Site icon Vistara News

Footwear Tips: ಸರಿಯಾದ ಪಾದರಕ್ಷೆ ಧರಿಸದಿರುವುದೇ ನಮ್ಮ ಹಲವು ಸಮಸ್ಯೆಗಳಿಗೆ ಕಾರಣ!

Footwear Tips

ಯಾರದ್ದೋ ಬಗ್ಗೆ ಹೇಳುವಾಗ ʻಅವರು ನನ್ನ ಚಪ್ಲಿಗೆ ಸಮʼ (Footwear Tips) ಎಂದು ಹೇಳಿದ್ದರೆ ಅದರ ಅರ್ಥವೇನು? ಅಷ್ಟು ಕನಿಷ್ಠ ಎಂದಲ್ಲವೇ? ಆದರೆ ಪಾದರಕ್ಷೆಗಳು ಖಂಡಿತಕ್ಕೂ ಕನಿಷ್ಠವಲ್ಲ. ಹಾಗೆಂದುಕೊಂಡು ಸರಿಯಾದ ಪಾದರಕ್ಷೆಗಳನ್ನು ಧರಿಸದಿದ್ದರೆ, ಪಾದಗಳ ಆರೋಗ್ಯ ತಳಮಟ್ಟಕ್ಕೆ ಇಳಿಯುವುದು ಖಚಿತ! ನಮ್ಮ ತೊಡುಗೆಗಳು ನಮ್ಮ ಆಯ್ಕೆ ಎನ್ನುವುದು ಹೌದಾದರೂ, ಅದಕ್ಕಾಗಿ ಆರೋಗ್ಯವನ್ನು ಕಡೆಗಣಿಸಬೇಕೆಂದಿಲ್ಲ. ಚಪ್ಪಲಿ, ಶೂಗಳನ್ನೆಲ್ಲ ಅಂದ-ಚಂದ ನೋಡಿ ತೆಗೆದುಕೊಳ್ಳುವ ಬದಲು, ಧರಿಸಿದಾಗ ಯಾವುದು ಹಿತ ಎಂಬುದಕ್ಕೆ ಮೊದಲ ಆದ್ಯತೆ ನೀಡಬೇಕು. ಹೇಗಿರಬೇಕು ನಮ್ಮ ಪಾದರಕ್ಷೆ?

ಆರೋಗ್ಯಕ್ಕೂ ಮುಖ್ಯ

ಪಾದರಕ್ಷೆಗಳು ನಮ್ಮ ಪಾದಗಳ ಆರೋಗ್ಯವನ್ನು ಮಾತ್ರವೇ ಅಲ್ಲ, ನಮ್ಮ ಮಂಡಿ, ಇಡೀ ಕಾಲು, ಬೆನ್ನು, ಸೊಂಟಗಳ ಆರೋಗ್ಯವನ್ನೂ ನಿರ್ಧರಿಸಬಲ್ಲವು. ಸರಿಯಾದ ಚಪ್ಪಲಿಗಳನ್ನು ಧರಿಸದಿದ್ದರೆ ಗಾಯಗಳ ಸಮಸ್ಯೆ ಕಾಡಬಹುದು; ಬಿದ್ದು ಮೂಳೆ ಮುರಿಯಬಹುದು. ಅದರಲ್ಲೂ ವಯಸ್ಸಾದ ಮೇಲೆ ಇಂಥ ಗಾಯಗಳಾದರೆ ಕಡೆಯವರೆಗೂ ಗುಣವಾಗದೆಯೇ ಇರುವ ಸಾಧ್ಯತೆಯಿದೆ. ಹಾಗಾಗಿ ಪಾದರಕ್ಷೆಗಳನ್ನು ಖರೀದಿಸುವಾಗ ನಿಮಗೆ ಎಂಥದ್ದು ಬೇಕು, ಯಾವ ಉದ್ದೇಶಕ್ಕಾಗಿ ಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು.

ಹೊಂದಾಣಿಕೆ

ಖರೀದಿಸುತ್ತಿರುವ ಚಪ್ಪಲಿ ನಿಮ್ಮ ಕಾಲಿಗೆ ಹೊಂದಿಕೆ ಆಗುತ್ತಿದೆಯೇ? ಉದಾ, ಆರನೇ ನಂಬರಿನ ಚಪ್ಪಲಿ ಇರುವಷ್ಟು ನಿಮ್ಮ ಕಾಲಿನ ಉದ್ದ ಇದೆ. ಆದರೆ ಇದಕ್ಕೆ ಹೊಂದಿಕೆಯಾಗದಷ್ಟು ಅಗಲವಿದೆ. ಹೀಗಿರುವಾಗ ಅಳತೆಗಿಂತ ಹೆಚ್ಚಿನ ಗಮನ ನೀಡಬೇಕಾದ್ದು, ಧರಿಸಿದಾಗ ಅದರ ಉದ್ದ-ಅಗಲಗಳು ನಿಮ್ಮ ಕಾಲಿನ ಉದ್ದಗಲಗಳಿಗೆ ಹೊಂದಾಣಿಕೆ ಆಗಬೇಕು. ಪಾದರಕ್ಷೆ ಎಷ್ಟು ಬಿಗಿಯಾಗಿರಬೇಕು ಎನ್ನುವುದನ್ನು ಹೊಂದಿಸಿಕೊಳ್ಳಲು ಲೇಸ್‌, ವೆಲ್‌ಕ್ರೊಗಳಿದ್ದರೆ ಒಳ್ಳೆಯದು. ಸ್ನೀಕರ್‌ಗಳಿಗೆ ಮಾರು ಹೋದರೆ ಕೆಲವೇ ದಿನಗಳಲ್ಲಿ ಅದು ಸಡಿಲವಾಗಿ ಪಾದಗಂಟಿನ ನೋವು ಅಂಟಿಕೊಳ್ಳುತ್ತದೆ.

ಜಾಗವಿರಲಿ

ನಿಮ್ಮ ಪಾದವನ್ನು ಶೂ ಅಥವಾ ಚಪ್ಪಲಿಗಳು ಬಿಗಿಯಾಗಿ ಉಸಿರುಗಟ್ಟುವಂತೆ ಅವಚಿಕೊಳ್ಳಬಾರದು. ಪಾದದ ಚರ್ಮಕ್ಕೆ ಉಸಿರಾಡುವಷ್ಟು ಜಾಗಬೇಕು. ಅಂದರೆ ನಿಮ್ಮ ಉದ್ದವಾದ ಕಾಲ್ಬೆರಳಿಗೂ ಶೂನ ಮುಂತುದಿಗೂ ಒಂದು ಕೈಹೆಬ್ಬೆರಳಿನಷ್ಟು ಜಾಗ ಬೇಕು. ಇದರಿಂದ ಚಟುವಟಿಕೆಯಲ್ಲಿ ತೊಡಗಿದಾಗ ಕಾಲಿಗೆ ಸಾಕಷ್ಟು ಜಾಗವಿರುತ್ತದೆ.
ಎಂಥ ವಸ್ತುಗಳಿಂದ ಶೂ ಮಾಡಲ್ಪಟ್ಟಿದೆ ಎಂಬುದು ಮುಖ್ಯ. ಒರಟಾದ ವಸ್ತುಗಳಿಂದ ಮಾಡಲಾಗಿದ್ದರೆ, ತಾಳಿಕೆ ಹೆಚ್ಚು ಬರಬಹುದು. ಆದರೆ ಪಾದದ ಚರ್ಮಕ್ಕೆ ಗಾಳಿಯಾಡದಿರಬಹುದು. ಹಾಗಾಗಿ ಗಾಳಿ ಸಂಚರಿಸಲು ಈ ಶೂನಲ್ಲಿ ಸೂಕ್ಷ್ಮ ಕಿಂಡಿ/ ರಂಧ್ರಗಳಿವೆಯೇ ಎಂಬುದನ್ನು ನೋಡಿಕೊಳ್ಳಿ. ಇದರಿಂದ ಬೆವರಿನ ದುರ್ವಾಸನೆ, ಫಂಗಸ್‌ ಸೋಂಕುಗಳನ್ನು ಕಡಿಮೆ ಮಾಡಬಹುದು.

ಶೂ ಒಳಭಾಗ ಹೇಗಿರಬೇಕು?

ಶೂ ಧರಿಸುವವರು ನೀವಾಗಿದ್ದರೆ, ಹಿಮ್ಮಡಿಯಿಂದ ನಡುಪಾದದ ಬಾಗು ಒಂದು ಇಂಚಿಗಿಂತ ಎತ್ತರ ಇರುವ ಅಗತ್ಯವಿಲ್ಲ. ಅದಕ್ಕೂ ಮೀರಿದ ಆರ್ಚ್‌ ನಿಮ್ಮ ಪಾದಕ್ಕಿದ್ದರೆ ಮಾತ್ರ ಈ ಬಗ್ಗೆ ಎಚ್ಚರವಹಿಸಿ. ಹಿಮ್ಮಡಿಗೆ ಪಾದರಕ್ಷೆಯ ಒಳಭಾಗದಲ್ಲಿ ಸರಿಯಾದ ಕುಷನ್‌ ಇದೆಯೇ ಎಂಬುದನ್ನೂ ಪರೀಕ್ಷಿಸಿಕೊಳ್ಳಿ. ಶೂ ಒಳಭಾಗದಲ್ಲಿ ಒಳ್ಳೆಯ ಕುಷನ್‌ ಇದ್ದಷ್ಟೂ ಪಾದಗಂಟು ಮತ್ತು ಮಂಡಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅದರಲ್ಲೂ ಚಾರಣಿಗರು ನೀವಾಗಿದ್ದರೆ, ಒಳಭಾಗದಲ್ಲಿ ಚೆನ್ನಾದ ಕುಷನಿಂಗ್‌ ಇರುವಂಥ ಪಾದರಕ್ಷೆಗಳನ್ನು ಮಾತ್ರವೇ ಧರಿಸಿ.

ಗುಣಮಟ್ಟ

ಒಳ್ಳೆಯ ಬ್ರಾಂಡ್‌ನ ಗುಣಮಟ್ಟದ ಪಾದರಕ್ಷೆಗಳನ್ನೇ ಧರಿಸಿ. ಇವು ಸಾಮಾನ್ಯವಾಗಿ ದುಬಾರಿಯಾಗಿರುವುದರಿಂದ ನಾಲ್ಕೆಂಟು ಜೊತೆ ಶೂಗಳನ್ನು ಇರಿಸಿಕೊಳ್ಳಲು ಕಷ್ಟವಾಗಬಹುದು. ಆದರೆ ಅದರ ಅಗತ್ಯವಿಲ್ಲ. ಎರಡೇ ಜೊತೆ ಇರಿಸಿಕೊಂಡರೂ ನಿಮ್ಮ ಅಗತ್ಯಕ್ಕೆ ತಕ್ಕುದಾದದ್ದು ಇರಲಿ. ಇವೇ ಹೆಚ್ಚು ದಿನ ಬಾಳಿಕೆ ಬಂದು, ನಿಮ್ಮ ಕಾಲುಗಳ ಆರೋಗ್ಯ ಕಾಪಾಡುತ್ತವೆ.

ಇವು ಬೇಡ

ಫ್ಲಿಪ್‌-ಫ್ಲಾಪ್‌ ಅಥವಾ ಹವಾಯ್‌ ಮಾದರಿಯ ಚಪ್ಪಲಿಗಳು ಸಿಕ್ಕಾಪಟ್ಟೆ ಜನಪ್ರಿಯ ಎನ್ನುವುದು ನಿಜ. ಆದರೆ ಕಾಲಿಗೆ ಅಗತ್ಯ ಆಧಾರವನ್ನು ಅವು ನೀಡಲಾರವು. ಮನೆ ಹತ್ತಿರದ ತುರ್ತು ಬಳಕೆಗೆ ಆದೀತು ಹೊರತಾಗಿ, ಅದಕ್ಕಿಂತ ಹೆಚ್ಚಿನ ಬಳಕೆ ಬೇಡ. ಯಾವುದೋ ಪಾರ್ಟಿಗೆ ಹೋಗಬೇಕೆಂದು ‌ʻಕಿಲ್ಲಿಂಗ್ ಹೀಲ್ಸ್‌ʼ ಹಾಕುವ ಇರಾದೆಯೇ? ಎತ್ತರದ ಚಪ್ಪಲಿಗಳು, ಅದರಲ್ಲೂ ಪೆನ್ಸಿಲ್‌ ಹೀಲ್ಸ್‌, ಹಾಕಿದಷ್ಟೂ ಕಾಲು ಮತ್ತು ಬೆನ್ನು ನೋವು ಬೆನ್ನಿಗಂಟುವುದು ನಿಶ್ಚಿತ. ಇನ್ನು, ಯಾವುದೇ ಆರ್ಚ್‌ ಆಧಾರವಿಲ್ಲದ ಮಣೆಯಂಥ ಸಪಾಟು ಚಪ್ಪಲಿಗಳನ್ನು ಹಾಕುವವರು ನೀವಾದರೆ ಜಾಗ್ರತೆ ಮಾಡಿ. ಇಂಥವುಗಳನ್ನು ಎಂದಿಗೂ ವಾಕಿಂಗ್‌ಗೆ ಉಪಯೋಗಿಸಬೇಡಿ. ಪಾದಗಂಟಿನ ನೋವು ಗಂಟುಬಿದ್ದರೆ ಅಚ್ಚರಿಯಿಲ್ಲ. ಸರಿಯಾದ ಆಧಾರ ನೀಡುವಂಥ ಶೂ/ಚಪ್ಪಲಿಗಳು ಮಾತ್ರವೇ ದೈಹಿಕ ಚಟುವಟಿಕೆಗಳಿದೆ ಸೂಕ್ತ.

Exit mobile version