Site icon Vistara News

Party time | ಪಾರ್ಟಿ ಮಾಡಿ ಸಂಭ್ರಮಿಸಿದರೆ ಆರೋಗ್ಯ ವೃದ್ಧಿ ಎನ್ನುತ್ತದೆ ಈ ಅಧ್ಯಯನ!

party time

ಬಂಧು-ಮಿತ್ರರೊಂದಿಗಿನ ಸಾಮಾಜಿಕ ಭೇಟಿಗಳಲ್ಲಿ ಬದುಕಿನ ಧನಾತ್ಮಕ ಅಂಶಗಳನ್ನು ಪ್ರಸ್ತಾಪಿಸುವ ಅಥವಾ ಸಂಭ್ರಮಿಸುವುದರಿಂದ ಬದುಕಿನ ಸ್ವಾಸ್ಥ್ಯ ಹೆಚ್ಚುತ್ತದೆ ಎನ್ನುತ್ತವೆ ಇತ್ತೀಚಿನ ಅಧ್ಯಯನಗಳು.

ಸಾಮಾಜಿಕ ಭೇಟಿಗಳು, ಊಟೋಪಚಾರಗಳು ಮತ್ತು ಬದುಕಿನ ಸಂಭ್ರಮ ಹಂಚಿಕೊಳ್ಳುವಂಥ ಮೂರು ಪ್ರಕ್ರಿಯೆಗಳಿಂದ ಸಾಮಾಜಿಕವಾಗಿ ನೆರವಾಗುವ ಮತ್ತು ಬದ್ಧತೆ ತೋರುವಂಥ ಪ್ರವೃತ್ತಿ ಹೆಚ್ಚುತ್ತದೆ ಎಂದು ಪಬ್ಲಿಕ್‌ ಪಾಲಿಸಿ ಮತ್ತು ಮಾರ್ಕೆಟಿಂಗ್‌ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿ ಪ್ರತಿಪಾದಿಸಿದೆ. ಆಪತ್ಕಾಲದಲ್ಲಿ ಅಗತ್ಯವಾದ ಸಾಮಾಜಿಕ ನೆರವು ನಮಗಿದೆ ಎಂಬ ಭಾವವೇ ಭದ್ರತೆಯನ್ನು ನೀಡುತ್ತದೆ. ಇದರಿಂದ ಆರೋಗ್ಯ, ಸ್ವಾಸ್ಥ್ಯ ಮತ್ತು ಜೀವಿತಾವಧಿ ಹೆಚ್ಚಿ, ಒತ್ತಡ ಕಡಿಮೆಯಾಗುತ್ತದೆ ಎಂಬುದು ಈ ವರದಿಯ ಸಾರಾಂಶ.

“ವರ್ಷಾಂತ್ಯದ ಈ ಹೊತ್ತಿನಲ್ಲಿ ಹೆಚ್ಚಿನ ಸಾಮಾಜಿಕ ಭೇಟಿಗಳಿಗೆ ಇವರು ಕಾರಣಗಳು ಕೆಲವೇ ಕೆಲವು- ತಿನ್ನುವುದು, ಕುಡಿಯುವು, ಒಟ್ಟಾಗಿ ಸೇರುವುದು. ಇಂಥ ಸಂದರ್ಭಗಳಲ್ಲಿ, ಇನ್ನೊಬ್ಬರ ಬದುಕಿನ ಧನಾತ್ಮಕ ಅಂಶಗಳನ್ನು ಸಂಭ್ರಮಿಸುವುದರಿಂದ, ಉದಾ- ಹೊಸ ಉದ್ಯೋಗ ಸಿಕ್ಕಿದೆ, ಕೆಲಸದಲ್ಲಿ ಪ್ರಗತಿಯಾಗಿದೆ, ಓದುವುದಕ್ಕೆ ಅನುಕೂಲವಾಗಿದೆ- ಇಂಥ ಯಾವುದಾದರೂ ವಿಷಯ ಇರಬಹುದು. ಇದರಿಂದ ಆಯಾ ಪಾರ್ಟಿಗೆಂದು ಆಗಮಿಸಿರುವ ಎಲ್ಲರ ಮನಸ್ಸಿನ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ” ಎನ್ನುತ್ತಾರೆ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಇಂಡಿಯಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆಲ್ಲಿ ವೇಯ್ಟ್.‌

ಇದಕ್ಕಾಗಿ ಸಾವಿರಾರು ಜನರು ಕೆಲವು ವರ್ಷಗಳ ಕಾಲ ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದರು. ಒಂದೊಮ್ಮೆ ಈ ಭೇಟಿಗಳು ನೇರವಾಗಿ ಅಲ್ಲದೆ, ಆನ್‌ಲೈನ್‌ ಆಗಿದ್ದರೂ ತನ್ನದೇ ರೀತಿಯಲ್ಲಿ ಧನಾತ್ಮಕ ಪರಿಣಾಮವನ್ನು ಖಂಡಿತ ಉಂಟುಮಾಡುತ್ತದೆ ಎನ್ನುತ್ತಾರೆ ಕೆಲ್ಲಿ ಅವರ ಜೊತೆಗೆ ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದ ಕನೆಕ್ಟಿಕಟ್‌ ವಿಶ್ವವಿದ್ಯಾಲಯದ ಡೇನಿಯೆಲ್‌ ಬ್ರಿಕ್‌ ಮತ್ತು ಡ್ಯೂಕ್‌ ವಿಶ್ವವಿದ್ಯಾಲಯದ ಜೇಮ್ಸ್‌ ಬೆಟ್‌ಮೆನ್‌, ತಾನ್ಯಾ ಚಾರ್ಟ್ರಂಡ್‌ ಮತ್ತು ಗವನ್‌ ಫಿಸಿಮನ್ಸ್‌.

ಇದನ್ನೂ ಓದಿ | Prerane | ಮನಸ್ಸಿನ ಸ್ಥಿಮಿತದಲ್ಲಿದೆ ಬದುಕಿನ ಸೌಂದರ್ಯ

ಮಾತ್ರವಲ್ಲ, ಇಂಥ ಸಂದರ್ಭಗಳಲ್ಲಿ ಸಾಮಾಜಿಕ ಕಾರ್ಯಗಳತ್ತ ಹೆಚ್ಚಿನ ಬದ್ಧತೆಯನ್ನೂ ಜನ ತೋರಿಸುತ್ತಾರಂತೆ. ಅಂದರೆ, ಸಮಾಜಮುಖಿ ಕೆಲಸಗಳತ್ತ ತಮ್ಮ ಹಣ, ಶ್ರಮ, ಆಸಕ್ತಿಗಳನ್ನು ನೀಡಲು ಹಿಂಜರಿಯುವುದರಿಲ್ಲ. ಅಂದರೆ ಇಂಥ ಸಮಯದಲ್ಲಿ ಸ್ವಯಂಸೇವಾ ಸಂಸ್ಥೆಗಳು ದಾನವನ್ನು ಬಯಸಬಹುದು ಅಥವಾ ಇನ್ನಾವುದೇ ರೀತಿಯ ಸಹಾಯವನ್ನು ಕೋರಬಹುದು. ತಮ್ಮ ಸಂತೋಷದ ಸಮಯದಲ್ಲಿ ಇನ್ನೊಬ್ಬರಿಗೆ ನೆರವು ಕೊಡುವುದಕ್ಕೆ ಜನ ಹಿಂಜರಿಯುವುದಿಲ್ಲ ಎಂಬುದು ಈ ವರದಿಯ ಇನ್ನೊಂದು ಮುಖ್ಯ ತಾತ್ಪರ್ಯ.

ಅನಾಥಾಲಯಗಳು, ಆಸ್ಪತ್ರೆಗಳಂಥ ಸ್ಥಳಗಳಲ್ಲಿ ಇಂಥ ಸಾಮಾಜಿಕ ಪಾರ್ಟಿಗಳು ನೆರವಾಗಬಹುದು. ಅಲ್ಲಿರುವ ಜನರ ಒಂಟಿತನ, ಖಿನ್ನತೆ ಮತ್ತು ದುಃಖವನ್ನು ಶಮನ ಮಾಡುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತದೆ. ಕೋವಿಡ್‌ ಲಾಕ್‌ಡೌನ್‌ ನಂಥ ಸಂದರ್ಭಗಳಲ್ಲಿ ನಡೆದ ಆನ್‌ಲೈನ್‌ ಪಾರ್ಟಿಗಳು ಸಹ ಜನರ ಒಂಟಿತನವನ್ನು ಕಡಿಮೆ ಮಾಡುವಲ್ಲಿ ತಮ್ಮ ಪ್ರಯತ್ನ ಮಾಡಿದ್ದವು. ಇಂಥ ವಿಷಯಗಳ ಬಗ್ಗೆ ಬಹಳಷ್ಟು ಕಂಪನಿಗಳು ಸಹ ತಮ್ಮ ಉದ್ಯೋಗಿಗಳಿಗಾಗಿ ಆನ್‌ಲೈನ್‌ ಪಾರ್ಟಿ ಆಯೋಜಿಸಿದ್ದವು.

ಇದನ್ನೂ ಓದಿ | Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

Exit mobile version