ನಾವು ಸೇವಿಸುವ ಆಹಾರ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗುತ್ತದೆ. ನಮ್ಮ ಸಂದರ್ ಹಾಗೂ ಆರೋಗ್ಯದ ಗುಟ್ಟು ನಮ್ಮ ಆಹಾರ. ಆದರೆ ಇಂದು ಬಹುತೇಕ ಮಹಿಳೆಯರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಪಿಸಿಒಡಿ. ಅಂದರೆ ಪಾಲಿಸಿಸ್ಟಿಕ್ ಒವರಿಯನ್ ಡಿಸೀಸ್ ಎಂಬ ಹಾರ್ಮೋನಿನ ಸಮಸ್ಯೆ. ಪಿಸಿಒಡಿ ಸಮಸ್ಯೆ ಇಂದು ಸಾಮಾನ್ಯವಾದ ಸಮಸ್ಯೆಯಾಗಿದೆ ಎಂದರೆ ಇಂದಿನ ಜೀವನ ಶೈಲಿ, ಸೇವಿಸುವ ಆಹಾರ ಎಲ್ಲವೂ ಈ ಸಮಸ್ಯೆಗೆ ಮುಖ್ಯ ಕಾರಣವೂ ಆಗಿದೆ. ಈ ಸಮಸ್ಯೆಯ ಕಾರಣದಿಂದ ಮುಖದಲ್ಲಿ ಮೊಡವೆಯ ತೊಂದರೆಗೆ ಸಿಲುಕುವ ಮಂದಿಯೂ ಅನೇಕ. ಮುಖದಲ್ಲಿ ಎಂದಿಗೂ ಮಾಯವಾಗದಿರುವ ಮೊಡವೆ ಬಹುತೇಕ ಮಹಿಳೆಯರಿಗೆ ಅತ್ಯಂತ ಹೆಚ್ಚು ಸಂಕಟ ತರುವ ವಿಷಯ. ಅದಕ್ಕಾಗಿ ಹುಡುಕದ ಉಪಾಯಗಳಿಲ್ಲ. ಆದರೆ, ಪಿಸಿಒಡಿ ಸಮಸ್ಯೆಯ ಮಹಿಳೆಯರು ತಮ್ಮ ಮೊಡವೆಯ ಸಮಸ್ಯೆಗೆ ಬೇರೆಯದೇ ರೀತಿಯಲ್ಲಿ ಸ್ಪಂದಿಸಬೇಕು. ಇಲ್ಲಿ ಅವರು ಸೇವಿಸುವ ಆಹಾರ ಬಹುಮುಖ್ಯ ಪಾತ್ರ ವಹಿಸುತ್ತದೆ.
ಹಾರ್ಮೋನಿನ ಕಾರಣದಿಂದ ಮೊಡವೆಯ ತೊಂದರೆ ಇದ್ದರೆ ಎಲ್ಲ ವಯಸ್ಸಿನಲ್ಲೂ ತೊಂದರೆ ಕೊಡುವ ಸಮಸ್ಯೆ ಅದು. ಇಂಥ ಮೊಡವೆಗಳ ತೊಂದರೆಯಲ್ಲಿ ನೀವಿದ್ದರೆ ಖಂಡಿತವಾಗಿ ವೈದ್ಯರ ಸಲಹೆ ಪಡೆಯಬೇಕು. ಅತಿಯಾಗಿ ಕಾರ್ಬೋಹೈಡ್ರೇಟ್ ಸೇವನೆ, ಜಿಡ್ಡಿನ ಪದಾರ್ಥಗಳು, ಕರಿದ ತಿಂಡಿಗಳು ಇತ್ಯಾದಿಗಳನ್ನು ಬಿಡಬೇಕು. ಕೆಲವು ಮಹಿಳೆಯರಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದಲೂ ಮೊಡವೆಯು ಬಿಡದಂತೆ ಕಾಡಬಹುದು. ಇಂಥವರು ಹಾಲಿನ ಸೇವನೆಯೂ ಬಿಡಬೇಕಾಗಬಹುದು. ಹಾಗಾದರೆ ಪಿಸಿಒಡಿಯ ಕಾರಣದಿಂದ ಮೊಡವೆ ಉಂಟಾಗುತ್ತಿದ್ದರೆ, ಯಾವ ಆಹಾರಕ್ರಮವನ್ನು ಪಾಲಿಸಬೇಕು ಎಂಬುದನ್ನು ನೋಡೋಣ.
೧. ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ: ಪಿಸಿಒಡಿಯ ಸಮಸ್ಯೆಯಿಂದಾಗಿ ಮೊಡವೆಯ ತೊಂದರೆ ಉಂಟಾಗುತ್ತಿದ್ದರೆ ಅಂಥವರು ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು. ಮೈದಾ ಆಧಾರಿತ ಬ್ರೆಡ್, ಪಾಸ್ತಾ, ನೂಡಲ್ಸ್, ಸಿಹಿತಿಂಡಿಗಳಂತಹ ರಿಫೈನ್ಡ್ ಕಾರ್ಬೋಹೈಡ್ರೇಟ್ ಆದಷ್ಟು ಬಿಡಲು ಪ್ರಯತ್ನಿಸಿ. ದಿನಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಬೇಡಿ. ಆರೋಗ್ಯಕರ ಕಾರ್ಬೋಹೈಡ್ರೇಟ್ ತಟ್ಟೆಯಲ್ಲಿರಲಿ.
ಇದನ್ನೂ ಓದಿ: Health Tips: ತಂಪು ತಂಪು ಕೂಲ್ ಕೂಲ್ ಈ ಲಾವಂಚ ಎಂಬ ಬೇಸಿಗೆಯ ಬಂಧು!
೨. ಒಳ್ಳೆಯ ಕೊಬ್ಬನ್ನೇ ಸೇವಿಸಿ: ಒಳ್ಳೆಯ ಕೊಬ್ಬು ಸೇವನೆಯಿಂದ ದೇಹದಲ್ಲಿರುವ ಎಚ್‌ಡಿಎಲ್ ಅಂದರೆ ಒಳ್ಳೆಯ ಕೊಲೆಸ್ಟೆರಾಲ್ ಹೆಚ್ಚುತ್ತದೆ. ಒಳ್ಳೆಯ ಕೊಲೆಸ್ಟೆರಾಲ್ ಪ್ರಮಾಣ ಉತ್ತಮ ಸ್ಥಿತಿಯಲ್ಲಿದ್ದರೆ ಚರ್ಮದ ಆರೋಗ್ಯವೂ ಹೆಚ್ಚುತ್ತದೆ. ದೇಸೀ ತುಪ್ಪ, ತೆಂಗಿನಕಾಯಿ, ಬೀಜಗಳು ಒಳ್ಳೆಯ ಕೊಬ್ಬನ್ನು ದೇಹಕ್ಕೆ ನೀಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದರಿಂದಲೂ ಸಮಸ್ಯೆಗೆ ಪರಿಹಾರ ಕಾಣಬಹುದು.
೩. ಹಸಿರು ತರಕಾರಿಗಳ ಸೇವಿಸಿ: ಹಸಿರು ಬಣ್ಣದ ತರಕಾರಿಗಳು ಹಾಗೂ ಸೊಪ್ಪು ಇಂಥವರಿಗೆ ಅತ್ಯಂತ ಒಳ್ಳೆಯದು. ನಿತ್ಯದ ಆಹಾರದಲ್ಲಿ ಇವುಗಳ ಬಳಕೆ ಯಥೇಚ್ಛವಾಗಿರಲಿ. ವಿಟಮಿನ್, ಖನಿಜಾಂಶಗಳು, ನಾರಿನಂಶ ಹೆಚ್ಚಿರುವ ಆಹಾರಗಳ ಸೇವನೆ ಬಹಳ ಮುಖ್ಯ.
೪. ಫೈಟೋ ಇಸ್ಟ್ರೋಜನ್ ಇರುವ ಆಹಾರಗಳನ್ನು ಸೇವಿಸಿ: ಇಸ್ಟ್ರೋಜನ್ ಹಾರ್ಮೋನಿನ ಅಂಶಗಳಿರುವ ಆಹಾರ ಸೇವನೆಯೂ ಒಳ್ಳೆಯದು. ಅಗಸೆಬೀಜಗಳು, ಎಳ್ಳು, ಮೆಂತೆ ಇತ್ಯಾದಿಗಳಲ್ಲಿ ಈ ಅಂಶವಿದ್ದು ಇವುಗಳ ಸೇವನೆ ಒಳ್ಳೆಯದು.
ಇದನ್ನೂ ಓದಿ: Health Tips: ನಾನ್‌ಸ್ಟಿಕ್ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?