Site icon Vistara News

Osteo arthritis : 2050ರ ವೇಳೆಗೆ ಆಸ್ಟಿಯೊ ಆರ್ಥರೈಟಿಸ್‌ ತೀವ್ರ, ಎಚ್ಚರ ವಹಿಸಿ

Osteoarthritis Spikes By 2050

ದೇಹದ ಕೀಲುಗಳನ್ನು ದುರ್ಬಲಗೊಳಿಸುವ ಆಸ್ಟಿಯೊ ಆರ್ಥರೈಟಿಸ್‌ ಸಮಸ್ಯೆ ಜಾಗತಿಕವಾಗಿ ಒಂದು ಬಿಲಿಯನ್‌ ಜನರನ್ನು ಮುಂದಿನ ಎರಡೂವರೆ ದಶಕಗಳಲ್ಲಿ (osteoarthritis by 2050) ಕಾಡಲಿದೆ ಎನ್ನುತ್ತದೆ ಇತ್ತೀಚಿನ ಸಮೀಕ್ಷೆ.

ಕಳೆದ 30 ವರ್ಷಗಳ ವೈದ್ಯಕೀಯ ದಾಖಲೆಗಳ ಅಧ್ಯಯನ ನಡೆಸಿರುವ ಅಮೆರಿಕದ ದಿ ಲಾನ್ಸೆಟ್‌ ರುಮೆಟಾಲಜಿ ನಿಯಮತಕಾಲಿಕವು, 2050ರ ವೇಳೆಗೆ ಜಗತ್ತಿನೆಲ್ಲೆಡೆ ಸುಮಾರು ನೂರು ಕೋಟಿ ಜನ ಆಸ್ಟಿಯೊ ಆರ್ಥರೈಟಿಸ್‌ (osteoarthritis by 2050) ಸಮಸ್ಯೆಯಿಂದ ಬಳಲಲಿದ್ದಾರೆ ಎಂದು ಎಚ್ಚರಿಸಿದೆ. ವಿಶ್ವದಲ್ಲಿ ಈಗಾಗಲೇ 30 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಶೇ. 15ರಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗಿದ್ದಾರೆ. ಸುಮಾರು 200 ದೇಶಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಹಲವಾರು ದಶಕಗಳ ಹಿಂದಿನಿಂದ ಲಭ್ಯವಿರುವ ವೈದ್ಯಕೀಯ ಮಾಹಿತಿಗಳನ್ನು ಇದಕ್ಕಾಗಿ ಪರಿಶೀಲಿಸಲಾಗಿತ್ತು. ಅದರನ್ವಯ, 1990ರಲ್ಲಿ 26 ಕೋಟಿ ಜನರಲ್ಲಿ ಈ ಸಮಸ್ಯೆ ಕಂಡಿತ್ತು. 2020ರ ಹೊತ್ತಿಗೆ ಈ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿ 56.5 ಕೋಟಿ ಜನ ಈ ಸಮಸ್ಯೆಗೆ ತುತ್ತಾಗಿದ್ದರು. ಇಷ್ಟು ವಿಪರೀತ ಗತಿಯಲ್ಲಿ ಆಸ್ಟಿಯೊ ಆರ್ಥರೈಟಿಸ್‌ (osteoarthritis by 2050) ಏರಿಕೆಯಾಗುವುದಕ್ಕೆ ಹೆಚ್ಚುತ್ತಿರುವ ವೃದ್ಧಾಪ್ಯದ ಪ್ರಮಾಣ, ಜನಸಂಖ್ಯೆಯ ಹೆಚ್ಚಳ ಮತ್ತು ಬೊಜ್ಜಿನ ಸಮಸ್ಯೆ ಮುಖ್ಯ ಕಾರಣಗಳು ಎಂದು ಹೇಳಲಾಗುತ್ತಿದೆ.

ಕಾರಣಗಳು ಹಲವು

“ವಿಶ್ವದ ಎಲ್ಲಾ ದೇಶಗಳಲ್ಲಿ ಆಯಸ್ಸಿನ ಪ್ರಮಾಣ ದೀರ್ಘವಾಗಿದೆ. ಜನಸಂಖ್ಯೆಯೂ ಹೆಚ್ಚುತ್ತಿದ್ದು, ವೃದ್ಧರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳ ಕಾಣುತ್ತಿದೆ. ಇದರಿಂದ ಆರೋಗ್ಯ ಸೇವೆಗಳ ಮೇಲೆ ಒತ್ತಡ ಹೆಚ್ಚಾಗಲಿದೆ” ಎಂದು ಸಮೀಕ್ಷೆಯ ವರದಿ ಅಭಿಪ್ರಾಯಪಟ್ಟಿದೆ. 1990ರಲ್ಲಿ ಮೊದಲ ಬಾರಿಗೆ ಈ ಅಧ್ಯಯನ ಆರಂಭಗೊಂಡಾಗ, ಶೇ. 16ರಷ್ಟು ಮಂದಿ ಬೊಜ್ಜಿನಿಂದಾಗಿ ಆಸ್ಟಿಯೊ ಆರ್ಥರೈಟಿಸ್‌ಗೆ ತುತ್ತಾಗಿದ್ದರು. ಮೂವತ್ತು ವರ್ಷಗಳ ಬೊಜ್ಜಿನ ಪ್ರಮಾಣ ಶೇ.20ಕ್ಕೆ ಏರಿದೆ. ಹಾಗಾಗಿ ಜೀವನಶೈಲಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳದಿದ್ದರೆ ಆಸ್ಟಿಯೊ ಆರ್ಥರೈಟಿಸ್‌ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸೂಚನೆಗಳು ದಟ್ಟವಾಗಿವೆ ಎಂದು ವರದಿ ಎಚ್ಚರಿಸಿದೆ

ದೈಹಿಕ ಜಡತೆ ಆಸ್ಟಿಯೊ ಆರ್ಥರೈಟಿಸ್‌ ಹೆಚ್ಚಳಕ್ಕೆ ಮುಖ್ಯ ಕಾರಣವಾಗುತ್ತಿದೆ. ಸರಿಯಾದ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನೂ ನಿಯಂತ್ರಿಸಬಹುದು. ಜಾಗತಿಕವಾಗಿ ಆರ್ಥರೈಟಿಸ್‌ನಿಂದ ವೈದ್ಯಕೀಯ ಸೇವೆಗಳ ಮೇಲೆ ಉಂಟಾಗುವ ಒತ್ತಡವನ್ನು ಶೇ. 20ರಷ್ಟು ತಗ್ಗಿಸಲು ಸಾಧ್ಯವಿದೆ. ಇವೆಲ್ಲದಕ್ಕೂ ಮುಖ್ಯವಾಗಿ ಅತಿತೂಕ ಅಥವಾ ಬೊಜ್ಜಿನ ಸಮಸ್ಯೆಯನ್ನು ಹತೋಟಿಗೆ ತರುವುದು ಅಗತ್ಯ ಎಂದು ಹೇಳಲಾಗಿದೆ. ಮೊಣಕಾಲು ಮತ್ತು ಪೃಷ್ಠದ ಕೀಲುಗಳನ್ನು ಆಸ್ಟಿಯೊ ಆರ್ಥರೈಟಿಸ್‌ ದುರ್ಬಲಗೊಳಿಸುವ ಸಂಭವ ಹೆಚ್ಚು. ಹಾಗೆಂದು ಉಳಿದ ಕೀಲುಗಳು ಸುರಕ್ಷಿತ ಅಥವಾ ನೋವು ರಹಿತವಾಗಿ ಉಳಿಯಬಲ್ಲವು ಎನ್ನುವುದು ದುಸ್ತರ.

ಸ್ತ್ರೀಯರಲ್ಲೇ ಹೆಚ್ಚು

ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಈ ಸಮಸ್ಯೆ ಕಡಿಮೆ. 2020ರ ಸಮೀಕ್ಷೆಯಲ್ಲಿ, ಆಸ್ಟಿಯೊ ಆರ್ಥರೈಟಿಸ್‌ ರೋಗಿಗಳ ಪೈಕಿ ಶೇ. 16ರಷ್ಟು ಮಹಿಳೆಯರಿದ್ದರೆ, ಶೇ. 39ರಷ್ಟು ಪುರುಷರು. ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗುತ್ತದೆ. ಆನುವಂಶಿಕ ಕಾರಣಗಳು, ಹಾರ್ಮೋನಿನ ಅಸಮತೋಲನ ಮತ್ತು ದೈಹಿಕ ವ್ಯತ್ಯಾಸಗಳು ಇದಕ್ಕೆ ಪ್ರಮುಖ ಕಾರಣಗಳೆಂದು ಕಂಡುಬರುತ್ತದೆ.

ಆಸ್ಟಿಯೊ ಆರ್ಥರೈಟಿಸ್‌ಗೆ ಯಾವುದೇ ನಿವಾರಣೆ ಎಂಬುದಿಲ್ಲ. ಈಗಿನ ವ್ಯವಸ್ಥೆಯಲ್ಲಿ ಅದು ಬಾರದಂತೆ ತಡೆಯುವುದು ಅಥವಾ ಮುಂದೂಡುವುದು ಮಾತ್ರವೇ ಉಪಾಯ. ಆದರೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ಪ್ರದೇಶಗಳಲ್ಲಿ ಜನರಿಗೆ ಆಸ್ಟಿಯೊ ಆರ್ಥರೈಟಿಸ್‌ ನಿರ್ವಹಣೆಯ ವೈದ್ಯಕೀಯ ವೆಚ್ಚವೂ ದುಬಾರಿಯೆನಿಸುವುದು ಸಹಜ. ಅದರಲ್ಲೂ ಕೀಲು ಬದಲಾವಣೆ ಮುಂತಾದವು ಮತ್ತೂ ಕ್ಲಿಷ್ಟ ಎನಿಸುತ್ತವೆ. ಹಾಗಾಗಿ ವ್ಯಾಯಾಮ ಮತ್ತು ಆಹಾರದ ಮೂಲಕ ಬೊಜ್ಜು ನಿಯಂತ್ರಿಸುವುದು ಪ್ರಾಯೋಗಿಕವಾಗಿ ಸೂಕ್ತ ಎನಿಸುತ್ತದೆ.

ಇದನ್ನೂ ಓದಿ: Dental Health: ಸದಾ ಜಗಿಯುತ್ತಿರುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಅನ್ನೋದು ನಿಜವೆ?

Exit mobile version