Site icon Vistara News

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

Onion Benefits

ಈರುಳ್ಳಿಯನ್ನು ನಿತ್ಯವೂ ನಮ್ಮ ಮನೆಗಳಲ್ಲಿ ಬಳಸುತ್ತೇವೆ. ಈರುಳ್ಳಿಯಿಲ್ಲದೆ ಅಡುಗೆ ಮಾಡುವುದೇ ಸವಾಲು ಕೂಡಾ. ಪ್ರತಿಯೊಂದು ಅಡುಗೆಗೂ ಈರುಳ್ಳಿಯನ್ನು ಹಾಕುತ್ತೇವಾದರೂ, ಈರುಳ್ಳಿಯನ್ನು ಹಸಿಯಾಗಿ ನಾವು ತಿನ್ನುವುದು ಕಡಿಮೆಯೇ. ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು. ಯಾಕೆ ಹಸಿ ಈರುಳ್ಳಿಯನ್ನು ತಿನ್ನಬೇಕು ಎಂಬುದಕ್ಕೆ (Onion Benefits) ಕಾರಣಗಳು ಇಲ್ಲಿವೆ.

ಈರುಳ್ಳಿಯಲ್ಲಿ ಫ್ಲೇವನಾಯ್ಡ್‌ಗಳಿದ್ದು, ಅವುಗಳು ಆಂಟಿ ಆಕ್ಸಿಡೆಂಟ್‌ಗಳ ರೀತಿಯಲ್ಲಿ ವರ್ತಿಸುತ್ತವೆ. ಇವು ದೇಹದಲ್ಲಿ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಸಮತೋಲನಗೊಳಿಸುವಲ್ಲಿ ಹಾಗೂ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ಕಡಿಮೆಗಳಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಹೃದಯದ ಕಾಯಿಲೆ ಅಥವಾ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಕ್ವೆರ್‌ಸೆಟಿನ್‌ ಹಾಗೂ ಸಲ್ಫರ್‌ ಇರುವುದರಿಂದ ಇವುಗಳ ಮೂಲಕ ದೇಹಕ್ಕೆ ಆಂಟಿ ಇನ್‌ಫ್ಲಮೇಟರಿ ಗುಣಗಳು ದೊರೆಯುತ್ತವೆ. ಇದರಿಂದ ಆರ್ತ್ರೈಟಿಸ್‌, ಅಸ್ತಮಾ ಮತ್ತಿತರ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಬಹುದು ಹಾಗೂ ಅವುಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಆರ್ಗನೋಸಲ್ಫರ್‌ನ ಅಂಶಗಳು ಅಲ್ಲಿಸಿನ್‌ ರೂಪದಲ್ಲಿ ಇರುವುದರಿಂದ ಇದು ಕೊಲೆಸ್ಟೆರಾಲ್‌ ಹಾಗೂ ಅಧಿಕ ರಕ್ತದೊತ್ತಡವನ್ನೂ ಇಳಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಈರುಳ್ಳಿ ಬಹಳ ಒಳ್ಳೆಯದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈರುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಸಹಾಯ ಮಾಡುತ್ತವೆ. ಈರುಳ್ಳಿಯಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳೂ ಹೇರಳವಾಗಿದ್ದು ಇದು ದೇಹದ ಒಟ್ಟು ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ.

ಈರುಳ್ಳಿಯಲ್ಲಿ ಕ್ರೋಮಿಯಂ ಹಾಗೂ ಸಲ್ಫರ್‌ ಇವೆರಡೂ ಇರುವುದರಿಂದ ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವ ಮಂದಿ ಹಸಿ ಈರುಳ್ಳಿ ತಿನ್ನುವುದರಿಂದ ಸಹಾಯವಾಗುತ್ತದೆ.

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದು. ಇದು ಪಚನಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳು ಹತ್ತಿರ ಸುಳಿಯದು.

ಈರುಳ್ಳಿಯಲ್ಲಿರುವ ಸಲ್ಫರ್‌ನ ಅಂಶಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಹುಮುಖ್ಯವಾಗಿ ಕರುಳು ಹಾಗೂ ಹೊಟ್ಟೆಯ ಸಂಬಂಧಿ ಕ್ಯಾನ್ಸರ್‌ಗಳಿಂದ ಇದು ದೂರವಿರಿಸುತ್ತದೆ.

ಕ್ವೆರ್ಸೆಟಿನ್‌ ಹಾಗೂ ಸಲ್ಫರ್‌ನ ಅಂಶಗಳು ಎಲುಬಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಳೆಗಳು ಗಟ್ಟಿಯಾಗಿರಲು, ಮೂಳೆಯಲ್ಲಿನ ಸಾಂದ್ರತೆ ಉಳಿಯಲು ಈರುಳ್ಳಿ ಸೇವನೆ ಒಳ್ಳೆಯದು. ಮುಖ್ಯವಾಗಿ ಮೂಳೆ ಸವೆತ, ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

ಶವಾಸಕೋಶದ ಆರೋಗ್ಯಕ್ಕೂ ಈರುಳ್ಳಿ ಬಹಳ ಒಳ್ಳೆಯದು. ಅಸ್ತಮಾ ಹಾಗೂ ಅಲರ್ಜಿಗಳಂತಹ ಸಮಸ್ಯೆ ಇರುವ ಮಂದಿಗೆ ಈರುಳ್ಳಿ ಒಳ್ಳೆಯದು. ಕಫ ಕಟ್ಟಿದಂತಹ ಸಂದರ್ಭ, ನೆಗಡಿ, ಶೀತವಿದ್ದಾಗಲೂ ಈರುಳ್ಳಿಯಲ್ಲಿ ನೈಸರ್ಗಿಕವಾದ ಗುಣಗಳಿರುವುದರಿಂದ ಇದು ಕಫವನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಉಸಿರಾಟ ಸುಲಭವಾಗುತ್ತದೆ.

ಬಹುಮುಖ್ಯವಾಗಿ ಈರುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಗುಣಗಳು ಹಾಗೂ ಸಲ್ಫರ್‌ ಆರೋಗ್ಯಕರ ಕೂದಲು ಹಾಗೂ ಚರ್ಮಕ್ಕೆ ಬಹಳ ಒಳ್ಳೆಯದು. ಕೊಲಾಜೆನ್‌ ಹೆಚ್ಚಿಸುವಲ್ಲಿ ಇದು ನೆರವಾಗುವ ಮೂಲಕ ಚರ್ಮವನ್ನು ತಾಜಾ ಹಾಗೂ ಹೊಳಪಾಗಿರಿಸುತ್ತದೆ. ದೃಢವಾದ, ನಯವಾದ ಕೂದಲ ಅಂದವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Exit mobile version