Site icon Vistara News

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

healthy children food

ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಚೆನ್ನಾಗಿ ತಿನ್ನಬೇಕು ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು. ಹೆಚ್ಚಾಗಿ, ಮನೆಯಲ್ಲಿರುವ ಹಿರಿಯರು, ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರವನ್ನು (Healthy food) ನೀಡುವುದನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಕೆಲವು ಪರಂಪರಾಗತ ತಿಂಡಿಗಳು, ಹಳೆಯ ತಿನಿಸುಗಳು, ಧಾನ್ಯ ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಸಮೃದ್ಧವಾದ ಆಹಾರ ಇತ್ಯಾದಿಗಳು ಮಕ್ಕಳ ನಿತ್ಯಾಹಾರವಾಗಿರಲಿ (children food) ಎಂದು ಮನೆಯಲ್ಲಿರುವ ಹಿರಿಯರು ಹೆಚ್ಚು ದೇಸೀ ತಿನಿಸುಗಳು, ಪೋಷಕಾಂಶಯುಕ್ತ ಬೆಳಗಿನ ಉಪಹಾರಗಳು ಇತ್ಯಾದಿಗಳತ್ತ ಗಮನ ನೀಡುತ್ತಾರೆ. ಆದರೆ ಇತ್ತೀಚೆಗಿನ ಧಾವಂತದ ಬದುಕಿನಲ್ಲಿ ಮಕ್ಕಳ ಕಣ್ಣಿಗೆ ಮಾರುಕಟ್ಟೆಯಲ್ಲೂ ಥರಹೇವಾರಿ, ಬಣ್ಣಬಣ್ಣದ ಆಕರ್ಷಕ, ರುಚಿಕಟ್ಟಾದ ಆಹಾರಗಳು ಸಿಗುವುದರಿಂದ ಮಕ್ಕಳೂ ಕೂಡಾ ಅವುಗಳ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ (Health problems) ಎದುರಿಸುತ್ತಿದ್ದಾರೆ. ಬೊಜ್ಜು (Cholesterol) ಹೆಚ್ಚಾಗುತ್ತಿದೆ. ಮಧುಮೇಹ (Diabetes) ಸಾಮಾನ್ಯವಾಗುತ್ತಿದೆ. ನಮ್ಮ ಮಕ್ಕಳು ಉದ್ದ ಬೆಳೆಯದೆ ಅಡ್ಡ ಬೆಳೆಯುತ್ತಿದ್ದಾರಲ್ಲಾ ಎಂಬ ಕೊರಗೂ ಕೂಡಾ ಪೋಷಕರದು. ಹಾಗಾದರೆ ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!

1. ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್‌ ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಅಗತ್ಯ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕ್ಯಾಲ್ಶಿಯಂನ ಅಗತ್ಯ ಅತ್ಯಂತ ಹೆಚ್ಚಿರುವುದರಿಂದ ಅವರ ಎಲುಬು ಗಟ್ಟಿಯಾಗಿ, ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳು ಬೇಕೇಬೇಕು. ಹುಟ್ಟಿದ ಮಕ್ಕಳಿಂದ ಹಿಡಿದು ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ಬಹಳ ಪ್ರಮುಖವಾಗಿ ಆಗುವುದರಿಂದ ಇಂತಹ ಸಂದರ್ಭ ಕ್ಯಾಲ್ಶಿಯಂ ಮಕ್ಕಳಿಗೆ ಸಿಗುವುದು ಅತ್ಯಂತ ಅಗತ್ಯ ಕೂಡಾ.

2. ಮೊಟ್ಟೆ: ಮೊಟ್ಟೆಯಲ್ಲಿ ಅತ್ಯಂತ ಸಮೃದ್ಧವಾಗಿ ಪ್ರೊಟೀನ್‌, ಅಮೈನೋ ಆಸಿಡ್‌ ಇರುವುದರಿಂದ ಇವು ಮಕ್ಕಳ ಪ್ರತಿಯೊಂದು ಅಂಗಾಂಶದ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಅಂಗಾಂಶದ ಬೆಳವಣಿಗೆ, ರಿಪೇರಿ ಇತ್ಯಾದಿಗಳ ಕೆಲಸವೂ ಪ್ರೊಟೀನ್‌ನಿಂದಲೇ ಆಗುತ್ತದೆ. ಮಕ್ಕಳಿಗೆ ಪ್ರೊಟೀನ್‌ ಮೊಟ್ಟೆಯಿಂದ ಅತ್ಯಂತ ಹೆಚ್ಚು ಸಿಗುತ್ತದೆ. ಮೊಟ್ಟೆ ತಿನ್ನದ ಮಂದಿ ಮೊಟ್ಟೆಗೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು.

3. ಮಾಂಸ: ಚಿಕನ್‌, ಟರ್ಕಿ ಮತ್ತಿತರ ಮಾಂಸಗಳಿಂದಲೂ ಪ್ರೊಟೀನ್‌, ಝಿಂಕ್‌ ಮತ್ತಿತರ ಪೋಷಕಾಂಶಗಳು ಲಭ್ಯವಾಗುವುದರಿಂದ ಇದು ಎಲುಬಿನ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತವೆ.

4. ಮೀನು: ಸಾಲ್ಮನ್‌, ಮಕೆರೆಲ್‌ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹೇರಳವಾಗಿರುವುದರಿಂದ ಬೆಳವಣಿಗೆಗೆ ಪೂರಕವಾಗಿದೆ.

5. ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳು: ದ್ವಿದಳ ಧಾನ್ಯಗಳಲ್ಲಿಯೂ, ಬೇಳೆ ಕಾಳುಗಳಲ್ಲಿಯೂ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಪ್ರೊಟೀನ್‌, ಕಬ್ಬಿಣಾಂಶ, ಝಿಂಕ್‌ ಕೂಡಾ ಇದೆ. ಇವು ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಕೂಡಾ.

6. ಹಸಿರು ಸೊಪ್ಪು ತರಕಾರಿಗಳು: ಬಸಳೆ, ಪಾಲಕ್‌ ಸೇರಿದಂತೆ ಹಸಿರು ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ವಿಟಮಿನ್‌, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಮಕ್ಕಳ ಒಟ್ಟು ಆರೋಗ್ಯಕ್ಕೆ ಇದು ಪೂರಕವಾಗಿದೆ.

7. ಬೀಜಗಳು: ಬಾದಾಮಿ, ವಾಲ್‌ನಟ್‌, ಪಿಸ್ತಾ, ಕುಂಬಳಕಾಯಿ ಬೀಜ, ಸೌತೇಕಾಯಿ ಬೀಜ, ಚಿಯಾ ಬೀಜ, ಅಗಸೆ ಬೀಜ ಸೇರಿದಂತೆ ಎಲ್ಲ ಬಗೆಯ ಬೀಜಗಳಲ್ಲೂ ಮೆಗ್ನೀಶಿಯಂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ.

8. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರ್ರಿ, ಕಿವಿ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಆರೋಗ್ಯವಂತರನ್ನಾಗಿ ಮಾಡುವ ಮೂಲಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!

Exit mobile version