ಆಲಿವ್‌ಗಳು ನಮಗೆ ದೇಸೀ ನೆಲದ ಆಹಾರವಲ್ಲದಿದ್ದರೂ ಇದರ ಆರೋಗ್ಯದ ಲಾಭಗಳು ಅನೇಕ. ಹಾಗೂ ಇದು ದೇಶಗಳ ಗಡಿಯ ಹಂಗಿಲ್ಲದೆ ಇಂದು ಪ್ರಪಂಚದಾದ್ಯಂತ ಬಳಕೆಯಾಗುತ್ತಿದೆ. ಹಸಿರು ಬಣ್ಣದ ಆಲಿವ್ ಆಗಿರಬಹುದು, ಕಪ್ಪು ಬಣ್ಣದ್ದಾಗಿರಬಹುದು. ಗುಣದಲ್ಲಿ ಎರಡೂ ಚಿನ್ನವೇ. ಎಲುಬು ಸವೆತವನ್ನು ತಡೆಯುವ ಗುಣ ಇದರಲ್ಲಿದ್ದು, ರಕ್ತದೊತ್ತಡವನ್ನೂ ಇದು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲ, ಕ್ಯಾನ್ಸರ್ ನಿರೋಧಕ ಗುಣಗಳನ್ನೂ ಇದು ಹೊಂದಿದ್ದು, ಚರ್ಮಕ್ಕೆ, ಕೂದಲಿಗೆ ಸೇರಿದಂತೆ, ಆರೋಗ್ಯಕ್ಕೆ ಒಳ್ಳೆಯ ಪರಿಣಾಮವನ್ನು ಬೀರುವ ಆಹಾರವಿದು. ಆಲಿವ್ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳನ್ನು (Olive oil benefits) ತಿಳಿಯೋಣ.
ಸುಕ್ಕು ನಿವಾರಣೆ
ಆಲಿವ್ ಎಣ್ಣೆಯಲ್ಲಿರುವ ಪಾಲಿಫಿನಾಲ್ ಕಾಂಪೌಂಡ್‌ಗಳಿಂದಾಗಿ ಇದು ಆಕ್ಸಿಡೇಟಿವ್ ಒತ್ತಡಗಳನ್ನು ದೂರವಿರಿಸುತ್ತದೆ. ಪ್ರತಿ ನಿತ್ಯ ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮದ ಮೇಲಿನ ಸುಕ್ಕು, ಕಪ್ಪು ಕಲೆಗಳು ದೂರವಾಗಿ ಚರ್ಮ ತಾಜಾ ಆಗಿ ಕಂಗೊಳಿಸುತ್ತದೆ.
ಅತ್ಯುತ್ತಮ ಮಾಯ್‌ಶ್ಚರೈಸರ್
ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಎ ಹೇರಳವಾಗಿದ್ದು, ಇದು ಅತ್ಯುತ್ತಮ ಮಾಯ್‌ಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮಕ್ಕೆ ಸರಿಯಾದ ತೇವಾಂಶವನ್ನು ಒದಗಿಸಲು ಈ ಎಣ್ಣೆಯ ಮಸಾಜ್ ಸೂಕ್ತ. ಅಷ್ಟೇ ಅಲ್ಲ, ಇದು ಚರ್ಮವನ್ನು ಇನ್ನಷ್ಟು ಆರೋಗ್ಯಯುತವಾಗಿ ನಳನಳಿಸುವಂತೆ ಮಾಡುತ್ತದೆ.
ಕಪ್ಪು ಕಲೆ ನಿವಾರಣೆ
ಬಿಸಿಲಿಗೆ ಚರ್ಮ ಬಹುಬೇಗನೆ ಹಾಳಾಗಿತ್ತದೆ, ಕಪ್ಪುಕಲೆ, ಸುಕ್ಕಾಗುವುದು ಎಲ್ಲವೂ ಬಿಸಿಲಿನ ಝಳಕ್ಕೆ. ಆಲಿವ್ ಎಣ್ಣೆಯಲ್ಲಿ ಸಾಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ಚರ್ಮವನ್ನು ಸೂರ್ಯನ ಬಿಸಿಲಿನಿಂದಾಗುವ ಹಾನಿಯಿಂದ ತಪ್ಪಿಸುತ್ತದೆ. ನಿತ್ಯವೂ ಆಲಿವ್ ಎಣ್ಣೆಯಿಂದ ಮುಖ, ಕೈಕಾಲು, ಕುತ್ತಿಗೆಗೆ ಲೇಪಿಸಿ ಮಸಾಜ್ ಮಾಡುವುದುರಿಂದ ಉತ್ತಮ ಫಲ ಕಾಣಬಹುದು. ರಾತ್ರಿ ಮಲಗುವ ಮುಂಚೆ ಹೀಗೆ ಮಾಡಿ ಬೆಳಗ್ಗೆ ಇದನ್ನು ತೊಳೆಯಿರಿ.
ಕಜ್ಜಿ ನಿವಾರಣೆ
ಕೆಲವರಿಗೆ ಚರ್ಮದಲ್ಲಿ ತುರಿಕೆ ಇರುತ್ತದೆ. ಬಿಸಿಲಿನ ಝಳದಿಂದ ತುರಿಕೆ ಹೆಚ್ಚಾಗಿ ಚರ್ಮದ ತುಂಬ ಕಜ್ಜಿಗಳೇಳಬಹುದು. ಅಂಥ ಮಂದಿಗೆ ಈ ಎಣ್ಣೆ ಸೂಕ್ತ. ಇದು ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡಿ, ಕಜ್ಜಿಯನ್ನು ಹೊಡೆದೋಡಿಸಿ ಚರ್ಮವನ್ನು ನಯವಾಗಿಸುತ್ತದೆ. ಮಕ್ಕಳಿಗೆ ಡಯಪರ್‌ನಿಂದಾಗುವ ಕಜ್ಜಿಗಳಿಗೂ ಈ ಎಣ್ಣೆ ಬಳಸಬಹುದು.
ಆಫ್ಟರ್ ಕ್ರೀಮ್‌ಗೆ ಪರ್ಯಾಯ
ಶೇವ್ ಮಾಡಿದ ಮೇಲೆ ತುರಿಕೆ, ಗಾಯ ಇತ್ಯಾದಿಗಳಿ ಇದ್ದಿದ್ದೇ. ಹಾಗಾಗಿ ಇದನ್ನು ಆಫ್ಟರ್ ಕ್ರೀಮ್‌ನ ಬದಲಾಗಿಯೂ ಬಳಸಬಹುದು. ಇದರಂದ ಚರ್ಮಕ್ಕೆ ಉತ್ತಮ ಮಾಯ್‌ಶ್ಚರೈಸರ್ ಸಿಗುವುದಷ್ಟೇ ಅಲ್ಲ ಇನ್‌ಫೆಕ್ಷನ್ ಕೂಡ ದೂರ ಉಳಿಯುತ್ತದೆ. ಕೇವಲ 2-3 ಬಿಂದು ಎಣ್ಣೆಯನ್ನು ಒದ್ದೆ ಮುಖದ ಮೇಲೆಯೇ ಹಚ್ಚಿಕೊಳ್ಳಿ, ಕೂಡಲೇ ಇದು ಚರ್ಮದ ರಂಧ್ರಗಳ ಮೂಲಕ ಹೀರಿಕೊಳ್ಳಲ್ಪಡುತ್ತದೆ.
ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್ ಕುಡಿದರೆ ಏನಾಗುತ್ತದೆ?
ಹೊಟ್ಟಿನ ಸಮಸ್ಯೆ ಮಾಯ
ತಲೆಹೊಟ್ಟು ಇರುವ ಮಂದಿಗೆ ಆಲಿವ್ ಎಣ್ಣೆ ಬಹಳ ಒಳ್ಳೆಯದು. ವಾರಕ್ಕೆರಡು ಬಾರಿ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಕೆಲವೇ ವಾರಗಳಲ್ಲಿ ಹೊಟ್ಟಿನ ಸಮಸ್ಯೆ ಮಾಯ.
ಕೂದಲಿಗೆ ಪೋಷಣೆ
ಕೂದಲು ಒರಟೊರಟಾಗಿ ಸಂಭಾಳಿಸಲು ಕಷ್ಟವಾಗುತ್ತದೆ ಎಂದಾದಲ್ಲಿ, ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆ ಆಲಿವ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಇದು ತಲೆ ಬುಡಕ್ಕೆ ಸಾಕಷ್ಟು ರಕ್ತಸಂಚಾರವನ್ನು ನೀಡಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಕೂದಲು ನಯವಾಗುತ್ತದೆ. ಗಾಳಿಗೆ ಹಾರುವ ಕೂದಲು, ಚೆನ್ನಾಗಿ ನಯವಾಗಿ ನಿಮ್ಮ ತಲೆಯೇ ಮೇಲೆಯೇ ಕೂರುತ್ತದೆ. ಮೊಟ್ಟೆಯ ಬಿಳಿ ಲೋಳೆಯೊಂದಿಗೆ ಆಲಿವ್ ಎಣ್ಣೆಯನ್ನೂ ಸೇರಿಸಿ ಹೇರ್‌ಪ್ಯಾಕ್ ಹಾಕಿ ತಲೆಗೆ ಸ್ನಾ ಮಾಡುವುದರಿಂದ ಕೂದಲು ಫಳಪಳನೆ ಹೊಳೆಯುತ್ತದೆ. ಈ ಪೋಷಣೆ ಯಾವ ಹೇರ್ ಸ್ಪಾಗೂ ಕಡಿಮೆಯಿಲ್ಲ.