Site icon Vistara News

Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

Orange Peel Benefits

ಕಿತ್ತಳೆ ಹಣ್ಣು ಹುಳಿಯನ್ನೂ ಸಿಹಿಯನ್ನೂ ಸಮಪ್ರಮಾಣದಲ್ಲಿ ಹೊಂದಿರುವ ದೇಹಕ್ಕೆ ಒಳ್ಳೆಯದನ್ನೇ ಬಯಸುವ ಹಣ್ಣು. ಇದರ ಘಮಕ್ಕೆ ಎಂಥ ಸಮಯದಲ್ಲೂ ನಮ್ಮನ್ನು ಬಡಿದೆಚ್ಚರಿಸುವ, ಉಲ್ಲಾಸವನ್ನು ತರುವ ಗುಣವಿದೆ. ಸಿಪ್ಪೆ ಸುಲಿದು ರಸಭರಿತ ಕಿತ್ತಳೆಯನ್ನು ಬಾಯಿಗಿಟ್ಟರೆ, ಅಥವಾ ಜ್ಯೂಸ್‌ ಕುಡಿದರೆ, ಎಂಥಾ ಸೆಖೆಯಲ್ಲೂ ತಂಪಿನ, ಎಂಥಾ ಬಾಯಾರಿಕೆಯ ಸುಸ್ತಿನಲ್ಲೂ ಉಲ್ಲಾಸವನ್ನೂ ಶಕ್ತಿಯನ್ನೂ ಮತ್ತೆ ಜಿನುಗಿಸುವ ಶಕ್ತಿ ಇದೆ. ಆದರೆ, ಘಮಘಮಿಸುವ ಕಿತ್ತಳೆಯ ಸಿಪ್ಪೆಯನ್ನು ಮಾತ್ರ ನಾವು ಯಾವುದೇ ಯೋಚನೆ ಮಾಡದೆ ಎಸೆದು ಬಿಡುತ್ತೇವೆ. ನೀವು ವೇಸ್ಟ್‌ ಎಂದುಕೊಳ್ಳುವ ಈ ಸಿಪ್ಪೆಯಲ್ಲೂ (Orange Peel Benefits) ಬೇಕಾದಷ್ಟು ವಿಟಮಿನ್‌ ಸಿ, ನಾರಿನಂಶ ಹಾಗೂ ಪಾಲಿ ಫಿನಾಳ್‌ಗಳು ಇವೆ ಎಂದರೆ ನಂಬುತ್ತೀರಾ?

ಹೌದು. ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್‌ ಸಿಯ ಶೇ.14ರಷ್ಟಿದೆಯಂತೆ. ಅಂದರೆ ಅದು ಒಳಗಿರುವ ಕಿತ್ತಳೆ ಹಣ್ಣಿನ ಮೂರು ಪಟ್ಟು ಹೆಚ್ಚು! ಕಿತ್ತಳೆ ಸಿಪ್ಪೆಯಲ್ಲಿ ಒಳಗಿನ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚು ನಾರಿನಂಶವಿದೆಯಂತೆ. ಫ್ಲಾರಿಡಾ ವಿಶ್ವವಿದ್ಯಾಲಯವು ಕಿತ್ತಳೆ ಸಿಪ್ಪೆಯ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಎಂದು ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ನಮ್ಮ ದೇಹದಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಹೃದಯದ ಕಾಯಿಲೆಯನ್ನು ಉಲ್ಬಣಗೊಳಿಸುವ ತಾಕತ್ತನ್ನು ಹೊಂದಿದೆಯಂತೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಈ ಕಿತ್ತಳೆ ಸಿಪ್ಪೆಯಲ್ಲಿದೆಯಂತೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಟೋ ಕೆಮಿಕಲ್‌ಗಳು ಹೃದಯದ ಕಾಯಿಲೆಗೆ ಪೂರಕವಾದ ಟ್ರೈಮೀಥೈಲಾಮೈನ್‌ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಹೃದಯಸ್ನೇಹಿಯಾಗಿ ವರ್ತಿಸುತ್ತದೆ.

ನಿತ್ಯ ಸೇವಿಸಬೇಕಿಲ್ಲ

ಹಾಗಂತ ಕಿತ್ತಳೆ ಹಣ್ಣಿಸ ಸಿಪ್ಪೆ ಒಳ್ಳೆಯದು ಎಂದು ಅದನ್ನು ನಿತ್ಯವೂ ಸೇವಿಸಬಹುದು ಎಂದಲ್ಲ. ಹಾಗೆ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ಕಿತ್ತಳೆಯ ಸಿಪ್ಪೆ ಕಹಿ ರುಚಿಯನ್ನು ಹೊಂದಿರುತ್ತದೆ ಹಾಗೂ ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ ಎಂಬುದೂ ನಿಮಗೆ ಗೊತ್ತು. ಅಷ್ಟೇ ಅಲ್ಲ. ಕಿತ್ತಳೆಯ ಸಿಪ್ಪೆಯಲ್ಲಿ ಅದನ್ನು ಬೆಳೆಸುವ ಸಂದರ್ಭ ಸಿಂಪಡಿಸಿದ ರಾಜಾಯನಿಕಗಳೂ, ಕೀಟನಾಶಕಗಳೂ ಇರುವ ಸಂಭವ ಹೆಚ್ಚು. ಹೀಗಾಗಿ ಅದನ್ನು ಸರಿಯಾಘಿ, ಸರಿಯಾದ ಕ್ರಮದಲ್ಲಿ ತೊಳೆದುಕೊಂಡು ಕೆಲವು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.

ಕ್ಯಾಂಡಿ

ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗಾಗಿ ಸಿಹಿ ಕ್ಯಾಂಡಿಗಳನ್ನು ಮಾಡಬಹುದು. ಸಿಪ್ಪೆಯನ್ನು 15 ನಿಮಿಷ ನೀರಿನಲ್ಲಿ ಹಾಕಿಟ್ಟು ನಂತರ ಚೆನ್ನಾಗಿ ತೊಳೆದು, ಅದನ್ನು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸಿಪ್ಪೆಯನ್ನು ಸಕ್ಕರೆ ಪಾಕಕ್ಕೆ ಹಾಕಿ ಒಣಗಿಸುವ ಮೂಲಕ ಒಳ್ಳೆಯ ನೈಸರ್ಗಿಕ ಕ್ಯಾಂಡಿ ಮಾಡಬಹುದು.

ಸ್ಮೂದಿ

ಸಣ್ಣ ಸಣ್ಣ ತುಂಡುಗಳನ್ನು ನೀವು ಮಾಡುವ ಸ್ಮೂದಿಗೆ ಹಾಕಬಹುದು.

ಕಿತ್ತಳೆ ಕೇಕ್‌

ಕಿತ್ತಳೆ ಕೇಕ್‌ಗಳನ್ನು ಮಾಡುವಾಗ ಕಿತ್ತಳೆಯ ಸಿಪ್ಪೆಯನ್ನು ತುರಿದು ಒಂದೆರಡು ಚಮಚದಷ್ಟು ಪೇಸ್ಟ್‌ ತಯಾರಿಸಿ ಹಾಕಿದರೆ, ಯಾವುದೇ ಕೃತಕ ಘಮದ ಅವಶ್ಯಕತೆಯೇ ಇಲ್ಲ.

ಕಿತ್ತಳೆ ಸಿಪ್ಪೆಯ ಚಹಾ

ಕಿತ್ತಳೆ ಸಿಪ್ಪೆಯ ಚಹಾ ಮಾಡಿ ಕುಡಿಯಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ, ನೀವು ಮನೆಯಲ್ಲೇ ಮಾಡುವ ಫೇಸ್‌ಪ್ಯಾಕ್‌ಗಳಿಗೆ ಇವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳು, ಸುಕ್ಕು ನಿರಿಗೆಗಳಿಗೆ ಇದು ಬಹಳ ಒಳ್ಳೆಯದು. ಇದರ ನಿಯಮಿತ ಬಳಕೆಯಿಂದ ಮುಖ ತಾಜಾತನದಿಂದ ಹೊಳೆಯುತ್ತದೆ.

Exit mobile version