Site icon Vistara News

Pill Label: ಮಾತ್ರೆಗಳ ಮೇಲಿನ ಲೇಬಲ್‌ ಗಮನಿಸಿದ್ದೀರಾ? ಏನೇನಿವೆ ಅದರಲ್ಲಿ?

Pill Label

ಔಷಧಿ ಅಂಗಡಿಯಿಂದ ಮಾತ್ರೆಗಳನ್ನು ತಂದಾಗ ಅದರ ಮೇಲಿರುವ ಕೆಂಪು ಗೆರೆಯನ್ನು (Pill label) ಎಂದಾದರೂ ಗಮನಿಸಿದ್ದೀರಾ? ಆ ಮಾತ್ರೆಚೀಟಿಯ ಸೌಂದರ್ಯವರ್ಧನೆಗಾಗಿ ಹಾಕಿದ ಕೆಂಬಣ್ಣ ಗೆರೆಗಳಲ್ಲ ಎಂಬುದು ತಿಳಿದಿದ್ದರೂ, ಯಾಕೆ ಎಂಬುದು ಬಗೆಹರಿದಿರಲಾರದು. ಇದೊಂದು ಸಣ್ಣ ಕೆಂಪು ಗೆರೆಯ ಸಂದೇಶವನ್ನು ಸರಿಯಾಗಿ ಪಾಲಿಸಿದರೆ, ದೇಹದಲ್ಲಿ ಪ್ರತಿಜೈವಿಕಗಳಿಗೆ ಪ್ರತಿರೋಧ (ಆಂಟಿಬಯಾಟಿಕ್‌ ರೆಸಿಸ್ಟೆನ್ಸ್‌-antibiotic resistance) ಬೆಳೆಯುವ ಅಪಾಯಕಾರಿ ಅವಸ್ಥೆಯಿಂದ ತಪ್ಪಿಸಿಕೊಳ್ಳಬಹುದು. ಇಂಥ ಕೆಂಪು ಗೆರೆಯ ಮಾತ್ರೆಗಳು, ಆಂಟಿಬಯಾಟಿಕ್‌ ಔಷಧಿಗಳಾಗಿದ್ದು, ವೈದ್ಯರ ಸೂಚನೆಯಿಲ್ಲದೆ ಸೇವಿಸಕೂಡದು. ಈ ಪ್ರತಿಜೈವಿಕ ಔಷಧಿಗಳ ವಿಚಾರದಲ್ಲಿ ಸ್ವಯಂವೈದ್ಯ ಮಾಡಿಕೊಳ್ಳುವುದು ಜೀವಕ್ಕೆ ಅಪಾಯ ತರಬಹುದು. ಮಾತ್ರವಲ್ಲ, ವೈದ್ಯರು ಹೇಳಿದಷ್ಟು ಮಾತ್ರೆಗಳನ್ನು ಸೇವಿಸಬೇಕು, ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಔಷಧಿ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅವರ ಸೂಚನೆಗಳನ್ನು ಇದು ಅವಲಂಬಿಸುತ್ತದೆ. ಜೊತೆಗೆ, ಈ ಬಗ್ಗೆ ವೈದ್ಯರ ಪ್ರಿಸ್ಕ್ರಿಪ್ಶನ್‌ ಇಲ್ಲದೆಯೇ ಇಂಥ ಮಾತ್ರೆಗಳನ್ನು ಫಾರ್ಮಸಿಗಳು ಸಹ ಗ್ರಾಹಕರಿಗೆ ನೀಡುವಂತಿಲ್ಲ ಎಂದು ಕೇಂದ್ರ ಸಚಿವಾಲಯವೂ ತನ್ನ ಎಕ್ಸ್‌ ಖಾತೆಯಲ್ಲಿ (Pill label) ಇತ್ತೀಚೆಗೆ ತಿಳಿಸಿತ್ತು.

ಗೆರೆ ಗಮನಿಸಿ

ಇನ್ನು ಮೇಲೆ ಔಷಧಿಗಳ ಲೇಬಲ್‌ ನೋಡುವಾಗ ಅದರ ಹೆಸರು, ಎಂ.ಜಿ, ದಿನಾಂಕ ನೋಡುವುದು ಮಾತ್ರವಲ್ಲ, ಕೆಂಪು ಗೆರೆ ಇದೆಯೇ ಗಮನಿಸಿ. ಇಲ್ಲಿ ಕೆಂಪುಗೆರೆ ಇದೆಯೆಂದಾದರೆ ಇದಕ್ಕೆ ವೈದ್ಯರ ಸೂಚನೆ ಅಗತ್ಯ. ಇದನ್ನು ಸರಿಯಾಗಿ ಪಾಲಿಸುವುದರಿಂದ, ದೇಹದಲ್ಲಿ ಪ್ರತಿಜೈವಿಕಗಳಿಗೆ ಪ್ರತಿರೋಧ ಸೃಷ್ಟಿ ಆಗುವುದನ್ನು ತಪ್ಪಿಸಬಹುದು. ಈ ಕೆಂಪು ಗೆರೆಯ ಜೊತೆಗೆ, ಇನ್ನಷ್ಟು ಸೂಚನೆಗಳು ಮಾತ್ರೆಯ ಲೇಬಲ್‌ ಮೇಲಿರುತ್ತವೆ. ಯಾವುದು ಅವೆಲ್ಲ? ಯಾಕಿರುತ್ತವೆ? ಏನು ಅವುಗಳ ಅರ್ಥ?

ಆರ್‌ಎಕ್ಸ್‌

ಸಾಮಾನ್ಯವಾಗಿ ಆಂಟಿಬಯಾಟಿಕ್‌ ಔಷಧಿಗಳಿಗೆ ಮಾತ್ರವೇ ವೈದ್ಯರ ಸೂಚನೆ ಬೇಕಾಗುತ್ತದೆ. ಉಳಿದವನ್ನು ಗೂಗಲ್‌ ಸಲಹೆಯಂತೆ ಅಥವಾ ಫಾರ್ಮಸಿಯವರ ಸಲಹೆಯಂತೆ ʻಗುಳುಂʼ ಮಾಡಬಹುದು ಎಂಬುದು ಬಹಳಷ್ಟು ಜನರ ನಂಬುಗೆ. ವಿಷಯ ಹಾಗಲ್ಲ. Rx ಎಂದು ಸೂಚಿತವಾದ ಯಾವ ಔಷಧಿಯನ್ನೂ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವಂತಿಲ್ಲ. ಹಾಗೆಂದು ಇವೆಲ್ಲ ಸ್ಟೆರಾಯ್ಡ್‌, ಆಂಟಿಬಯಾಟಿಕ್‌ನಂಥ ಯಾವುದೇ ವರ್ಗಕ್ಕೆ ಸೇರಲೇಬೇಕೆಂದಿಲ್ಲ. ಆದರೆ ವೈದ್ಯರ ಸಲಹೆ ಈ ಔಷಧಗಳಿಗೆ ಬೇಕಾಗುತ್ತದೆ.

ಎನ್‌ಆರ್‌ಎಕ್ಸ್‌

ಅಂದರೆ, NRx ಎಂಬುದು ಕೆಲವೊಮ್ಮೆ ನಮೂದಾಗಿರುತ್ತದೆ ಲೇಬಲ್‌ ಮೇಲೆ. ಈ ವರ್ಗದ ಔಷಧಿಗಳನ್ನು ಮತ್ತು-ಬರಿಸುವ ಅಥವಾ ನಾರ್ಕೊಟಿಕ್‌ ವಿಭಾಗಕ್ಕೆ ಸೇರಿದ ಔಷಧಗಳೆಂದು ಕರೆಯಲಾಗುತ್ತದೆ. ಇವುಗಳನ್ನಂತೂ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವ ಮಾತೇ ಇಲ್ಲ. ಕಾರಣ, ಕೆಲವು ನಿಗದಿತ ಸಂದರ್ಭಗಳಲ್ಲಿ ಹಾಗೂ ಚಿಕಿತ್ಸೆಗಳಲ್ಲಿ ಮಾತ್ರ ವೈದ್ಯರು ಇದನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.

ಎಕ್ಸ್‌ಆರ್‌ಎಕ್ಸ್‌

ಲೇಬಲ್‌ಗಳ ಮೇಲೆ XRx ಎಂಬ ಉಲ್ಲೇಖವನ್ನೂ ಕೆಲವೊಮ್ಮೆ ಕಾಣಬಹುದು. ಇದರರ್ಥ, ವೈದ್ಯರೇ ಈ ಔಷಧಿಗಳನ್ನು ನೇರವಾಗಿ ರೋಗಿಗಳಿಗೆ ನೀಡಬೇಕು. ರೋಗಿಗಳು ಫಾರ್ಮಸಿಗಳಿಂದ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಒಂದೊಮ್ಮೆ ವೈದ್ಯರಿಂದ ಸಲಹಾ ಚೀಟಿ ತಂದರೂ, ರೋಗಿಗಳಿಗೆ ಔಷಧಿ ಅಂಗಡಿಗಳು ಇದನ್ನು ಮಾರಾಟ ಮಾಡುವಂತಿಲ್ಲ. ಇದನ್ನು ವೈದ್ಯರೇ ನೇರವಾಗಿ ತಂದು, ರೋಗಿಗಳ ಚಿಕಿತ್ಸೆಯಲ್ಲಿ ಬಳಸಬೇಕು.

Exit mobile version