Site icon Vistara News

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

Pain relievers

ಪ್ರಕೃತಿಯಲ್ಲಿ ನಮ್ಮ ನೋವುಗಳಿಗೆಲ್ಲವೂ ಮದ್ದಿವೆ. ಪ್ರಕೃತಿಯ ಸಾನಿಧ್ಯ ನಮಗೆ ಮಾನಸಿಕ ನೆಮ್ಮದಿಯನ್ನು ನೀಡುವ ಜೊತೆಗೆ ದೇಹಕ್ಕೆ ಆದ ನೋವನ್ನೂ ಕಡಿಮೆ ಮಾಡಲು ಮೂಲಿಕೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಮನುಷ್ಯ ತನ್ನ ಆರೋಗ್ಯದ ಸಮಸ್ಯೆಗಳಿಗೆ ವೈದ್ಯ ಜಗತ್ತಿನಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಕೆಲವು ಸರಳವಾದ ಪ್ರಾಕೃತಿಕ ಆಹಾರಗಳು ಅವನ ಕೈಯನ್ನು ಬಿಡುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಹಾಗಾಗಿ, ಪ್ರಕೃತಿಯೇ ನಮಗೆ ನೀಡಿದ ಕೆಲವು ನೋವು ನಿವಾರಕಗಳೂ ಕೂಡ ಸಾಕಷ್ಟು ನೋವುಗಳನ್ನು ಕಡಿಮೆ ಮಾಡುವಲ್ಲಿ ಸಫಲವಾಗುತ್ತದೆ. ಬನ್ನಿ, ಪ್ರಕೃತಿದತ್ತ ನೋವು ನಿವಾರಕವಾಗಿ ಯಾವೆಲ್ಲ ಆಹಾರಗಳು ಕೆಲಸ ಮಾಡುತ್ತವೆ (Pain relievers) ಎಂಬುದನ್ನು ನೋಡೋಣ.

ಶುಂಠಿ

ಪ್ರಕೃತಿದತ್ತ ಆಂಟಿ ಇನ್‌ಫ್ಲಮೇಟರಿ ಗುಣಗಳುಳ್ಳ ಆಹಾರಗಳ ಪೈಕಿ ಶುಂಠಿ ಪ್ರಮುಖವಾದದ್ದು. ಇದರಲ್ಲಿ ಅತ್ಯಂತ ಶಕ್ತಿಯುತವಾದ ನೋವು ನಿವಾರಕ ಗುಣಗಳಿದ್ದು ಮಾಂಸಖಂಡಗಳ ಸೆಳೆತ, ಉರಿಯೂತ, ನೋವುಗಳನ್ನು ಇದು ಶಮನಗೊಳಿಸುವಲ್ಲಿ ನೆರವಾಗುತ್ತದೆ. ನೋವುಗಳಿದ್ದಾಗ ರಾತ್ರಿ ಮಲಗುವ ಮೊದಲು ಶುಂಠಿಯ ಚಹಾ ಕುಡಿಯುವ ಮೂಲಕ ಒಳ್ಲೆಯ ನಿದ್ರೆ ಹಾಗೂ ನೋವಿನಿಂದ ಕೊಂಚ ಆರಾಮ ಪಡೆಯಬಹುದು.

ಹಸಿ ಅರಿಶಿನ

ಮಸಾಲೆಯಾಗಿ ನಾವು ನಿತ್ಯ ಅರಿಶಿನವನ್ನು ಉಪಯೋಗಿಸಿದರೂ ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ನೋವುಗಳಿಗೆ ಒಳ್ಳೆಯ ಔಷಧಿ. ಇದರಲ್ಲಿ ಆಂಟಿಬಯಾಟಿಕ್‌ ಹಾಗೂ ಆಂಟಿಸೆಪ್ಟಿಕ್‌ ಗುಣಗಳು ಹೇರಳವಾಗಿವೆ. ಈ ಗುಣಗಳು ನೋವುನಿವಾರಕಗಳಂತೆ ಕೆಲಸ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವಲ್ಲಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಅರಿಶಿನ ಹಾಕಿದ ಹಾಲನ್ನು ಕುಡಿಯುವ ಮೂಲಕ ಅರಿಶಿನದ ಲಾಭವನ್ನು ಪಡೆಯಬಹುದು.

ಸೋಂಪು

ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂಥ ಸೋಂಪು ಅಸಿಡಿಟಿ ಹಾಗೂ ಗ್ಯಾಸ್‌ನ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಹೊಟ್ಟೆಯ ಸಮಸ್ಯೆಗಳು, ಗ್ಯಾಸ್‌ನಿಂದಾಗುವ ನೋವು, ಮಾಂಸಖಂಡಗಳ ಸೆಳೆತ ಇತ್ಯಾದಿ ನೋವುಗಳಿಗೆ ಸೋಂಪು ಅತ್ಯುತ್ತಮ ನೋವು ನಿವಾರಕವಾಗಿ, ಗ್ಯಾಸ್‌ನಿಂದ ಮುಕ್ತಿ ನೀಡುವ ಮನೆಮದ್ದಾಗಿ ಕೆಲಸ ಮಾಡುತ್ತದೆ. ಸೋಂಪನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅತಿಯಾಗಿ ಊಟ ಮಾಡಿದಾಗ, ಹೊರಗೆ ತಿಂದು ಬಂದಾಗ, ಸಮಾರಂಭಗಳಲ್ಲಿ ಊಟ ಮಾಡಿದಾಗ ಆಗುವ ಹೊಟ್ಟೆಯುಬ್ಬರಕ್ಕೆ ತಕ್ಷಣವೇ ಹೀಗೆ ಮಾಡುವ ಮೂಲಕ ಸಮಾಧಾನ ಸಿಗಬಹುದು.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಸಣ್ಣ ಪುಟ್ಟ ನೋವುಗಳಿಗೆ, ಯಾವಾಗಲೂ ಪ್ರಕೃತಿದತ್ತ ಇಂತಹ ನೋವು ನಿವಾರಕಗಳು, ಆಂಟಿಸೆಪ್ಟಿಕ್‌ ಗುಣಗಳ ಆಹಾರಗಳನ್ನು ನಮ್ಮ ನಿತ್ಯಾಹಾರದಲ್ಲಿ ಅಳವಡಿಸುವ ಮೂಲಕ ಪರಿಹಾರ ಕಂಡುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅತಿಯಾದ ಮಾತ್ರೆಗಳ ದಾಸರಾಗುವುದು, ಅಥವಾ ಸಣ್ಣ ಪುಟ್ಟ ನೋವುಗಳಿಗೂ ಮಾತ್ರೆಗಳ ಸಹಾಯ ಪಡೆಯುವುದರಿಂದ ಅಡ್ಡ ಪರಿಣಾಮಗಳನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಆದಷ್ಟೂ ಪ್ರಕೃತಿಯ ಕೊಡುಗೆಗಳನ್ನು ಸಮರ್ಪಕವಾಗಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂಬುದನ್ನು ಹಿರಿಯರಾದಿಯಾಗಿ ವೈದ್ಯಜಗತ್ತೂ ಕೂಡ ಒಪ್ಪಿಕೊಂಡ ಸತ್ಯ.

Exit mobile version