ಆರೋಗ್ಯಕ್ಕೆ ಸಂಬಂಧಿಸಿದ ಬಹಳ ಹಳೆಯ ಆಚರಣೆಗಳ ಪೈಕಿ ಆಯಿಲ್ ಪುಲ್ಲಿಂಗ್ (Oil pulling) ಕೂಡಾ ಒಂದು. ಎಣ್ಣೆಯಿಂದ ಬಾಯಿ ಮುಕ್ಕಳಿಸುವ ಈ ಕ್ರಮದಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ಈ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲವಾದರೂ, ಈಗಾಗಲೇ ಕೆಲವು ಸಂಶೋಧನೆಗಳು ಇದರ ಉಪಯೋಗಗಳನ್ನು ಕಂಡುಕೊಂಡಿವೆ. ಬನ್ನಿ, ಈ ಸರಳ ತಂತ್ರದಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
- ನಮ್ಮ ಬಾಯಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳು ವಾಸಿಸುತ್ತವಂತೆ. ಅವುಗಳ ಪೈಕಿ ಸುಮಾರು 350 ಬಗೆಯ ಬ್ಯಾಕ್ಟೀರಿಯಾಗಳು ಸದಾ ಇದ್ದೇ ಇರುತ್ತವಂತೆ. ಹಾಗಂತ ಇವುಗಳೆಲ್ಲವೂ ನಮಗೆ ಅಪಾಯಕಾರಿಗಳೇನಲ್ಲ. ಕೆಲವು ಬಗೆಯವು ನಿರುಪದ್ರವಿಗಳು. ಇನ್ನೂ ಕೆಲವು ಬಾಯಿ ವಾಸನೆ, ವಸಡಿನ ಸಮಸ್ಯೆ, ಹಲ್ಲು ಹುಳುಕೂ ಸೇರಿದಂತೆ ನಾನಾ ಬಗೆಯ ಬಾಯಿಯ ಆರೋಗ್ಯ ಸಂಬಂಧೀ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಆಯಿಲ್ ಪುಲ್ಲಿಂಗ್ಗೆ ಇದೆ.
- ಬಾಯಿಯಿಂದ ಬರುವ ದುರ್ನಾತವೂ ಕೂಡ ಒಂದು ಸಮಸ್ಯೆಯೇ. ಈ ಸಮಸ್ಯೆಯ ಹೆಸರು ಹಲಿಟೋಸಿಸ್. ಇದು ಎಷ್ಟು ಸಾಮಾನ್ಯ ಎಂದರೆ, ಸುಮಾರು ಶೇ.೫೦ರಷ್ಟು ಮಂದಿಗೆ ಈ ಸಮಸ್ಯೆ ಇದೆ. ಇನ್ಫೆಕ್ಷನ್, ವಸಡಿನ ಸಮಸ್ಯೆ, ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು, ನಾಲಿಗೆಯ ಮೇಲಿನ ಬಿಳಿ ಕೋಟಿಂಗ್ ಮತ್ತಿತರ ಕಾರಣಗಳೂ ಇರಬಹುದು. ಬಾಯಿಯನ್ನು ಸ್ವಚ್ಛವಾಗಿ ಸದಾ ಇಟ್ಟುಕೊಳ್ಳುವುದು, ಆಗಾಗ ಮೌತ್ವಾಶ್ನಿಂದ ತೊಳೆದುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. ಆಯಿಲ್ ಪುಲ್ಲಿಂಗ್ನಿಂದ ಕೂಡಾ ಈ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಸಾಬೀತಾಗಿದ್ದು, ಎಳ್ಳೆಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡಿದ ಶೇ.೨೦ರಷ್ಟು ಮಂದಿ ಈ ಸಮಸ್ಯೆಯಿಂದ ಮುಕ್ತಿ ಹೊಂದಿದ್ದಾರೆ.
- ಹಲ್ಲು ಹುಳುಕು ಅಥವಾ ಕ್ಯಾವಿಟಿಯ ಸಮಸ್ಯೆ ಸಾಮಾನ್ಯವಾಗಿ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ದಿನ ಅನುಭವಿಸುವವರೇ. ಹೀಗಾಗಿ ನಿಯಮಿತವಾಗಿ ಬೆಳಗ್ಗೆ ದಿನವೂ ಆಯಿಲ್ ಪುಲ್ಲಿಂಗ್ ಮಾಡುವ ಮಂದಿಯ ಬಾಯಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆ ಕಡಿಮೆಯಾಗಿ ಹಲ್ಲು ಹುಳುಕಿನ ಸಮಸ್ಯೆ ಬರುವುದಿಲ್ಲ. ಅಥವಾ ಇಂತಹ ಸಮಸ್ಯೆ ಕಡಿಮೆ.
- ನಿತ್ಯವೂ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ವಸಡಿನ ಆರೋಗ್ಯ ಹೆಚ್ಚಾಗುತ್ತದೆ. ವಸಡಿನಲ್ಲಿ ರಕ್ತಸ್ರಾವ, ವಸಡಿನ ಊತ, ಬಾವು, ಇತ್ಯಾದಿಗಳಿಗೆ ಇದು ಬಹಳ ಒಳ್ಳೆಯದು. ಇಂತಹ ಸಮಸ್ಯೆ ಬರದಂತೆ ತಡೆಯುವುದೂ ಅಲ್ಲದೆ, ಸಮಸ್ಯೆಯಿದ್ದರೆ ಶಮನಕ್ಕೂ ನೆರವಾಗುತ್ತದೆ. ಇಂತಹ ಸಮಸ್ಯೆಗೆ ತೆಂಗಿನೆಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡುವುದು ಉತ್ತಮ.
- ನಿತ್ಯವೂ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಹಲ್ಲು ಬಿಳಿಯಾಗಿರುತ್ತದೆ. ಬಹಳ ಹೊತ್ತಿನವರೆಗೆ ಹಲ್ಲು ಸ್ವಚ್ಛವಾಗಿರುವುದಲ್ಲದೆ, ತುಸು ಹಳದಿಗೆ ತಿರುಗಿದ ಹಲ್ಲುಗಳೂ ಮತ್ತೆ ಬಿಳಿಯಾಗುತ್ತವೆ.
- ತೆಂಗಿನೆಣ್ಣೆಯಲ್ಲಿ ಆಂಟಿ ಇನ್ಫ್ಲಮೇಟರಿ ಹಾಘೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಸಾಕಷ್ಟಿರುವುದರಿಂದ ಇದರಿಂದ ಕೇವಲ ಇಷ್ಟೇ ಅಲ್ಲದೆ ಸಾಕಷ್ಟು ಹಲವು ಲಾಭಗಳೂ ಇವೆ. ನೈಸರ್ಗಿಕವಾಗಿ ಲಭ್ಯವಿರುವ ಬಹಳ ಸರಳವಾದ, ಹೆಚ್ಚು ಖರ್ಚಿಲ್ಲದೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಅಭ್ಯಾಸ ಇದು. ಹೀಗಾಗಿ, ಸುಲಭವಾಗಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವಲ್ಲಿ ಇದೂ ಮುಂಚೂಣಿಯಲ್ಲಿ ನಿಲ್ಲುತ್ತದೆ.
ಮಾಡುವುದು ಹೇಗೆ
ಒಂದು ಚಮಚ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಾಯಿಗೆ ಹಾಕಿ 15ರಿಂದ 20 ನಿಮಿಷಗಳ ಕಾಲ ಅದನ್ನು ಬಾಯಿಯಲ್ಲೇ ಇಟ್ಟು ಮುಕ್ಕಳಿಸುತ್ತಾ ಇರಬೇಕು. ಬಾಯಿಯ ಎಲ್ಲ ಕೋನಗಳಿಗೂ ಈ ಎಣ್ಣೆ ತಲುಪುವಂತೆ ಮುಕ್ಕಳಿಸಿ ನಂತರ ಉಗುಳಬೇಕು. ಬೆಳಗ್ಗೆ ಎದ್ದ ಕೂಡಲೇ, ಅಥವಾ ದಿನಕ್ಕೆ ಗರಿಷ್ಟ ಮೂರು ಬಾರಿ ಹೀಗೆ ಮಾಡಬಹುದು. ನಂತರ ಬಾಯಿಯನ್ನು ಚೆನ್ನಾಗಿ ನೀರು ಹಾಕಿ ಮುಕ್ಕಳಿಸಿಕೊಳ್ಳಿ.
ಇದನ್ನೂ ಓದಿ: Summer Hair Care: ಬೇಸಿಗೆಯಲ್ಲಿ ಕೂದಲನ್ನು ನಯವಾಗಿರಿಸಲು ಕಷ್ಟವಾಗುತ್ತಿದೆಯೆ? ಈ ಸಲಹೆಗಳನ್ನು ಪಾಲಿಸಿ