Site icon Vistara News

Tips For Eyes: ಕಣ್ಣು ಅದುರುವುದಕ್ಕೆ ಶಕುನ ಕಾರಣವಲ್ಲ! ಮತ್ತೇನು ಕಾರಣ?

Eye

ಕಣ್ಣು ಅದುರುತ್ತಿದೆಯೇ? (Tips For Eyes) ಎಡಗಣ್ಣೋ- ಬಲಗಣ್ಣೋ? ಇದೆಂಥಾ ಶಕುನವೆಂದು ಪಂಚಾಂಗ ನೋಡುವುದೋ ಅಥವಾ ಯಾರಲ್ಲೋ ಶಾಸ್ತ್ರ ಕೇಳುವವರಿಗೇನೂ ಬರವಿಲ್ಲ. ಮುಂದಾಗಲಿರುವ ಯಾವುದನ್ನೋ, ಅದುರುವ ಮೂಲಕ ಸೂಚಿಸುವುದಕ್ಕೆ ಕಣ್ಣುಗಳಿಗೆ ಸಾಧ್ಯವಿಲ್ಲದಿದ್ದರೂ, ದೇಹದ ಕುರಿತಾಗಿ ಬೇರೇನನ್ನೋ ಅವು ಸೂಚಿಸುವುದು ಹೌದು. ಅಂದರೆ, ಕಣ್ಣುಗಳ ಮೇಲೆ ಒತ್ತಡ, ಆಯಾಸ ಹೆಚ್ಚಿದಾಗ, ನೇತ್ರಗಳಲ್ಲಿ ಶುಷ್ಕತೆಯಿದ್ದರೆ, ಅತಿಯಾದ ಕೆಫೇನ್‌ ಅಥವಾ ಆಲ್ಕೊಹಾಲ್‌ ಸೇವನೆ, ನಿರ್ಜಲೀಕರಣ- ಇಂಥ ಸಂದರ್ಭಗಳಲ್ಲಿ ಕಣ್ಣುಗಳು ಅದುರುವುದಿದೆ. ಇದಲ್ಲದೆಯೂ ಬೇರೆ ಕಾರಣಗಳು ಇರಬಹುದು. ವಿಟಮಿನ್‌ ಬಿ12 ಕೊರತೆ, ಸ್ಕ್ರೀನ್‌ಗಳನ್ನು ಅತಿಯಾಗಿ ನೋಡಿದಾಗ ಉಂಟಾಗುವ ಆಯಾಸ, ಒತ್ತಡ, ಧೂಮಪಾನ, ಖಿನ್ನತೆಯಂಥ ಕಾರಣಗಳಿಗೂ ಕಣ್ಣು ಅದುರಬಹುದು.

ಏನು ಮಾಡಬೇಕು?

ಕಣ್ಣುಗಳು ನಮ್ಮ ಮಾತಿಗೆ ಬೆಲೆ ಕೊಡದಂತೆ ತಮ್ಮಷ್ಟಕ್ಕೆ ತಾವೇ ಅದುರುತ್ತಿದ್ದರೆ, ಕಿರಿಕಿರಿಯ ಸಂಗತಿಯದು. ಒಂದೊಮ್ಮೆ ಕಣ್ಣು ಒಣಗಿದಂತಾಗಿ ಅದುರುತ್ತಿದ್ದರೆ, ನೇತ್ರಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಮತ್ತೆ ದೊಡ್ಡದಾಗಿ ಕಣ್ಣಗಲಿಸಿ. ಇದೊಂದು ರೀತಿಯಲ್ಲಿ ಅತಿಯಾಗಿ ಮಿಟುಕಿಸಿದಂತೆ. ಹೀಗೆ ಮಾಡುವುದರಿಂದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ. ಒಣಗಿದ ಅನುಭವ ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ಣು ಮತ್ತು ಮುಖದ ಮಾಂಸಖಂಡಗಳಿಗೆ ಸಣ್ಣ ವ್ಯಾಯಾಮವಾದಂತಾಗಿ ಈ ಭಾಗಗಳಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ.

ಮಸಾಜ್

ಬೆರಳಿನಿಂದ ಕಣ್ಣುಗಳ ಕೆಳ ರೆಪ್ಪೆಯ ಅಡಿಗೆ ಸಣ್ಣದಾಗಿ ಮಸಾಜ್‌ ಮಾಡಬಹುದು. ಈ ಸಂದರ್ಭದಲ್ಲಿ ಕಣ್ಣುಗಳನ್ನು ಸತತವಾಗಿ ಮಿಟುಕಿಸಲೂ ಬಹುದು. ಆದರೆ ಈ ಕೆಲಸ ಮಾಡುವಾಗ ಕೈಗಳನ್ನು ಮೊದಲು ಶುಚಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿಲ್ಲದಿದ್ದರೆ ಸೋಂಕಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗೆ ಮಸಾಜ್‌ ಮಾಡುವುದರಿಂದ ಕಣ್ಣುಗಳಿಗೆ ರಕ್ತ ಸಂಚಾರ ವೃದ್ಧಿಸುವುದೇ ಅಲ್ಲದೆ, ಈ ಭಾಗದ ಮಾಂಸಖಂಡಗಳು ಬಲಗೊಳ್ಳುತ್ತವೆ.

ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

ವ್ಯಾಯಾಮ

ದೃಷ್ಟಿಯ ಚಲನೆಯನ್ನು ಮೇಲೆ-ಕೆಳಗೆ-ಎಡಕ್ಕೆ-ಬಲಕ್ಕೆ-ವೃತ್ತಾಕಾರದಲ್ಲಿ ಹಾಗೂ ಮುಚ್ಚಿ-ಬಿಟ್ಟು ಮಾಡಿ ಕಣ್ಣುಗಳಿಗೆ ವ್ಯಾಯಾಮ ಮಾಡಿಸಬಹುದು. ಇದರಿಂದ ಸತತವಾಗಿ ಸ್ಕ್ರೀನ್‌ ನೋಡಿದರಿಂದ ಉಂಟಾದ ಒತ್ತಡ, ಆಯಾಸ ಕಡಿಮೆಯಾಗುತ್ತದೆ.

ಆಲ್ಕೊಹಾಲ್‌ ಸೇವನೆ ನಿಲ್ಲಿಸಿ

ಕೆಫೇನ್‌ ಮತ್ತು ಆಲ್ಕೊಹಾಲ್‌ ಸೇವನೆ ಹೆಚ್ಚಿದರೂ ಈ ಕಿರಿಕಿರಿ ಎದುರಾದೀತು. ಇದೇ ಕಾರಣ ಹೌದಾದರೆ, ಪರಿಹಾರ ನಿಮ್ಮ ಕೈಯಲ್ಲೇ ಇದೆ. ದೇಹಕ್ಕೆ ನೀರು ಕಡಿಮೆಯಾದರೂ ಕಣ್ಣದುರುವುದುಂಟು. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.

ಶುದ್ಧ ನೀರಿನಿಂದ ತೊಳೆಯಿರಿ

ಬೆಚ್ಚಗಿನ ಮತ್ತು ತಂಪಾದ ಶುದ್ಧ ನೀರಿನಿಂದ ಕಣ್ಣು ತೊಳೆಯಬಹುದು. ಅಂದರೆ, ಮುಚ್ಚಿದ ಕಣ್ಣುಗಳ ಮೇಲೆ ಒಮ್ಮೆ ಬೆಚ್ಚಗಿನ ನೀರು, ಇನ್ನೊಮ್ಮೆ ತಣ್ಣೀರು ಹಾಕಿ ತೊಳೆಯುವುದು. ತಣ್ಣೀರಿನಿಂದ ಕಣ್ಣಿನ ರಕ್ತನಾಳಗಳು ಸಂಕುಚಿತಗೊಂಡರೆ, ಬೆಚ್ಚಗಿನ ನೀರಿನಿಂದ ಅವು ವಿಕಸನಗೊಳ್ಳುತ್ತವೆ. ಕಣ್ಣುಗಳು ತುಂಬಾ ಅದುರುತ್ತಿದ್ದರೆ, ಇದನ್ನು ದಿನಕ್ಕೆ ನಾಕಾರು ಬಾರಿ ಮಾಡಬಹುದು. ಕಣ್ಣಿನ ರಕ್ತ ಪರಿಚಲನೆ ಉತ್ತಮಗೊಂಡು, ಅದುರುವುದು ಕಡಿಮೆಯಾಗುತ್ತದೆ.

ಈ ಎಲ್ಲಾ ಪ್ರಯತ್ನಗಳ ನಂತರವೂ ಸಮಸ್ಯೆ ಪರಿಹಾರವಾಗಲಿಲ್ಲ ಎಂದರೆ, ದೃಷ್ಟಿಯಲ್ಲಿ ದೋಷ ಕಂಡುಬಂದರೆ, ಕಣ್ಣುಗಳಲ್ಲಿ ಈವರೆಗಿಲ್ಲದ ಯಾವುದಾದರೂ ಸಮಸ್ಯೆ ಪ್ರಾರಂಭವಾದರೆ, ಅದುರುವಾಗ ಕಣ್ಣುಗಳು ಸಂಪೂರ್ಣ ಮುಚ್ಚಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣಬಹುದು.

Exit mobile version