ಪಾವ್‌ಬಾಜಿ (pav bhaji) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಸರು ಕೇಳಿದೊಡನೆಯೇ ಬಾಯಲ್ಲಿ ನೀರೂರುತ್ತದೆ ಎಂಬುದು ನಿಜವೇ. ಕರಗಿ ನೀರಾಗುವ ಬೆಣ್ಣೆಯಲ್ಲಿ ಬಿಸಿ ಬಿಸಿ ಪಾವ್ ಜೊತೆಗೆ ಬಾಜಿಯನ್ನು ಸವಿಯುವ ಸುಖ ಯಾಕೆ ಬೇಡವೆನ್ನಲಿ ಎಂದು ಯಾರೇ ಆದರೂ ಹೇಳಿಯಾರು. ಯಾಕೆಂದರೆ, ಪಾವ್‌ಬಾಜಿ ಭಾರತದ ಅತ್ಯಂತ ಪ್ರಸಿದ್ಧ ಸ್ಟ್ರೀಟ್‌ಫುಡ್‌ಗಳಲ್ಲಿ ಒಂದು. ಆದರೆ, ಆರೋಗ್ಯದ ವಿಚಾರದಲ್ಲಿ ಮಾತ್ರ ಇದು ಯಾವಾಗಲೂ ಹಿಂದೆಯೇ. ಸುರಿಸುರಿದು ಹಾಕುವ ಬೆಣ್ಣೆ, ಮೈದಾದಿಂದ ಮಾಡಿದ ಪಾವ್‌ನಲ್ಲಿ ಹೊಟ್ಟೆ ತುಂಬಿಸಿಕೊಂಡ ಮೇಲೆ, ʻಅಯ್ಯೋ, ಆರೋಗ್ಯದ ಕಾಳಜಿಯನ್ನು ನನಗೇಕೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಹಾರದ ಮೇಲೆ ನನಗೇಕೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲ, ತೂಕ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆಯಲ್ಲಾʼ ಎಂಬ ಗಿಲ್ಟ್ ಅನುಭವಿಸುವ ಪ್ರಸಂಗವೂ ಬರುತ್ತದೆ. ಇಂತಹ ನಮ್ಮಿಷ್ಟದ ತಿನಿಸು ಪಾವ್ ಬಾಜಿಯನ್ನು ಆಗಾಗ ಗಿಲ್ಟ್ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಬಹುದು (pav bhaji recipe) ಎಂಬುದನ್ನು ನೋಡೋಣ ಬನ್ನಿ.
1. ಪಾವ್ ಬಾಜಿಯನ್ನು ಮನೆಯಲ್ಲೇ ಮಾಡಿ. ಇದನ್ನು ಮನೆಯಲ್ಲಿ ಮಾಡುವುದರಿಂದ ರುಚಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗ ಬರಲಾರದು. ಯಾಕೆಂದರೆ, ಅಂತಹ ಇದನ್ನು ಮಾಡುವುದು ಕಠಿಣವೇನಲ್ಲ. ಹೀಗೆ ಮನೆಯಲ್ಲೇ ಪಾವ್‌ಬಾಜಿಯನ್ನು ಮಾಡುವ ಸಂದರ್ಭ ಪಾವ್‌ಗೆ ಮಾತ್ರ ಸುರಿಸುರಿದು ಬೆಣ್ಣೆ ಹಾಕಬೇಡಿ. ಕೊಂಚ ಬೆಣ್ಣೆ ಹಾಕಿ. ಯಾಕೆಂದರೆ ಇದರಲ್ಲಿ ರಾಶಿಗಟ್ಟಲೆ ಸುರಿಯುವ ಬೆಣ್ಣೆಯಲ್ಲಿಯೇ ಅತ್ಯಂತ ಹೆಚ್ಚು ಕ್ಯಾಲರಿ ಹಾಗೂ ಕೊಬ್ಬು ನಿಮ್ಮ ಹೊಟ್ಟೆ ಸೇರಿ ತೂಕ ಹೆಚ್ಚಳವಾಗಲು ಕಾಣಿಕೆ ನೀಡುತ್ತದೆ. ಹಾಗಾಗಿ, ಮುಂದಿನ ಬಾರಿ ಪಾವ್‌ಬಾಜಿ ಮಾಡುವಾಗ ಬೆಣ್ಣೆಯ ಮೇಲೆ ನಿಯಂತ್ರಣ ಇರಲಿ.
2. ಬಾಜಿ ಮಾಡುವ ಸಂದರ್ಭ ಎಷ್ಟು ಸಾಧ್ಯವೋ ಅಷ್ಟು ತರಕಾರಿಗಳನ್ನು ಹಾಕಿ. ಇದು ತರಕಾರಿಗಳಿಂದ ಸಮೃದ್ಧವಾಗಿರಲಿ. ಬಗೆಬಗೆಯ ತರಕಾರಿಗಳು ಬಾಜಿಯ ರುಚಿ ಹೆಚ್ಚಿಸುತ್ತದೆ. ಕ್ಯಾರೆಟ್, ಬೀನ್ಸ್, ಬಟಾಣಿ, ಕ್ಯಾಪ್ಸಿಕಂ ಎಲ್ಲವೂ ಸಾಕಷ್ಟು ಪೋಷಕಾಂಶಗಳನ್ನು ಹೊತ್ತಿವೆ. ಕಡಿಮೆ ಆಲೂಗಡ್ಡೆ ಬಳಸಿ. ಆಲೂಗಡ್ಡೆಯ ಬದಲಾಗಿ ಸಿಹಿಗೆಣಸು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.
3. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾವ್ ಮೈದಾದಲ್ಲಿ ಮಾಡಲ್ಪಟ್ಟಿರುತ್ತದೆ. ಮೈದಾದಿಂದ ಆರೋಗ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ, ಬದಲಾಗಿ ಹಾನಿಯೇ ಹೆಚ್ಚಿದೆ ಎಂಬುದನ್ನು ಪದೇ ಪದೇ ವಿವರಿಸಿ ಹೇಳಬೇಕಾಗಿಲ್ಲ. ಹೀಗಾಗಿ. ಸಾಮಾನ್ಯ ಜಾಗಗಳಿಂದ ಪಾವ್ ತರುವ ಬದಲು, ಆದಷ್ಟೂ ಗೋಧಿಯಿಂದ ಮಾಡಿದ ಪಾವ್ ಸಿಕ್ಕರೆ ಅವನ್ನು ಕೊಂಡು ತನ್ನಿ. ಆ ಮೂಲಕ ಕಿಂಚಿತ್ ನಿಮ್ಮ ಗಿಲ್ಟ್ ಅನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.
4. ಅತಿಯಾದ ಉಪ್ಪು ಸೇರಿಸಬೇಡಿ. ಉಪ್ಪು ರುಚಿಗೆ ತಕ್ಕಷ್ಟು ಹಿತಮಿತವಾಗಿರಲಿ. ಹೆಚ್ಚು ಉಪ್ಪು ಒಳ್ಳೆಯದಲ್ಲ ಎಂಬುದೂ ನಿಮಗೆ ತಿಳಿದಿದೆ. ಹೀಗಾಗಿ, ಬೇಕಾದರೆ, ಆಮೇಲೆ ಉಪ್ಪು ಸೇರಿಸುವ ಅವಕಾಶ ಇದ್ದೇ ಇದೆ ಎಂಬ ಸತ್ಯವನ್ನು ನಂಬಿ. ನಿಂಬೆಹಣ್ಣು, ಹಸಿ ಈರುಳ್ಳಿ ಇವೆಲ್ಲ ಜೊತೆಗಿರುವಾಗ ಉಪ್ಪೂ ಕೂಡಾ ಹೆಚ್ಚು ಬೇಕಾಗುವುದಿಲ್ಲ.
5. ಪಾವ್‌ಬಾಜಿಯ ಜೊತೆಗೆ ಸಲಾಡ್ ಕೂಡಾ ಇಟ್ಟಿರಿ. ಅಂದರೆ, ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಸೌತೆಕಾಯಿ ಇತ್ಯಾದಿಗಳು ಜೊತೆಗೆ ಇಟ್ಟುಕೊಂಡಾಗ, ಅವುಗಳ ಮೂಲಕ ಆರೋಗ್ಯಕರ ಆಹಾರವೂ ಹೊಟ್ಟೆ ಸೇರುತ್ತದೆ. ಜೊತೆಗೆ ಸಲಾಡ್ ತಿನ್ನುವುದರಿಂದ ಹೊಟ್ಟೆ ಬೇಗ ತುಂಬಿದಂತಾಗಿ, ಹೆಚ್ಚು ಪಾವ್ ಹಾಕಿಸಿಕೊಳ್ಳುವುದೂ ತಪ್ಪುತ್ತದೆ. ಹೊಟ್ಟೆಯೂ ತುಂಬುತ್ತದೆ. ಹಾಗಾಗಿ, ಕೇವಲ ಪಾವ್ ತಿಂದು ಹೊಟ್ಟೆ ತುಂಬಿಸಿಕೊಂಡೆ ಎಂಬ ಗಿಲ್ಟ್ ಕೂಡಾ ದೂರಾಗುತ್ತದೆ.
ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?