಕ್ತ ಬರುವ ಸಾಧ್ಯತೆಯಿದೆ. ಇದಲ್ಲದೆ, ರಕ್ತದೊತ್ತಡ ಅತಿ ಹೆಚ್ಚಾದರೆ, ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿದ್ದರೆ, ಟ್ಯೂಮರ್‌ಗಳಿದ್ದರೂ ಈ ಲಕ್ಷಣ ಕಾಣಬಹುದು.

ಬೇಸಿಗೆಯಲ್ಲೇ ಹೆಚ್ಚೇಕೆ?

ವರ್ಷದ ಉಳಿದೆಲ್ಲಾ ದಿನಗಳಿಗಿಂತಲೂ ಬೇಸಿಗೆಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮೂಗಿನಲ್ಲಿ ರಕ್ತ ಸೋರುವ ಪ್ರಕರಣಗಳು ವರದಿಯಾಗುತ್ತವೆ. ಇದಕ್ಕೂ ಹಲವು ಕಾರಣಗಳಿರಬಹುದು. ಬೇಸಿಗೆಯಲ್ಲಿ ದೇಹಕ್ಕೆ ನೀರು ಕಡಿಮೆಯಾಗಿ ಒಣಗಿದ ಅನುಭವ ಹೆಚ್ಚಾಗಬಹುದು. ಈ ನಿರ್ಜಲೀಕರಣದಿಂದಲೇ ಮೂಗಿನೊಳಗಿನ ಕೋಶಗಳೂ ಶುಷ್ಕವಾಗಿ, ಬಿರಿದು, ರಕ್ತ ಜಿನುಗಬಹುದು.

ವಾತಾವರಣದಲ್ಲಿ ತೇವ ಅತಿಯಾದರೂ ಕೆಲವೊಮ್ಮೆ ಸಮಸ್ಯೆ ತರುತ್ತದೆ. ಅಂದರೆ, ಆರ್ದ್ರತೆ ಹೆಚ್ಚಿರುವ ಸಂದರ್ಭದಲ್ಲೂ ಮೂಗಿನೊಳಗಿನ ಕೋಶಗಳು ಊದಿಕೊಂಡು ರಕ್ತ ಸ್ರವಿಸುವ ಸಾಧ್ಯತೆಯಿದೆ. ಬೇಸಿಗೆಯ ಅಲರ್ಜಿಗಳಿಗಾಗಿ ಅಲರ್ಜಿ ನಿವಾರಕ ಅಥವಾ ನೆಗಡಿ ಕಡಿಮೆ ಮಾಡುವ ಔಷಧಿಗಳನ್ನು ಸೇವಿಸಿದ್ದಲ್ಲಿ, ಅದೂ ಮೂಗಿನಲ್ಲಿ ನೆತ್ತರು ಸೋರುವುದಕ್ಕೆ ಕಾರಣವಾಗಿರಬಹುದು.

ಕ್ರೀಡಾ ಚಟುವಟಿಕೆಗಳು

ಬೇಸಿಗೆಯಲ್ಲಿ ನಾನಾ ರೀತಿಯ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ ಹೆಚ್ಚಿರುತ್ತದೆ. ಸೈಕಲ್‌ ಹೊಡೆಯವುದರಿಂದ ಹಿಡಿದು, ಫುಟ್‌ಬಾಲ್‌, ಬ್ಯಾಸ್ಕೆಟ್‌ ಬಾಲ್‌, ವಾಲಿಬಾಲ್‌ ನಂಥ ಹತ್ತು ಹಲವು ಆಟಗಳಲ್ಲಿ ತೊಡಗಿಸಿಕೊಳ್ಳುವ ಹೊತ್ತಿದು. ಬೀಳುವುದು, ಬಾಲ್‌ ಬಡಿಯುವುದು ಇಂಥ ಯಾವುದರಿಂದಲೂ ಮೂಗಿಗೆ ಪೆಟ್ಟಾಗಬಹುದು. ಇನ್ನು ಬೇಸಿಗೆಯ ಮೆಚ್ಚಿನ ಚಟುವಟಿಕೆ ಈಜಿನಿಂದಲೂ ಮೂಗಿನಲ್ಲಿ ರಕ್ತ ಸ್ರವಿಸುವ ಸಾಧ್ಯತೆಯಿದೆ. ಕಾರಣ, ಈಜುಕೊಳದ ನೀರಿಗೆ ಉಪಯೋಗಿಸಿದ ರಾಸಾಯನಿಕದಿಂದ ಅಲರ್ಜಿಯಾಗಿ ಇದೆಲ್ಲ ಸಂಭವವಿದೆ.

ದೇಹ-ದಾಹ ತಣಿಸಿಕೊಳ್ಳಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದರಿಂದಲೂ ಇಂಥ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಬಹುದು. ಹಾಗೆ ದೇಹವನ್ನು ತಣಿಸುವುದಕ್ಕೆ ಬೇಕಾಗಿ ಕೆಲವು ಪಾನೀಯಗಳು ಇಲ್ಲಿವೆ. ಎಳನೀರು ಎಲ್ಲರಿಗಿಂತ ಪ್ರಧಾನ ಭೂಮಿಕೆಯನ್ನು ವಹಿಸುತ್ತದೆ. ಹಲವಾರು ವಿಟಮಿನ್‌ಗಳು ಖನಿಜಗಳು ಮತ್ತು ಉತ್ತಮ ಎಲೆಕ್ಟ್ರೋಲೈಟ್‌ ಹೊಂದಿದ ಎಳನೀರು, ಶರೀರದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿ ಇರಿಸಲು ನೆರವಾಗುತ್ತದೆ.

ಪೆಪ್ಪರ್‌ಮಿಂಟ್

ಮೆಂಥಾಲ್‌ ಸತ್ವ ಹೆಚ್ಚಾಗಿರುವ ಪೆಪ್ಪರ್‌ಮಿಂಟ್‌ ಸಹ ಶರೀರ ತಣಿಸುವಲ್ಲಿ ಸಹಕಾರಿ. ಪೆಪ್ಪರ್‌ಮಿಂಟ್‌ ಚಹಾವನ್ನು ಬಿಸಿಯಾಗಿ ಅಥವಾ ತಂಪಾಗಿಯೂ ಕುಡಿಯಬಹುದು. ಬಿಸಿ ಪಾನೀಯಗಳನ್ನು ಕುಡಿಯುವಾಗ ಕಷ್ಟವಾದರೂ, ಕುಡಿದಾಕ್ಷಣ ದೇಹವೆಲ್ಲ ಬೆವರಿ, ಉಷ್ಣತೆಯ ಮಟ್ಟವನ್ನು ಕಾಪಾಡಲು ನೆರವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಬಿಸಿ ಪಾನೀಯಗಳೂ ದಾಹ ತಣಿಸುತ್ತವೆ.

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

ಮಜ್ಜಿಗೆ

ಇದಂತೂ ಬಹುಪಯೋಗಿ ಪೇಯ. ಹಸಿವು, ದಾಹ ಎರಡನ್ನೂ ತಣಿಸಬಲ್ಲ ಸಾಮರ್ಥ್ಯ ಇದರದ್ದು. ದೇಹವನ್ನು ತಣಿಸಿ, ಚಯಾಪಚಯ ಹೆಚ್ಚಿಸುವಂಥ ಒಳ್ಳೆಯ ಪ್ರೊಬಯಾಟಿಕ್‌ಗಳಿಂದ ಕೂಡಿದೆ ಇದು. ಜೊತೆಗೆ ಸಾಕಷ್ಟು ವಿಟಮಿನ್‌ ಮತ್ತು ಖನಿಜಗಳನ್ನೂ ಹೊಂದಿದೆ. ಇದನ್ನು ಉಪ್ಪಿನೊಂದಿಗೆ, ಹುಳಿ ಮುಂದಾಗಿ, ಸಿಹಿ ಹಾಕಿಕೊಂಡು, ಜೀರಿಗೆ, ಪುದೀನಾ, ಶುಂಠಿ ಮುಂತಾದ ನಾನಾ ರುಚಿಗಳಲ್ಲೂ ಸೇವಿಸಬಹುದಾದ ಪಾನೀಯವಿದು.

Exit mobile version