ಇತ್ತೀಚೆಗಿನ ದಿನಗಳಲ್ಲಿ ಅಗಸೆ ಬೀಜ ಅಂದರೆ ಫ್ಲ್ಯಾಕ್‌ಸೀಡ್ ಒಳ್ಳೆಯದು ಎಂಬುದು ಬಹುತೇಕರಿಗೆ ಗೊತ್ತು. ಅದರಲ್ಲಿರುವ ಪೋಷಕಾಂಶಗಳ ಮಹತ್ವ ಓದಿ, ಕೇಳಿ ತಿಳಿದ ಎಲ್ಲರೂ ನಿತ್ಯ ಬಳಕೆಯಲ್ಲಿ ಅಗಸೆಬೀಜವನ್ನು ಬಳಸಲು ಆರಂಭಿಸಿಯೇ ಇರುತ್ತಾರೆ, ನಿಜ. ಆದರೆ, ಅತಿಯಾದರೆ ಅಮೃತವೂ ವಿಷವೇ ತಾನೇ? ನಿತ್ಯವೂ ಫ್ಲ್ಯಾಕ್‌ಸೀಡ್ ಬಳಕೆ ನಿಮ್ಮ ಆರೋಗ್ಯಕ್ಕೆ ಕುತ್ತೂ ಆಗಬಹುದು. ಹಾಗಾಗಿ ಅಗಸೆ ಬೀಜವನ್ನು ಹೆಚ್ಚು ಬಳಸುವ ಮೊದಲು ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಹಾಗಾದರೆ ಬನ್ನಿ, ಅಗಸೆ ಬೀಜದ ಅತಿಯಾದ ಬಳಕೆಯಿಂದ ಆಗುವ ವ್ಯತಿರಿಕ್ತ ಪರಿಣಾಮಗಳೇನು ಎಂಬುದನ್ನು ನೋಡೋಣ.
ಶತಶತಮಾನಗಳಿಂದಲೂ ಅಗಸೆ ಬೀಜವನ್ನು ಆರೋಗ್ಯಕರ ಲಾಭಗಳಿಗೆ ಮನುಷ್ಯ ಬಳಸಿಕೊಂಡೇ ಬಂದಿದ್ದಾನೆ. ಅತ್ಯಂತ ಹೆಚ್ಚು ಒಮೆಗಾ 3 ಫ್ಯಾಟಿ ಆಸಿಡ್ ಇರುವ, ಒಳ್ಳೆಯ ಕೊಬ್ಬು, ನಾರಿನಂಶವನ್ನೂ ಹಂದಿರುವ ಅಗಸೆ ಬೀಜದಲ್ಲಿ ಇಸ್ಟ್ರೋಜನ್ ಹೆಚ್ಚಿಸುವ ಗುಣಗಳಿದ್ದು, ಆಂಟಿ ಆಕ್ಸಿಡೆಂಟ್ ಗುಣಗಳನ್ನೂ ಹೊಂದಿದೆ. ಇವೆಲ್ಲ ಒಳ್ಳೆಯ ಪೋಷಕಾಂಶಗಳಿಂದ ಅಗಸೆ ಬೀಜ ಸಮೃದ್ಧವಾಗಿದ್ದರೂ ಇದರ ನಿರಂತರ ಹಾಗೂ ಅತಿಯಾದ ಸೇವನೆಯಿಂದ ಕೆಲವು ಅಡ್ಡ ಪರಿಣಾಮಗಳೂ ಉಂಟಾಗಬಹುದು.
1 ಇದರಿಂದ ಅಲರ್ಜಿ ಉಂಟಾಗಬಹುದು: ಎಲ್ಲರ ದೇಹ ಪ್ರಕೃತಿಗೂ ಎಲ್ಲವೂ ಹೊಂದಿಕೊಳ್ಳಬೇಕು ಎಂದೇನಿಲ್ಲ. ಹಾಗಾಗಿ ಫ್ಲ್ಯಾಕ್ಸೀಡ್‌ನಿಂದ ಕೆಲವರ ದೇಹಕ್ಕೆ ಅಲರ್ಜಿಯಾಗುವ ಸಂಭವವೂ ಇದೆ. ಅಗಸೆ ಬೀಜದ ಸೇವನೆಯಿಂದ ಮೈಯಲ್ಲಿ ತುರಿಕೆ, ಕಜ್ಜಿಗಳು, ಬಾವು, ಚರ್ಮ ಕೆಂಪಗಾಗುವುದು ಇತ್ಯಾದಿಗಳೂ ಆಗಬಹುದು. ವಾಂತಿ ಹಾಗೂ ತಲೆ ಸುತ್ತೂ ಬರಬಹುದು. ಇವೆಲ್ಲ ಉಂಟಾದರೆ ಅದು ಅಲರ್ಜಿಯ ಲಕ್ಷಣ. ಹಾಗಾಘಿ ಇಂತಹ ಸಮಸ್ಯೆಗಳಾದರೆ ಅಂಥವರು ಫ್ಲ್ಯಾಕ್ಸೀಡ್‌ನಿಂದ ದೂರವಿರಬೇಕು.
2. ಉರಿಯನ್ನು ಹೆಚ್ಚಿಸಬಹುದು: ಅಗಸೆಬೀಜದಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿದ್ದು ಇದು ದೇಹದ ಯಾವುದೇಉರಿಯನ್ನು ಶಮನಗೊಳಿಸುವಲ್ಲಿ ನೆರವಾಗುತ್ತದೆ ಎಂಬುದು ನಿಜವೇ ಆದರೂ, ಇದನ್ನು ಫುರ್ತಿ ನಂಬುವ ಹಾಗಿಲ್ಲ ಎಂಬ ವರದಿಗಳೂ ಇವೆ. ಉರಿ ಶಮನಕ್ಕೆ ಒಳ್ಳೆಯದೆಂದು ಹೆಚ್ಚು ತಿಂದಲ್ಲಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು.
3. ಮಗುವಿಗಾಗಿ ಪ್ರಯತ್ನಿಸುವವರು ಎಚ್ಚರ: ಫ್ಲ್ಯಾಕ್ಸೀಡ್ ದೇಹದಲ್ಲಿ ಇಸ್ಟ್ರೋಜನ್ ಹಾರ್ನೋನಿನ ಹಾಗೆಯೇ ವರ್ತಿಸುವುದರಿಂದ ಮಹಿಳೆಯರ ದೇಹದಲ್ಲಿ ಇದ್ದಕ್ಕಿದ್ದಂತೆ ಹಾರ್ಮೋನ್ ವೈಪರೀತ್ಯವೂ ಇದರ ಸೇವನೆಯಿಂದ ಉಂಟಾಗಬಹುದು. ಇದು ಋತುಚಕ್ರವನ್ನು ಏರುಪೇರಾಗಿಸಬಹುದು. ಹಾಗಾಗಿ ಸಂತಾನೋತ್ಪತ್ತಿಯ ನಿರೀಕ್ಷೆ ಇರುವ ಮಂದಿ ಎಚ್ಚರ ವಹಿಸುವುದು ಉತ್ತಮ.
ಇದನ್ನೂ ಓದಿ: Food Tips: ಬೇಸಿಗೆಯಲ್ಲಿ ನೀವು ಟ್ರೈ ಮಾಡಲೇಬೇಕಾದ ಐಸ್‌ಕ್ರೀಂ ಜೋಡಿಗಳಿವು!
4. ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಒಳ್ಳೆಯದಲ್ಲ: ಇಸ್ಟ್ರೋಜನ್ ಹಾರ್ಮೋನ್ ಏರಿಳಿಸುವ ಕೆಲಸ ಇದು ಮಾಡುವ ಸಂಭವ ಹೆಚ್ಚಿರುವುದರಿಂದ ಇದು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಅಷ್ಟು ಒಳ್ಳೆಯದಲ್ಲ. ಹಾಗಾಗಿ ಅಂಥವರು ಅಗಸೆ ಬೀಜ ಸೇವನೆಗೂ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
5. ಬೇದಿಯಾಗಬಹುದು: ಅಗಸೆ ಬೀಜದಲ್ಲಿ ನಾರಿನಂಶ ಹೆಚ್ಚಿರುವುದರಿಂದ ಇದರ ಅತಿಯಾದ ಸೇವನೆಯಿಂದ ಬೇದಿಯಾಗಬಹುದು. ಹೊಟ್ಟೆನೋವು, ಹೊಟ್ಟೆಯುಬ್ಬರ ಅಥವಾ ಬೇದಿ, ಮಲಬದ್ಧತೆಯ ಸಮಸ್ಯೂ ಕೆಲವರಿಗೆ ಆಗಬಹುದು.
6. ಕರುಳಿನಲ್ಲಿ ತಡೆಯಾಗಬಹುದು: ಅಗಸೆಬೀಜವನ್ನು ಸರಿಯಾಗಿ ನೀರಿನೊಂದಿಗೆ ತೆಗೆದುಕೊಳ್ಳದಿದ್ದಾಗ ಅಥವಾ ಅಗಸೆ ಬೀಜ ತಿಂದಾಗ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ನೀರು ಸಿಗದಿದ್ದಾಗ ಇದು ಕರುಳಿನಲ್ಲಿ ತಡೆಯೊಡ್ಡಬಹುದು. ಆಗ ಮಲಬದ್ದತೆಯೂ ತಲೆದೋರಬಹುದು. ಇದು ಕರುಳಿನಲ್ಲಿ ತಡೆಯುಂಟು ಮಾಡಿದಾಗ, ನಿತ್ಯವೂ ಔಷಧಿಗಳ ಸೇವನೆ ಇದ್ದವರಿಗೆ, ಕೆಲವು ಔಷಧಿಗಳ ವಿರುದ್ಧವಾಗಿಯೂ ಇದು ವರ್ತಿಸಬಹುದು. ಹಾಗಾಗಿ, ಇಂಥವರು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ಇದನ್ನೂ ಓದಿ: Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!